ಹಾಯ್ ಬೆಂಗಳೂರ್

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟೀಸ್ ರಮಣ ನೇಮಕ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನ್ಯಾ.ರಮಣ ಅವರನ್ನು ಸುಪ್ರೀಂ ಕೋರ್ಟ್ ನ ನೂತನ ಮುಖ್ಯನ್ಯಾಯಾಧೀಶರನ್ನಾಗಿ ನೇಮಕಾತಿ ಮಾಡಿದ್ದಾರೆ. ಇದೇ ಏಪ್ರಿಲ್ 24ರಂದು ಅಧಿಕಾರ ವಹಿಸಿಕೊಳ್ಳಲಿರುವ ರಮಣ ಅವರು ಆಗಸ್ಟ್ 26, 2022ರಂದು ನಿವೃತ್ತರಾಗಲಿದ್ದಾರೆ.

ಹಾಲಿ ಮುಖ್ಯನ್ಯಾಯಾಧೀಶರಾಗಿರುವ ಮತ್ತು ಇದೇ ಏಪ್ರಿಲ್ 23ರಂದು ನಿವೃತ್ತರಾಗಲಿರುವ ಜಸ್ಟೀಸ್ ಬೋಬ್ಡೆ ಅವರು ತಮ್ಮ ನಿವೃತ್ತಿಯ ನಂತರ ಆ ಸ್ಥಾನಕ್ಕೆ ರಮಣ ಅವರು ಸೂಕ್ತ ವ್ಯಕ್ತಿ ಅಂತ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.

ಆಗಸ್ಟ್ 27, 1957ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನವರಂನಲ್ಲಿ ಜನಿಸಿದ ರಮಣ ಅವರು ಫೆಬ್ರುವರಿ 10, 1983ರಂದು ವಕೀಲರಾಗಿ ನೋಂದಾಯಿಸಲ್ಪಟ್ಟರು. ಜೂನ್ 27, 2000ರಂದು ಆಂಧ್ರಪ್ರದೇಶ ಹೈಕೋರ್ಟ್ ನ ಜಡ್ಜ್ ಆಗಿ ನೇಮಕಗೊಂಡರು. ಮಾರ್ಚ್ 10, 2013ರಂದು ಆಂಧ್ರಪ್ರದೇಶ ಹೈಕೋರ್ಟ್ ನ ಚೀಫ್ ಜಸ್ಟೀಸ್ ಕುರ್ಚಿಯಲ್ಲಿ ಬಂದು ಕುಂತ ಇವರು ಮೇ 20, 2013ರ ತನಕ ಅಲ್ಲಿ ಕೆಲಸ ಮಾಡಿದರು.

ನಂತರ ಸೆಪ್ಟಂಬರ್ 2, 2013ರಂದು ದೆಹಲಿ ಹೈಕೋರ್ಟ್ ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು. ಫೆಬ್ರವರಿ 17, 2014ರಂದು ಸುಪ್ರೀಂಕೋರ್ಟ್ ಜಡ್ಜ್ ಆಗಿ ಕೆಲಸ ಮಾಡುವ ಅವಕಾಶ ಇವರಿಗೆ ಸಿಕ್ಕಿತು. ಅದನ್ನು ಯಶಸ್ವಿಯಾಗಿ ಮಾಡಿದ ರಮಣ ಅವರನ್ನು ರಾಷ್ಟ್ರಪತಿಗಳು ಸುಪ್ರೀಂಕೋರ್ಟ್ ಗೆ ಛೀಫ್ ಜಸ್ಟೀಸ್ ಆಗಿ ನೇಮಕ ಮಾಡಿದ್ದಾರೆ.

ಸುಪ್ರೀಂಕೋರ್ಟ್ ಜಡ್ಜ್ ಆಗಿದ್ದಾಗ ಇವರು ಅನೇಕ ಮಹತ್ವದ ತೀರ್ಪುಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನೂ ಒಂದು ವರ್ಷದ ಮೇಲೆ ನಾಲ್ಕು ತಿಂಗಳು ಇವರ ಸರ್ವೀಸ್ ಬಾಕಿ ಇದೆ. ಈ ಅವಧಿಯಲ್ಲಿ ಇನ್ನೂ ಯಾವ್ಯಾವ ಮಹತ್ವದ ತೀರ್ಪುಗಳನ್ನು ಇವರು ನೀಡುತ್ತಾರೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *