ಸುಮ್ಮನೆ ಮಾತನಾಡಿದರೆ ದೇಶ ಉದ್ಧಾರವಾಗಲ್ಲ

in ಅಫಿಡೆವಿಟ್ಟು/ಇದು ಪ್ರತಿವಾರದ ಅಚ್ಚರಿ/ಜಿಲ್ಲಾ ಸುದ್ದಿಗಳು

   2014ರ ನಂತರ ನಡೆದ ಈ ರಾದ್ಧಾಂತಗಳೆಲ್ಲ ಮೋದಿಯ ಅತಿಯಾದ ಆತ್ಮವಿಶ್ವಾಸದ ಪ್ರಮಾದಗಳು. 60 ವರ್ಷದ ಆಡಳಿತವನ್ನು ಆರೇ ವರ್ಷದಲ್ಲಿ ಮಾಡಿ ತೋರಿಸುತ್ತೇನೆ ಎಂಬ ಹುಂಬತನದ ಫಲಿತಾಂಶಗಳು. ಈ ಹಿಂದೆ ಆಗಿರುವ ಸಾಧನೆಗಳನ್ನೆಲ್ಲಾ ತನ್ನ ಹೆಸರಿಗೆ ಬದಲಾಯಿಸಿಕೊಳ್ಳುತ್ತೇನೆ ಎಂದು ಮಾಡಹೊರಟ ಯಡವಟ್ಟುಗಳ ಸರಮಾಲೆ. ಎಂತಹ ಮಹಾನ್ ಮೊಂಡುತನ ಎಂದರೆ, ಐದನೇ ತರಗತಿಯ ಮಗುವಿಗೂ ಸ್ಪಷ್ಟವಾಗಿ ಅರ್ಥವಾಗುವ ‘ಯೋಜನಾ ಆಯೋಗ’ ಎಂಬ ಪರಿಕಲ್ಪನೆಯ ಬಲಿಷ್ಟ ಸಂಸ್ಥೆಯನ್ನು ಒಡೆದು ಪಂಚವಾರ್ಷಿಕ ಯೋಜನೆಯನ್ನು ಬಲಿಕೊಟ್ಟು, ತನ್ನದೇ ನೀತಿ ಆಯೋಗ ಎಂಬ ಹೆಸರಿಟ್ಟು ಜನರನ್ನು ದಿಕ್ಕು ತಪ್ಪಿಸಿದರು. ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ಅಂದರೆ ಅಭಿವೃದ್ಧಿಯಾಗುತ್ತಿರುವ ದೇಶವನ್ನು ಅಧೋಗತಿಯತ್ತ ಕೊಂಡೊಯ್ಯುವುದಾ? ತನಗೂ ಗೊತ್ತಿಲ್ಲದ ಅದು ಯಾವ ನೀತಿಯನ್ನೋ ಸಾಕ್ಷತ್ಕರಿಸಿಕೊಳ್ಳಲು  ಆರ್. ಬಿ ಐ. ನ  ಕಾರ್ಯಕ್ಷೇತ್ರದಲ್ಲಿ  ಹಸ್ತಕ್ಷೇಪ ನಡೆಸಲು ಮುಂದಾಗಿದ್ದರ ಪರಿಣಾಮವಾಗಿ ಇವರ ಅವಧಿಯಲ್ಲಿ ಆರ್.ಬಿ.ಐ   ಗವರ್ನರ್ ಆಗಿದ್ದ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಮತ್ತು ಕೇಂದ್ರ ಸರಕಾರದ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಆಗಲೇ ರಘುರಾಮ್ ರಾಜನ್ ದೇಶದ ಆರ್ಥಿಕತೆ ಹಳಿ ತಪ್ಪುವ ಎಚ್ಚರಿಕೆಯನ್ನು ನೀಡಿದ್ದರು. ಇದನ್ನು ಬಹಿರಂಗವಾಗಿಯೂ ಹೇಳಿಕೊಂಡಿದ್ದರು.

ಇವರ ನಂತರ ಸೆಪ್ಟೆಂಬರ್ 4, 2016ರಂದು ನೇಮಕವಾದ ಊರ್ಜಿತ್ ಪಟೇಲ್ ಕೂಡ ಅರ್ಥಶಾಸ್ತ್ರದ ಪಂಡಿತರೇ. ಇವರೂ ಸರ್ಕಾರದ  ಆರ್.ಬಿ.ಐ ಕಾರ್ಯನಿರ್ವಹಣೆಯ  ಮೇಲಿನ ಹಸ್ತಕ್ಷೇಪ ಸಹಿಸದಾದರು. ಆದರೂ  ಇವರ ಅವಧಿಯಲ್ಲೇ  ಜಾರಿಯಾದ ನೋಟ್ ಬ್ಯಾನ್ ಮತ್ತು ಅವೈಜ್ಞಾನಿಕ ಜಿ.ಎಸ್.ಟಿ ಯನ್ನು ಒಲ್ಲದ ಮನಸ್ಸಿನಿಂದ ಸಮರ್ಥಿಸಿಕೊಂಡರು.  ಮುಸುಕಿನ ಗುದ್ದಾಟ ನಡೆದೇ ಇತ್ತು. ಯಾವಾಗ  ಕೇಂದ್ರ ಸರ್ಕಾರವು ಸರ್ಕಾರದ ಪರವಾಗಿ ಆಡಳಿತ ನಡೆಸಬೇಕು ಎಂದು ಪೀಡಿಸಿತೋ ಆಗ  ಊರ್ಜಿತ್ ಪಟೇಲ್ ತೀವ್ರ ಅಸಮಾಧಾನಗೊಂಡರು. ಭಾರತದ ಅರ್.ಬಿ.ಐ ಇಡೀ ಪ್ರಪಂಚವೇ ಕೊಂಡಾಡುವ ಸಂಸ್ಥೆಯಾಗಿದ್ದು, 2008ರ ಜಾಗತಿಕ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ನಮ್ಮ ದೇಶದ ಜನತೆಗೆ, ಹಣಕಾಸಿನ ಸಂಸ್ಥೆಗಳಿಗೆ ಬೆನ್ನುಲುಬಾಗಿ ಕೆಲಸ ಮಾಡಿತ್ತು. ಈಗಲೂ ಮಾಡುತ್ತಲೇ ಬಂದಿದೆ.

ಇಷ್ಟರ್ಲೇ ಇನ್ನೂ ಒಂದು ಯಡವಟ್ಟು ಮಾಡಿಕೊಂಡ ಕೇಂದ್ರ ಸರ್ಕಾರ ಆರ್.ಬಿ.ಐ. ಕಾಯಿದೆ ಸೆಕ್ಷನ್ 7ನ್ನು ಬಳಸಿ ‘ಮೀಸಲು ನಿಧಿ’ಯನ್ನು ಕೇಳಿಬಿಟ್ಟಿತು; ಮೊಂಡು ಮಗ ತನ್ನ ಶೋಕಿಗಾಗಿ ಅಮ್ಮನ ಸಕ್ಕರೆ ಡಬ್ಬದಲ್ಲಿ ಕಷ್ಟಪಟ್ಟು  ಕೂಡಿಟ್ಟ ಹಣವನ್ನೂ ಬಿಡದೇ ಕೇಳುವಂತೆ ಬೆನ್ನಿಗೆ ಬಿದ್ದು ಹಠಹಿಡಿಯಿತು. ಊರ್ಜಿತ್ ಪಟೇಲ್ ಸಾರಿ ಸಾರಿ ಹೇಳಿದರು  ಈ ಮೀಸಲು ನಿಧಿಯು ಸಾಮಾನ್ಯ ಅವಶ್ಯಕತೆಗಳನ್ನು ಪೂರೈಸಲು ಬಳಸುವಂತಹ ಹಣವಲ್ಲ. ಬ್ಯಾಂಕಿನ ಅಥವಾ ಸರಕಾರದ ಒತ್ತಡದ ಸಂದರ್ಭದಲ್ಲಿ ಬಳಸಿಕೊಳ್ಳುವಂತಹ ಹಣ ಎಂದು ಎಷ್ಟು ಹೇಳಿದರೂ ಕೇಳದಾದಾಗ  ಊರ್ಜಿತ್ ಪಟೇಲ್ ಕಠಿಣ ನಿರ್ಧಾರ ತೆಗೆದುಕೊಂಡು ರಾಜೀನಾಮೆ ಕೊಟ್ಟರು. ಆಗ ರಘುರಾಮ್ ರಾಜನ್  ಈ ಸನ್ನಿವೇಶವನ್ನು ಕೇಂದ್ರ ಸರ್ಕಾರದ ವಿರುದ್ದ ಸ್ಪಷ್ಟ ಪ್ರತಿಭಟನೆ ಎಂದು ಕುಟುಕಿದರು.  ಆರ್.ಬಿ.ಐನ  ಇತಿಹಾಸದ್ಲೇ ಇಂತಹದೊಂದು ಘಟನೆ ನಡದೇ ಇರಲಿಲ್ಲ. ಆಗಲೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತನ್ನ ಮೊಂಡುತನ ಮುಂದುವರಿಸಿ  ಶಶಿಕಾಂತ್ ದಾಸ್ ಎಂಬ ಎಂಎ ಹಿಸ್ಟರಿ ಬ್ಯಾಕ್‌ಗ್ರೌಂಡ್ ಇರುವ ಒಬ್ಬ ವ್ಯಕ್ತಿಯನ್ನು ಆರ್.ಬಿ.ಐ ಗವರ್ನರ್ ಆಗಿ ನೇಮಿಸಲಾಗುತ್ತದೆ. ಇವರು ಯಾರು ಎಂದು ಕೆದಕಿದಾಗ, ಕೇಂದ್ರ ಸರ್ಕಾರದ ನಿಕಟವರ್ತಿಗಳು ಎಂದು ಗೊತ್ತಾಯಿತು. 500, 1000 ರೂಪಾಯಿ ನೋಟ್ ಬ್ಯಾನ್ ಆದಾಗ ಈ ವ್ಯಕ್ತಿಯೂ ಆಗಾಗ ಪತ್ರಿಕಾಗೋಷ್ಠಿ ಕರೆದು ಸಮರ್ಥಿಸಿಕೊಂಡಿದ್ದರು.

ಇಷ್ಟೇ ಅಲ್ಲ. ಅಭಿವೃದ್ಧಿ ವಿಷಯದಲ್ಲಿ ಮಹಾಭ್ರಮೆಯಲ್ಲಿರುವ ಮೋದಿ ಬ್ಯಾಂಕುಗಳ ವಿಲೀನ ಮಾಡಿ ಹಣಕಾಸು ವ್ಯವಸ್ಥೆಯನ್ನು ಮಲಿನಗೊಳಿಸುವಂತಹ ಅತೀ ಬುದ್ಧಿವಂತಿಕೆಯ ಪ್ರದರ್ಶನಕ್ಕೆ ಕೈ ಹಾಕಿದ್ದಾರೆ. ಒಂದು ವೇಳೆ ತನ್ನ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾದರೆ ಅದರ ಕ್ರೆಡಿಟ್ಟು ಈ ಬ್ಯಾಂಕುಗಳಿಗೂ ಸಲ್ಲುತ್ತದೆ. ಇದಾಗಬಾರದು. ಈ ಬ್ಯಾಂಕುಗಳ ತವರೂರು ದಕ್ಷಿಣ ಭಾರತ. ಅದರಲ್ಲೂ  ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಈ ಜಿಲ್ಲೆ ಬ್ಯಾಂಕುಗಳ ತವರೂರು ಎಂಬ ಖ್ಯಾತಿ ಪಡೆದಿದೆ. ಇದನ್ನು ಸಹಿಸದ ಮೋದಿ ಸದ್ದಿಲ್ಲದೆ ಮದ್ದರೆದಿದ್ದಾರೆ. ಅದಾಗಲೇ ನಮ್ಮ ವಿಜಯಾ ಬ್ಯಾಂಕನ್ನು ತಮ್ಮ ಗುಜರಾತಿನ, ಬ್ಯಾಂಕ್ ಆಫ್ ಬರೋಡಾದೊಂದಿಗೆ ಸೇರಿಸಿಕೊಂಡುಬಿಟ್ಟು ನಮ್ಮ ಅಸ್ಮಿತೆಗೆ ಧಕ್ಕೆಯೊಡ್ಡಿದ್ದಾರೆ. ಹಾಗೆಯೇ ಮತ್ತೆ ಉಳಿದ ನಮ್ಮೆಲ್ಲಾ ಬ್ಯಾಂಕುಗಳನ್ನು ದೇಶಾದ್ಯಂತ ಚದುರಿಸುವ ಯೋಜನೆಯಿಟ್ಟುಕೊಂಡಿದ್ದಾರೆಯೇ ಹೊರತು  ವ್ಯವಹಾರವೆಲ್ಲವೂ ನೆಲಕಚ್ಚಿ ಬೊಬ್ಬೆ ಹೊಡೆಯುತ್ತಿರುವ ಜನಸಾಮಾನ್ಯನನ್ನು ಮೇಲೆತ್ತುವ ಯಾವ ಯೋಜನೆಯನ್ನೂ ರೂಪಿಸುತ್ತಿಲ್ಲ.

ಮೊನ್ನೆ ನಡೆದ ಯೆಸ್ ಬ್ಯಾಂಕಿನ ಕರ್ಮಕಾಂಡವನ್ನೆ ತೆಗೆದುಕೊಳ್ಳಿ. ಇದನ್ನೆಲ್ಲ ಭಾರತೀಯರಿಗೆ ಸಹಿಸಲು ಸಾಧ್ಯವಿದೆಯಾ? ಸರಕಾರದ ಯಾವ ಯೋಜನೆಗೂ ಕಾಯದೇ ತಾವಾಯಿತು ತಮ್ಮ ಕೆಲಸವಾಯಿತು ಎಂದು ಕಷ್ಟಪಟ್ಟು ಕೆಲಸ ಮಾಡಿ ದುಡಿದಂತಹ ಹಣವನ್ನು ಬ್ಯಾಂಕಿನಲ್ಲಿಟ್ಟರೆ ಅದಕ್ಕೂ ಸಮರ್ಥ ರಕ್ಷಣೆ ಕೊಡಲಾಗದ ಸ್ಥಿತಿ ಕೇಂದ್ರ ಹಾಗೂ ಆರ್.ಬಿ.ಐ ನದ್ದು. ಜನರು ಆತಂಕಕ್ಕೊಳಗಾದರು.  ಗಂಟೆಗಟ್ಟಲೆ ಬ್ಯಾಂಕಿನ ಮುಂದೆ ಸಾಲುಗಟ್ಟಿ ನಿಂತರು. ಹಿಡಿ ಶಾಪಹಾಕಿದರು. ಜನ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದ ಮೇಲೆ ನಮ್ಮ ಹಣಕಾಸು ಸಚಿವೆಗೆ ಎಚ್ಚರವಾಯಿತು. ಈರುಳ್ಳಿ ಬೆಲೆ ಜಾಸ್ತಿಯಾಯಿತು ಎನ್ನುವ ಪತ್ರಕರ್ತರ ಪ್ರಶ್ನೆಗೆ ನಾನು ಈರುಳ್ಳಿ ಬಳಸುವುದಿಲ್ಲ ಎಂಬ ಉತ್ತರ ನೀಡುವ ಇಂತಹವರಿಂದ ನಾವು ಯಾವ ಪೂರ್ವಯೋಜನೆಗಳನ್ನು ನಿರೀಕ್ಷಿಸಲು ಸಾಧ್ಯ. ಮೊನ್ನೆಯವರೆಗೂ ಎಲ್.ಐ.ಸಿಯನ್ನು ನಂಬಿಕೊಂಡಿದ್ದ ಜನ ಇವರ ತಲೆಬುಡ ಇಲ್ಲದ ಖಾಸಗೀಕರಣಕ್ಕೆ ಹೆದರಿ ಜೀವವಿಮೆ ಎಲ್.ಐ.ಸಿಯನ್ನು ಅನುಮಾನದಿಂದ ನೋಡುವಂತಾಗಿದೆ.

ಆರ್.ಬಿ.ಐಗೆ ಸಂಪೂರ್ಣ ಸ್ವಾಯತ್ತತೆ ನೀಡಿದ್ದೇ ಆಗಿದ್ದರೆ, ಅರ್ಥಶಾಸ್ತ್ರ ಬಲ್ಲ ಅನುಭವಿಯನ್ನು ಕೂರಿಸಿದ್ದೇ ಆಗಿದ್ದರೆ ಯೆಸ್ ಬ್ಯಾಂಕಿನ ಸಮಸ್ಯೆಯನ್ನು ಆರಂಭದ್ಲೆ ಚಿವುಟಿ ಹಾಕಬಹುದಿತ್ತು. ಉದಾಹರಣೆಗೆ 1993 ರಲ್ಲಿ ನ್ಯೂ ಬ್ಯಾಂಕ್ ಆಫ್ ಇಂಡಿಯಾ, 2004 ರಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ನೆಲ ಕಚ್ಚಿದಾಗ ಆರ್.ಬಿ.ಐ ಸರಿಯಾದ ಸಮಯಕ್ಕೆ  ಆಗಮಿಸಿ ರಕ್ಷಿಸಿತ್ತು. ಇದು ಆ ಬ್ಯಾಂಕಿನ ಹೊಣೆಗೇಡಿತನದಿಂದಾದದ್ದು . ಅಲ್ಲಿ ನಾನ್ ಪರ್ಫಾರ್ಮಿಂಗ್ ಅಸೆಟ್ (ಎನ್.ಪಿ.ಎ-ಸುಸ್ಥಿ ಸಾಲ) ಮಿತಿಗಿಂತ ಜಾಸ್ತಿ ಇಟ್ಟುಕೊಂಡಿದ್ದು  ಆ ಬ್ಯಾಂಕಿನ ತಪ್ಪು ಎಂದು ನೀವು ಹೇಳಬಹುದು. ಹೌದು ಸ್ವಾಮಿ! ಇಂತಹ ಬ್ಯಾಂಕುಗಳ ಪ್ರಾರಂಭಕ್ಕೆ ಪರವಾನಗಿ ನೀಡುವ ಕೇಂದ್ರ ಬ್ಯಾಂಕು ಆರ್.ಬಿ.ಐ.ಗೆ  ಕಾಲದಿಂದ ಕಾಲಕ್ಕೆ ನಿರ್ದೇಶಿಸಿ ಸರಿದಾರಿಗೆ ತರುವ ಎಲ್ಲ ಅಧಿಕಾರವಿದೆ.

ಈಗಲೂ ಇನ್ನು ಕಾಲ ಮಿಂಚಿಲ್ಲ. ಈ ಯೆಸ್ ಬ್ಯಾಂಕಿನ ರಾಣಾ ಕಪೂರ್‌ಗೆ ಸಿ.ಬಿ.ಐ ಮತ್ತು ಇಡಿ ಬಾಸುಂಡೆ ಬರಿಸುತ್ತದೆ. ಈ ಸರಕಾರಗಳು ಇವತ್ತು ಬರುತ್ತೆ ನಾಳೆ ಹೋಗುತ್ತೆ. ನಮ್ಮ ವ್ಯವಸ್ಥೆ ಬಲಿಷ್ಟವಾಗಿದೆ. ಸ್ವಾಯತ್ತ ಸಂಸ್ಥೆ ಆರ್.ಬಿ.ಐ ಈಗಾಗಲೆ ತನ್ನ ಪ್ರತಿನಿಧಿಯನ್ನು ಯೆಸ್ ಬ್ಯಾಂಕಿಗೆ ನೇಮಿಸಿದೆ. ತನ್ನ ಕಾನೂನನ್ನು ಬಿಗಿಯಾಗಿ ಬಳಸಿ ಯೆಸ್ ಬ್ಯಾಂಕನ್ನು ರಕ್ಷಿಸಿ, ಮುಖ್ಯವಾಗಿ ಬ್ಯಾಂಕಿನ ಗ್ರಾಹಕರಿಗೆ ನ್ಯಾಯ ಒದಗಿಸಿ, ಬ್ಯಾಂಕ್ ವ್ಯವಸ್ಥೆಯ ಮೇಲೆ ನಂಬಿಕೆ ಉಳಿಸಿಕೊಳ್ಳುವುದು ತೀರಾ ತುರ್ತಿನದ್ದಾಗಿದೆ.

ಪ್ರಮಾದಗಳು ಒಂದೇ ಎರಡೇ.  ನೋಟ್ ಬ್ಯಾನ್ ಮಾಡಿ ದೇಶದ ಹಣಕಾಸಿನ ಹರಿವನ್ನು ಅಲ್ಲೋಲ ಕಲ್ಲೋಲಗೊಳಿಸಿ ತಕ್ಷಣವೇ ಜಿ.ಎಸ್.ಟಿ ಜಾರಿಗೆ ತರುತ್ತೀರಲ್ಲ ಅದ್ಯಾವ ಅರ್ಥಶಾಸ್ತ್ರಜ್ಞ ಇದಕ್ಕೆ ಒತ್ತಾಯಿಸಿದ. ಅದಾಗಿನಿಂದ ಇಂದಿನವರೆಗೂ ಜಿಡಿಪಿ ಪಾತಾಳಕ್ಕಿಳಿಯುತ್ತಿದೆ, ಕೈಗಾರಿಕೆಗಳು ಬಾಗಿಲು ಮುಚ್ಚಿದವು. ಡಾಲರ್ ಎದುರು ರೂಪಾಯಿ ಮೌಲ್ಯ ದಿನೇ ದಿನೆ ಕುಸಿಯುತ್ತಿದೆ. ಬಂಗಾರದ ಬೆಲೆ ಮುಗಿಲು ಮುಟ್ಟುತ್ತಿದೆ. ಸಾಲ ಮರುಪಾವತಿ ಮಾಡಲಾಗದೆ ಉದ್ಯಮಿಗಳು ಕಂಗಾಲಾಗಿದ್ದಾರೆ. ಉದ್ಯೋಗಾವಕಾಶಗಳ ಸೃಷ್ಟಿ ಇಲ್ಲದೆ ಯುವಜನತೆ ಗಲಾಟೆ ದೊಂಬಿಗಳಂತಹ ದುಷ್ಕತ್ಯಗಳಲ್ಲಿ ತೊಡಗುತ್ತಿದ್ದಾರೆ. ಕೊರೊನಾದಂತಹ ಮಾರಕ ಸಾಂಕ್ರಾಮಿಕ ರೋಗದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾದ ವಸ್ತುಗಳಿಗೆ ಬೇಡಿಕೆಗೆ ಕುಸಿದುದರ ವಿರುದ್ದವಾಗಿ ನಮ್ಮ ಪೂರೈಕೆಯನ್ನು ಹೆಚ್ಚಿಸಿ ಹೊಸ ವ್ಯಾಪಾರ ಮಾರ್ಗಗಳನ್ನು ಹುಡುಕಲು ವಿಫಲರಾಗುತ್ತಿದ್ದೇವೆ. ಬಡ, ಮಧ್ಯಮ ವರ್ಗದವರು, ವ್ಯಾಪಾರಿಗಳು ನೆಲಕಚ್ಚಿದ್ದಾರೆ. ಈ ಸಮಯದಲ್ಲಿ ಇವರ ಗಮನವನ್ನು ಬೇರೆಡೆ ಸೆಳೆಯಲು ನಿಮ್ಮಲ್ಲಿ ಇನ್ಯಾವ ಅಸ್ತ್ರಗಳಿವೆ? ಪ್ರಯೋಗಿಸಿಯೆ ಬಿಡಿ.

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರೇ ನಮಗೂ ನಿಮ್ಮ  ಮಾತಿನ ಮೋಡಿ ಇಷ್ಟ. ಆದರೆ ನಮ್ಮ ದೇಶದಲ್ಲಿ ನಿಮ್ಮ ಭಾಷಣ ನಂಬಿದ ಅದೆಷ್ಟು ಮುಗ್ದ  ನಾಗರಿಕರಿದ್ದಾರೆ ಗೊತ್ತಾ?

ಅಚ್ಚೇ ದಿನ್ ಆಯೇಗಾ. ಕಬ್ ಆಯೇಗಾ?

ರಾಘವೇಂದ್ರ ಹಿರಿಯಣ್ಣ

Tags:

Leave a Reply

Your email address will not be published.

*

Latest from ಅಫಿಡೆವಿಟ್ಟು

Go to Top