ಹಾಯ್ ಬೆಂಗಳೂರ್

ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ನ್ಯೂಸ್ ತೋರಿಸೋದು ಸರೀನಾ?

ಜನರ ಮಧ್ಯೆ ಇದೊಂದು ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಮಾಧ್ಯಮಗಳಿಗೆ ಸಾಮಾಜಿಕ ಕಳಕಳಿ ಇದೆ ತಾನೆ? ಇದೆ ಅಂತನ್ನುವುದಾದರೆ ಅಲ್ಲಿ ಆಸ್ಪತ್ರೆ ಮುಂದೆ ಬೀದೀಲಿ ನರಳಾಡುತ್ತಿರುವ ರೋಗಿಗಳನ್ನ ಟಿ.ವಿ.ಯಲ್ಲಿ ತೋರಿಸುತ್ತಲೇ ಇರಬೇಕೋ ಅಥವಾ ಅವರಿಗೆ ಬೇರೆ ಏನಾದರು ವ್ಯವಸ್ಥೆ ಮಾಡಬೇಕೋ? ಇದನ್ನು ಕೇಳಿದರೆ ಉರಿದು ಬೀಳೋ ಮಾಧ್ಯಮ ಪ್ರತಿನಿಧಿಗಳು ನಾವು ಮಾಡುತ್ತಿರುವುದೇ ಸರಿ ಅಂತ ವಾದ ಮಾಡುತ್ತಾರೆ. ಇಂಥವರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.

ಮೊದಲೇ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇದೆ. ಪೇಷೆಂಟ್ ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಾಧ್ಯವಾದರೆ ಅಂಥ ಪೇಷೆಂಟುಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಿ ಆಮೇಲೆ ಬೇಕಾದರೆ ಜೈಕಾರ ಹಾಕಿಕೊಳ್ಳಲಿ. ಅಷ್ಟಕ್ಕೂ ಅದು ಅವರ ಕೆಲಸ ಅಲ್ಲ. ಆದರೂ ಸಮಾಜಿಕ ಕಳಕಳಿ ಮೇಲೆ ಮಾಡಬಹುದಲ್ಲವೆ ಅನ್ನೋದು ಜನರ ಪ್ರಶ್ನೆ.

ಒಬ್ಬ ರೋಗಿ ನರಳಾಡುತ್ತಿರುವುದನ್ನು ಪದೇ ಪದೇ ಟಿವಿಯಲ್ಲಿ ತೋರಿಸುತ್ತಲೇ ಇದ್ದರೆ ಅವರ ಮನೆಯವರಿಗೆ, ಸಂಬಂಧಿಕರಿಗೆ, ಆಪ್ತರಿಗೆ, ಸ್ನೇಹಿತರಿಗೆ ಎಷ್ಟು ನೋವಾಗುತ್ತದೆ ಅನ್ನೋ ಕನಿಷ್ಠ ಪ್ರಜ್ಞೆ ಇದ್ದಿದ್ದರೆ ದೃಶ್ಯ ಮಾಧ್ಯಮಗಳು ಈ ಪರಿ ಆಡುತ್ತಿರಲಿಲ್ಲ. ನಿಜ ಸುದ್ದಿಗೆ ಬರ ಇದೆ, ಹಾಹಾಕಾರ ಇದೆ ಅಂತ ಗೊತ್ತು. ಆದರೆ ಒಂದಿಷ್ಟು ನೈತಿಕ ಪ್ರಜ್ಞೆ ಉಳಿಸಿಕೊಂಡರೆ ಬೇರೆಯದೇ ರೀತಿ ಸುದ್ದಿ ಮಾಡಬಹುದು ಅನ್ನೋದು ಪ್ರಾಜ್ಞ ನಾಗರೀಕರ ಅಭಿಪ್ರಾಯ.

Leave a Reply

Your email address will not be published. Required fields are marked *