ಹಾಯ್ ಬೆಂಗಳೂರ್

ಇಸಾಕ್ ತಾತನ ಪುಟ್ಟ ಗ್ರಂಥಾಲಯಕ್ಕೆ ಕೊಳ್ಳಿ ಇಟ್ಟ ಮನೆಹಾಳರು

ದುಷ್ಕರ್ಮಿಗಳು ಮಾಡಿರುವ ನೀಚ ಕೃತ್ಯ

ಮೈಸೂರಿನ ರಾಜೀವ ನಗರದಲ್ಲಿ ಸೈಯದ್ ಇಸಾಕ್ ಎಂಬ ವೃದ್ಧ ನಡೆಸುತ್ತಿದ್ದ ಪುಟ್ಟ ಗ್ರಂಥಾಲಯಕ್ಕೆ ಯಾರೋ ಮನೆಹಾಳರು ಬೆಂಕಿ ಇಟ್ಟು ಭಸ್ಮ ಮಾಡಿದ್ದಾರೆ. ತಾನು ಓದಿಲ್ಲದಿದ್ದರೂ ಕೂಡ ಬೇರೆಯವರಿಗೆ ನೆರವಾಗಲಿ ಅಂತ ತನ್ನ ಉಳಿತಾಯದ ದುಡ್ಡಲ್ಲಿ ಹತ್ತು ವರ್ಷಗಳ ಹಿಂದೆ ರಾಜೀವ ನಗರದಲ್ಲಿ ಸೈಯದ್ ಇಸಾಕ್ ಈ ಲೈಬ್ರರಿಯನ್ನು ತೆರೆದಿದ್ದರು. ಎಲ್ಲರಿಗೂ ಉಚಿತವಾಗಿ ಓದಲು ಅನುವು ಮಾಡಿಕೊಟ್ಟಿದ್ದರು.

ಇವರ ಗ್ರಂಥಾಲಯದ ಸಮೀಪದಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದಾಗ ಈ ಘಟನೆ ನಡೆದಿರುವುದು ಕಾಣಿಸಿದೆ. ಕೂಡಲೇ ಅವರು ಇಸಾಕ್ ಗೆ ಫೋನ್ ಮಾಡಿದ್ದಾರೆ. ವಿಷಯ ತಿಳಿದು ಆಘಾತಗೊಂಡ ಇಸಾಕ್ ಅಯ್ಯೋ ಹೀಗಾಗೋಯ್ತಲ್ಲ ಅಂತ ದೌಡಾಯಿಸಿ ಬಂದು ನೋಡಿದರೆ ಏನಿದೆ ಅಲ್ಲಿ? ಬರಿ ಬೂದಿ. ಘಟನೆಯನ್ನು ನೆನೆದುಕೊಂಡು ತಾತ ಕಣ್ಣೀರು ಇಡುತ್ತಾರೆ. ಎಂಥವರಿಗೂ ಘಟನೆಯಿಂದ ಬೇಸರವಾಗುತ್ತದೆ.

ಅಂಡರ್ ಗ್ರೌಂಡ್ ಡ್ರೈನೇಜ್ ಕ್ಲೀನರ್ ಆಗಿದ್ದ ಸೈಯದ್ ಇಸಾಕ್ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕೆಲಸಗಳನ್ನೂ ಮಾಡುತ್ತಿದ್ದರು. ಓದುಗರಿಗಾಗಿ ಸಹಾಯವಾಗಲಿ ಅಂತ ರಾಜೀವ್ ನಗರದ ಅಮ್ಮರ್ ಮಸೀದಿ ಬಳಿ ಪುಟ್ಟ ಗುಡಿಸಲಿನಲ್ಲಿ ಈ ಗ್ರಂಥಾಲಯವನ್ನು ಸ್ಥಾಪಿಸಿದ್ದರು. ಜಾತ್ಯಾತೀತವಾಗಿ ಎಲ್ಲ ಧರ್ಮದ ಗ್ರಂಥಗಳನ್ನು ಇಟ್ಟಿದ್ದರು. ಸಾಹಿತ್ಯದ ಕೃತಿಗಳೂ ಅಲ್ಲಿ ಇದ್ದವು. ಎಲ್ಲ ಸೇರಿ ಒಟ್ಟು ಹನ್ನೊಂದು ಸಾವಿರ ಪುಸ್ತಕಗಳಿದ್ದವು.

ಅದ್ಯಾರಿಗೆ ಈ ಜಾಗದ ಮೇಲೆ ಕಣ್ಣಿತ್ತೋ ಏನೋ ಗೊತ್ತಿಲ್ಲ. ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ಸರಿಯಾದ ರೀತಿಯಲ್ಲಿ ತನಿಖೆ ಮಾಡಿ, ಯಾವುದೇ ಆಮಿಷಕ್ಕೆ, ಮುಲಾಜಿಗೆ ಒಳಗಾಗದೆ ಇಸಾಕ್ ತಾತನಿಗೆ ನ್ಯಾಯ ಕೊಡಿಸಬೇಕಿದೆ. ಇಲ್ಲದಿದ್ದರೆ ಆ ಅಲ್ಲಾಹುವು ಅವರನ್ನು ಕ್ಷಮಿಸೋದಿಲ್ಲ.

Leave a Reply

Your email address will not be published. Required fields are marked *