ಹಾಯ್ ಬೆಂಗಳೂರ್

ಯಡಿಯೂರಪ್ಪನವರ ವಿರುದ್ಧ ನಾನು ಯಾವುದೇ ದೂರು ನೀಡಿಲ್ಲ: ಈಶ್ವರಪ್ಪ ಸ್ಪಷ್ಟನೆ

ಸನಿಹದಿಂದ ಕಂಡವರು ಹೇಳುವ ಪ್ರಕಾರ ಯಡಿಯೂರಪ್ಪನವರಿಗೆ ಮಗ್ಗುಲ ಮುಳ್ಳಾಗಿರುವ ಈಶು ಇವತ್ತು ಸ್ವಲ್ಪ ಗರಂ ಆಗಿದ್ದರು. ಯಡ್ಡಿ ವಿರುದ್ಧ ತಾನು ದೂರು ನೀಡಿದ್ದೇನೆ ಅಂತ ಯಾರ್ರೀ ಹೇಳಿದ್ದು. ನನಗೇನು ಬೇರೆ ಕೆಲಸ ಇಲ್ವಾ.

ಇಷ್ಟಕ್ಕೂ ಯಡಿಯೂರಪ್ಪನವರು ನಮ್ಮ ನಾಯಕರು, ರಾಜ್ಯದ ಮುಖ್ಯಮಂತ್ರಿಗಳು, ದೂರು ನೀಡುವುದಕ್ಕೂ, ಮಾಹಿತಿ ನೀಡುವುದಕ್ಕೂ ವ್ಯತ್ಯಾಸವಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು  ಅಂತ ಗ್ರಾಮೀಣಾಭಿವೃದ್ಧಿ ಖಾತೆಗೆ ಮಂತ್ರಿಯಾಗಿರುವ ಈಶು ಸ್ಪಷ್ಟಪಡಿಸಿಬಿಟ್ಟರು.

ಮತ್ಯಾಕ್ ಸಾರ್ ರಾಜಭವನಕ್ಕೆ ಹೋಗಿದ್ರಿ ಅಂತ ಯಾರೋ ವರದಿಗಾರ ಕೇಳಿದ್ದಕ್ಕೆ ಮತ್ತೆ ಗರಂ ಆದ ಈಶು ಹಾಂ… ರಾಜಭವನಕ್ಕೆ ಹೋಗಲೇಬಾರದೇನ್ರಿ. ರಾಜಭವನಕ್ಕೆ ಹೋದ ಮಾತ್ರಕ್ಕೆ ದೂರು ನೀಡಲಿಕ್ಕೇ ಹೋದರು ಅಂತ ಹೇಗ್ರೀ ಅಂದ್ಕೋತೀರಿ. ನಾನು ಯಾರ ಬಗ್ಗೆಯೂ ದೂರು ನೀಡಲಿಕ್ಕೆ ಹೋಗಿಲ್ಲ. ಹೋಗೋದೂ ಇಲ್ಲ. ನಮ್ಮ ಇಲಾಖೆಯಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಹೋಗಿದ್ದೆ. ಇದೇ ವಿಚಾರವಾಗಿ ನಮ್ಮ ರಾಷ್ಟ್ರೀಯ ನಾಯಕರಿಗೂ ಪತ್ರ ಬರೆದಿದ್ದೇನೆ. ಅಷ್ಟೇ ಹೊರತು ನೀವು ಹೇಳಿದ ಹಾಗೆ ಯಾವುದೇ ದೂರು ಇಲ್ಲ ದುಮ್ಮಾನವೂ ಇಲ್ಲ ಅಂತ ಪತ್ರಕರ್ತರ ಮೇಲೆಯೇ ಹರಿಹಾಯೋಕೆ ಟ್ರೈ ಮಾಡಿದರು. ಆದರೆ ಆಗಲಿಲ್ಲ ಅಷ್ಟೆ.

ನಂತರ ಸ್ವಲ್ಪ ಸಮಾಧಾನಗೊಂಡ ಈಶು ಮಾಹಿತಿ ನೀಡುವುದಕ್ಕೂ ದೂರಿಗೂ ವ್ಯತ್ಯಾಸವಿದೆ. ನಾನು ದೂರು ಕೊಟ್ಟಿದ್ದೇನೆ ಅಂತ ನಿಮಗ್ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಅಂತ ಪತ್ರಕರ್ತರ ಮೇಲೆಯೇ ಆರೋಪ ಮಾಡಲು ಶುರು ಮಾಡತೊಡಗಿದರು. ಸುಮ್ಮನೆ ಇರ್ತಾರಾ ಪತ್ರಕರ್ತರು. ಎಲ್ಲರೂ ಸೇರಿಕೊಳ್ಳುತ್ತಿದ್ದಂತೆಯೇ ಸ್ವಲ್ಪ ತಣ್ಣಗಾದ ಈಶು ನಂತರ ಆ ವಿಷಯವೇ ಬೇಡ ಅಂತ ಎದ್ದು ಹೊರಟೇಬಿಟ್ಟರು.

Leave a Reply

Your email address will not be published. Required fields are marked *