ಹಾಯ್ ಬೆಂಗಳೂರ್

ಎಚ್.ಎ.ಎಲ್. ಆರಂಭವಾದದ್ದು ಹೀಗೆ…

ಭಾರತದ ನವರತ್ನ ಕಂಪನಿಗಳಲ್ಲಿ ಒಂದಾದ `ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್’ ಅರ್ಥಾತ್ ಎಚ್.ಎ.ಎಲ್. ಎಂಬ ಯುದ್ಧ ವಿಮಾನ ತಯಾರಿಕಾ ಕಂಪನಿ ಬೆಂಗಳೂರಿನಲ್ಲಿ ಹೇಗೆ ಆರಂಭಗೊಂಡಿತು ಎಂಬ ಕುತೂಹಲಕಾರಿ ವಿವರ ಇಲ್ಲಿದೆ.

ಒಮ್ಮೆ ವಿಮಾನದಲ್ಲಿ ಪ್ರಯಾಣಿಸುವಾಗ ವಾಲ್‌ಚಂದ್ ಹೀರಾಚಂದ್ ಎಂಬ ಗುಜರಾತ್ ಪ್ರಾಂತ್ಯದ ಕೈಗಾರಿಕಾ ವಲಯದ ಬಿಜಿನೆಸ್ ಟೈಕೂನ್ ಆಕಸ್ಮಿಕವಾಗಿ ಅಂದಿನ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಪಕ್ಕದ ಸೀಟಿನಲ್ಲಿ ಕುಳಿತಿದ್ದರು. ಸರ್.ಎಂ.ವಿ. ಅವರ ಪ್ರಗತಿಪರ ಯೋಜನೆಗಳ ಬಗ್ಗೆ ಅರಿತಿದ್ದ ಇವರು ಕಾರು ತಯಾರಿಸುವ ಕಾರ್ಖಾನೆ ಸ್ಥಾಪಿಸಲು ಲೈಸನ್ಸ್ ನೀಡಿ ಕರ್ನಾಟಕದಲ್ಲಿ ಜಮೀನು ಕೊಡುವಂತೆ ಕೋರಿದರು. ಅದಕ್ಕೆ ಒಪ್ಪಿದ ಸರ್.ಎಂ.ವಿ. ಕಾರು ತಯಾರಿಕಾ ಘಟಕ ಬೆಂಗಳೂರಿನಲ್ಲೇ ಆರಂಭಿಸಬೇಕೆಂಬ ಷರತ್ತು ಒಡ್ಡಿ ಈ ಪ್ರಸ್ತಾವನೆಯನ್ನು ಬ್ರಿಟಿಷ್ ಕಮೀಷನರ್ ಬಳಿ ಪ್ರಸ್ತಾಪಿಸಿದರೂ ಭಾರತದಲ್ಲಿ ಸೈಕಲ್ ತಯಾರಿಕಾ ಕಾರ್ಖಾನೆಗಳೇ ಇಲ್ಲದಿರುವಾಗ ಕಾರು ತಯಾರಿಕಾ ಘಟಕಕ್ಕೆ ಲೈಸನ್ಸ್ ನೀಡಲು ಸಾಧ್ಯವಿಲ್ಲ ಎಂದು ಅವರು ನಿರಾಕರಿಸಿದರು.

ಚಾಣಾಕ್ಷರಾಗಿದ್ದ ಸರ್.ಎಂ.ವಿ. ಇದರಿಂದ ನಿರಾಶರಾಗಲಿಲ್ಲ. ಎರಡನೇ ಮಹಾಯುದ್ಧ ಮುಗಿದ ನಂತರ ತಮ್ಮ ಯುದ್ಧ ವಿಮಾನಗಳ ದುರಸ್ತಿಗಾಗಿ ಪರದಾಡುತ್ತಿದ್ದ ಬ್ರಿಟಿಷರನ್ನು ಕಂಡ ವಿಶ್ವೇಶ್ವರಯ್ಯನವರು ತಕ್ಷಣವೇ ಲಾಲ್‌ಚಂದ್ ಹೀರಾಚಂದ್ ಅವರನ್ನು ಸಂಪರ್ಕಿಸಿ `ನಿಮಗೆ ಬೆಂಗಳೂರಿನಲ್ಲಿ ವಿಮಾನ ತಯಾರಿಕಾ ಘಟಕಕ್ಕೆ ಲೈಸನ್ಸ್ ಕೊಡಿಸಿದರೆ ಪ್ರಾರಂಭಿಸಲು ತಯಾರಿದ್ದೀರಾ?’ ಎಂದು ಕೇಳಿದರು. ತಕ್ಷಣವೇ ಗುಜರಾತ್‌ನ ಕೈಗಾರಿಕೋದ್ಯಮಿ ಒಪ್ಪಿದ ಕಾರಣಕ್ಕೆ ಬ್ರಿಟಿಷರನ್ನು ಒಪ್ಪಿಸಿ ಮೈಸೂರು ಮಹಾರಾಜರಿಂದ ಬೆಂಗಳೂರಿನಲ್ಲಿ ಮೂರು ಸಾವಿರ ಎಕರೆ ಜಮೀನನ್ನು ಅತ್ಯಂತ ಕಡಿಮೆ ಬೆಲೆಗೆ ಕೊಡಿಸಿದರು. ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಎಚ್.ಎ.ಎಲ್. ಕಾರ್ಖಾನೆ ಹೀಗೆ ಸ್ಥಾಪನೆಯಾಯಿತು.

Leave a Reply

Your email address will not be published. Required fields are marked *