ಹಾಯ್ ಬೆಂಗಳೂರ್

ಎಂ.ವಿ.ರೇವಣಸಿದ್ದಯ್ಯ: ವಿಶ್ವಕ್ಕೊಬ್ಬಳೇ ಕ್ಯಾಬರೆ ನರ್ತಕಿ ಹೆಲೆನ್

ಸ್ ದುನಿಯಾ ಮೇ ಜೀನಾ ಹೋಂ ತೋ

ಸುನಲೋ ಮೇರೀ ಬಾತ್

ಗಮ್ ಛೋಡಕೇ ಮನಾವೋ ರಂಗ್‌ರೇಲಿ

ಔರ್ ಮಾನ್‌ಲೋ ಜೋ ಕಹೆ ಕಿಟ್ಟೆ ಕೇಲಿ

ನನಗೆ ತಿಳಿದಂತೆ ನಾನು ನೋಡಿದಂತೆ ಬಹುಶಃ `ಗುಮ್‌ನಾಮ್’ ಹಿಂದಿ ಚಿತ್ರದ ಈ ಹಾಡಿನಲ್ಲಿ ಹೆಲೆನ್ ಅಂದವಾಗಿ ಮುದ್ದಾಗಿ ಕಂಡಂತೆ ಬೇರೆ ಯಾವ ಚಿತ್ರದಲ್ಲೂ ಕಂಡಿಲ್ಲ. ಅದ್ಭುತ ಸಾಹಿತ್ಯ, ಅಮೋಘ ಸಂಗೀತ ಸುಶ್ರಾವ್ಯ ಹಾಡಿಗೆ ಸರಿಯಾಗಿ ಹೆಲೆನ್‌ಳ ಸೆನ್ಸಿಟಿವ್ ನೃತ್ಯ ಕಣ್‌ಮನ ತಣಿಸುತ್ತದೆ. ಆಗ ಆಕೆಯ ಮೈಮಾಟ ಅಕ್ಷರಶಃ ೩೨-೨೨-೩೨ ಇದ್ದಿರಬೇಕು.

“ಪಿಯಾ ತೂ ಅಬ್‌ತೋ ಅಜಾ” (ಕಾರವಾನ್), “ಉಯ್‌ಮಾ ಉಯ್‌ಮಾ ಯೇ ಕ್ಯಾ ಹೋಗಯಾ” (ಪಾರಸ್‌ಮಣಿ), “ಆ ಜಾನೇ ಜಾ” (ಇಂತಕಾಮ್), “ಯೇ ಮೇರಾ ದಿಲ್ ಪ್ಯಾರ್ ಕಾ ದೀವಾನಾ” (ಡಾನ್), “ಹಾಯ್ ಮೇರೆ ಪಾಸ್ ಆ” (ಶಿಕಾರ್), “ಮೆಹ್‌ಬೂಬಾ ಮೆಹ್‌ಬೂಬಾ” (ಶೋಲೇ) – ಹೀಗೆ ಹೆಸರಿಸುತ್ತಾ ಹೋದರೆ ಹೆಲೆನ್‌ನ ವೈವಿಧ್ಯಮಯ ನೃತ್ಯದ ದೃಶ್ಯಗಳ ಹಾಡುಗಳ ಪಟ್ಟಿ ಮುಗಿಯುವುದೇ ಇಲ್ಲ.

ಮೇಲಿನವುಗಳಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಡಾನ್ (೧೯೭೮) ಚಿತ್ರದಲ್ಲಿ “ಯೇ ಮೇರಾ ದಿಲ್ ಪ್ಯಾರ್ ಕಾ ದೀವಾನಾ” ಹಾಡಿಗೆ ಹೆಲೆನ್‌ಳ ಸೆನ್ಸಿಟಿವ್ ನೃತ್ಯ ಇದೆ. ಇದೇ ಹೆಸರಿನ ಅದೇ ಕಥೆಯ ಡಾನ್ (೨೦೦೬) ಮತ್ತೊಮ್ಮೆ ನಿರ್ಮಾಣವಾಯಿತು. ಅಮಿತಾಬ್ ಪಾತ್ರವನ್ನು ಶಾರುಖ್‌ಖಾನ್ ಮಾಡಿದ್ದರು. ಅದೇ ಹಾಡಿಗೆ ಕರೀನಾ ಕಪೂರ್ ನೃತ್ಯ ಇದೆ. ಆಕೆಯ ನೃತ್ಯ ಹೆಲೆನ್‌ಳ ನೃತ್ಯದ ಮುಂದೆ ಸೊನ್ನೆ. ಅದು ಹೆಲೆನ್ ಅದೇ ಹೆಲೆನ್.

ಹೆಲೆನ್ ಸ್ವತಃ ಹೇಳಿಕೊಂಡಂತೆ ಆಕೆಯ ತಾಯಿ ಚಿಕ್ಕಂದಿನಲ್ಲಿ ಬೆತ್ತ ಹಿಡಿದು ನಿಂತು ಆಕೆಗೆ ನೃತ್ಯ ಕಲಿಯುವಂತೆ ಅಭ್ಯಾಸ ಮಾಡುವಂತೆ ಒತ್ತಾಯಿಸುತ್ತಿದ್ದರು. ಹೆಲೆನ್ ಸಹ ಒಳ್ಳೆಯ ಗುರುಗಳ ಮಾರ್ಗದರ್ಶನದ ಜೊತೆಗೆ ಎಲ್ಲಾ ರೀತಿಯ ವೈವಿಧ್ಯಮಯ ನಾಟ್ಯ ನರ್ತನ ಕಲಿತು ಚೆನ್ನಾಗಿ ಅಭ್ಯಾಸ ಮಾಡಿ ಅವುಗಳನ್ನು ಕರತಲಾಮಲಕ ಮಾಡಿಕೊಂಡಿದ್ದಳು. ಹೀಗಾಗಿ ನವಿಲಿನ ನಾಟ್ಯದಿಂದ ಹಿಡಿದು ಮಿಂಚಿನ ನೃತ್ಯಗಳವರೆಗೆ, ಶಾಸ್ತ್ರೀಯದಿಂದ ಹಿಡಿದು ರಾಕ್‌ರೋಲ್ ಇತ್ಯಾದಿ ನೃತ್ಯಗಳವರೆಗೆ ಲೀಲಾಜಾಲವಾಗಿ ನರ್ತಿಸುತ್ತಿದ್ದಳು.

ಹೆಲೆನ್ ತನ್ನ ಚಿತ್ರ ಜೀವನದಲ್ಲಿ ಅತಿಹೆಚ್ಚು ಹಿಂದಿ ಚಿತ್ರಗಳಲ್ಲಿ ನರ್ತಿಸಿದ್ದರೂ ಸಹ ತಮಿಳು, ತೆಲುಗು, ಮಲಯಾಳಂ, ಕನ್ನಡ, ಮರಾಠಿ, ಪಂಜಾಬಿ, ಒರಿಯಾ ಸೇರಿದಂತೆ ಭಾರತದ ಅನೇಕ ಭಾಷೆಗಳ ಚಿತ್ರಗಳಲ್ಲಿ ನರ್ತಿಸಿರುವುದಾಗಿ ಆಕೆಯೇ ಹೇಳಿಕೊಂಡಿದ್ದಾಳೆ.

ನೋಡು ಲವ್ಲಿ ಬ್ಯೂಟಿ

ಮಾಡು ಮೋಜು ಲೂಟಿ

ಯಾರು ನನ್ನ ಸಾಟಿ

ಇಲ್ಲ ಇಂಥ ಸ್ವೀಟಿ

ಗೋಪಾಲ್-ಲಕ್ಷ್ಮಣ್ ನಿರ್ಮಾಣ, ವೈ.ಆರ್.ಸ್ವಾಮಿ ನಿರ್ದೇಶನ, ಡಾ.ರಾಜ್, ಆರತಿ, ಅಭಿನಯದ “ಭಲೇ ಹುಚ್ಚ” (೧೯೭೨) ಚಿತ್ರದ ಹಾಡು ಇದು. ಗಾಯಕಿ ಎಸ್. ಜಾನಕಿ. ಕ್ಲಬ್ ಡಾನ್ಸ್ ದೃಶ್ಯ. ಸಂಗೀತ ರಾಜನ್-ನಾಗೇಂದ್ರ.

ಆದರೆ ವಿಶೇಷವೇನು ಗೊತ್ತೆ! ಈ ಹಾಡಿನ ಕ್ಯಾಬರೆ ನರ್ತಕಿ ಹೆಲೆನ್. ಮೇಲಿನ ಹಾಡಿನ ದೃಶ್ಯದಲ್ಲಿ ದಿನೇಶ್, ವಜ್ರಮುನಿ ಸಹ ಇದ್ದಾರೆ. ಇದು ಬಹುಶಃ ಹೆಲೆನ್‌ಳ ನೃತ್ಯದ ಏಕೈಕ ಕನ್ನಡ ಚಿತ್ರ ಇರಬಹುದು.

೧೯೫೧ರಲ್ಲಿ ಕೇವಲ ಸಮೂಹ ನೃತ್ಯಗಾರ್ತಿಯರಲ್ಲೊಬ್ಬಳಾಗಿ ಹಿಂದಿ ಚಿತ್ರರಂಗ ಪ್ರವೇಶಿಸಿದ ಹೆಲೆನ್‌ಗೆ ಒಳ್ಳೆಯ ಅವಕಾಶಗಳು ಹೆಚ್ಚು ಸಿಕ್ಕಿದ್ದು ತೆಲುಗು ಮತ್ತು ತಮಿಳು ಸಿನೆಮಾಗಳಲ್ಲಿ. ೧೯೫೫ರ `ಸಂತೋಷಂ” (ಎನ್.ಟಿ.ಆರ್) “ಅಬ್ಬಾಯ ಗಾಜುಲೋನೇ ಉನ್ನದಿ ತಮಾಷಾ”, ಅಕ್ಕಿನೇನಿ ಅವರ `ದೊಂಗಲ್ಲೋ ದೊರ” (೧೯೫೭) ಚಿತ್ರದ “ವನ್ನೇ ಚೂಡು ರಾಜಾ”, ಅದೇ ವರ್ಷದ `ಅಲ್ಲಾವುದ್ದೀನ್ ಅದ್ಭುತ ದೀಪಂ” (ಅಕ್ಕಿನೇನಿ) ಚಿತ್ರದಲ್ಲಿ “ಕನುವಿಂದುಲುಗಾ ಕನ್ನಲೇ” ಹಾಡಿಗೆ ಹೆಲೆನ್ ನರ್ತನವಿದೆ.

ಶಿವಾಜಿ ಗಣೇಶ್ ದ್ವಿಪಾತ್ರ ಉತ್ತಮ ಪುತ್ರನ್ ಚಿತ್ರದ “ಯಾರಡೀ ನೀ ಮೋಹಿನಿ”, “ಪೆಟ್ರಮಗನೈ ವಿಟ್ರ ಅನ್ನೈ” ಚಿತ್ರದ “ಉರುಳುದು ತಿರುಳುದು ಉಲಗಂ”, `ಶ್ರೀರಾಮಭಕ್ತ ಹನುಮಾನ್” ಚಿತ್ರದ “ಓ ಓ ಮಾನೈ ಕಂಡಿರಾ” ಹಾಗೂ `ವೀರ ಅಮರ ಸಿಂಗ್” ಚಿತ್ರದ “ಓ ವರವಾಯೋ” ಹಾಡುಗಳಿಗೆ ಹೆಲೆನ್ ನೃತ್ಯವಿದೆ. ಈ ಎಲ್ಲಾ ಚಿತ್ರಗಳು ೧೯೫೮ರಲ್ಲಿ ತೆರೆಕಂಡಿವೆ.

೧೯೬೦ರ ಎಂಜಿಆರ್ ಮತ್ತು ವೈಜಯಂತಿ ಮಾಲಾ ಅಭಿನಯದ “ಬಾಗ್ದಾದ್ ತಿರುಡಾನ್” ಚಿತ್ರದ “ಬುಲ್‌ಬುಲ್ ಪಾರ್ವೆಯಲೆ”,  ೧೯೬೩ರ “ಚಿತ್ತೂರು ರಾಣಿ ಪದ್ಮಿನಿ” (ಶಿವಾಜಿ ಗಣೇಶನ್ ಮತ್ತು ವೈಜಯಂತಿ ಮಾಲಾ) ಐತಿಹಾಸಿಕ ಚಿತ್ರದ “ಆಡಲ್ ಪಾಡಲ್ ಕಾಣುಂ ಪೋದೆ ವೀರಮಾ”, ೧೯೭೨ರ ತೆಲುಗು ಪಿಲ್ಲಾ ಪಿಡುಗಾ (ಜ್ಯೋತಿ ಲಕ್ಷ್ಮಿ) ಚಿತ್ರದ “ಸುಕೇಶಿ ಗುಚ್ಚಾ” ಎಂಬ ಎಲ್.ಆರ್.ಈಶ್ವರಿ ಹಾಡು, ಅದೇ ವರ್ಷದ “ಶ್ರೀವಳ್ಳಿ” ತಮಿಳು ಚಿತ್ರದ “ಮಲೈನಾಟ್ಟು ಕುರು ವರ್ ನಾಂಗೋ” ಎಂಬ ಸಮೂಹ ಗಾನ. ಹೀಗೆ ಅನೇಕ ತೆಲುಗು ತಮಿಳು ಚಿತ್ರಗಳಲ್ಲಿ ಆಕೆಯ ಐಟಂ ಸಾಂಗ್‌ಗಳಿವೆ.

ಅಮಿತಾಭ್ ಅವರ ಹಿಂದಿ ಚಿತ್ರ `ಡಾನ್’ ತಮಿಳಿನಲ್ಲಿ `ಬಿಲ್ಲಾ’ (೧೯೮೦) ಎಂಬ ಹೆಸರಿನಲ್ಲಿ ತಯಾರಾಯಿತು. ರಜನಿಕಾಂತ್ ಅಮಿತಾಭ್ ಪಾತ್ರ ವಹಿಸಿದ್ದರು. ಹಿಂದಿಯಲ್ಲಿ “ಯೇ ಮೇರಾ ದಿಲ್ ಪ್ಯಾರಾ ಕಾ ದೀವಾನಾ” ಎಂಬ ಹಾಡಿಗೆ ಅದ್ಭುತ ಡ್ಯಾನ್ಸ್ ಮಾಡಿದ್ದ ಹೆಲೆನ್ ರಜನಿ ಜೊತೆ ಅದೇ ದೃಶ್ಯದ “ನಿನ್ನೆತ್ತಾಲೇ ಇನಿಕ್ಕುಂ ಸುಗಮೇ” ಎಂಬ ಹಾಡಿಗೆ ನರ್ತಿಸಿದ್ದಾಳೆ. ಸಂಗೇ ಮುಳಂಗು (ಎಂ.ಜಿ.ಆರ್) ತಮಿಳು ಚಿತ್ರದಲ್ಲಿ “ಸಿಲರ್ ಕುಡಿಪ್ಪದು ಪೊಲೇ ನಡಿಪ್ಪಾರ್” ಮತ್ತು “ನಾನ್ ಸೊಲ್ಲಿತರ ಎನ್ನ ಉಳ್ಳದ” ಎಂಬ ಹಾಡುಗಳಲ್ಲಿ ಹೆಲೆನ್ ನರ್ತನವಿದೆ.

೧೯೫೧ರಲ್ಲಿ ಹೆಲೆನ್ ಚಿತ್ರರಂಗ ಪ್ರವೇಶಿಸಿದಾಗ ಆಕೆಯ ವಯಸ್ಸು ಕೇವಲ ಹದಿಮೂರು. ಸಮೂಹ ನೃತ್ಯಗಾರ್ತಿಯರಲ್ಲಿ ಒಬ್ಬಳಾಗಿ ಆಕೆಯ ಚಿತ್ರರಂಗ ಪ್ರವೇಶವಾಯಿತು. ಮೊದಲ ಚಿತ್ರ `ಶಬಿಸ್ತಾನ್’ ಅದರಲ್ಲಿ ಆಕೆಗೆ ಒಂದೇ ಒಂದು ಕ್ಲೋಸ್‌ಅಪ್ ಇದೆ. ನಂತರ ಖಜಾನ, ಅಂಬರ್, ನಜಾರಿಯ ಹಾಗೂ ರಂಗೀಲಾ ಚಿತ್ರಗಳಲ್ಲಿ ಸಹ ಆಕೆಗೆ ಸಮೂಹ ನೃತ್ಯಗಾರ್ತಿಯರಲ್ಲಿ ಒಬ್ಬಳಾಗಿಯೇ ಅವಕಾಶಗಳು ದೊರಕಿದ್ದವು. `ಶಬಿಸ್ತಾನ್’ ಚಿತ್ರದಲ್ಲಿ ಆಕೆಗೆ ಪ್ರಥಮ ಅವಕಾಶ ಕೊಡಿಸಿದ್ದು ಯಾರು ಗೊತ್ತೇ! ೧೯೪೦ ಮತ್ತು ೫೦ರ ದಶಕದ ಬಹುಬೇಡಿಕೆಯ, ದುಬಾರಿ ಸಂಭಾವನೆಯ ಪ್ರಸಿದ್ಧ ಕ್ಯಾಬರೇ ನಟಿ ಕುಕ್ಕೂ. ಆಕೆ ಸಹ ಆಂಗ್ಲೋ ಇಂಡಿಯನ್.

ಪ್ರಾರಂಭದಲ್ಲಿ ಹೆಲೆನ್‌ಗೆ ಚಿತ್ರಗಳು ದೊರೆತವಾದರೂ ಆಕೆಯನ್ನು ಗುರುತಿಸುವಂತಹ ಮೊದಲ ಚಿತ್ರ ಬಂದದ್ದು ೧೯೫೭ರಲ್ಲಿ.

ಮಿಸ್ಟರ್ ಜಾನ್ ಯಾ ಬಾಬಾ ಖಾನ್

ಯಾ ಲಾಲಾ ರೋಷನ್ ದಾನ್

ಜೋ ಕೋಯೀ ದೇಖೇ ಮೇರಾ ಜಲ್ವಾ

ಹೋ ಜಾಯೇ ಕುರ್‌ಬಾನ್.

ದೇವ್ ಆನಂದ್ ನಾಯಕನಾಗಿರುವ `ಬಾರಿಶ್’ ಚಿತ್ರದ ಹಾಡು ಇದು. ಸಂಗೀತ ಸಿ.ರಾಮಚಂದ್ರ ಅವರದ್ದು. ಗಾಯಕಿ ಆಶಾ ಭೋಂಸ್ಲೆ. ಕ್ಲಬ್‌ನಲ್ಲಿನ ಕ್ಯಾಬರೆ ಹಾಡಿಗೆ ಅನುಗುಣವಾಗಿ ಹೆಲೆನ್ ಲೀಲಾಜಾಲವಾಗಿ ನರ್ತಿಸಿ ಅಭಿನಯಿಸಿದ್ದಾಳೆ.

ಆದರೆ ಹೆಲೆನ್‌ಗೆ ಹೆಚ್ಚಿನ ಹೆಸರು ತಂದುಕೊಟ್ಟ ಚಿತ್ರ ಹೌರಾ ಬ್ರಿಡ್ಜ್ (೧೯೫೮). ಶಕ್ತಿ ಸಾಮಂತ ನಿರ್ಮಾಣ ಮತ್ತು ನಿರ್ದೇಶನದ ಈ ಚಿತ್ರದ ನಾಯಕ ಅಶೋಕ್‌ಕುಮಾರ್. ನಾಯಕಿ ಮಧುಬಾಲ. ಅತಿಮುಖ್ಯ ಸಂಗತಿ ಅಂದರೆ ಸಂಗೀತ ಸಾಮ್ರಾಟ್ ಶ್ರೀ ಓ.ಪಿ. ನಯ್ಯರ್ ಈ ಚಿತ್ರದ ಸಂಗೀತಗಾರರು. ಈ ಚಿತ್ರದಲ್ಲಿನ

ಮೇರಾ ನಾಮ್ ಚಿನ್ ಚಿನ್ ಚೂ

ಹಲ್ಲೋ ಮಿಸ್ಟರ್ ಹೌಡು ಯು ಡೂ.

ಗೀತಾದತ್ ಅವರ ಇಂಪಾದ ದನಿಯ ಈ ಕ್ಯಾಬರೇ ಹಾಡಿಗೆ ಹೆಲೆನ್ ಅದ್ಭುತವಾಗಿ ಅಭಿನಯಿಸಿದ್ದಾಳೆ. ಈ ಹಾಡು ಹೆಲೆನ್ ಚಿತ್ರ ಜೀವನದಲ್ಲಿ ಹೆಬ್ಬಾಗಿಲನ್ನೇ ತೆರೆಯಿತು. ಸುಂದರಿ ಮಧುಬಾಲ ಸಹ ಇದೇ ಚಿತ್ರದಲ್ಲಿ ಕ್ಲಬ್ ಡ್ಯಾನ್ಸ್ ಹಾಡಿನಲ್ಲಿ ಅಭಿನಯಿಸಿದ್ದು, ಆ ಹಾಡನ್ನು ಆಶಾ ಭೋಂಸ್ಲೆ ಹಾಡಿದ್ದಾರೆ. ಅದು “ಆಯಿಯೇ ಮೆಹರ್‌ಬಾನ್” ಎಂಬ ಪ್ರಸಿದ್ಧ ಗೀತೆ. ಹೌರಾ ಬ್ರಿಡ್ಜ್‌ನ “ಚಿನ್ ಚಿನ್ ಚೂ” ನಂತರ ಕ್ಯಾಬರೆ ನರ್ತಕಿಯಾಗಿ ಹೆಲೆನ್ ಹಿಂದಿ ಚಿತ್ರರಂಗವನ್ನು ಮೂರೂವರೆ ದಶಕ ಅಕ್ಷರಶಃ ಆಳಿದಳು.

Madhubala

೧೯೫೧ರಲ್ಲಿ ನರ್ತಕಿಯಾಗಿ ಚಿತ್ರರಂಗ ಪ್ರವೇಶಿಸಿದ ಹೆಲೆನ್ ೧೯೮೬ರವರೆಗೆ ಮೂವತ್ತೈದು ವರ್ಷಗಳ ಕಾಲ ನರ್ತಕಿಯಾಗಿಯೇ ಉಳಿದಳು. ಬಹುಶಃ ಅಷ್ಟು ವರ್ಷ ಗಳ ಕಾಲ ತನ್ನ ಅಂಗಸೌಷ್ಠವ ಕಾಪಾಡಿಕೊಂಡು ಮೂರೂವರೆ ದಶಕ ನರ್ತಕಿಯಾಗಿಯೇ ಉಳಿದದ್ದು ಈಕೆಯೊಬ್ಬಳೇ ಇರಬಹುದು. ಅಲ್ಲದೆ ಅದೂ ಒಂದು ದಾಖಲೆ ಅಂತ ಹೇಳಬಹುದು. ಅಷ್ಟೇ ಅಲ್ಲ ಆಕೆಯ ಅಭಿನಯದ ಶೇಕಡಾ ತೊಂಭತ್ತೈದು ಚಿತ್ರಗಳಲ್ಲಿ ನರ್ತಕಿಯ ಪಾತ್ರ ಹಾಗೂ ಒಟ್ಟು ಚಿತ್ರಗಳ ಸಂಖ್ಯೆ ಏಳು ನೂರಕ್ಕೂ ಹೆಚ್ಚು. ಇದೂ ಸಹ ಒಂದು ದಾಖಲೆಯೇ ಅಲ್ಲವೇ. ಅಲ್ಲದೆ ೧೯೫೧ರಿಂದ ೧೯೭೨ರ ಕೇವಲ ಇಪ್ಪತ್ತೆರಡು ವರ್ಷಗಳ ಅವಧಿಯಲ್ಲಿ ಆಕೆ ಅಭಿನಯಿಸಿದ ಚಿತ್ರಗಳ ಸಂಖ್ಯೆ ಐದು ನೂರು. ೧೯೭೨ರ  `ದಿಲ್ ದೌಲತ್ ಔರ್ ದುನಿಯಾ` ಈಕೆಯ ಐದು ನೂರನೇ ಚಿತ್ರ ಅಂತ ಹೇಳಲಾಗಿದೆ. ಇದರ ನಿರ್ಮಾ ಪಕ ಹೆಲೆನ್‌ಳ ಮೊದಲ ಪತಿ ಪಿ.ಎನ್. ಆರೋರ.

೧೯೫೪ರಲ್ಲಿ ತನ್ನ ಹಡಗಿನಂತಹ ಲಿಮೋಸಿನ್ ಕಾರಿನಲ್ಲಿ ಹೆಲೆನ್‌ಳ ಚಿಕ್ಕ ನಿವಾಸಕ್ಕೆ ಬಂದ ಪಿ.ಎನ್. ಆರೋರ ಆಕೆಗೆ ತನ್ನವೇ ನಾಲ್ಕು ಚಿತ್ರಗಳಲ್ಲಿ ಅವಕಾಶ ನೀಡಿದ. ಆದರೆ ಹೆಲೆನ್ ಚಿನ್ನದ ಮೊಟ್ಟೆ ಇಡುವ ಪಕ್ಷಿ ಅಂತ ತಿಳಿದ ಮೇಲೆ ಪಿ.ಎನ್. ಆರೋರ ಅವಳನ್ನು ಬುಟ್ಟಿಗೆ ಹಾಕಿಕೊಂಡು ಲಗ್ನವಾಗಿ ಗೃಹಬಂಧನದಂತೆ ಇಟ್ಟಿದ್ದ. ಚಿತ್ರಗಳಲ್ಲಿನ ಅಭಿನಯದ ಹೊರತು ಹೆಲೆನ್‌ಗೆ ಬೇರೆ ಸ್ವಾತಂತ್ರ್ಯ ಇರಲಿಲ್ಲ. ಬದಲಿಗೆ ಆತನಿಂದ ಆಕೆಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ಹಾಗೂ ಕಿರುಕುಳಗಳಿದ್ದವು. ಎಲ್ಲವನ್ನು ಕಿತ್ತುಕೊಂಡ ಆರೋರ ಒಂದು ಶುಭ ಮುಂಜಾನೆ ಅವಳನ್ನು ಬರಿಗೈ ದಾಸಳನ್ನಾಗಿ ಮಾಡಿ ಹೊರಹಾಕಿದ.

ಪ್ರಸಿದ್ಧ ಹಿಂದಿ ಚಿತ್ರಕಥೆಗಾರ ಸಲೀಮ್-ಜಾವೇದ್ ಜೋಡಿಯಲ್ಲೊಬ್ಬರಾದ ಸಲೀಮ್ ಮೂಲತಃ ನಟ. ೧೯೬೩ರಲ್ಲಿ `ಕಬ್ಲಿಖಾನ್’ ಎಂಬ ಚಿತ್ರದಲ್ಲಿ ಈತ ಖಳನಟ. ಹೆಲೆನ್ ಈತನ ಜೋಡಿಯಾಗಿ ಅಭಿನಯಿಸಿದ್ದಳು. ಅಲ್ಲದೆ ೧೯೬೬ರ `ಸರಹದಿ ಲೂಟೇರ’ ಎಂಬ ಚಿತ್ರದಲ್ಲಿ ಸಹ ಸಲೀಮ್ ಮತ್ತು ಹೆಲೆನ್ ಜೋಡಿಯಾಗಿ ಅಭಿನಯಿಸಿದ್ದರು.

ಪಿ.ಎನ್. ಆರೋರ ಪಂಜರದಿಂದ ಬರಿಗೈಲಿ ಹೊರ ಬಂದ ಹೆಲೆನ್‌ಗೆ ಸಿನೆಮಾಗಳಲ್ಲಿ ಅವಕಾಶ ಕೊಡಿಸಿದಾತ ಇದೇ ಸಲೀಮ್. ಅವರ ನಿಕಟ ಬಾಂಧವ್ಯ ಕೊನೆಗೆ ಅವರ ಲಗ್ನದಲ್ಲಿ ಅಂತ್ಯವಾಗುತ್ತದೆ. ವಿವಾಹಿತನೂ ಮಕ್ಕಳೊಂದಿಗನೂ ಆಗಿದ್ದ ಮುಸ್ಲಿಂ ಸಲೀಮ್‌ನನ್ನು ಕ್ರಿಶ್ಚಿಯನ್ ಹೆಲೆನ್ ಗೊತ್ತಿದ್ದೂ ಸಹ ವಿವಾಹವಾದಳು. ಮೊದಲು ವಿರೋಧಿಸಿದ್ದ ಸಲೀಮ್‌ನ ಹೆಂಡತಿ ಮತ್ತು (ಸಲ್ಮಾನ್ ಖಾನ್ ಸೇರಿದಂತೆ) ಮಕ್ಕಳು ಹೆಲೆನ್‌ಳ ಪ್ರೇಮಮಯೀ ಸ್ವಭಾವ ಹಾಗೂ ಪ್ರೀತಿ ವಾತ್ಸಲ್ಯಗಳಿಗೆ ಮಾರುಹೋಗಿ ಎಲ್ಲ ಸರಿ ಹೋಗುತ್ತಾರೆ. ಎಲ್ಲರ ನಡುವೆ ಮಧುರ ಬಾಂಧವ್ಯ ಉಂಟಾಗುತ್ತದೆ.

ಆದರೆ ಸಲೀಮ್ ಮತ್ತು ಹೆಲೆನ್‌ರ ದಾಂಪತ್ಯದಲ್ಲಿ ಆಕೆಗೆ ಮಕ್ಕಳಾಗುವುದಿಲ್ಲ. ಆಗ ಈ ದಂಪತಿಗಳು ಅರ್ಪಿತ ಎಂಬ ಹೆಣ್ಣು ಮಗುವನ್ನು ದತ್ತುಪುತ್ರಿಯಾಗಿ ಪರಿಗಣಿಸಿ ಸಲಹುತ್ತಾರೆ. ೧೯೯೧ ರಿಂದ (`ಅಕೇಲಾ) ಪೋಷಕ ಪಾತ್ರಗಳಿಗೆ (ತಾಯಿ ಇತ್ಯಾದಿ) ಬದಲಾದ ಹೆಲೆನ್ ಸಲ್ಮಾನ್ ಖಾನ್‌ನ ತಾಯಿಯ ಪಾತ್ರ ಸಹ (`ಹಮ್ ದಿಲ್ ದೇ ಚುಕೇ ಸನಮ್ ಚಿತ್ರ) ಮಾಡಿದ್ದಾರೆ. ೧೯೯೧ರ ನಂತರ ಹೆಲೆನ್ ಹನ್ನೆರಡಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ೨೦೧೨ರ ಹೀರೋಯಿನ್ ಅವರು ಇತ್ತೀಚೆಗೆ ಅಭಿನಯಿಸಿರುವ ಚಿತ್ರ. ನಂತರ ಅವರು ಬೇರೆ ಚಿತ್ರಗಳಲ್ಲಿ ಅಭಿನಯಿಸಿರುವ ಬಗ್ಗೆ ತಿಳಿದು ಬಂದಿಲ್ಲ.

ಹೆಲೆನ್ ಕೇವಲ ನೃತ್ಯಪಟು ಅಥವಾ ಕ್ಯಾಬರೆ ನರ್ತಕಿ ಮಾತ್ರವೇ ಆಗಿರಲಿಲ್ಲ. ಆಕೆಗೆ ಭಾವಪೂರ್ಣ ಅಭಿನಯವೂ ಗೊತ್ತು. ಸ್ಫುಟವಾಗಿ ಪಟಪಟನೆ ಮುತ್ತು ಉದುರಿಸಿದಂತೆ ಡೈಲಾಗ್ ಹೇಳುವುದು ಗೊತ್ತು. ಕೇವಲ ನರ್ತನವಲ್ಲದೆ ಆಕೆಯ ಚಿತ್ರ ಜೀವನದಲ್ಲಿ ತಂಗಿಯಾಗಿ, ಅತ್ಯಾಚಾರ ಸಂತ್ರಸ್ತೆಯಾಗಿ ಇನ್ನಿತರ ಅನೇಕ ಪಾತ್ರಗಳಲ್ಲಿ ಪರಿಣಾಮಕಾರಿಯಾದ ಭಾವಪೂರ್ಣ ಅಭಿನಯ ನೀಡಿದ್ದಾರೆ.

ಹೆಲೆನ್‌ಗೆ ಬಂದ ಪ್ರಶಸ್ತಿ ಪುರಸ್ಕಾರಗಳ ವಿವರ ಹೀಗಿದೆ. ೨೦೦೯ರಲ್ಲಿ ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ೧೯೬೬ರಲ್ಲಿ ಗುಮ್‌ನಾಮ್, ೧೯೬೯ರಲ್ಲಿ ಶಿಕಾರ್, ೧೯೭೨ರಲ್ಲಿ ಏಲಾನ್, ೧೯೯೭ರಲ್ಲಿ ಖಾಮೋಶಿ ಚಿತ್ರಗಳಲ್ಲಿನ ಇವರ ಪೋಷಕ ಪಾತ್ರಗಳಿಗೆ ಅತ್ಯುತ್ತಮ ಪೋಷಕ ನಟಿ ಎಂಬ ಫೀಲಂಫೇರ್ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಅಲ್ಲದೆ ೧೯೮೭ರ ಲಹೂ ಕೆ ದೋ ರಂಗ್ ಎಂಬ ಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಇವರಿಗೆ ಲಭಿಸಿದೆ. ೧೯೯೯ರಲ್ಲಿ ಇವರಿಗೆ ಫೀಲಂ ಫೇರ್ ಜೀವಮಾನ ಸಾಧನೆಯ ಪ್ರಶಸ್ತಿ ಸಹ ದೊರಕಿದೆ.

ಹೆಲೆನ್ ಪೂರ್ಣ ಹೆಸರು ಹೆಲೆನ್ ಆನ್ ರಿಚರ್ಡ್ಸನ್. ಈಕೆಯ ತಾಯಿಯ ಹೆಸರು ಮರ್ಲೆನ್. ಈಕೆ ಬರ್ಮೀಯಳು. ತಂದೆ ಜಾರ್ಜ್ ಡೆಸ್ಮಿಯರ್ ಫ್ರೆಂಚ್ ಮೂಲದವರು. ಹೀಗಾಗಿ ಹೆಲೆನ್ ಅರ್ಧ ಫ್ರೆಂಚ್ ಮತ್ತು ಅರ್ಧ ಬರ್ಮೀಯಳಾಗಿದ್ದಾಳೆ. ಫ್ರೆಂಚ್ ಗಂಡ ತೀರಿಕೊಂಡ ನಂತರ ರಿಚರ್ಡ್‌ಸನ್ ಎಂಬ ಬ್ರಿಟೀಷ್ ಅಧಿಕಾರಿಯನ್ನು ಮರ್ಲೆನ್ ಲಗ್ನವಾಗುತ್ತಾಳೆ. ಹೀಗಾಗಿ ಹೆಲೆನ್ ಹೆಸರಿನ ಜೊತೆ ರಿಚರ್ಡ್‌ಸನ್ ಹೆಸರು ಸೇರಿಕೊಳ್ಳುತ್ತದೆ.

ಬರ್ಮಾ ದೇಶದ (ಈಗಿನ ಮ್ಯಾನ್‌ಮಾರ್) ರಂಗೂನ್ (ಈಗಿನ ಯಾಂಗೋನ್)ನಲ್ಲಿ ದಿನಾಂಕ ೨೧.೧೧.೧೯೩೮ರಲ್ಲಿ  ಹೆಲೆನ್ ಜನಿಸಿದ್ದಾಳೆ. ಆಕೆ ಜನಿಸಿದ ವರ್ಷ ೧೯೩೮ ಅಲ್ಲ ೧೯೩೯ ಅಂತಲೂ ವಿವಾದವಿದೆ. ಅದಿರಲಿ ಬಿಡಿ. ಈಕೆಗೆ ರೋಜರ್ ಎಂಬ ತಮ್ಮ ಮತ್ತು ಜೆನ್ನಿಫರ್ ಎಂಬ ತಂಗಿ ಇದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ (೧೯೪೧-೪೨) ಜಪಾನ್ ಬರ್ಮಾದ ಮೇಲೆ ಬಾಂಬ್ ದಾಳಿ ನಡೆಸಿತು. ರಂಗೂನ್‌ನಲ್ಲಿದ್ದ ಹೆಲೆನ್‌ಳ ತಂಗಿ ಮತ್ತು ತಾಯಿ ಹಾಗೂ ಚಿಕ್ಕ ತಮ್ಮ ಬಾಂಬ್ ದಾಳಿಯಿಂದ ಉಳಿದುಕೊಳ್ಳಲು ರಂಗೂನ್ ತೊರೆಯಬೇಕಾಯಿತು. ಹೆಲೆನ್ ಕುಟುಂಬ ಉಪವಾಸ ವನವಾಸ ಅನುಭವಿಸಿ ಹೆಚ್ಚಿನ ಭಾಗ ಕಾಲ್ನಡಿಗೆಯಲ್ಲೇ ಕ್ರಮಿಸಿ ಅಂತೂ ಅಸ್ಸಾಂನ ದಿಬ್ರೂಘರ್ ನಂತರ ಕಲ್ಕತ್ತ ತದನಂತರ ಹೈದರಾಬಾದ್ ಕೊನೆಗೆ ಮುಂಬಯಿ ಸೇರಿದರು.

ಬರ್ಮಾ ಎಲ್ಲಿ ಮುಂಬಯಿ ಎಲ್ಲಿ. ಯುದ್ಧ ಹಾಗೂ ಬಾಂಬ್ ಭೀತಿಯಿಂದ ರಂಗೂನ್ ತೊರೆದ ಹೆಲೆನ್ ಕುಟುಂಬ ಮುಂಬಯಿ ಸೇರಿ ಚಿತ್ರರಂಗ ಹೊಕ್ಕು ವಿಶ್ವದಾಖಲೆಯ ಮಟ್ಟಕ್ಕೆ ಹೆಲೆನ್ ಏರಿದ್ದು ಇತಿಹಾಸ ಹಾಗೂ ಆಕೆಯ ಸಾಧನೆ. ಪ್ರಯತ್ನ, ಪರಿಶ್ರಮಗಳಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಹೆಲೆನ್ ಒಳ್ಳೆಯ ಉದಾಹರಣೆ.

Leave a Reply

Your email address will not be published. Required fields are marked *