ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: ಯಾರಿಗೆ  ಸಾಲುತ್ತೆ ಸಂಬಳ?

ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಯಾರಿಗೆ  ಸಾಲುತ್ತೆ ಸಂಬಳ?

“ಧನಂ ನಾಯನಾ, ಮನಿಷಿನಿ ನಡಿಪಿಂಚೇ ಇಂಧನಂ…” ಹಳೇ ತೆಲುಗು ಸಿನೆಮಾ ಒಂದರ ಮಾತು ಇಂದಿಗೂ ಒಪ್ಪುವಂತಹುದ್ದು. “ದುಡ್ಡು ಕಣಪ್ಪಾ… ಮನುಷ್ಯರನ್ನು ನಡೆಸೋ ಇಂಧನ” ಅಂತ ಅರ್ಥ.  ಇದು ಮೊದಲ ಬಾರಿಗೆ ನನ್ನ ಅನುಭವಕ್ಕೆ  ಬಂದು ಇಪ್ಪತ್ತು ವರ್ಷ ಕಳೆದು ನಾಲ್ಕು ತಿಂಗಳಾದವು. ಆಗ ನಡೆದ ಘಟನೆ ಇದು. ತುಂಬಾ ಒಳ್ಳೆಯವನೂ, ವಿಪರೀತ ಎನಿಸುವಷ್ಟು ತಾಳ್ಮೆ ಇದ್ದವನೂ ಆದ ಅಣ್ಣ ಕೂಡ ಸಹನೆ ಕಳೆದುಕೊಂಡಿದ್ದ. “ಇನ್ನು ನನ್ನಿಂದ ಆಗಲ್ವೋ, ನಾವು ಬೇರೆ ಮನೆ ಮಾಡ್ಕೋತೀವಿ. ಇನ್ಮೇಲೆ ಅಮ್ಮನನ್ನು ನೀನೆ ನೋಡ್ಕೋ. ಈ ಮನೆ ನಿನಗೇ ಬಿಟ್ಟು ಹೋಗ್ತಾ ಇದ್ದೀನಿ” ಅಂದಿದ್ದ.

ಸುಮ್ಮನೆ ತಲೆದೂಗಿದೆ. ಅತ್ತೆ-ಸೊಸೆ ಜಗಳದ ಫಲ! ಗೋಳಾಡುತ್ತಿದ್ದ ಅಮ್ಮನನ್ನು ಸಮಾಧಾನಪಡಿಸಿ ಲೆಕ್ಕ ಹಾಕಲು  ಶುರು ಮಾಡಿದೆ. ಅಣ್ಣ `ನನಗೇ’ ಬಿಟ್ಟು ಹೋಗಿದ್ದ ಮನೆಯ ಬಾಡಿಗೆ ನಾನೂರು ರುಪಾಯಿ. ಅಮ್ಮನ ಬಿ.ಪಿ. ಮಾತ್ರೆ Alphodopaಗೆ ತಿಂಗಳಿಗೆ ಬೇಕಾಗಿರೋದು ನೂರೈದು ರುಪಾಯಿ. ಅಲ್ಲಿಗೆ ತಿಂಗಳ ಮಿನಿಮಮ್ ಖರ್ಚು ಐನೂರೈದು ರುಪಾಯಿಗಳು. ಚಿನ್ನದ ಅಂಗಡಿಯಲ್ಲಿ ಸೇಲ್ಸ್‌ಮನ್ ಆಗಿ ನನ್ನ ಸಂಬಳ ಐನೂರು. ಆ deficit of Rs. 5! ಇನ್ನು ಊಟ ತಿಂಡಿ?

 ಬೆಳಗ್ಗೆ ಎದ್ದು ಮಾಲೀಕರಾದ ಅರುಣಾಚಲಂ ಅವರ ಮನೆಗೆ ಹೋಗಿದ್ದೆ. “ಇದೇನೋ ಇಷ್ಟು ಬೆಳಗ್ಗೆ?” ಅಂದರು ಆಶ್ಚರ್ಯವಾಗಿ. ಕ್ಲುಪ್ತವಾಗಿ ವಿಷಯ ಹೇಳಿದೆ. ತಮ್ಮ ಬಜಾಜ್ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಅಂಗಡಿಗೆ ಕರೆದುಕೊಂಡು ಹೋದರು. “ಈಗೇನು ಮಾಡ್ತಿಯಾ?” ಅಂತ ಕೇಳಿದರು. ಐದು ಸಾವಿರ ರುಪಾಯಿ ಬೇಕೆಂದು ಕೇಳಿ ತೆಗೆದುಕೊಂಡೆ. ನಾಲ್ಕು ಜನ ಗೆಳೆಯರು ಸೇರಿ ಎರಡು ಸಾವಿರ ಕೊಟ್ಟರು. ನನ್ನ ಬಳಿ ಒಂದು ಸಾವಿರ ಇತ್ತು. ಒಟ್ಟು ಎಂಟು ಸಾವಿರ ಆಯ್ತು. ಮದ್ರಾಸಿಗೆ ಹೋಗಬೇಕಿತ್ತು. ತಮಿಳು ಭಾಷೆ ಬಲ್ಲ ಗೆಳೆಯ ಕುಮಾರ್  ಎನ್ನುವವರನ್ನು ಜೊತೆಗೆ ಕರೆದೊಯ್ದೆ. ಕೆಮೆರಾ, ಒಂದಷ್ಟು ಲೆನ್ಸ್‌, ಲೆದರ್‌ ಬ್ಯಾಗ್ ಕೊಂಡುಕೊಂಡು ಮೈಸೂರಿಗೆ ಹಿಂದಿರುಗಿದ ಕೂಡಲೆ ವಿಸಿಟಿಂಗ್ ಕಾರ್ಡ್ ಮಾಡಿಸಿದೆ. M. Shivaprasad Rao, B.Com., ಫೊಟೋಗ್ರಾಫರ್ ಅಂಡ್ ಗೋಲ್ಡ್‌ಸ್ಮಿತ್!

ತಿಂಗಳಿಗೆ ನಾನೂರು ರುಪಾಯಿ ಬಾಡಿಗೆ ಕಟ್ಟುವುದು ಕಷ್ಟವೆನಿಸಿ, ಸ್ವಲ್ಪ ದೂರದಲ್ಲಿರುವ ಕಡಿಮೆ ಬಾಡಿಗೆಯ  ಮನೆಗೆ ಬದಲಾದೆ. ಅಂಗಡಿಯ ಮೇಲೆಯೇ ಇದ್ದ ವರ್ಕ್‌ಶಾಪ್‌ನಲ್ಲಿ ಚಿನ್ನದ ಕೆಲಸ ಕಲಿಯಲು ಪ್ರಾರಂಭಿಸಿದೆ.  ಕೆಲಸ ಬೇಗನೆ ಕಲಿತೆ ಕೂಡ. ಫೊಟೋಗ್ರಫಿನೂ ಚೆನ್ನಾಗಿ ನಡೆಯುತ್ತಿತ್ತು. ಒಂದು ರೋಲ್ ಫೊಟೋ ತೆಗೆದು ಪ್ರಿಂಟ್ ಹಾಕಿಸಿ ಕೊಟ್ಟರೆ ನೂರು ರುಪಾಯಿ ಸಿಗುತ್ತಿತ್ತು. ಮದುವೆಯೊಂದರಲ್ಲಿ ಐದು ರೋಲ್ ತೆಗೆಯಲಾಯಿತು. ಆಗಂತೂ ಖುಷಿಯೋ ಖುಷಿ. ಒಂದು ತಿಂಗಳ ಸಂಬಳವನ್ನು ಒಂದೇ ದಿನದಲ್ಲಿ  ಸಂಪಾದಿಸಿದ್ದೆ. ದಿನಕಳೆದಂತೆ ಸ್ವಲ್ಪ ದುಡ್ಡು ಕೂಡಿತು. ಬಾಡಿಗೆಯದಾದರೂ ವಿಶಾಲವಾದ, ಚೊಕ್ಕದಾದ ಮನೆಗೆ ಬದಲಾದೆ. ಎರಡು ವರ್ಷಗಳ ನಂತರ ಸಂಬಂಧಿಕರೊಬ್ಬರ ಮಗನ ಉಪನಯನಕ್ಕೆ ಕರೆ ಬಂದಿತ್ತು. ಮುಂದೆ ಆಗುವ ಅನಾಹುತದ ಅರಿವಿಲ್ಲದೆ  ಚಿಕ್ಕಮಗಳೂರಿಗೆ ಹೊರಟಿದ್ದೆ. ಜನಿವಾರ ಹುಡುಗನ ಹೆಗಲಿಗೆ ಬಿತ್ತು. ಒಂದು ವರ್ಷದೊಳಗೆ ಅವನ ಅಕ್ಕ ನನ್ನ ಕೊರಳಿಗೆ! ಆ ನಂತರ ನಮ್ಮ ಕುಟುಂಬದೊಳಕ್ಕೊಂದು new entry. ನಮ್ಮ `ಖಾಸ್‌ಬಾತ್ ೯೬ ಸೌಮ್ಯ’. ಅವಳು ಹುಟ್ಟಿದ ವರ್ಷವೂ ಅದೇ! ಖರ್ಚುಗಳ ಲೆಕ್ಕಾಚಾರದ revision ಪದೇಪದೆ ಆಗುತ್ತಲೆ ಇತ್ತು. ಇತ್ತೀಚೆಗಂತೂ ರಿಸೆಷನ್ ಹೊಡೆತ. ಗಂಟಲಲ್ಲಿಟ್ಟುಕೊಂಡು ನುಂಗುವ ಔಷಧಿ ಮತ್ತು ಗಂಟಲಿಗೆ ಸುರಿದುಕೊಳ್ಳುವ `ಓ’ಷಧಿ, ಇವೆರಡರ ವ್ಯಾಪಾರ ಚೆನ್ನಾಗಿದೆ. ಉಳಿದವರದೆಲ್ಲ ಹೆಚ್ಚೂ ಕಡಿಮೆ ಒಂದೇ ಕಥೆ-ವ್ಯಥೆ. ವ್ಯಾಪಾರ  ವ್ಯವಹಾರಗಳೆನ್ನುವುದು ಟ್ರೆಡ್‌ಮಿಲ್ ಮೇಲಿನ ಓಟದಂತಾಗಿ ಬಿಟ್ಟಿದೆ. ಮುಂದಕ್ಕೆ ಹೋಗೋದು ಹಾಗಿರಲಿ, ನಿಂತಲ್ಲೇ ಇರಬೇಕೆಂದರೂ ಓಡುತ್ತಲೇ ಇರಬೇಕು!

ದುಡ್ಡಿಗಿರುವ ಅಪಾರ ಮಹಿಮೆಯ ಅನುಭವ ಕ್ಷಣಕ್ಷಣಕ್ಕೂ ಆಗುತ್ತಲೇ ಇದೆ. ದುಡ್ಡೇ ಎಲ್ಲಾ ಎನ್ನುವ ಭಂಡತನಕ್ಕೂ, `ದುಡ್ಡಿನದೇನ್ರೀ ಯಾರು ಬೇಕಾದ್ರೂ ಸಂಪಾದನೆ ಮಾಡಬಹುದು’ ಎನ್ನುವ ಸಿನಿಕತನಕ್ಕೂ ನಡುವೆ ಇರುವ thin line ಬದುಕು ಎನಿಸಿಬಿಟ್ಟಿದೆ.

ಎಂ.ಶಿವಪ್ರಸಾದ್ ರಾವ್, ಮೈಸೂರು

Leave a Reply

Your email address will not be published. Required fields are marked *