ಹಾಯ್ ಬೆಂಗಳೂರ್

ಹೇಗಿದ್ದೆ? ಹೇಗಾಗಿದ್ದೆ?? ಹೇಗಾದೆ??? ಗೊತ್ತೇ! ಅರ್ಥಾತ್ ನನ್ನ ತೂಕಾಯಣ

ಹೇಗಿದ್ದೆ? ಹೇಗಾಗಿದ್ದೆ?? ಹೇಗಾದೆ??? ಗೊತ್ತೇ! ಅರ್ಥಾತ್ ನನ್ನ ತೂಕಾಯಣ

 ರವಿ ಹೇಳಿದ್ದ ಮೊದಲ ಸಲಹೆಯೇ “ ಅಣ್ಣಾ ಮೊದಲು ನಿಮ್ಮ ತೂಕ ಇಳಿಸಿ” ಅದಕ್ಕೆ ಮುಗುಳ್ನಕ್ಕು ನಾನು ಹೇಳಿದೆ. “ಹೌದು ರವಿ ನನ್ನ ತೂಕ ಇಳಿಸಲೇಬೇಕು. ಅನೇಕ ಸಲ ಪ್ರಯತ್ನಿಸಿ ಐದು, ಹತ್ತು, ಹದಿನೈದು ಕೆ.ಜಿ. ತೂಕ ಇಳಿಸಿದ್ದೇನೆ. ಒಮ್ಮೆ ಮೂವತ್ತು ಕೆ.ಜಿಗೂ ಹೆಚ್ಚು ಇಳಿಸಿದ್ದೆ. ಆದರೆ  ಕೆಲವೇ ವಾರ ಅಥವಾ ತಿಂಗಳಲ್ಲಿ ಅದು ಮತ್ತೆ (ಹಿಂದಿನ ತೂಕದ)ಯಥಾ ಸ್ಥಿತಿಗೆ ಬಂದು ಬಿಡುತ್ತಿತ್ತು. ಏನು ಮಾಡಲಿ ಅಂದೆ”. ಆಗ ರವಿ ಹೇಳಿದ್ದು ಹೀಗೆ…

೧೦-೧೦-೧೦, ಇದ್ಯಾವ ಗಣಿತದ ಸೂತ್ರ ಅಂದುಕೊಳ್ಳಬೇಡಿ. ಇದು ಒಂದು ದಿನಾಂಕ. ಅಂದರೆ ೨೦೧೦ನೇ ಇಸವಿ ಹತ್ತನೇ (ಅಕ್ಟೋಬರ್) ತಿಂಗಳು ಹತ್ತನೇ ತಾರೀಖು ಅಂತ ಅದರ ಅರ್ಥ. ಅದು ಸರಿ ಈ ದಿನಾಂಕದ ವೈಶಿಷ್ಠ್ಯವೇನು ? ಮತ್ತು ಇದರ ಉಲ್ಲೇಖಕ್ಕೆ ಕಾರಣವೇನು? ಎಂಬ ಪ್ರಶ್ನೆ ಬಂದೇ ಬರುತ್ತೆ. ಅದು ಸಹಜ. ಅದಕ್ಕೆ ಉತ್ತರವೂ ನನ್ನಲ್ಲಿದೆ.  ನನ್ನ ಇಬ್ಬರು ಪುತ್ರಿಯರ ನಡುವಿನ ಏಕ ಮಾತ್ರ ಪುತ್ರ ಕಿರಣ(ಕಿರಣ ಕುಮಾರ್)ನ ವಿವಾಹದ ದಿನಾಂಕ ಅದು.  ಅದಕ್ಕೂ ಈ ಅಂಕಣ ಲೇಖನಕ್ಕೂ ಎತ್ತಣಿಂದೆತ್ತ ಸಂಬಂಧ ಎಂಬ ಮತ್ತೊಂದು ಪ್ರಶ್ನೆಯ ಉದ್ಭವವೂ ಸಹಜವೇ. ಅದರ ಬಗ್ಗೆ ಈಗ ನೋಡೋಣ.

ಇಪ್ಪತ್ತೈದು ವರ್ಷಗಳ ಹಿಂದೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪರಿಚಯವಾಗಿದ್ದರು ರವಿ ಬೆಳಗೆರೆ. ಆತ ಹೊಸದಾಗಿ ಆರಂಭಿಸಿದ್ದ `ಹಾಯ್ ಬೆಂಗಳೂರ್!’ ಪತ್ರಿಕೆಯ ಸಂಚಿಕೆಗಳು ಆತನ ಕೈಯಲ್ಲಿದ್ದವು. `ಹಾಯ್ ಬೆಂಗಳೂರ್!’ ವಾರ ಪತ್ರಿಕೆ ಆರಂಭವಾದ ದಿನಾಂಕ:೨೩-೯-೧೯೯೫. ಅದಕ್ಕೆ  ಎರಡು ವಾರಗಳ ಮುಂಚೆ ಅಂದರೆ ದಿನಾಂಕ:೯-೯-೧೯೯೫ರಂದು ನಾನು (ನನ್ನ ವಕೀಲ ವೃತ್ತಿಯ ಜೊತೆಗೆ) `ಪ್ರಜಾಧ್ವನಿ’ ಎಂಬ ವಾರ ಪತ್ರಿಕೆ ಆರಂಭಿಸಿದ್ದೆ.  ಆಗಿನ್ನೂ ದಾವಣಗೆರೆಯಲ್ಲೇ ನನ್ನ ವಾಸ್ತವ್ಯ. ನಾನು ಆಗಾಗ ಬೆಂಗಳೂರು ಹೈಕೋರ್ಟಿಗೆ ಬರುತ್ತಿದ್ದೆ. ಅಲ್ಲಿಗೆ ಬಂದಾಗೆಲ್ಲ ಮಧ್ಯಾಹ್ನ ಸಮೀಪದ ಪ್ರೆಸ್‌ಕ್ಲಬ್‌ಗೆ ಹೋಗುತ್ತಿದ್ದೆ. ಇಂತಹ ಸಂದರ್ಭವೊಂದರಲ್ಲಿ ಪ್ರೆಸ್‌ಕ್ಲಬ್ ಆವರಣದಲ್ಲೇ ಆದದ್ದು ನನ್ನ ಮತ್ತು ರವಿ ಬೆಳಗೆರೆ ಅವರ ಪ್ರಥಮ ಭೇಟಿ.

ಆ ನಂತರ ಆಗಾಗ ಅಲ್ಲಲ್ಲಿ ಸಮಾರಂಭಗಳ ವೇದಿಕೆಯಲ್ಲಿ ಅವರು ನಾವು ಭೇಟಿ ಆಗುತ್ತಿದ್ದೆವು. ಆದರೆ ಅವರ ನಮ್ಮ ನಡುವೆ ಹೆಚ್ಚಿನ ಪರಿಚಯ, ಆತ್ಮೀಯತೆ, ಬಾಂಧವ್ಯಗಳಿಗೆ ಅವಕಾಶವಾದದ್ದು ೨೦೦೩ರಲ್ಲಿ. ಅದಕ್ಕೆ ದಾರಿಯಾದದ್ದು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಬಳಿಯ ನಕಲಿ ಚಿನ್ನದ ಬಿಸ್ಕತ್ ಹಗರಣದ ಕ್ರಿಮಿನಲ್ ಕೇಸುಗಳು. ರವಿ ಬೆಳಗೆರೆ ಮತ್ತು ಸಂಗಾತಿಯೊಬ್ಬನನ್ನು ದೋಚಿ, ಹಲ್ಲೆ ಮಾಡಿ, ಮೋಸ ಮಾಡಿದ್ದ ಒಂದು ತಂಡದ ವಿರುದ್ಧ ರವಿ ನೀಡಿದ್ದ ದೂರು ಪ್ರಕರಣ ಒಂದು. ಅದೇ ರೀತಿ ಆ ತಂಡದಲ್ಲೊಬ್ಬನತ್ತ ತಮ್ಮ ರಿವಾಲ್ವರ್‌ನಿಂದ ಗುಂಡು ಹಾರಿಸಿ ಹತ್ಯಾ ಪ್ರಯತ್ನ ಮಾಡಿದರು ಅಂತ ಇವರ ಮೇಲೆ ಸಹ ಒಂದು ಕ್ರಿಮಿನಲ್ ದೂರು ದಾಖಲಾಗಿತ್ತು.  ಬೆಂಗಳೂರು ವ್ಯಾಪ್ತಿಯ ಬಳಕೆಗೆ ಸೀಮಿತವಾಗಿದ್ದ ತನ್ನ ರಿವಾಲ್ವರ್ ಅನ್ನು ಅಲ್ಲಿಂದ ಹೊರಗೆ ಅಂದರೆ ಹರಪನಹಳ್ಳಿ ಸಮೀಪ ತೆಗೆದುಕೊಂಡು ಹೋದದ್ದು ಸಹ ಅಪರಾಧ ಎಂಬುದು ಮತ್ತೊಂದು ಆರೋಪ. ರವಿಗೆ ನಿರೀಕ್ಷಣಾ ಜಾಮೀನನ್ನು ಐದೇ ದಿನಗಳಲ್ಲಿ ಕೊಡಿಸಿ ಆ  ಎರಡೂ ಕೇಸುಗಳನ್ನು ಸಹ ನಡೆಸಿದ್ದೆ. ನಕಲಿ ಚಿನ್ನದ ಬಿಸ್ಕತ್‌ನ ಮೋಸದ ವ್ಯಾಪಾರ ಹಾಗೂ ಹಣ-ವಸ್ತು,  ದೋಚಿದ ತಂಡದ ವಿರುದ್ಧ ಎಂಟು ವರ್ಷಗಳ ಕಾಲ ಕಠಿಣ ಶಿಕ್ಷೆ ಆಗುವಂತೆ ನಾನು ಮಾಡಿದ್ದು ಇತಿಹಾಸ. ಬೆಂಗಳೂರಿನ ವ್ಯಾಪ್ತಿಯಿಂದ ಹೊರಗೆ ಹರಪನಹಳ್ಳಿ ಸಮೀಪ ರಿವಾಲ್ವರ್ ತಂದಿದ್ದ (ಅಪರಾಧ) ತಪ್ಪಿಗೆ ರವಿಗೆ ಕೇವಲ ವಾಗ್ದಂಡನೆಯ ಶಿಕ್ಷೆ ಆಯಿತು. ಆದರೆ  ಹತ್ಯಾ ಪ್ರಯತ್ನದ ತೀವ್ರ ಆರೋಪದಿಂದ ರವಿಯನ್ನು ಖುಲಾಸೆ ಮಾಡಿಸಿದ್ದೆ. ೨೦೦೩ರಲ್ಲಿ ರವಿಗೆ ನಿರೀಕ್ಷಣಾ ಜಾಮೀನು ಕೊಡಿಸುವ ಜವಾಬ್ದಾರಿಯೊಂದಿಗೆ ಆರಂಭವಾಯಿತು ನನ್ನ ಅವರ ಹೆಚ್ಚಿನ ಒಡನಾಟ ಹಾಗೂ ಬಾಂಧವ್ಯ. ನಂತರ ರವಿ ಅಭಿಮಾನದಿಂದ ನನ್ನನ್ನು `ಅಣ್ಣ’ ಎಂದು ಪರಿಗಣಿಸಿರುವುದು ಅವರ ದೊಡ್ಡ ಗುಣ. ಅದಿರಲಿ ಬಿಡಿ.

ಇಷ್ಟೆಲ್ಲಾ ಹೇಳಲು ಕಾರಣ ಇಷ್ಟು ಆತ್ಮೀಯರಾಗಿರುವ ರವಿಯನ್ನು ನನ್ನ ಮಗನ ಲಗ್ನಕ್ಕೆ ಕರೆಯದೇ ಇರಲು ಆದೀತೇ? ಅದಕ್ಕಾಗಿಯೇ ನಾನು ೨೦೧೦ರ ಸೆಪ್ಟೆಂಬರ್ ತಿಂಗಳ ಒಂದು ರಾತ್ರಿ ಎಂಟು ಘಂಟೆಗೆ ಅವರ ಆಫೀಸ್ ಕಂ ಖಾಸಗಿ ವಾಸ್ತವ್ಯದ ಅಡ್ಡೆಗೆ (`ಹಾಯ್ ಬೆಂಗಳೂರ್!’ ಆಫೀಸಿಗೆ) ಹೋಗಿದ್ದೆ.  ನಾನು ಹೋದ ಕೆಲವೇ ನಿಮಿಷಗಳಲ್ಲಿ ರವಿ ನನ್ನನ್ನು ಅವರ ಛೇಂಬರ್‌ಗೆ ಬರಮಾಡಿಕೊಂಡರು. ನಾನು ಮಗನ ಲಗ್ನಪತ್ರಿಕೆ ಕೊಟ್ಟೆ. ಲಗ್ನಕ್ಕೆ ಬರಲು ಆಹ್ವಾನಿಸಿದೆ. ಅದಕ್ಕೆ ಸಮ್ಮತಿಸಿದ ರವಿ ನಂತರ  ಅಲ್ಲೇ ಪಾನ(ಕ) ಪೂಜೆ ಆರಂಭಿಸಿದರು. ಇಬ್ಬರೂ ತೀರ್ಥಂಕರರಾದೆವು. ಅರ್ಧಘಂಟೆಯ ನಂತರ ರವಿಯ ಆತ್ಮೀಯ ಬಳ್ಳಾರಿಯ ಸುರೇಶ್ ಸಹ ಬಂದು ಸೇರಿಕೊಂಡರು. ಬೆಳಗಿನ ಜಾವ ಐದರವರೆಗೆ ನಮ್ಮ ಪಾನ(ಕ) ಗೋಷ್ಠಿ ಜರುಗಿತು. ಆಗ ನಾನು ಅರವತ್ತು ಕೆ.ಜಿ. ಅಂದರೆ ಬರೀ ಅರವತ್ತು ಅಲ್ಲ ಒಂದು ಕ್ವಿಂಟಾಲಿನ ಮೇಲೆ ಅರವತ್ತು ಕೆ.ಜಿ.ಗಳ ತೂಕ ಇದ್ದೆ. ಅಂದರೆ ಕೇವಲ ಒಂದು ನೂರಾ ಅರವತ್ತು ಕೆ.ಜಿ. ತೂಕ  ಅರ್ಥವಾಯಿತಲ್ಲವೇ! ರವಿಯ ಛೇಂಬರಿನಲ್ಲಿದ್ದ ಕುರ್ಚಿಗಳೆಲ್ಲವೂ ನನ್ನ ತೂಕದ ಭಾರ ತಡೆಯಲು ಶಕ್ತವಾಗಿರಲಿಲ್ಲ. ಕಾರಣ ರವಿ ಛೇಂಬರಿನ ಹೊರಗೆ ಕಾರ್ಯಾಲಯದಲ್ಲಿದ್ದ ಕುರ್ಚಿಗಳ ಪೈಕಿ ಇರುವುದರಲ್ಲೇ ಬಲವಾಗಿದ್ದ ಕುರ್ಚಿ ತರಿಸಿ ನನಗಾಗಿ ಹಾಕಿಸಿದ್ದರು. ನಾನು ಹುಷಾರಾಗಿ ಅದರ ಮೇಲೆ ಕೂತು ತೀರ್ಥದ ಗ್ಲಾಸಿಗೆ ಕೈ ಹಾಕಿದೆ.

ಆಗ ರವಿ ಹೇಳಿದ್ದ ಮೊದಲ ಸಲಹೆಯೇ “ ಅಣ್ಣಾ ಮೊದಲು ನಿಮ್ಮ ತೂಕ ಇಳಿಸಿ” ಅದಕ್ಕೆ ಮುಗುಳ್ನಕ್ಕು ನಾನು ಹೇಳಿದೆ. “ಹೌದು ರವಿ ನನ್ನ ತೂಕ ಇಳಿಸಲೇಬೇಕು. ಅನೇಕ ಸಲ ಪ್ರಯತ್ನಿಸಿ ಐದು, ಹತ್ತು, ಹದಿನೈದು ಕೆ.ಜಿ. ತೂಕ ಇಳಿಸಿದ್ದೇನೆ. ಒಮ್ಮೆ ಮೂವತ್ತು ಕೆ.ಜಿಗೂ ಹೆಚ್ಚು ಇಳಿಸಿದ್ದೆ. ಆದರೆ  ಕೆಲವೇ ವಾರ ಅಥವಾ ತಿಂಗಳಲ್ಲಿ ಅದು ಮತ್ತೆ (ಹಿಂದಿನ ತೂಕದ)ಯಥಾ ಸ್ಥಿತಿಗೆ ಬಂದು ಬಿಡುತ್ತಿತ್ತು. ಏನು ಮಾಡಲಿ ಅಂದೆ”. ಆಗ ರವಿ ಹೇಳಿದ್ದು ಹೀಗೆ. “ನಾನು ಸಹ ನನ್ನ ಎತ್ತರ ಮತ್ತು ವಯಸ್ಸಿಗೆ  ಇರಬೇಕಾದ್ದಕ್ಕಿಂತ ಒಂದೂವರೆ ಪಟ್ಟು ಓವರ್ ವೈಟ್ ಆಗಿದ್ದೆ. ನನಗೆ ಡಯಾಬೀಟಿಸ್ ಬೇರೆ ಇತ್ತು. ನಾನು ೨೦೦೯ರಲ್ಲಿ ಬೇರಿಯಾಟ್ರಿಕ್ ಆಪರೇಶನ್ ಮಾಡಿಸಿಕೊಂಡಿದ್ದೇನೆ. ನನ್ನ ತೂಕವೂ ಕಡಿಮೆ ಆಗಿದೆ. ನನ್ನ ಡಯಾಬಿಟೀಸ್ ಸಮಸ್ಯೆ ಸಹ ಪರಿಹಾರವಾಗಿದೆ. ನೀವೂ ಮಾಡಿಸಿಕೊಳ್ಳಿ. ಅದರ ಸಂಪೂರ್ಣ ಖರ್ಚು ನನ್ನದು” ಅಂದರು. ಆಗ ನಾನು ಹೇಳಿದೆ. “ರವಿ ಆಪರೇಷನ್‌ನ ಖರ್ಚಿನದು ನನಗೆ ಸಮಸ್ಯೆಯೇ ಅಲ್ಲ. ಆದರೆ ನಾನದರ ಬದ್ಧ ವಿರೋಧಿ. ಆ ಮಾರ್ಗದಲ್ಲಿ  ತೂಕ ಇಳಿಸಲು ನಾನು ಸಿದ್ಧನಿಲ್ಲ. ನಾನು ನನ್ನದೇ ಆದ ರೀತಿಯಲ್ಲಿ ತೂಕ ಇಳಿಸುತ್ತೇನೆ. ಅದೆಲ್ಲ ಬೇಡ ಬಿಡಿ ಅಂತ ಉತ್ತರಿಸಿದೆ. ನನ್ನ ಧೃಡ ನಿಲುವು ಮತ್ತು ನನ್ನ ಸ್ವಭಾವ ಗೊತ್ತಿದ್ದ ರವಿ ಸುಮ್ಮನಾದರು. ನಮ್ಮ ಪಾನ(ಕ)ಗೋಷ್ಠಿ ಮುಂದುವರೆಯಿತು. `ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು” ಎಂಬ ಗಾದೆಯಂತೆ ನನ್ನ ತೂಕದ ಇಳಿಕೆಯ ವಿಷಯಕ್ಕೆ ಬರಲು ಇಷ್ಟೆಲ್ಲಾ ವಿವರ ಪ್ರವರ ಬೇಕಿತ್ತೇ ಅಂತ ಅನ್ನಿಸುವುದು ಸಹಜ. ಆದರೆ ನನ್ನ ಅಗಾಧ ತೂಕದ ಇಳಿಕೆಯ ಬಗ್ಗೆ ಬೇರಿಯಾಟ್ರಿಕ್ ಶಸ್ತ್ರ  ಚಿಕಿತ್ಸೆಯ ಸಲಹೆ ಮೊದಲು ನೀಡಿದ್ದು ರವಿಯೇ. ಅದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯಿತು. ಕ್ಷಮಿಸಿ.

೨೦೧೦ರ ಸೆಪ್ಟೆಂಬರ್‌ನಲ್ಲಿ ನನ್ನ ತೂಕ ಬರೋಬ್ಬರಿ ಒಂದು ನೂರಾ ಅರವತ್ತು(೧೬೦ ಕೆ.ಜಿ) ಇತ್ತು ಅಂತ ಹೇಳಿದೆ ಅಲ್ಲವೇ. ಆಗ ನನ್ನ ವಯಸ್ಸು ಅರವತ್ತು. ನನ್ನ ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ ನಾನಿರಬೇಕಾಗಿದ್ದ ತೂಕ ಅರವತ್ತೈದು ಕೆಜಿ. ಅಂದರೆ ಎರಡೂವರೆ ಪಟ್ಟು ಹೆಚ್ಚಿನ ತೂಕ ನನಗೆ ಹೇಗೆ ಬಂತು ಎಂಬುದು ಮತ್ತೊಂದು ಕುತೂಹಲದ ಪ್ರಶ್ನೆ . ನನ್ನ ಈ ಸ್ಥೂಲಕಾಯ ಅನುವಂಶಿಕವೇ ಅಥವಾ ಹುಟ್ಟಿದಾಗಿನಿಂದಲೂ ಬಂದಿದ್ದೇ? ಹಾಗಿಲ್ಲದಿದ್ದಲ್ಲಿ ಇಷ್ಟೊಂದು ಹೆಚ್ಚಿನ ತೂಕ ನನಗೆ ಬರಲು ಕಾರಣವೇನು? ಅಂತ ಆಗಾಗ ಅನೇಕ ಸ್ನೇಹಿತರು, ಬಂಧುಗಳು, ಕಕ್ಷಿಗಾರರು ಹಾಗೂ ವೈದ್ಯರುಗಳೇ ನನ್ನನ್ನು ಅನೇಕ ಸಲ ಕೇಳಿದ್ದಾರೆ. ಅದು ಸಹಜ ಕೂಡಾ. ಈಗ ಅದರ ಬಗ್ಗೆ ಕೊಂಚ ಹೇಳುವೆ. ನನ್ನ ತಂದೆ ಮತ್ತು ತಾಯಿ, ಸೋದರರು, ಅಕ್ಕ ಮತ್ತು ತಮ್ಮ ಹಾಗೂ ನಮ್ಮ  ಪೂರ್ವಿಕರಿಂದ ಹಿಡಿದು ಹತ್ತಿರದ ರಕ್ತ ಸಂಬಂಧಿಗಳಲ್ಲಿ ಯಾರೆಂದರೆ ಯಾರೂ ಸಹ ಸ್ಥೂಲ ಕಾಯದವರಾಗಿರಲಿಲ್ಲ.

೧೯೪೯ರ ಅಕ್ಟೋಬರ್‌ನಲ್ಲಿ ನಾನು ಹುಟ್ಟಿದಾಗಿನಿಂದ ಹಿಡಿದು ೧೯೯೯ರ ಅಕ್ಟೋಬರ್‌ವರೆಗೆ (ಐವತ್ತು ವರ್ಷ ವಯಸ್ಸು) ಸಹ ನಾನು ದೈತ್ಯದೇಹದ ಸ್ಥೂಲಕಾಯದವನಾಗಿರಲಿಲ್ಲ. ನಾನು ೧೯೬೦ರ ದಶಕದಲ್ಲಿ ಕೇವಲ ಐವತ್ತು ಕೆ.ಜಿ. ಮತ್ತು  ೧೯೭೦ರ ದಶಕದಲ್ಲಿ ಅರವತ್ತು ಕೆ.ಜಿ. ತೂಕದವನಾಗಿದ್ದೆ. ೧೯೭೪ರ ಏಪ್ರಿಲ್‌ನಲ್ಲಿ ಅಂದರೆ ನನ್ನ ಲಗ್ನ ಕಾಲಕ್ಕೆ ನನ್ನ ತೂಕ ಕೇವಲ ಅರವತ್ತೊಂದು ಅಥವಾ ಅರವತ್ತೆರಡು ಕೆ.ಜಿ. ಇದ್ದಿತು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮದ್ದೇರು ಗ್ರಾಮದಲ್ಲಿ ವ್ಯವಸಾಯ ಕುಟುಂಬದಲ್ಲಿ ಹುಟ್ಟಿದವ ನಾನು. ನಂತರ ನನ್ನ ಆರನೆಯ ವಯಸ್ಸಿನಲ್ಲಿ ನಮ್ಮ ಇಡೀ ಕುಟುಂಬ ಭದ್ರಾವತಿಗೆ ವಲಸೆ ಬಂದ ಮೇಲೂ  ಸಹ ವ್ಯವಸಾಯ ಕಸುಬು ಮುಂದುವರೆದಿತ್ತು. ಸಹಜವಾಗಿ ನಾನು ಎತ್ತು ಎಮ್ಮೆಗಳ ಕೊಟ್ಟಿಗೆ (ಸಗಣಿ) ಕೆಲಸದಿಂದ ಹಿಡಿದು, ನೇಗಿಲು ಹಿಡಿದು ಬೇಸಾಯ ಮಾಡುವವರೆಗೆ ಒಕ್ಕಲುತನದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೆ. ನಂತರ ಕೆಲಕಾಲ ಭದ್ರಾವತಿಯ ಕಬ್ಬಿಣ ಕಾರ್ಖಾನೆಯಲ್ಲಿ ಶ್ರಮಿಕ ಕಾರ್ಮಿಕನೂ ಆಗಿದ್ದೆ.  ಒಂದಷ್ಟು ಅವಧಿ ಬಡಗಿ ತರಗಾರ ಕೆಲಸಗಳನ್ನೂ ಮಾಡಿದ್ದೆ. ಭದ್ರಾವತಿಯ ಕಂಚೀ ಗರಡಿ ಮನೆಗೂ ( ಪೈಲ್ವಾನಿಕೆ ಕಸರತ್ತು) ಹೋಗುತ್ತಿದ್ದೆ. ಅಲ್ಲದೆ ನಾನು ಒಳಾಂಗಣ ಹಾಗೂ ಅದಕ್ಕಿಂತ ಹೆಚ್ಚಾಗಿ ಹೊರಾಂಗಣದ ಆಲ್‌ರೌಂಡರ್ ಆಟಗಾರ. ನಾನು ಒಳ್ಳೆಯ ಅಥ್ಲೇಟ್ ಅಲ್ಲದೇ ಕಬ್ಬಡಿ, ಪುಟ್ಬಾಲ್, ವಾಲಿಬಾಲ್, ಕ್ರಿಕೆಟ್, ಕೊಕ್ಕೋ, ಹಾಕಿ, ಷಟಲ್ ಬ್ಯಾಡ್ಮಿಂಟನ್ ಇತ್ಯಾದಿಗಳ ಪರಿಣತ ಆಟಗಾರ. ಭದ್ರಾ ನದಿಯಲ್ಲಿ ಪ್ರತಿ ದಿನ ಈಜುತ್ತಿದ್ದ ಈಜುಪಟು. ಯೋಗಾಭ್ಯಾಸ ಹಾಗೂ ಕರಾಟೆ ಪಟುವೂ ಹೌದು. ಸದಾ ಐವತ್ತು, ಅರವತ್ತು ಕೆ.ಜಿ. ತೂಕದಲ್ಲೇ ಇದ್ದ ನಾನು  ದೈಹಿಕ ಶ್ರಮಗಳು, ಕ್ರೀಡೆ ಹಾಗೂ ವ್ಯಾಯಾಮ ಚಟುವಟಿಕೆಗಳ ಕಾರಣ ನನ್ನ ತೂಕ ಸಿಕ್ಕಾಪಟ್ಟೆ ಏರಲು ಸಾಧ್ಯವೇ ಇರಲಿಲ್ಲ. ಹಾಗಾದರೆ `ಯದ್ವಾತದ್ವಾ” ಏರಿದ್ದು ಹೇಗೆ ಎಂಬುದು ಮುಂದಿನ ಪ್ರಶ್ನೆ. ಅದಕ್ಕೆ ಉತ್ತರ ನಾನು ಹೇಳಲೇಬೇಕು. ವ್ಯವಸಾಯ, ಓದು, ಕಾರ್ಖಾನೆ ಕೆಲಸಗಳ ನೌಕರಿ ನಂತರ ಹನ್ನೊಂದು ವರ್ಷಗಳ ( ೧೯೬೮ರಿಂದ ೧೯೭೮) ನ್ಯಾಯಾಂಗ ನೌಕರಿ. ನೌಕರಿ ಜೊತೆಗೆ ಎಸ್‌ಎಸ್‌ಎಲ್‌ಸಿಯಿಂದಿಡಿದು ಬಿ.ಎ.ಎಲ್‌ಎಲ್‌ಬಿವರಗೆ ನಾನು ಓದು ಮುಂದುವರೆಸಿದೆ. ೧೯೭೮ರಲ್ಲಿ ಕಾನೂನು ಪದವಿ ಪಡೆದ ನಾನು ೧೯೭೯ರ ಜನವರಿಯಲ್ಲಿ ನನ್ನ ಕೋರ್ಟು ನೌಕರಿಗೆ ರಾಜೀನಾಮೆ ನೀಡಿದೆ. ದಿನಾಂಕ:  ೨-೨-೧೯೭೯ರಿಂದ ದಾವಣಗೆರೆಯಲ್ಲಿ ವಕೀಲ ವೃತ್ತಿ ಆರಂಭಿಸಿದೆ. ವಕಾಲತ್ತಿನಲ್ಲಿ ಯಶಸ್ವಿಯಾಗಿ ಬಲು ಬೇಗ `ಬಿಝಿ’ ವಕೀಲನಾದೆ. ಪರಿಣಾಮ ಕ್ರಮೇಣ ನನ್ನ ಯೋಗಾಭ್ಯಾಸ, ಕರಾಟೆ, ಷಟಲ್ ಬ್ಯಾಡ್ಮಿಂಟನ್ ಇತ್ಯಾದಿ ಚಟುವಟಿಕೆಗಳಿಗೆ ವೇಳೆ ಸಿಗದಾಯಿತು. ವಕೀಲವೃತ್ತಿಯಲ್ಲಿ ಆಳವಾಗಿ ಮುಳುಗಿದ ನಾನು ದೈಹಿಕ ಶ್ರಮದ  ಆಟ ಮತ್ತು ವ್ಯಾಯಾಮದ ಪ್ರವೃತ್ತಿಗಳನ್ನು ಸಂಪೂರ್ಣ ಬಿಟ್ಟು ಬಿಟ್ಟೆ. ಇದರ ಜೊತೆಗೆ ೧೯೬೮ರಿಂದ  ಸೇರಿಕೊಂಡ `ತೀರ್ಥ-ಪ್ರಸಾದ’ಗಳ `ಸದಭ್ಯಾಸ’ದ ಬೈಠಕ್‌ಗಳೂ ಸಹ ಹೆಚ್ಚಾಗುತ್ತಾ ಬಂದವು.

ಬ್ಯಾಂಕುಗಳಲ್ಲಿ ವಿಭಿನ್ನ ರೀತಿಯ ಅಕೌಂಟ್ಸ್‌ಗಳಿವೆ. ಉಳಿತಾಯ ಖಾತೆ ಅಂದರೆ ಸೇವಿಂಗ್ ಬ್ಯಾಂಕ್ ಅಕೌಂಟ್. ಸಂಚಿತ ಠೇವಣಿ ಅಂದರೆ ಕುಮುಲೇಟಿವ್ ಡಿಪಾಜಿಟ್.  ನಿಶ್ಚಿತ ಠೇವಣಿ ಅಂದರೆ ಫಿಕ್ಸಡ್ ಡಿಪಾಜಿಟ್. ಉಳಿತಾಯ ಖಾತೆಯಲ್ಲಿ ಹಣ ಇಡುವುದು ತೆಗೆಯುವುದು (ಡಿಪಾಜಿಟ್ ಮತ್ತು ವಿತ್ ಡ್ರಾವಲ್) ಆಗುವ ಕಾರಣ ಸಾಮಾನ್ಯವಾಗಿ ಹೆಚ್ಚು ಕಡಿಮೆ ಬ್ಯಾಂಕ್ ಬ್ಯಾಲೆನ್ಸ್ ಒಂದೇ ಮಟ್ಟದಲ್ಲಿ ಇರುತ್ತದೆ. ಕುಮುಲೇಟಿವ್ ಡಿಪಾಜಿಟ್‌ನಲ್ಲಿ ಪ್ರತಿ ತಿಂಗಳು ಜಮೆ ಆಗುವ ಹಣ ಮತ್ತು ಬಡ್ಡಿ ಸೇರಿ ಅದು ಹೆಚ್ಚಾಗುತ್ತಾ ಹೋಗುತ್ತದೆ. ನಿಶ್ಚಿತ ಠೇವಣಿಯಲ್ಲಿ (ಫಿಕ್ಸಡ್ ಡಿಪಾಜಿಟ್) ಇಟ್ಟ ಹಣಕ್ಕೆ ಬಡ್ಡಿ ಸೇರಿ ಅದೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

ಅದೇ ರೀತಿ ನಮ್ಮ ತೂಕ ಸಹ ಅಷ್ಟೇ. ನಾವು ಪ್ರತಿ ದಿನ ಸೇವಿಸುವ ಆಹಾರಕ್ಕೆ ಸರಿಯಾಗಿ ಆಯಾ ದಿನದ ನಮ್ಮ ದೈಹಿಕ ಶ್ರಮ ಅಥವಾ ವ್ಯಾಯಾಮ ಇದ್ದರೆ ಅದು ಜೀರ್ಣವಾಗಿ ಹೋಗುತ್ತದೆ. ದೇಹಕ್ಕೆ ಅವಶ್ಯಕವಾದ ರಕ್ತ ಮಾಂಸ, ಪೋಷಕಾಂಶಗಳ ಸರಬರಾಜು ಆಗುತ್ತದೆ.  ದೇಹದ ತೂಕ ಹೆಚ್ಚಾಗಲು ಏನೂ ಉಳಿಯುವುದಿಲ್ಲ. ಆದರೆ ದೈಹಿಕ ಶ್ರಮ, ಅಥವಾ ವ್ಯಾಯಾಮಗಳು ಇಲ್ಲದಿದ್ದಲ್ಲಿ ಪ್ರತಿದಿನದ ಆಹಾರ ಸೇವನೆಯಿಂದ ನಮ್ಮ  ದೇಹ ತೂಕ ಕ್ರಮೇಣ ಸಂಚಿತ ಠೇವಣಿಯಂತೆ ಏರುತ್ತಲೇ ಹೋಗುತ್ತದೆ. ನನ್ನ ವಿಷಯದಲ್ಲಿ ಆದದ್ದೂ ಅದೇ. ಈಗಾಗಲೇ ಹೇಳಿರುವಂತೆ  ವ್ಯಾಯಾಮ ಅಥವಾ ದೈಹಿಕ ಶ್ರಮ ಇಲ್ಲವಾಗಿ, ತೀರ್ಥ, ಪ್ರಸಾದಗಳ ಸೇವನೆ ಹೆಚ್ಚಾದ ಕಾರಣ ಕೇವಲ ಅರವತ್ತು-ಎಪ್ಪತ್ತು ಕೆ.ಜಿ.ಗಳಲ್ಲಿದ್ದ ನನ್ನ ತೂಕ ಕ್ರಮೇಣ `ಮಲ್ಟಿಪ್ಲೈ’ ಲೆಕ್ಕದಲ್ಲಿ ಏರುತ್ತಲೇ ಹೋಯಿತು. ಯಶಸ್ವೀ ವಕಾಲತ್ತಿನ ಸಮುದಲ್ಲಿ  ಮುಳುಗಿದ್ದ ನಾನು ಅದರತ್ತ ತೀವ್ರ ಗಮನ ಕೊಡಲೇ ಇಲ್ಲ. ನನಗೆ ಅದರ ಅರಿವಾಗುವುದರೊಳಗೆ ನನ್ನ ದೇಹ ತೂಕ ಕ್ವಿಂಟಾಲು ದಾಟಿತು. ನಂತರ ಒಂದೂವರೆ ಕ್ವಿಂಟಾಲು (ಡಬಲ್‌ಗೂ ಹೆಚ್ಚು) ದಾಟಿತು. ಕೊನೆಗೆ ಒಂದೂನೂರಾ ಅರವತ್ತು ಕೆ.ಜಿ. ತೂಕಕ್ಕೆ ಬಂದಿತು. ಆಗ ನಾನು ತೂಕ ಇಳಿಸಲೇ ಬೇಕು ಎಂಬ  ನಿರ್ಣಯಕ್ಕೆ ಬಂದೆ.

                -(ಮುಂದುವರೆಯುವುದು)

Leave a Reply

Your email address will not be published. Required fields are marked *