ಹಾಯ್ ಬೆಂಗಳೂರ್

ಸಾರಿಗೆ ಸಂಸ್ಥೆಯ ಬಡ ನೌಕರರ ಮೇಲೆ ರಾಜಾಹುಲಿ ಗುರ್ ಗುರ್

ರಾಜ್ಯ ರಸ್ತೆ ಸಾರಿಗೆ ನೌಕರರು ಅದೇನು ಪಾಪ ಮಾಡಿ ಕೆಲಸಕ್ಕೆ ಸೇರಿಕೊಂಡರೋ ಏನೋ. ಮುಖ್ಯಮಂತ್ರಿ ಅನ್ನಿಸಿಕೊಂಡ ರಾಜಾಹುಲಿ ಅವರ ಮೇಲೆ ಗುರ್ ಗುರ್ ಅಂತ ಗುರುಗುಟ್ಟುತ್ತಿದ್ದಾರೆ. ಏನೋ ಒಂದಿಷ್ಟು ಹೆಚ್ಚು ಸಂಬಳ ಕೊಟ್ಟುಬಿಟ್ಟರೆ ಸರ್ಕಾರವೇನು ಪಾಪರ್ ಎದ್ದು ಹೋಗುತ್ತದಾ – ಉರಿ ಬಿಸಿಲಿನಲ್ಲಿ ಪ್ರತಿಭಟನೆ ಮಾಡುತ್ತಿರುವ ಸಾರಿಗೆ ನೌಕರರನ್ನು ನೋಡಿ ಜನರು ಕೇಳುತ್ತಿರುವ ನ್ಯಾಯಯುತವಾದ ಪ್ರಶ್ನೆ ಇದೆ.

6 ನೇ ವೇತನ ಆಯೋಗದ ಶಿಫಾರಸ್ಸನ್ನು ಈಗಲೇ ಜಾರಿಗೊಳಿಸಬೇಕು. ಈ ಸಂಬಂಧ ಸರ್ಕಾರದ ಆದೇಶ ಬಂದ ಒಂದು ಗಂಟೆಯೊಳಗೆ ಮುಷ್ಕರ ನಿಲ್ಲಿಸುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟ ಸರ್ಕಾರಕ್ಕೆ ತಿಳಿಸಿದೆ.
ಆದರೆ 6 ನೇ ವೇತನ ಆಯೋಗದ ಶಿಫಾರಸ್ಸು ಸಾಧ್ಯವಿಲ್ಲ. ಅದರ ಬದಲು ಶೇಕಡಾ 8 ರಷ್ಟು ವೇತನ ಹೆಚ್ಚಳ ಮಾಡುತ್ತೇವೆ. ಅದಕ್ಕೂ ಬಗ್ಗದಿದ್ದರೆ ಇವತ್ತು, ನಾಳೆ, ನಾಡಿದ್ದು ನೋಡಿಕೊಂಡು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಾರಿಗೆ ನೌಕರರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಕೊಡದೆ ಇನ್ನೇನ್ ಮಾಡ್ತಾರೆ ಸ್ವಾಮಿ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅಂದರೆ ಇದೇ ಅಲ್ವೆ.

ಅದೇನೆ ಇರಲಿ ಸರ್ಕಾರ ಮತ್ತು ಸಾರಿಗೆ ನೌಕರರ ಹಗ್ಗಜಗ್ಗಾಟದಿಂದ ಬಸ್ಸುಗಳಿಲ್ಲದೆ ಜನರು ಉರಿ ಬಿಸಿಲಿನಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದೇ ವೇಳೆ ಬಸ್ ನಿಲ್ದಾಣಗಳಿಂದ ಖಾಸಗಿ ಬಸ್ ಓಡಾಡಬಹುದು ಎಂದು ಸರ್ಕಾರವೇನೊ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸೇರಿದಂತೆ ಇತರೆ ವಾಹನದವರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಹಣವಿಲ್ಲದವರು ಮತ್ತಷ್ಟು ಕಷ್ಟಕ್ಕೆ ಸಿಲುಕಿದ್ದಾರೆ.

Leave a Reply

Your email address will not be published. Required fields are marked *