ಹಾಯ್ ಬೆಂಗಳೂರ್

ಮಗ ಸತ್ತು ಹದಿನೈದು ವರ್ಷಗಳಾದರೂ ವೃದ್ಧ ತಾಯಿಯಿನ್ನೂ ಹೋರಾಟ ಬಿಟ್ಟಿಲ್ಲ

ಒಂದು ವರ್ಷದ ಹಿಂದೆ ಆಕೆಗೆ ಇದ್ದ ಒಂದೇ ಒಂದು ಪುಟ್ಟ ಸೂರು ಮುರಿದು ಬಿದ್ದ ರೀತಿಯಲ್ಲೇ ಹದಿನೈದು ವರ್ಷಗಳ ಹಿಂದೆ ನಡೆದ ತನ್ನ ಮಗನ ಕೊಲೆ ಪ್ರಕರಣದಲ್ಲಿ ತನಗೆ ನ್ಯಾಯ ಸಿಗುತ್ತದೆ ಎಂಬ ಆಕೆಯ ಆಶಾಭಾವನೆಯು ದಿನದಿಂದ ದಿನಕ್ಕೆ ಮುರಿದು ಬೀಳುತ್ತಿದೆ.

ಅಂದಹಾಗೆ ಆ ಅಜ್ಜಿಯ ಹೆಸರು ಸಂತೋಷ್ ಕುಮಾರಿ. ಹೆಸರಿಗೆ ವಿರುದ್ಧವಾದ ಬದುಕನ್ನು ಆಕೆ ಬದುಕುತ್ತಿದ್ದಾಳೆ. ಈ ಎಪ್ಪತ್ತನಾಲ್ಕರ ಇಳಿ ವಯಸ್ಸಿನಲ್ಲಿ, ಸರಿಯಾಗಿ ಕಣ್ಣು ಕಾಣದಂತಹ ಪರಿಸ್ಥಿತಿಯಲ್ಲೂ ಅಜ್ಜಿ ಸಂಪೂರ್ಣವಾಗಿ ಹತಾಶಳಾಗಿಲ್ಲ. ಪೊಲೀಸರು ತನ್ನ ಮಗನ ಸಾವನ್ನು ಮರುತನಿಖೆ ಮಾಡಲಿ ಅಂತ ಒತ್ತಾಯಿಸುತ್ತಿದ್ದಾಳೆ.

ಹದಿನೈದು ವರ್ಷಗಳ ಹಿಂದೆ ಆರ್ಮಿ ಸೆಂಟ್ರಿಯು ಈಕೆಯ ಮಗನನ್ನು ಗುಂಡಿಕ್ಕಿ ಕೊಂದುಬಿಟ್ಟ. ದಯವಿಟ್ಟು ನನ್ನನ್ನು ಕೊಲ್ಲಬೇಡ. ನಾನು ಬ್ರಾಹ್ಮಣ ಅಂತ ಆಕೆಯ ಮಗ ಎಷ್ಟೇ ಹೇಳಿದರೂ ಕೂಡ ಆತ ಕೇಳಲಿಲ್ಲ. ನಂತರ ಬೇರೆ ದಾರಿ ಇಲ್ಲದೆ ಐದು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದಳು. ಕಂಡ ಕಂಡ ಅಧಿಕಾರಿಗಳ ಕೈ ಕಾಲು

ಹಿಡಿದಳು. ಆದರೂ ಪ್ರಯೋಜನವಾಗಲಿಲ್ಲ. ನಂತರ ಕೇಸ್ ಮುಚ್ಚಿಹೋಯಿತು. ಆಕೆಗೆ ಅತ್ಯಂತ ಬೇಸರ ತರಿಸಿದ ಸಂಗತಿ ಅಂದರೆ ಜಮ್ಮುಕಾಶ್ಮೀರದ ಆಗಿನ ಪೊಲೀಸರು ಒಂದು ಎಫ್.ಐ.ಆರ್ ಕೂಡ ದಾಖಲಿಸಿಕೊಳ್ಳಲಿಲ್ಲ. ಆದರೂ ಅಜ್ಜಿ ಹೋರಾಟ ನಿಲ್ಲಿಸಲಿಲ್ಲ. ಇದೀಗ ಆಕೆ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾಳೆ.

“ಸರ್ಕಾರ ನನಗೆ ನ್ಯಾಯ ಕೊಡಲಿಲ್ಲ. ಆದರೆ ನನಗೆ ಆ ದೇವರ ಮೇಲೆ ನಂಬಿಕೆ ಇದೆ” ಅಂತಾಳೆ ಸಂತೋಷ್ ಕುಮಾರಿ.

Leave a Reply

Your email address will not be published. Required fields are marked *