ಹಾಯ್ ಬೆಂಗಳೂರ್

ದೃಶ್ಯ 2 ಚಿತ್ರಕ್ಕೆ  ರೆಡಿಯಾಗುತ್ತಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್

ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರು ದೃಶ್ಯ 2 ಚಿತ್ರಕ್ಕೆ ಸಜ್ಜುಗೊಳ್ಳುತ್ತಿದ್ದಾರೆ. 2013ರಲ್ಲಿ ಮೋಹನ್ ಲಾಲ್ ಅಭಿನಯದ ‘ದೃಶ್ಯಂ’ ಸೂಪರ್ ಹಿಟ್ ಆಗಿತ್ತು. ಅದನ್ನು ಅವರು ಪಿ.ವಾಸು ನಿರ್ದೇಶನದಲ್ಲಿ ದೃಶ್ಯ ಅಂತ ಮಾಡಿದ್ದರು. ಚಿತ್ರ ಒಂದು ರೇಂಜ್ ಗೆ ಹಿಟ್ ಆಗಿತ್ತು. ರವಿಚಂದ್ರನ್ ಶೈಲಿಯ ಚಿತ್ರವಲ್ಲವಾದರೂ ಆ ಸಂದರ್ಭದಲ್ಲಿ ಅವರಿಗೊಂದು ಬ್ರೇಕ್ ಬೇಕಿತ್ತು. ಆ ಕಾರಣಕ್ಕಾಗಿ ಅವರು ದೃಶ್ಯ ಚಿತ್ರವನ್ನು ಒಪ್ಪಿಕೊಂಡರು.

ಇದೀಗ ಏಳು ವರ್ಷಗಳ ಬಳಿಕ ದೃಶ್ಯ-2 ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡುತ್ತಿದ್ದಾರೆ. ಯುಗಾದಿ ಹಬ್ಬದ ದಿನದಂದು ಈ ವಿಷಯವನ್ನು ಅನೌನ್ಸ್ ಮಾಡಿದ ಪಿ.ವಾಸು ಈ ಚಿತ್ರವನ್ನೂ ಕೂಡ ಹಿಟ್ ಮಾಡಬೇಕು ಎಂಬ ಹುರುಪಿನಲ್ಲಿ ಇದ್ದಾರೆ. ಉಳಿದಂತೆ ಮೊದಲ ಭಾಗದಲ್ಲಿ ನಟಿಸಿದ್ದ ನಟರು ಮತ್ತು ಕೆಲಸ ಮಾಡಿದ್ದ ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರೆಯಲಿದ್ದಾರೆ.

ಎಲ್ಲವೂ ಸರಿ ಹೋಗಿ ಯಾವುದೇ ತೆರನಾದ ಅಡಚಣೆ ಆಗದಿದ್ದಲ್ಲಿ ಚಿತ್ರವು ಮೇ ತಿಂಗಳಿನಲ್ಲಿ ಸೆಟ್ಟೇರಲದ್ದು ದಸರೆ ಅಥವಾ ದೀಪಾವಳಿ ಟೈಮಿಗೆ ರಿಲೀಸ್ ಆಗಲಿದೆ. ದೃಶ್ಯ ಮೊದಲನೇ ಭಾಗ ಹಿಟ್ ಆಗಿದ್ದರಿಂದ ಸಹಜವಾಗಿಯೇ ಅದರ ಎರಡನೇ ಭಾಗದ ಬಗ್ಗೆ ರವಿಚಂದ್ರನ್ ಸೇರಿದಂತೆ ಎಲ್ಲರೂ ಕುತೂಹಲ ಇಟ್ಟುಕೊಂಡಿದ್ದಾರೆ. ಏನಾಗಲಿದೆಯೋ ಕಾದು ನೋಡಬೇಕು.

Leave a Reply

Your email address will not be published. Required fields are marked *