ಹಾಯ್ ಬೆಂಗಳೂರ್

ಮೊಬೈಲ್ ಕದ್ದ ಕಳ್ಳ ಐದೇ ನಿಮಿಷದಲ್ಲಿ ಅದನ್ನು ವಾಪಸ್ ಮಾಡಿ ಹೋಗಿದ್ದು ಯಾಕೆ ಗೊತ್ತಾ?

ಇದೊಂದು ವಿಚಿತ್ರ ಫೋನ್ ಕಳ್ಳತನದ ಕಥೆ. ತಾನು ಕದ್ದ ಮೊಬೈಲ್ ಬೇರೆ ಬ್ರ್ಯಾಂಡ್ ಆಗಿತ್ತು ಅಂತ ಯಾವನಾದರು ಕಳ್ಳ ಅದನ್ನು ಹಿಂದಿರುಗಿಸೋದನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ? ದೆಹಲಿ ಸಮೀಪದ ನೋಯ್ಡಾದಲ್ಲೊಬ್ಬ ಭೂಪ ಅಂಥದ್ದೊಂದು ಘನ ಕೆಲಸವನ್ನು ಮಾಡಿದ್ದಾನೆ.

ತಾನು ಕದ್ದ ಫೋನ್ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್ 10 ಪ್ಲಸ್ ಆಗಿದ್ದು ಒನ್ ಪ್ಲಸ್ 9 ಪ್ರೊ ಆಗಿರಲಿಲ್ಲ ಎಂಬ ಕಾರಣಕ್ಕೆ ಕದ್ದ ಮೊಬೈಲನ್ನು ವಾಪಸ್ ಮಾಡಿದ್ದಾನೆ. ದೇಬ್ಯಾನ್ ಎಂಬ ಪ್ರಯಾಣಿಕ ನೋಯ್ಡಾದ ಮೆಟ್ರೋ ಸ್ಟೇಷನ್ ಸೆಕ್ಟರ್ 52ರಲ್ಲಿ ನಿಂತುಕೊಂಡು ಮೊಬೈಲ್ ನೋಡುತ್ತಿದ್ದ. ಕಪ್ಪು ಮಾಸ್ಕ್ ಧರಿಸಿದ್ದ ಕಳ್ಳ ಬಂದು ಅದನ್ನು ಕಿತ್ತುಕೊಂಡು ಪರಾರಿಯಾಗಿಬಿಟ್ಟ.

ಒಂದು ಕ್ಷಣಕ್ಕೆ ದೇಬ್ಯಾನ್ ಗೆ ಏನು ಮಾಡಬೇಕು ಅಂತ ತೋಚದೆ ಜೋರಾಗಿ ಕಿರುಚಿಕೊಂಡ. ಕಳ್ಳನನ್ನು ಅಟ್ಟಿಸಿಕೊಂಡು ಹೋದ. ಕಳ್ಳ ಮುಂದಕ್ಕೆ ಓಡುವ ಬದಲು ವಾಪಸ್ ದೇಬ್ಯಾನ್ ಕಡೆಗೆ ಓಡಿ ಬರತೊಡಗಿದ. ದೇಬ್ಯಾನ್ ಗೆ ಆಶ್ಚರ್ಯವೋ ಆಶ್ಚರ್ಯ. ಇದೇನಪ್ಪ ಇದು ಅಂತ ನೋಡಿದರೆ ಕಳ್ಳ ವಾಪಸ್ ಇವನ ಬಳಿ ಬಂದವನೆ “ಭಾಯ್ ಮುಜೆ ಲಗಾ ಒನ್ ಪ್ಲಸ್ 9 ಪ್ರೋ ಮಾಡೆಲ್ ಹೈ” (ಒನ್ ಪ್ಲಸ್ ಪ್ರೊ ಮಾಡಲ್ ಅಂತ ಭಾವಿಸಿ ಕದ್ದುಬಿಟ್ಟೆ ಗುರು) ಅಂತ ಹೇಳಿ ಕದ್ದ ಮೊಬೈಲನ್ನು ಬಿಸಾಕಿ ಎಸ್ಕೇಪ್ ಆಗಿಬಿಟ್ಟ.

ದೇಬ್ಯಾನ್ ಗೆ ನಂಬಲಿಕ್ಕೇ ಆಗಲಿಲ್ಲ. ಸದ್ಯ ಹೋಗಿದ್ದ ಮೊಬೈಲ್ ವಾಪಸ್ ಬಂತಲ್ಲಪ್ಪ ಅಷ್ಟು ಸಾಕು ಅಂತ ಅಂದುಕೊಂಡು ಈ ಕುರಿತು ಟ್ವೀಟ್ ಮಾಡಿದ. ಕ್ಷಣ ಮಾತ್ರದಲ್ಲಿ ವೈರಲ್ ಆದ ಈ ಸುದ್ದಿ ಈ ದಿನದ ಬಹುದೊಡ್ಡ ಕಾಮಿಡಿ ಅಂತ ಖ್ಯಾತಿ ಪಡೆಯಿತು.

ಎಂಥೆಂಥ ಜನ ಇದ್ದಾರೆ ನೋಡಿ ಭೂಮಿ ಮೇಲೆ.

Leave a Reply

Your email address will not be published. Required fields are marked *