ಹಾಯ್ ಬೆಂಗಳೂರ್

ಆಸ್ಪತ್ರೆಗಳಲ್ಲಿ ಜಾಗ ಕೊರತೆ ಇರೋದ್ರಿಂದ ಮನೆಯಲ್ಲೇ ಎಲ್ಲರೂ ಪಾಲಿಸಬೇಕಾದ ನಿಯಮಗಳು ಯಾವುವು ಗೊತ್ತಾ?

ನಿನ್ನೆ ಸೋಮವಾರ ದಾಖಲಾದ ಎರಡು ಮುಕ್ಕಾಲು ಲಕ್ಷ ಹೊಸ ಕೇಸ್ ಗಳನ್ನೂ ಸೇರಿ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ ಒಂದೂವರೆ ಕೋಟಿ ಮೀರಿದೆ. ಇದೇ ರೀತಿ ಹೋದರೆ ಭಾರತವು ಪ್ರಪಂಚದಲ್ಲೇ ನಂಬರ್ ಒನ್ ಆಗಿಬಿಡುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

ದೇಶಾದ್ಯಂತ ಆಸ್ಪತ್ರೆಗಳು, ವೈದ್ಯರು, ನರ್ಸ್ ಗಳು ಎಲ್ಲರೂ ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬರನ್ನು ನೋಡಿ ಒಬ್ಬರು ಹೆದರಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಬೆಡ್ ಗಳು ಸಾಕಾಗುತ್ತಿಲ್ಲ, ಆಕ್ಸಿಜನ್ ಮತ್ತು ಮೆಡಿಸಿನ್ ಪೂರೈಕೆಗಳು ಇನ್ನಷ್ಟು ಆಗಬೇಕಿದೆ. ಈ ದುಸ್ಥಿತಿಯನ್ನು ಕಣ್ಣಾರೆ ನೋಡಿರುವ ವೈದ್ಯರು ನಮ್ಮ ದೇಶದ ಜನರಿಗೆ ಒಂದಷ್ಟು ಟಿಪ್ಸ್ ಗಳನ್ನು ನೀಡಿದ್ದಾರೆ. ಅವು ಯಾವುದೆಂದರೆ;

ಅಕಸ್ಮಾತ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಇತ್ತು ಅಂದರೆ ಮನೆಯಲ್ಲೇ ಉಳಿಯಿರಿ. ಒಂದು ಆಕ್ಸಿಮೀಟರ್ ಇಟ್ಟುಕೊಳ್ಳಿ. ಅದರಲ್ಲಿ ಆಗಾಗ್ಗೆ ನಿಮ್ಮ ದೇಹದಲ್ಲಿ ಆಕ್ಸಿಜನ್ ಎಷ್ಟಿದೆ ಚೆಕ್ ಮಾಡಿಕೊಳ್ತಿರಿ. 94ಕ್ಕಿಂತ ಕಡಿಮೆ ಆಕ್ಸಿಜನ್ ಇದೆ ಅಂತ ಕಂಡುಬಂದರೆ ಬೋರಲು ಮಲಗಿಕೊಳ್ಳಿ. ಅಂದರೆ ಹೊಟ್ಟೆ ಕೆಳಗೆ ಮಾಡಿ ಅದರ ಮೇಲೆ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ಶ್ವಾಸಕೋಶವು ಸ್ವಲ್ಪ ಹಿಗ್ಗುತ್ತದೆ. ಈ ಥರ ಎರಡು ಗಂಟೆಗೊಮ್ಮೆ ದಿನಕ್ಕೆ ಮೂರು ಬಾರಿ ಮಾಡಿದರೆ ಆಕ್ಸಿಜನ್ ಮಟ್ಟ ಸುಧಾರಿಸುತ್ತದಂತೆ.

ಒಂದು ವೇಳೆ ಇದು ಉಪಯೋಗಕ್ಕೆ ಬರಲಿಲ್ಲ ಅಂದರೆ ಮನೆಯಲ್ಲೇ ಆಕ್ಸಿಜನ್ ಸಿಲಿಂಡರ್ ಅಥವಾ ಆಕ್ಸಿಜನ್ ಕಾನ್ಸನ್ ಟ್ರೇಟರ್ ಉಪಕರಣವನ್ನು ತಂದಿಟ್ಟುಕೊಳ್ಳಿ. ಇದರಲ್ಲಿ ನಿಮ್ಮ ದೇಹದ ಆಕ್ಸಿಜನ್ ಸುಧಾರಣೆಗೆ ಬರಲೇಬೇಕು. ಆಗಲೂ ಬರಲಿಲ್ಲ ಅಂದರೆ ಮಾತ್ರ ನಿಮ್ಮ ಮನೆ ಹತ್ತಿರ ಇರುವ ವೈದ್ಯರನ್ನು ಸಂಪರ್ಕ ಮಾಡಿ ಅಂತ ಹೇಳಿದ್ದಾರೆ.

ಇದಲ್ಲದೆ ಇನ್ನೂ ಕೆಲವು ವಿಧಾನಗಳಿವೆ. ಪ್ರಾಣಾಯಾಮ ಮಾಡುವುದು ತುಂಬಾನೇ ಅನುಕೂಲಕರ. ದೀರ್ಘವಾಗಿ ಉಸಿರೆಳೆದುಕೊಂಡು ನಿಧಾನವಾಗಿ ಬಿಡುವುದನ್ನು ಒಂದಷ್ಟು ಸಲ ಮಾಡಬೇಕು. ಪಲ್ಮನಾಲಾಜಿಸ್ಟ್ ನ ಕಂಡು ಅವರಿಂದ ಸಲಹೆ ಪಡೆಯುವುದು ಉತ್ತಮ. ಜಂಕ್ ಫುಡ್ ಗಳು, ಹೊರಗಿನ ಪದಾರ್ಥವನ್ನು ತಿನ್ನಲೇಬಾರದು. ಮನೆಯಲ್ಲೇ ಬಿಸಿ ಬಿಸಿಯಾದ ಅಡುಗೆ ಮಾಡಿಕೊಂಡು ಅದು ಬಿಸಿಯಾಗಿರುವಾಗಲೇ ಸೇವಿಸಬೇಕು. ಜೊತೆಗೆ ಗಂಟೆಗೊಮ್ಮೆ ಬಿಸಿ ನೀರು ಕುಡಿಯಬೇಕು. ಹೀಗೆ ಮಾಡೋದ್ರಿಂದ ದೇಹದ ಇಮ್ಯುನಿಟಿ ಹೆಚ್ಚಾಗುತ್ತದೆ ಅಂತಾರೆ ವೈದ್ಯರು.

ಅವರು ಹೇಳೋದನ್ನು ಫಾಲೋ ಮಾಡೋದ್ರಲ್ಲೇನೂ ಕಷ್ಟ ಇದ್ದಂತೆ ಕಾಣಿಸುತ್ತಿಲ್ಲ, ಅಲ್ಲವೇ?

Leave a Reply

Your email address will not be published. Required fields are marked *