ಹಾಯ್ ಬೆಂಗಳೂರ್

ಸೂಪರ್ ಸ್ಟಾರ್ ರಜಿನಿಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ಇವತ್ತು ಬಹಳ ಸಂಭ್ರಮದ ದಿನ. ಯಾಕೆಂದರೆ ಕೇಂದ್ರ ಸರ್ಕಾರ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿದೆ. ಇಷ್ಟು ವರ್ಷ ರಜಿನಿ ಮಾಡಿದ ಸಾಧನೆಗೆ ಈ ಪ್ರಶಸ್ತಿ ಅತ್ಯಂತ ಸೂಕ್ತ ಪುರಸ್ಕಾರವಾಗಿದೆ.

ಅಂದಹಾಗೆ ರಜಿನಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. “ಭಾರತೀಯ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದು ಬಹಳ ಖುಷಿಯ ವಿಚಾರ. ಚಿತ್ರರಂಗದಲ್ಲಿ ಅವರ ಸಾಧನೆಗೆ ತಕ್ಕ ಸಂದ ಗೌರವ ಇದಾಗಿದ್ದು ಬಹಳ ಸಂತೋಷವಾಗುತ್ತಿದೆ” ಅಂತ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ಇನ್ನು ಪ್ರಧಾನಿ ಮೋದಿಯವರು ಕೂಡ ರಜಿನಿಗೆ ಶುಭಾಶಯ ಕೋರಿ ಹೊಗಳಿದ್ದಾರೆ. “ಎರಡ್ಮೂರು ತಲೆಮಾರುಗಳ ಮೇಲೆ ಅತ್ಯಂತ ಗಾಢ ಪ್ರಭಾವ ಬೀರಿರುವ ನೀವು ದಾದಾ ಸಾಹೇಬ್ ಪ್ರಶಸ್ತಿಗೆ ಅತ್ಯಂತ ಅರ್ಹ ವ್ಯಕ್ತಿ. ನಿಮಗೆ ಹೃದಯಪೂರ್ವಕ ಶುಭಾಶಯಗಳು” ಅಂತ ಮೋದಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಸೇರಿದಂತೆ ದೇಶ ವಿದೇಶಗಳಲ್ಲಿರುವ ರಜಿನಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವರು ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿ ಬಡವರಿಗೆ ಪ್ರಸಾದ ಹಂಚುತ್ತಿದ್ದಾರೆ.

ನಿಜಕ್ಕೂ ರಜಿನಿ ಬೆಳೆದು ಬಂದ ರೀತಿ ಅಮೋಘ. ಬೆಂಗಳೂರಿನ ಶ್ರೀನಗರದ ಸಣ್ಣ ಮನೆಯೊಂದರಲ್ಲಿದ್ದುಕೊಂಡು ಕಂಡಕ್ಟರ್ ಆಗಿ ರೈಟ್ ರೈಟ್ ಎನ್ನುತ್ತಿದ್ದ ವ್ಯಕ್ತಿ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ಅದು ಅಚ್ಚರಿಯಷ್ಟೇ ಅಲ್ಲ ಸಂತೋಷ ಪಡುವ ವಿಚಾರವೂ ಹೌದು. ಅವರು ನಂಬಿರುವ ರಾಘವೇಂದ್ರ ಸ್ವಾಮಿಯೇ ಇದಕ್ಕೆಲ್ಲಾ ಕಾರಣ ಅಂತ ಮೇರು ನಟ ಅತ್ಯಂತ ವಿನಮ್ರರಾಗಿ ನುಡಿಯುವಾಗ ಹೆಮ್ಮೆ ಎನಿಸುತ್ತದೆ.

ಅದೇನೇ ಇರಲಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸೂಪರ್ ಸ್ಟಾರ್ ಗೆ ಅಭಿನಂದನೆಗಳು.

Leave a Reply

Your email address will not be published. Required fields are marked *