ಹಾಯ್ ಬೆಂಗಳೂರ್

ಹದಿನೈದು ವರ್ಷಗಳ ಹಿಂದೆ ಇದೇ ದಿನ ಬೆಂಗಳೂರು ಹೇಗಿತ್ತು ಗೊತ್ತಾ?

ಅವತ್ತು ಇಷ್ಟೊತ್ತಿಗೆ ಸರಿಯಾಗಿ ಬೆಂಗಳೂರು ನಗರ ಕಲ್ಲು ಬಿದ್ದ ಜೇನುಗೂಡಿನಂತಾಗಿತ್ತು. ಮನೆ ಸೇರಿಕೊಂಡರೆ ಸಾಕಪ್ಪ ಅಂತ ಅನೇಕರು ದೌಡಾಯಿಸುತ್ತಿದ್ದರೆ, ಬಸ್ ಗಾಗಿ ಕಾಯುತ್ತಿದ್ದವರ ಪಾಡಂತೂ ಹೇಳತೀರದು. ಬೆಂಗಳೂರಷ್ಟೇ ಅಲ್ಲ ಇಡೀ ರಾಜ್ಯಕ್ಕೆ ರಾಜ್ಯದ ಚಟುವಟಿಕೆಗಳೇ ಸ್ತಬ್ಧವಾಗಿತ್ತು. ಅದಕ್ಕೆ ಕಾರಣ ಡಾ. ರಾಜ್. ಅವರು ನಮ್ಮನ್ನೆಲ್ಲಾ ಅಗಲಿ ಹೊರಟು ಹೋಗಿದ್ದರು.

ಹೌದು ಏಪ್ರಿಲ್ 22, 2006ರಂದು ಅವರು ನಿಧನರಾಗಿದ್ದರು. ಅಂದರೆ ಇಂದಿಗೆ ಸರಿಯಾಗಿ ಅವರು ನಮ್ಮನ್ನೆಲ್ಲಾ ಅಗಲಿ ಬರೋಬ್ಬರಿ ಹದಿನೈದು ವರ್ಷ.

ಪ್ರತಿವರ್ಷದಂತೆ ಈ ವರ್ಷವೂ ಇಡೀ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿಗೆ ಬಂದು ಪೂಜೆ ಸಲ್ಲಿಸಿದರು. ನೋಡ್ತಾ ನೋಡ್ತಾ ಹದಿನೈದು ವರ್ಷಗಳಾಗಿ ಹೋದವು. ನಂಬಲಿಕ್ಕೇ ಆಗುತ್ತಿಲ್ಲ. ಅವರು ಇನ್ನೂ ನಮ್ಮ ಜೊತೆಯಲ್ಲೇ ಇದ್ದಾರೇನೋ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿದೆ ಅಂತ ಶಿವಣ್ಣ ಭಾವುಕರಾದರು.

ರಾಘವೇಂದ್ರ ರಾಜಕುಮಾರ್ ಮಾತನಾಡಿ ತಂದೆಯವರೊಂದಿಗೆ ತಮ್ಮ ಹಳೇ ನೆನಪುಗಳನ್ನೆಲ್ಲಾ ಹಂಚಿಕೊಂಡರು. ಅಣ್ಣಾವ್ರೊಟ್ಟಿಗೆ ಇರುವ ಒಂದು ವಿಡಿಯೋವನ್ನು ಶೇರ್ ಮಾಡಿದರು. ಮೊಮ್ಮಕ್ಕಳಾದ ಧನ್ಯಾ ಮತ್ತು ಧೀರನ್ ರಾಮ್ ಕುಮಾರ್ ಈ ಎಲ್ಲವನ್ನೂ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುವ ಮೂಲಕ ಅಭಿಮಾನಿಗಳೆಲ್ಲರೂ ನೋಡುವಂತೆ ಮಾಡಿದರು.  ಒಟ್ಟಾರೆಯಾಗಿ ಅಣ್ಣಾವ್ರು ನಮ್ಮ ನಡುವೆಯೇ ಇದ್ದಾರೆ ಎಂಬ ಭಾವನೆಯನ್ನು ಅವರ ಕುಟಂಬಸ್ಥರು ಮೂಡಿಸಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *