ಹಾಯ್ ಬೆಂಗಳೂರ್

ಅದೊಂದು ಉಪಕರಣ ಸರಿಯಾಗಿ ಸ್ಟಾಕ್ ಮಾಡಿಕೊಂಡಿದ್ದಿದ್ದರೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ

ನಮ್ಮ ದೇಶದ ಸರ್ಕಾರ ನಿಜಕ್ಕೂ ಈ ಪರಿ ಬೇಜವಾಬ್ದಾರಿ ಅಂತ ಯಾರೂ ಅಂದುಕೊಂಡಿರಲಾರರು. ದಿನ ಅಷ್ಟು ಜನ ಸತ್ತರು, ಇಷ್ಟು ಮಂದಿ ಆಸ್ಪತ್ರೆಗೆ ದಾಖಲಾದರು ಅಂತ ಟಿವಿಯವರು ತೋರಿಸುತ್ತಲೇ ಇರುತ್ತಾರಲ್ಲ, ಅಸಲಿಗೆ ಅಷ್ಟೊಂದು ಜನರು ಸಾಯಲು ಏನು ಕಾರಣ ಅನ್ನೋದನ್ನ ತೋರಿಸುತ್ತಿದ್ದಾರಾ? ತೋರಿಸೋಕೆ ಸಾಧ್ಯಾನೇ ಇಲ್ಲ.  ಯಾಕೆಂದರೆ ಅವರ ಅಜೆಂಡಾನೇ ಬೇರೆ ಇದೆ.

ಕೋವಿಡ್ ನ ಎರಡನೇ ಅಲೆ ಎದ್ದಿರೋದು ನಿಜಕ್ಕೂ ಭಯಂಕರ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ನಿಯಂತ್ರಿಸಲು ಆಗದಷ್ಟು ಸಮಸ್ಯೆ ಏನಿಲ್ಲ. ಸೋಂಕಿತರನ್ನು ಗುಣಪಡಿಸಬೇಕು ಅಂದರೆ ಮೊದಲು ಬೇಕಾಗಿರೋದು ಆಕ್ಸಿಜನ್ ಮೀಟರ್ ಗಳು. ಅದಿದ್ದರೆ ರೋಗಿಯ ದೇಹದ ಆಕ್ಸಿಜನ್ ಮಟ್ಟ ಎಷ್ಟಿದೆ ಅಂತ ಕಂಡು ಹಿಡಿಯಬಹುದು. ನಮ್ಮ ದೊಡ್ಡ ದೊಡ್ಡ ಪ್ರತಿಷ್ಠಿತ ಆಸ್ಪತ್ರೆಯೂ ಸೇರಿದಂತೆ ಯಾವ ಆಸ್ಪತ್ರೆಯಲ್ಲೂ ಕೂಡ ಅದು ಅಗತ್ಯಕ್ಕೆ ಬೇಕಾದಷ್ಟು ಇಲ್ಲವೇ ಇಲ್ಲ. ಹೀಗಾಗಿ ರೋಗಿಯು ಯಾವ ಸ್ಟೇಜ್ ನಲ್ಲಿದ್ದಾನೆ ಅನ್ನೋದು ಗೊತ್ತಾಗುತ್ತಿಲ್ಲವಾದ್ದರಿಂದ ಸಾವುಗಳ ಪ್ರಮಾಣ ಹೆಚ್ಚುತ್ತಲೇ ಇದೆ. ದೆಹಲಿ, ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಕೋವಿಡ್ ಪೇಷೆಂಟ್ ಗಳು ಸಾಯುತ್ತಿರುವುದು ಇದೇ ಕಾರಣದಿಂದ.

ಯಾವಾಗ ಕಳೆದ ಫೆಬ್ರವರಿ ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಕೋವಿಡ್ ಸಂಖ್ಯೆ ಏರತೊಡಗಿತೋ ಆಗಿನಿಂದ ಆಕ್ಸಿಮೀಟರ್ ಗೂ ಕೂಡ ಡಿಮ್ಯಾಂಡ್ ಜಾಸ್ತಿಯಾಯಿತು. ಆದರೆ ನಮ್ಮ ಸರ್ಕಾರಗಳು ಎಚ್ಚೆತ್ತುಕೊಳ್ಳಲೇ ಇಲ್ಲ. ಅದು ಸರಿಯಾದ ಟೈಮಿಗೆ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ.

ಇನ್ನಾದರೂ ನಮ್ಮ ಸರ್ಕಾರಗಳು ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಜನರ ಕೈಯಲ್ಲೇ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ನಿಜಕ್ಕೂ ಆ ಬ್ರಹ್ಮ ಬಂದರೂ ಕಾಪಾಡಲಾರ.

ಯಾವುದೇ ವಿಷಯವನ್ನಾದರೂ ನಾವು ಪ್ರ್ಯಾಕ್ಟಿಕಲ್ ಆಗಿ ಮಾತನಾಡಬೇಕು. ಸಿಟಿ ಮಾರ್ಕೆಟ್ ನಲ್ಲಿ  ಬೆಳಗ್ಗೆ ಹಣ್ಣು, ತರಕಾರಿ, ಹೂವನ್ನು ಮಾರಲು ಮತ್ತು ಕೊಳ್ಳಲು ಬರುವವರು ಹೇಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆ. ಅವರನ್ನು ನಿಯಂತ್ರಿಸುವವರು ಯಾರು? ಬಿ.ಬಿ.ಎಂ.ಪಿ. ಅಧಿಕಾರಿಗಳು ಎಷ್ಟು ಜನರನ್ನ ಅಂತ ಕಂಟ್ರೋಲ್ ಮಾಡ್ತಾರೆ. ಯಾವಾಗ ಪರಿಸ್ಥಿತಿ ಸರ್ಕಾರದ ಕೈ ಮೀರುತ್ತದೋ ಆಗ ಲಾಕ್ ಡೌನ್ ಅಂತ ಘೋಷಿಸಿಬಿಡುತ್ತಾರೆ. ಅದರಿಂದ ಮತ್ತೆ ಬಡವರಿಗೆ ಸಮಸ್ಯೆ. ಹಾಗಿದ್ದರೂ ಕಷ್ಟ, ಹೀಗಿದ್ದರೂ ಕಷ್ಟ ಅನ್ನೋದು ಇದಕ್ಕೇನೆ.

Leave a Reply

Your email address will not be published. Required fields are marked *