ಹಾಯ್ ಬೆಂಗಳೂರ್

ಕೋವಿಡ್ ನಿಯಂತ್ರಣಕ್ಕೆ ಎಚ್ಚರಿಕೆ ವಹಿಸೋದು ಬಿಟ್ಟು ಸರ್ವಪಕ್ಷ ಸಭೆ ಕರೆದು ಏನು ಪ್ರಯೋಜನ?: ಕುಮಾರಸ್ವಾಮಿ

ಕೋವಿಡ್ ಗೆ ಸಂಬಂಧಿಸಿದಂತೆ ಕಠಿಣ ನೀತಿ ನಿಯಮಗಳನ್ನು ಜಾರಿಗೊಳಿಸುವುದಕ್ಕೂ ಮೊದಲು  ವಿಪಕ್ಷಗಳೊಂದಿಗೆ ಸಭೆ ನಡೆಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಕೋವಿಡ್‌ ಚಿಕಿತ್ಸೆಗೆ ಬೇಕಾಗುವ ಮೂಲಸೌಕರ್ಯ ಹೊಂದಿಸಿಟ್ಟುಕೊಳ್ಳದೆ, ರೋಗದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳದೆ, ಎಚ್ಚರಿಕೆ ಕಡೆಗಣಿಸಿರುವ ಈ ಸರ್ಕಾರ ಯಾವ ಸಭೆ ನಡೆಸಿ ಏನು ಉಪಯೋಗ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕೋವಿಡ್ ನ 2ನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಗಳಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ್ದಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇದೆಲ್ಲದರ ಮಧ್ಯೆ ಕೋವಿಡ್‌ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವಿರ್‌ ಎಂಬ ಚುಚ್ಚು ಮದ್ದಿಗೆ ದೇಶದಲ್ಲಿ ಅಭಾವ ಸೃಷ್ಟಿಯಾಗಿದೆ. ಸೋಂಕಿತರಿಗೆ ಚಿಕಿತ್ಸೆಯೇ ಖಾತ್ರಿ ಇಲ್ಲದಂತಾಗಿದೆ.

ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು ಇಷ್ಟ ಬಂದಂತೆ ರಫ್ತು ಮಾಡಿದ್ದ ಕೇಂದ್ರ ಸರ್ಕಾರವು ಟೀಕೆಗಳು ಬರುತ್ತಲೇ, ಔಷಧಿಗೆ ಅಭಾವ ಎದುರಾಗುತ್ತಲೇ ರಫ್ತು ನಿಷೇಧಿಸಿದೆ. ಆದರೆ, ಈಗ ಕಾಲ ಮಿಂಚಿದೆ. ಒಂದೆಡೆ ಕೋವಿಡ್‌ ಪ್ರಕರಣಗಳು ದಿಢೀರ್‌ ಏರಿಕೆಯಾಗಿದೆ. ದೇಶದ ಆಸ್ಪತ್ರೆಗಳು ರೆಮ್‌ಡಿಸಿವಿರ್‌ಗಾಗಿ ಕಾದು ಕೂರುವ ಪರಿಸ್ಥಿತಿ ಉದ್ಭವಿಸಿದೆ.

ಈ ಮಧ್ಯೆ ರೆಮ್‌ಡಿಸಿವಿರ್‌ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ, ನಕಲಿ ಔಷಧ ಪೂರೈಕೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಒಂದೆಡೆ ಔಷಧದ ದಾಸ್ತಾನು ಮಾಡದೇ ವಿಫಲವಾಗಿರುವ ಸರ್ಕಾರ, ಕಾಳ ಸಂತೆ, ನಕಲಿ ಹಾವಳಿ ನಿಯಂತ್ರಿಸದೇ ಅದಕ್ಷತೆ ಮೆರೆದಿದೆ. ಇಲ್ಲಿ ಕೇಂದ್ರ, ರಾಜ್ಯ ಎಂಬ ಮಾತಿಲ್ಲ. ಎರಡೂ ಸರ್ಕಾರಗಳೂ ಕೋವಿಡ್‌ ವಿಷಯದಲ್ಲಿ ಎಡವಿವೆ.

ಕೋವಿಡ್‌ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಆದರೆ, ಎಚ್ಚರಿಕೆಗಳನ್ನು ಕಡೆಗಣಿಸಿ, ನಾಗರಿಕರ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ನಡೆಗಳು ಖಂಡನೀಯ. ಸರ್ಕಾರಗಳು ಕನಿಷ್ಠ, ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನಾದರೂ ದಾಸ್ತಾನು ಮಾಡಿಕೊಳ್ಳಬೇಕು. ಅದಿಲ್ಲದೇ, ಸಭೆಗಳನ್ನು ನಡೆಸಿ ಪ್ರಯೋಜನವಿಲ್ಲ ಅಂತ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

Leave a Reply

Your email address will not be published. Required fields are marked *