ಹಾಯ್ ಬೆಂಗಳೂರ್

ರೋಲ್ ಕಾಲ್ ವಿವಾದ: ಮಹಾರಾಷ್ಟ್ರ ಹೋಂ ಮಿನಿಸ್ಟರ್ ತಲೆದಂಡ

ಕಡೆಗೂ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ನ ತಲೆದಂಡವಾಗಿದೆ. ಮಹಾವಿಕಾಸ್ ಅಘಾಡಿ ನೇತೃತ್ವದ ಸರ್ಕಾರಕ್ಕೆ ವಿಪಕ್ಷ ಬಿಜೆಪಿಯು ಈ ಕುರಿತು ಒತ್ತಡ ಹೇರುತ್ತಲೇ ಇತ್ತು. ಮುಂಬೈನ ಪೊಲೀಸ್  ಕಮೀಷನರ್ ಆಗಿದ್ದ ಪರಮ್ ಬೀರ್ ಸಿಂಗ್ ಗೆ ಬಾರ್ ಗಳಿಂದ, ಪಬ್ ಗಳಿಂದ ಹಾಗೂ ಇನ್ನಿತರ ಮೂಲಗಳಿಂದ ತಿಂಗಳಿಗೆ ನೂರು ಕೋಟಿ ರೋಲ್ ಕಾಲ್ ವಸೂಲಿ ಮಾಡಿಕೊಡು ಅಂತ ಈ ಪುಣ್ಯಾತ್ಮ ಅನಿಲ್ ದೇಶ್ ಮುಖ್ ತಲೆ ತಿನ್ನುತ್ತಿದ್ದನಂತೆ.

ಯಾವಾಗ ಪರಮ್ ಬೀರ್ ಸಿಂಗ್ ಈ ಸುದ್ದಿಯನ್ನು ಬಹಿರಂಗಪಡಿಸಿದರೋ ಆಗಿಂದಾಗಲೇ ಬಿಜೆಪಿಯವರು ಸಿಕ್ಕಿದ್ದೇ ಛಾನ್ಸು ಎಂಬಂತೆ ಗಲಾಟೆ ಮಾಡತೊಡಗಿದರು. ಗೃಹಸಚಿವ ಅನಿಲ್ ದೇಶಮುಖ್ ನ ಹೋಂ ಮಿನಿಸ್ಟರ್ ಸೀಟಿಂದ ಕೆಳಗಿಳಿಸಿ. ಇಲ್ಲದಿದ್ರೆ ಇಂಥವರಿಂದ ಇಡೀ ವ್ಯವಸ್ಥೆಯೇ ಹಳ್ಳ ಹಿಡಿದು ಹೋಗುತ್ತದೆ ಅಂತ ಅರಚಾಡತೊಡಗಿದರು.

ತಮ್ಮ ಸರ್ಕಾರ ಕಳಂಕಮುಕ್ತವಾಗಿರಬೇಕು ಅಂತ ಬಯಸುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಡೆಗೂ ಅನಿಲ್ ದೇಶ್ ಮುಖ್ ಗೆ ರಾಜೀನಾಮೆ ಕೊಡಿ ಅಂತ ಹೇಳಿಬಿಟ್ಟರು. ಬೇರೆ ದಾರಿ ಇಲ್ಲದೆ ಅನಿಲ್ ದೇಶ್ ಮುಖ್ ರಾಜೀನಾಮೆ ನೀಡಲೇಬೇಕಾಯಿತು.

ಈಗ ವಿಚಾರ ಇರೋದು ರಾಜೀನಾಮೆಯದ್ದಲ್ಲ. ನಿಜಕ್ಕೂ ಮುಂಬೈನಲ್ಲಿ ಇರುವ ಎಲ್ಲಾ ಪೊಲೀಸರನ್ನು ಕರೆಸಿ ವಿಚಾರಣೆ ನಡೆಸಿದರೆ ಮುಂಬೈ ಪೊಲೀಸರ ಮತ್ತು ಮಂತ್ರಿಗಳ ಅಸಲಿಯತ್ತು ಖಂಡಿತವಾಗಿಯು ಹೊರಬೀಳುತ್ತದೆ.

Leave a Reply

Your email address will not be published. Required fields are marked *