ಹಾಯ್ ಬೆಂಗಳೂರ್

ಎಂ.ವಿ.ರೇವಣಸಿದ್ದಯ್ಯ: ನೂರು ಮುಖ ಸಾವಿರ ದನಿ: ವೈವಾಹಿಕ ವ್ಯಾಜ್ಯಗಳು: ತಪ್ಪು ಕಲ್ಪನೆಗಳು

ನೂರು ಮುಖ ಸಾವಿರ ದನಿ: 

ವೈವಾಹಿಕ ವ್ಯಾಜ್ಯಗಳು:ತಪ್ಪು ಕಲ್ಪನೆಗಳು

ಭಾಗ ೧

ಒಂದು ದಿನ ಸಂಜೆ ಏಳು ಘಂಟೆಗೆ ನನ್ನ ಕಛೇರಿಯ ಛೇಂಬರಿನಲ್ಲಿ ಕುಳಿತಿದ್ದೆ. ಒಬ್ಬ ನಡುವಯಸ್ಸಿನ ಕೃಶ ಮಹಿಳೆ ಒಳಬಂದು ಕೂತಳು. `ಏನಮ್ಮಾ?’ ಅಂದೆ.

ಆಕೆ, `ಸರ್, ನಾನು ಖಾಸಗಿ ನರ್ಸಿಂಗ್ ಹೋಂನಲ್ಲಿ ನರ್ಸು. ಕೆಲವು ವರ್ಷಗಳ ಕೆಳಗೆ ನನಗೆ ಕೆ.ಇ.ಬಿ. ನೌಕರನೊಬ್ಬನ ಪರಿಚಯವಾಯ್ತು. ಆತ ನನ್ನನ್ನು ಮದುವೆ ಆಗ್ತೀನಿ ಅಂದ. ನನಗೂ ಮದುವೆ ವಯಸ್ಸು ಮೀರೋ ಹಂತಕ್ಕೆ ಬಂದಿತ್ತು. ಆಗ್ಲಿ ಅಂದೆ. ಆತ ನನ್ನನ್ನು ಒಂದು ಫೊಟೋ ಸ್ಟುಡಿಯೋಗೆ ಕರ್‍ಕಂಡು ಹೋಗಿ ಅಲ್ಲಿದ್ದ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದ ಸೀನರಿ ಮುಂದೆ ನನ್ನನ್ನು ನಿಲ್ಸಿ ನನಗೊಂದು ಹೂವಿನ ಹಾರ ಹಾಕಿ ತಾನೂ ನನ್ನಿಂದ ಹಾರ ಹಾಕಿಸ್ಕೊಂಡ. ಇನ್ಮೇಲೆ ನಾನು ನೀನು ಗಂಡ-ಹೆಂಡತಿ ಅಂತ ನನ್ ಕೈ ಹಿಡ್ಕಂಡ್ ಹೊರಗ್ ಬಂದ. ಅವತ್ನಿಂದ ನಾನಿದ್ದ ಮನೆಗೆ ಬರ್‍ತಿದ್ದ. ನಂ ಬಾಳ್ವೆ ನಡೀತು. ಇತ್ತೀಚೆಗೆ ಆತ ತೀರ್‍ಕಂಡ. (ಅವನು ಸತ್ತ ಕಾರಣ) ಆತ ಕೆಲಸ ಮಾಡ್ತಿದ್ದ ಕೆ.ಇ.ಬಿ.ಗೆ ಹೋಗಿ ನಾನು ಅವ್ನ ಹೆಂಡ್ತಿ. ಬರಬೇಕಾಗಿದ್ದ ಹಣ ಎಲ್ಲ ಕೊಡಿ ಅಂತ ಅರ್ಜಿ ಹಾಕಿದೆ. ನಾನು ಆತನ ಹೆಂಡ್ತಿ ಅಂತ ಕಾಣಿಸಿದ್ದೆ ಅರ್ಜೀಲಿ. ಇನ್ನೊಬ್ರು ಅದೇ ರೀತಿ ಅರ್ಜಿ ಕೊಟ್ಟು ನಾನು ಅವ್ರ ಹೆಂಡ್ತಿ, ನನಗೆ ಅದೆಲ್ಲಾ ಹಣ ಕೊಡಿ ಅಂತ ಕೇಳಿದ್ದಾರೆ ಅಂದ್ರು ಕೆ.ಇ.ಬಿ.ಯವರು.

ನನಗಿಂತ ಮುಂಚೆ ಆತ ಬೇರೆ ಯಾರನ್ನೋ ಲಗ್ನ ಆಗಿದ್ದೆ ಅಂತ ನನಗೆ ಆತ ಹೇಳಿರ್‍ಲಿಲ್ಲ. ನಂಗೂ ಗೊತ್ತಿರ್‍ಲಿಲ್ಲ ಸರ್. ನಂ ಏರಿಯಾ (ಬಡಾವಣೆ) ಮುಖಂಡ್ರೊಬ್ರು ಹೇಳ್ ಕಳಿಸಿದ್ರು ಹೋದೆ. ಇಪ್ಪತ್ತೈದ್ ಸಾವ್ರ ರುಪಾಯಿ ಕೊಡ್ತಾರೆ, ತಂಗಂಡು ನನಗೂ ಆತನಿಗೂ ಸಂಬಂಧ ಇಲ್ಲ ಅಂತ ನಾವು ಕೇಳಿದ್ ಕಡೆ ಬಂದು ಬರ್‍ಕೊಟ್ಟು ಸಹಿ ಮಾಡು ಅಂದ್ರು. ನಾನು ಒಪ್ಲಿಲ್ಲ. ವಾಪಸ್ ಬಂದೆ. ಅವತ್ ರಾತ್ರಿ ಹನ್ನೆರಡು ಗಂಟೆಗೆ ಅವ್ರ ಕಡೆ ಎಂಟ್ಹತ್ತು  ಜನ ಬಂದು ನನ್ನ ಮನೆ ಬಾಗ್ಲು ಮುರ್‍ದು ಒಳಗ್ ನುಗ್ಗಿ ಮನೆ ಸಾಮಾನೆಲ್ಲ ಕಿತ್ ಹಾಕಿ ಬಾಯಿಗ್ ಬಂದಂಗ್ ಬೈದ್ರು. ಜೋರ್ ಮಾಡಿ ನಂ ಬಾಸ್ ಹೇಳ್ದಂಗೆ ಕೇಳು. ಇಲ್ಲಾ ಅಂದ್ರೆ ನಿನ್ ಜೀವಸಹಿತ ಬಿಡಲ್ಲ. ಎರಡ್ ದಿನ ಟೈಂ ಕೊಟ್ಟಿದ್ದೀವಿ. ಅಷ್ಟರಲ್ಲಿ ಬಂದು ಬರ್‍ಕೊಡು ಅಂತ ಹೇಳಿ ಪ್ರಾಣ ಬೆದರಿಕೆ ಹಾಕಿ ಹೋಗಿದ್ದಾರೆ ಸರ್. ನಾನು ಒಬ್ಬಂಟಿಗ್ಳು. ನನ್ಗೆ ಯಾರೂ ಇಲ್ಲ. ನಾನು ಹೆದರ್‍ಕಂಡು ಮಾರನೇ ದಿನ ಆ `ಬಾಸ್’ ಹತ್ರ ಹೋಗಿ ನೀವೇಳ್ದಂಗ್ ಕೇಳ್ತೀನಿ, ಇಪ್ಪತ್ತೈದು ಸಾವ್ರ ಕೊಡಿಸ್ರಿ ಅಂತ ಹೇಳ್ದೆ. `ಆಯ್ತು ಮತ್ತೆ ಕರ್‍ದಾಗ್ ಬಾ’ ಅಂದ್ರು. ಆಮೇಲೆ ನಂಗೆ ಕೆ.ಇ.ಬಿ.ಯವರು ಒಬ್ರು ಸಿಕ್ರು. ಅವ್ರು ಹಂಗೆಲ್ಲಾ ಹೆದ್ರಿ ಮೋಸ ಹೋಗ್‌ಬೇಡ ಅಂತ ಹೇಳಿ, ನಿಂ ಹೆಸ್ರು ಹೇಳಿ ನೀನು ಅವ್ರತ್ರ ಹೋಗು ಅವ್ರು ನಿಂಗ್ ನ್ಯಾಯ ಕೊಡಿಸ್ತಾರೆ ಅಂದ್ರು. ಅದಕ್ಕೆ ನಿಂ ಹತ್ರ ಬಂದಿದ್ದೀನಿ ಸಾರ್. ನೀವೇ ಕಾಪಾಡಬೇಕು, ನ್ಯಾಯ ಕೊಡಿಸ್ಬೇಕು” ಎಂದು ಹೇಳಿ ಕೈ ಮುಗಿಯುತ್ತಾ ಅಳತೊಡಗಿದಳು.

(ಮುಂದುವರಿಯುವುದು)

 

Leave a Reply

Your email address will not be published. Required fields are marked *