ಹಾಯ್ ಬೆಂಗಳೂರ್

ಕೋವಿಡ್ ಮಹಾಮಾರಿಯ ಅಬ್ಬರ: ಯು.ಎ.ಇ. ಮತ್ತು ಜಪಾನನ್ನೂ ಮೀರಿಸಿದ ಮುಂಬೈ

ಇವತ್ತಿಗೆ ದಾಖಲಾದ  9,202 ಪ್ರಕರಣಗಳನ್ನೂ ಸೇರಿಸಿಕೊಂಡರೆ ಮುಂಬೈನಲ್ಲಿ ಕೋವಿಡ್ ಸಂಖ್ಯೆಯು ಐದು ಲಕ್ಷ ದಾಟಿದೆ. ಜಪಾನ್ ಮತ್ತು ಮುಂಬೈಗೆ ಹೋಲಿಸಿದರೆ ಇದು ಅತೀ ಹೆಚ್ಚು ಅಂತಲೇ ಹೇಳಬಹುದು. ಕಳೆದ ಬಾರಿ ಮೂರು ಲಕ್ಷದಿಂದ ನಾಲ್ಕು ಲಕ್ಷ ಕೇಸ್ ಆಗೋದಕ್ಕೆ ಒಟ್ಟು ಎಪ್ಪತ್ತೈದು ದಿನಗಳು ಬೇಕಾದವು. ಆದರೆ ಈಗ ನಾಲ್ಕರಿಂದ ಐದು ಲಕ್ಷ ಆಗೋದಕ್ಕೆ ಕೇವಲ ಹನ್ನೊಂದು ದಿನ ಸಾಕಾಯಿತು. ಇದು ಸುಮ್ಮನೆ ನಿರ್ಲಕ್ಷ್ಯ ಮಾಡಿ ಎದ್ದು ಹೋಗುವ ಮಾತಲ್ಲವೇ ಅಲ್ಲ.

ಇಡೀ ಮಹಾರಾಷ್ಟ್ರ ರಾಜ್ಯದಲ್ಲಿ ಒಟ್ಟು ಪ್ರಕರಣಗಳು 32 ಲಕ್ಷ ದಾಟಿಕೊಂಡು ಹೋಗಿದೆ. ನಿನ್ನೆ ಒಂದೇ ದಿನ ಮುನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲೀ ತನಕ ಮೃತರಾಗಿರುವ ಸಂಖ್ಯೆ ಒಟ್ಟು 57,329. ಫೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ರಾಹುಲ್ ಪಂಡಿತ್ ಅವರು ಮಹಾರಾಷ್ಟ್ರ ರಾಜ್ಯದ ಕೋವಿಡ್ ಟಾಸ್ಕ್ ಫೋರ್ಸ್ ನಲ್ಲಿದ್ದಾರೆ. ಅವರ ಪ್ರಕಾರ ಮುಂದಿನ ಮೂರು ವಾರ ಬಹಳ ಮುಖ್ಯವಂತೆ. ಕೇಸ್ ಗಳು ತುಂಬಾನೇ ಹೆಚ್ಚಾಗುವ ಸಾಧ್ಯತೆಗಳು ಇವೆಯಂತೆ.

ಇವತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಮಹಾರಾಷ್ಟ್ರದ ಎಲ್ಲ ರಾಜ್ಯಗಳ ಜಿಲ್ಲಾಧಿಕಾರಿಗಳು, ಕ್ಯಾಬಿನೆಟ್ ಮಂತ್ರಿಗಳು, ವೈದ್ಯಾಧಿಕಾರಿಗಳ ಜೊತೆಗೆ ಮಾತನಾಡಲಿದ್ದಾರೆ. ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಬೇಕೋ ಬೇಡವೋ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *