ಹಾಯ್ ಬೆಂಗಳೂರ್

ಅದೆಷ್ಟು ಜನರ ಶ್ರದ್ಧೆ ಸೆಳೆದಿಟ್ಟುಕೊಂಡ ಮಾಯಾವಿಯಲ್ಲವೆ?

“ನೀನು ಸಣ್ಣ ಕತೆಯಂಥವಳು” ಆಕೆಗೆ ಹೇಳಿದ್ದೆ.

“ಬೇಗ ಮುಗಿದು ಹೋಗುತ್ತೇನಾ?” ಗಾಬರಿಗೊಂಡು ಕೇಳಿದ್ದಳು.

“ಆದರೆ ತುಂಬ ದಿನ ನೆನಪಿರುತ್ತೀ” ಅಂತ ಸಮಾಧಾನ ಹೇಳಿದ್ದೆ. ಅದು ಸಮಾಧಾನವಷ್ಟೇ ಅಲ್ಲ. ಸತ್ಯ ಕೂಡ. ಕಾದಂಬರಿಯ ಒಟ್ಟು ಕಥೆ ನೆನಪಿರಬಹುದು. ಆದರೆ ಯಾವುದೇ ತಿರುವು, ಅದರ ಮೈಯೊಳಗಿನ ಯಾವುದೇ ಮಚ್ಚೆಯಂಥ ಪಾತ್ರ, ಕಾದಂಬರಿಯ ಸಣ್ಣಪುಟ್ಟ ಥ್ರಿಲ್ಲುಗಳೆಲ್ಲ ಮರೆತು ಹೋಗಬಹುದು. ಇವತ್ತು ತುಂಬ ಇಷ್ಟವಾಗುವ ಕವಿತೆಯೊಂದು ಹತ್ತು ವರ್ಷಗಳ ನಂತರ ಏನೇ ಬಾಯಿ ಬಡಿದುಕೊಂಡರೂ ನೆನಪಿಗೆ ಬಾರದೆ ಕೈ ಕೊಡಬಹುದು. ಓದಿದ ಲಲಿತ ಪ್ರಬಂಧ ಕೆಲಕಾಲದ ನಂತರ ಮರೆವಾಗಬಹುದು. ಆದರೆ ಕಥೆಯಿದೆಯಲ್ಲ?

ಅದು ಮೊದಲ ಪ್ರೇಯಸಿಯ ಮೋಸದಂತಹುದು. ಮರೆಯಲು ಸಾಧ್ಯವೇ ಇಲ್ಲ. ನಾನು ತುಂಬ ಕತೆಗಳನ್ನು ಓದಿದವನಲ್ಲ. ಜಗತ್ತಿನ ಎಷ್ಟೋ ಸರ್ವಶ್ರೇಷ್ಠ ಕತೆಗಳನ್ನು  ಓದಿಯೇ ಇಲ್ಲ. ಆದರೆ ಈತನಕ ಓದಿದ ಯಾವ ಕತೆಯನ್ನೂ ಮರೆತಿಲ್ಲ. ಅದಕ್ಕಿಂತ ಹೆಚ್ಚಾಗಿ ಚಿಕ್ಕಂದಿನಲ್ಲಿ ಕೇಳಿಸಿಕೊಂಡ ಒಂದೇ ಒಂದು ಕತೆ ನನ್ನಿಂದ ಮರೆವಾಗಿಲ್ಲ. ನಾನೇ ಬರೆದ ಅವೆಷ್ಟೋ ಲೇಖನಗಳು, ವರದಿಗಳು, ಪತ್ರಗಳು-ಯಾವತ್ತಿಗಾದರೂ ಮರೆತು ಹೋಗಬಹುದೇನೋ; ಆದರೆ ನನ್ನ ಇಪ್ಪತ್ತೈದು-ಇಪ್ಪತ್ತಾರು ಕತೆಗಳಿವೆಯಲ್ಲ? ಅವುಗಳ ಪ್ರತಿಸಾಲು, ಪ್ರತಿ ಪಾತ್ರ, ಪ್ರತಿ ತಿರುವು, ಪ್ರತಿ ಅಂತ್ಯ ನನಗೆ ಹಚ್ಚೆ ಹುಯ್ದಷ್ಟು ಕರಾರುವಾಕ್ಕಾಗಿ ನೆನಪಿವೆ.

ಏಕೆಂದರೆ, ಸಣ್ಣ ಕತೆಯೆಂಬುದು ಅವಳಂತಹುದು! ಅವಳು ಎಲ್ಲರಂತಲ್ಲ. ಮಹಾಬಿನ್ನಾಣಗಿತ್ತಿ. ಕೆಟ್ಟ ಸೆಡವಿನ ಹುಡುಗಿ. ಅತ್ತಿತ್ತ ನೋಡುವಂತಿಲ್ಲ. ಅಸಡ್ಡೆಯ ಕುರುಹು ಕಂಡರೂ ಮುನಿದುಬಿಡುತ್ತಾಳೆ. ಕೊಂಚ ಆಚೀಚೆ ಹೋಗಿ ಇನ್ಯಾರೊಂದಿಗೋ flirt ಮಾಡಿದರೆ ಮುಗಿದೇ ಹೋಯಿತು. ಮತ್ತೆ ನನ್ನೆಡೆಗೆ ತಿರುಗಿ ನೋಡುವುದಿಲ್ಲ. ಅವಳನ್ನೇ  ನೋಡಬೇಕು. ಮಾತೆಲ್ಲ ಅವಳೊಂದಿಗೇ. ಕಣ್ಣು ಕದಲುವಂತಿಲ್ಲ. ತುಂಬ ಮುದ್ದು ಮಾಡಬೇಕು. ನಿನ್ನದೇ ಪೂಜೆ, ನೀನೇ ದೇವತೆ, ನೀನು ಪವಿತ್ರ ಶ್ರೀಚಕ್ರದ ಕೇಂದ್ರಬಿಂದು. ನಾನು ನಿನ್ನೆದುರು ಕುಳಿತ ಪದ್ಮಾಸನಿ. ಇನ್ನಾದರೂ ಒಲಿಯೇ…

ಹಾಗಂತ ವಿನಂತಿಸದ ಹೊರತು ಸಣ್ಣಕತೆ ಒಲಿಯುವುದಿಲ್ಲ. ಕೆಲವು ಬಾರಿ ಲೇಖಕರನ್ನು ಪರಿಚಯಿಸುವಾಗ “ಅವರು ಕತೆ, ಕಾದಂಬರಿ, ನಾಟಕ, ಕವಿತೆ, ವೈಚಾರಿಕ ಲೇಖನ, ಪ್ರಬಂಧ ಹೀಗೆ ನಾನಾ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ” ಅಂತ ಉಬ್ಬುಬ್ಬಿಸಿ ಬರೆದು ಬಿಡುತ್ತೇವೆ. ಅಂಥ ಪುಣ್ಯಾತ್ಮರ ಬರಹಗಳನ್ನು ಹುಡುಕಿ ನೋಡಿ? ಆತ ಅತ್ಯುತ್ತಮ ಕವಿಯಾಗಿದ್ದರೆ, ಒಂದಷ್ಟು ಒಳ್ಳೆಯ ನಾಟಕಗಳನ್ನು ಬರೆದಿರುತ್ತಾನೆ. ತುಂಬ ಒಳ್ಳೆ ಕಾದಂಬರಿಕಾರ ಒಂದೆರಡು ವೈಚಾರಿಕ ಲೇಖನ ಬರೆದಿರುತ್ತಾನೆ. ಪ್ರಬಂಧ ಬರೆದು ಪಳಗಿದಾತ ಒಂದಷ್ಟು ಕತೆಗಳನ್ನು ‘ಪ್ರಯತ್ನಿ’ಸಿರುತ್ತಾನೆ. ಆದರೆ ಎಲ್ಲ ಥರದವುಗಳನ್ನೂ ಬರೆದು ಜಯಿಸುತ್ತೇನೆ ಅಂತ ಹೊರಟಿರುತ್ತಾನಲ್ಲ?

ಅವನ ಸಣ್ಣಕತೆಗಳು ಹುಟ್ಟುವ ಮೊದಲೇ ಸತ್ತು ಹೋಗಿರುತ್ತವೆ! ಏಕೆಂದರೆ, ಸಣ್ಣಕತೆ  ಸುಮ್ಮನೆ ಒಲಿಯುವುದಿಲ್ಲ. ಅದು ತಕ್ಷಣ ಹೊಳೆದು, ತಕ್ಷಣ ಹೆಣೆದು, ಮರುಕ್ಷಣಕ್ಕೆ ಮುದ ನೀಡುವಂತಹ ಕವಿಭಾವದ product ಅಲ್ಲ. ಕಾದಂಬರಿಯಂತೆ ಮೈಯೆಲ್ಲ ಹಿಂಜಿಕೊಂಡು ಮಲಗಿ ಎಲ್ಲಿಂದ  ಬೇಕಾದರೂ ಉದ್ಭವವಾಗಿ, ಎಲ್ಲಿಗೆ ಬೇಕಾದರೂ ಮುಗಿಯುತ್ತೇನೆ ಅನ್ನುವಂಥ ಔದಾರ್ಯ ಅದಕ್ಕಿರುವುದಿಲ್ಲ. ಒಂದು ಸಣ್ಣಕತೆ ಹುಟ್ಟುವ ಮುನ್ನ ಸಾವಿರ ಯಾತನೆಗಳು ಕಾಡತೊಡಗುತ್ತವೆ. ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಬಸಿರೊಳಗಿನ ಮಗುವಿನಂತೆ ಕತೆಯೊಂದು ಒದೆಯುತ್ತಲೇ ಇರುತ್ತದೆ. ಕೊಂಚ ಅಸಡ್ಡೆ ಮಾಡಿದರೂ ಗರ್ಭಪಾತ. ಅರ್ಧ ಬರೆದಿಟ್ಟು, ನಾಳೆ ಉಳಿದದ್ದು ಬರೆದು ಮುಗಿಸೋಣವೆಂದುಕೊಂಡೇನಾದರೂ ಎದ್ದಿರೋ-ಅಲ್ಲಿಗೇ ಆ ಕತೆ ಆತ್ಮಹತ್ಯೆ ಮಾಡಿಕೊಂಡೀತು. ಒಂದೇ ಉಸಿರಿನಲ್ಲಿ ಹೆತ್ತು ಮುಗಿಸಬೇಕು.

ಅಂದುಕೊಂಡದ್ದನ್ನೆಲ್ಲ ಚಿಕ್ಕಚಿಕ್ಕ ವಾಕ್ಯಗಳಲ್ಲಿ, ಪುಟ್ಟ ಪುಟ್ಟ ಮಾತುಗಳಲ್ಲಿ, ಎಲ್ಲೂ ಬಂಧ ಬಿಟ್ಟು ಹೋಗದ ಹಾಗೆ, ಕೆಲವೇ ಕೆಲವು ಪುಟಗಳಲ್ಲಿ, ಒಂದೆರಡು ಮೂರು ಘಟನೆಗಳ ಸುತ್ತ, ಒಂದು nut shellನಲ್ಲಿ ಬಿಗ್ಗಬಿಗಿ ಉಸಿರು ಹಿಡಿದಂತೆ ಹೇಳಿ ಮುಗಿಸದಿದ್ದರೆ, ಅದಕ್ಕೊಂದು ಅನೂಹ್ಯ ತಿರುವು, ಕಡೆತನಕ ನೆನಪಿಡುವಂಥ ಅಂತ್ಯ ದೊರಕಿಸದಿದ್ದರೆ-ಅದೂ ಒಂದು ಕಥೆನಾ? ಎಷ್ಟು ಶ್ರದ್ಧೆ ಬೇಕು, ಎಂಥ ನಿಷ್ಠೆ, ಅದೆಂಥ ಏಕಾಗ್ರತೆ! ಕೊಂಚ ಅತ್ತಿತ್ತ ಹೊರಳಿದರೂ ಕಥೆ ಮುನಿಯುತ್ತದೆ. ಅರ್ಧಕ್ಕೇ ಸಾಯುತ್ತದೆ. ಅಂತ್ಯ ಕೈಕೊಡುತ್ತದೆ. ಕೆಲವೊಮ್ಮೆ ಅಂತ್ಯಕ್ಕೆ  ಮೊದಲೇ ಮುಗಿದು ಹೋಗಿರುತ್ತದೆ. ಬೇಕಾದರೆ ಪರೀಕ್ಷಿಸಿ ನೋಡಿ, ಕೆಲವು ಕತೆಗಳನ್ನು ಓದಿದಾಗ ‘ಇದನ್ನು ಅಲ್ಲಿಗೇ ನಿಲ್ಲಿಸಬಹುದಿತ್ತಲ್ಲ?  ಕತೆ ಮುಗಿದ ಮೇಲೂ ಹಟಕ್ಕೆ ಬಿದ್ದು ಬರೆಯುತ್ತ ಹೋಗಿದ್ದಾನೆ ಕತೆಗಾರ’ ಅನ್ನಿಸಿಬಿಡುತ್ತದೆ. ಅರೆರೆ, ಇಲ್ಲಿಗೇ ಮುಗಿದುಹೋಯಿತೇ? ಎಂದು ಹಂಬಲಿಸುವಂತೆ  ಮಾಡುವ ಕತೆಗಳು ಅಪರೂಪ. ದಿನಗಟ್ಟಲೆ ಓದುಗನ ಬೆನ್ನತ್ತಿ ಕಾಡುವ, ಮತ್ತೆ ಮತ್ತೆ ಓದಿಸಿಕೊಳ್ಳುವ, ತನ್ನ ಪ್ರತಿ ಪಾತ್ರದಲ್ಲೂ ಓದುಗನಿಗೆ ಮೋಹ ಹುಟ್ಟುವಂತೆ ಮಾಡುವ ಕತೆಗಳು ಎಷ್ಟು ಅಪರೂಪ!

ನಿಮಗೆ ಬೇಸರವೆನ್ನಿಸಬಹುದು. ಇವನ್ಯಾರೋ ತಿಕ್ಕಲ ಅನ್ನಿಸಬಹುದು. ಆದರೆ ಯಾವತ್ತಾದರೂ ಒಂದು ಒಳ್ಳೆ ಕತೆ ಬರೆಯಬೇಕು ಅನ್ನೋ ಆಸೆ ನಿಮಗಿದ್ದರೆ, ಇವತ್ತಿನಿಂದಲೇ  ನೀವು ಇತರರ ಕತೆಗಳನ್ನು ಓದುವುದನ್ನು ನಿಲ್ಲಿಸಿಬಿಡಿ. ಕತೆಗೊಂದು ಕತೆ ಹುಟ್ಟುತ್ತೆ ಅಂತಾರೆ. ಆದರೆ ಅವರಿವರ ಕತೆಗಳನ್ನು ಓದುತ್ತ ಓದುತ್ತ ನಿಮ್ಮೊಳಗಿನ ಕತೆ ಸತ್ತು ಹೋಗಿಬಿಡುತ್ತೆ. ನೂರು ಸಿನೆಮಾ ನೋಡಿ ಒಂದು ಸಿನೆಮಾ ಮಾಡೋ ನಿರ್ದೇಶಕನ ಸ್ಥಿತಿ. ಅದ್ಯಾರಿಗೆ ಬೇಕು? ನಿಮ್ಮ ಕತೆಗೆ ನೀವೇ ಶ್ರುತಿಯಾಗಿ, ಮಾತಾಗಿ, ಅಕ್ಷರವಾಗಿ, ಬಸಿರು ಹೊತ್ತು, ಅದರ ತೊನೆಯುವಿಕೆಯನ್ನೆಲ್ಲ ಸಹಿಸಿಕೊಂಡು, ಇನ್ನು ಭರಿಸಲಾರೆನೆಂಬಷ್ಟು ತೀವ್ರತೆಗೆ ಬಿದ್ದಾಗ ಒಂದು ಅಜ್ಞಾತ ಮೂಲೆಯಲ್ಲಿ ಕುಳಿತು ನೆಮ್ಮದಿಯ ದನಿಯಲ್ಲಿ ಕತೆ ಹೇಳುತ್ತಾ ಹೋಗಿ. ಅವಳಷ್ಟೇ ಅದ್ಭುತವಾಗಿ ನಿಮಗೆ ಒಲಿಯುತ್ತ ಹೋಗುತ್ತದೆ ಸಣ್ಣಕತೆ.

ಇಂಗ್ಲಿಷಿನ ನೂರಾರು ಕತೆಗಳನ್ನು ಓದಿ, ಚರ್ಚಿಸಿ, ಅದನ್ನೇ ಮೆಲುಕು ಹಾಕಿ, ಅವುಗಳಿಂದ ಪ್ರಭಾವಿತರಾಗಿ ನಮ್ಮ ಕನ್ನಡದ ನವ್ಯರು, ನವ್ಯೋತ್ತರರು ಬರೆದ ಕತೆಗಳನ್ನು ಒಮ್ಮೆ ಓದಿ ನೋಡಿ. ಪ್ರತಿಯೊಬ್ಬರ ಕತೆಯಲ್ಲೂ ಕೊಂಚ ಕಾಫ್ಕಾ, ಅರಪಾವಿನಷ್ಟು ಸಾರ್ತ್ರೆ, ಚಟಾಕಿನಷ್ಟು ಲಾರೆನ್ಸ್, ತೆಕ್ಕೆಗಟ್ಟಲೆ ಮಾರ್ಕ್ವೆಜ್-ಎಷ್ಟು ಬೇಡವೆಂದರೂ ಗೋಚರಿಸಿ ಬಿಡುತ್ತಾರೆ. ಅವರೆಲ್ಲರನ್ನೂ ಓದಿ ಕೂಡ, ಅವರಿಂದ ಪ್ರಭಾವಿತರಾಗದೆ ಅಚ್ಚಕನ್ನಡದ ಕತೆ ಹೇಳಿ ಕಡೆತನಕ ಕೈಹಿಡಿದು ಓದಿಸಿದ ಏಕೈಕ ಸಣ್ಣಕತೆಗಾರರೆಂದರೆ ಪಿ. ಲಂಕೇಶ್. ಅವರು ತಮ್ಮ ನಿಷ್ಠೆಯನ್ನು ಕವಿತೆಗೆ, ನಾಟಕಕ್ಕೆ, ಕಾದಂಬರಿಗೆ, ಪತ್ರಿಕೋದ್ಯಮಕ್ಕೆ -ಹೀಗೆ ಹರಿದು ಹಂಚಿದರೂ ಕೂಡ ಸಣ್ಣ ಕತೆಯೆಂಬುದು ಬಹಳ ದಿನಗಳ ತನಕ ಅವರಿಗೆ ಒಲಿಯುತ್ತಲೇ ಬಂತು: ತೀರ ಅವರಾಗಿ ಕೊಸರಿ ಕೈಚೆಲ್ಲುವ ತನಕ!

ಇವತ್ತಿಗೂ ನನಗೆ ತೀವ್ರವಾಗಿ ಅನ್ನಿಸುವುದೆಂದರೆ, ಒಂದಷ್ಟು ದಿನ ಪತ್ರಿಕೆಗೆ ರಜೆ ಹಾಕಿ, ಎಲ್ಲಿಗಾದರೂ ತಲೆಮರೆಸಿಕೊಂಡು ಹೋಗಿ ಕುಳಿತು, ಕೆಲ ದಿನಗಳ ನಂತರ ನಾಲ್ಕು ಚೆಂದನೆಯ ಕತೆ ಹೆಣೆದು ತಂದು ನಿಮ್ಮ ಕೈಗಿಡಬೇಕು. ಐದು ವರ್ಷಗಳಿಂದ ಒಂದೇ ಒಂದು ಸಣ್ಣ ಕತೆಯನ್ನು ಒಲಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದೇನೆ. ಯಾವತ್ತಿಗಾದರೂ ಒಂದು ಒಳ್ಳೆ ಕತೆ ಬರೆದು ನಿರುಮ್ಮಳಗೊಳ್ಳಬೇಕು. ಎಂದಿಗೆ ಸಾಧ್ಯವಾದೀತೋ?

ಮೊನ್ನೆ ತೆಲುಗಿನ ‘ಕೃಷ್ಣಾವತಾರಂ’ ಅನ್ನೋ ಸಿನೆಮಾ ನೋಡುತ್ತಿದ್ದೆ. ಅದರ ಕೊನೆಯಲ್ಲಿ ಕೃಷ್ಣನ ಕಾಲಿಗೆ ಬೇಡನೊಬ್ಬ ಬಾಣ ಬಿಟ್ಟು ಸಾಯಿಸುತ್ತಾನೆ. ಸಾಯುತ್ತಿರುವುದು ಕೃಷ್ಣ ಅಂತ ಗೊತ್ತಾದ ಕೂಡಲೆ ಕ್ಷಮಿಸು ಮಹಾಪ್ರಭೋ ಎಂದು ಗೋಳಾಡುತ್ತಾನೆ. ಅದಕ್ಕೆ ಕೃಷ್ಣ,

“ಅಳೋದು ನಿಲ್ಸು. ಕೊಂದುದರಲ್ಲಿ ನಿನ್ನ ತಪ್ಪೇನಿಲ್ಲ. ತ್ರೇತಾಯುಗದಲ್ಲಿ ನಾನು ರಾಮಚಂದ್ರನೆಂಬ ಅವತಾರ ತಾಳಿದಾಗ ನೀನು ವಾಲಿಯಾಗಿದ್ದೆ. ನಾನು ಮರದ ಹಿಂದೆ ಅಡಗಿ ನಿಂತು ನಿನ್ನೆಡೆಗೆ ಬಾಣ ಬಿಟ್ಟು ಕೊಂದಿದ್ದೆ. ಅದರ ಪ್ರತಿಫಲವಿದು!” ಅಂದುಬಿಡುತ್ತಾನೆ.

ಅರೆರೆ, ಕತೆಯೆಂಬುದು ಎಲ್ಲಿಂದ ಎಲ್ಲಿಗೆ ನೆಗೆಯಿತಲ್ಲಾ ಅಂದುಕೊಳ್ಳುತ್ತಲೇ ನಾನು ಪಂಚತಂತ್ರದ ಕತೆ, ಜಾತಕ ಕತೆ, ಈಸೋಪನ ಕತೆ, ಪುರಾಣಗಳಲ್ಲಿನ ಕತೆ-ಉಪಕತೆ, ಮರಿಕತೆ, ಹರಿಕಥೆ, ಮಿನಿ ಕತೆ, ಹನಿ ಕತೆಗಳನ್ನೆಲ್ಲ ಮತ್ತೆ ಕೆದರಿಕೊಂಡು ಕುಳಿತೆ. ಈ ಸಣ್ಣ ಕತೆಯೆಂಬುದು ಅದೆಷ್ಟು ಜನರ  ಶ್ರದ್ಧೆಯನ್ನು ಸೆಳೆದಿಟ್ಟುಕೊಂಡ ಮಾಯಾವಿಯಲ್ಲವೇ ಅನ್ನಿಸಿತು.

Leave a Reply

Your email address will not be published. Required fields are marked *