ಹಾಯ್ ಬೆಂಗಳೂರ್

ಗೂಗಲ್ ಎಂಬ ಶ್ರೀಮಂತ ಸಂಸ್ಥೆಯಲ್ಲಿ ಬಡೀತಿದೆ ಲೈಂಗಿಕ ಕಿರುಕುಳದ ದುರ್ನಾತ

ಇತ್ತೀಚೆಗೆ ಗೂಗಲ್ ನ ಮಾಜಿ ಇಂಜಿನೀರ್ ಎಮಿ ನೀಟ್ ಫೀಲ್ಡ್ ಎಂಬಾಕೆ ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಒಂದು ಸಣ್ಣ ಲೇಖನ ಬರೆದಿದ್ದರು. ಹೇಗೆ ಗೂಗಲ್ ಸಂಸ್ಥೆಯು ತನಗೆ ಆಗುತ್ತಿದ್ದ ಮಾನಸಿಕ ಕಿರುಕುಳವನ್ನು ನಿಭಾಯಿಸಿತು ಅಂತ ಅವರು ತನ್ನ ಲೇಖನದಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಿಗೆ ಸುಮಾರು ಐನೂರು ಮಂದಿ ಉದ್ಯೋಗಿಗಳು ಸಿಇಒ ಸುಂದರ್ ಪಿಚೈಗೆ ಬಹಿರಂಗ ಪತ್ರ ಬರೆದು ಸಹಿ ಮಾಡಿ, ದಯವಿಟ್ಟು ಹೆರಾಸ್ (harassment) ಮಾಡೋರನ್ನ ಕಾಪಾಡಿಕೊಳ್ಳಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ.

ಎಮಿ ನೆಟ್ ಫೀಲ್ಡ್ ಗೆ ನಿಜಕ್ಕೂ ಗೂಗಲ್ ನ ಕೆಲಸ ಇಷ್ಟವಾಗಲಿಲ್ಲವಂತೆ. ಹಾಗಂತ ಆಕೆಯೇ ಬರೆದುಕೊಂಡಿದ್ದಾಳೆ. ನನಗೆ ಯಾರು ಹೆರಾಸ್ ಮಾಡುತ್ತಿದ್ದರೋ ಅವರ ಪಕ್ಕದಲ್ಲೇ ನನ್ನನ್ನು ಮೀಟಿಂಗ್ ಗಳಲ್ಲಿ ಕೂರಿಸುತ್ತಿದ್ದರು. ಅವರ ಜೊತೆಯೇ ಅಡ್ಜಸ್ಟ್ ಮಾಡಿಕೊಂಡು ಹೋಗುವಂತೆ ಪೀಡಿಸುತ್ತಿದ್ದರು. ಜಾತಿ ನಿಂದನೆ ಮತ್ತು ಲೈಂಗಿಕ ಕಿರುಕುಳದಂಥ ಹೀನ ಕೃತ್ಯಗಳು ಸಹ ಅಲ್ಲಿ ನಡೆಯುತ್ತವೆ ಅಂತ ಎಮಿ ಎಲ್ಲ ಸತ್ಯವನ್ನು ಹೊರಹಾಕಿದ್ದಾಳೆ.

ಕಂಪನಿಯಲ್ಲಿ ಕೊಡುವ ಕಾಟಗಳನ್ನೆಲ್ಲಾ ಸಹಿಸಿಕೊಳ್ಳಬೇಕು. ಇಲ್ಲ ಅಂದ್ರೆ ಸಂಸ್ಥೆ ಬಿಟ್ಟು ಹೊರಕ್ಕೆ ಹೋಗಬೇಕು. ಒಂದು ವೇಳೆ ಅಲ್ಲಿ ನಡೆಯುತ್ತಿರುವ ಅವ್ಯವಹಾರ, ಲೈಂಗಿಕ ಕಿರುಕುಳವನ್ನು ಹೊರಗಡೆ ಹೇಳಿದರೆ ಅಂಥವರನ್ನು ಕೆಲಸದಿಂದ ತೆಗೆಯಲಾಗುತ್ತದೆ ಮತ್ತು ಯಾರು ಹೆರಾಸ್ ಮಾಡುತ್ತಾರೋ ಅವರ ಸಂಬಳವನ್ನು ಹೆಚ್ಚು ಮಾಡುತ್ತಾರೆ ಅಂತ ಎಮಿ ಹೇಳಿಕೊಂಡಿದ್ದಾಳೆ.

ಇಂಥ ವಿಚಾರಗಳಲ್ಲಿ ಕಂಪನಿಗೆ ಕಚಡಾ ಇತಿಹಾಸವಿದೆ. ಇಲ್ಲಿ ಯಾರು ಕಿರುಕುಳ ಕೊಡುತ್ತಾರೋ ಅಂಥವರಿಗೆ ಪ್ರಮೋಷನ್ ಎಕ್ಸೆಟ್ರಾ ಎಕ್ಸೆಟ್ರಾ ಎಲ್ಲ ಕೊಡ್ತಾರೆ. ಆದರೆ, ಯಾರು ಕಿರುಕುಳಕ್ಕೆ ಒಳಗಾಗುತ್ತಾರೋ ಅವರಿಗೆ ಇನ್ನಷ್ಟು ಕಿರುಕುಳ ನೀಡುತ್ತಾರೆ ಅಂತ ಎಮಿ ದುಃಖ ತೋಡಿಕೊಂಡಿದ್ದಾಳೆ.

ಆಂಡಿ ರುಬಿನ್ ಎಂಬಾತ ಆಂಡ್ರಾಯ್ಡ್ ಸಾಫ್ಟ್ ವೇರ್ ಕಂಡುಹಿಡಿದ. ಈತ ತನಗೆ ಓರಲ್ ಸೆಕ್ಸ್ ಗೆ ಬಲವಂತ ಮಾಡುತ್ತಿದ್ದಾನೆ ಅಂತ ಯುವತಿಯೊಬ್ಬಳು ಉನ್ನತಾಧಿಕಾರಿಗಳಿಗೆ ದೂರು ನೀಡುತ್ತಾಳೆ. ಆದರೆ ಸಂಸ್ಥೆ ಆತನಿಗೆ 90 ಮಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸುತ್ತದೆ. ಅಮಿತ್ ಸಿಂಘಾಲ್ ಎಂಬಾತ ಕೂಡ ಇಂಥದ್ದೇ ಆರೋಪಕ್ಕೆ ಗುರಿಯಾದ. ಸಂಸ್ಥೆಯು ಆತನನ್ನು ತನಿಖೆಗೆ ಒಳಪಡಿಸಿತು. ಅದಕ್ಕೂ ಮೊದಲು 35 ಮಿಲಿಯನ್ ಡಾಲರ್ ಕೊಟ್ಟು ಕೆಲಸದಿಂದ ತೆಗೆಯಿತು.

ನಿಮಗೆ ಗೊತ್ತಿಲ್ಲ. 2018ರಲ್ಲಿ ಸುಮಾರು ಇಪ್ಪತ್ತು ಸಾವಿರ ಗೂಗಲ್ ನೌಕರರು ಸೆಕ್ಷುಯಲ್ ಹೆರಾಸ್ ಮೆಂಟ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಆದರೆ ಸಂಸ್ಥೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ ಮತ್ತು ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲ ನಾವು ನೌಕರರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತ ಸಂಸ್ಥೆ ಹೇಳಿದೆ.

ಏನೇ ಆಗಲಿ ಈ ಬಗ್ಗೆ ಸೂಕ್ತವಾದ ತನಿಖೆಯೊಂದು ನಡೆಯಲೇಬೇಕು.

Leave a Reply

Your email address will not be published. Required fields are marked *