ಹಾಯ್ ಬೆಂಗಳೂರ್

ಇಲ್ಲಿ ಶವವನ್ನು ಹೊರತೆಗೆದು ಹುಟ್ಟುಹಬ್ಬ ಆಚರಿಸುತ್ತಾರೆ

  • ಇಲ್ಲಿ ಶವವನ್ನು ಹೊರತೆಗೆದು ಹುಟ್ಟುಹಬ್ಬ ಆಚರಿಸುತ್ತಾರೆ

ನಮ್ಮಲ್ಲಿ ಮಠಾಧಿಪತಿಗಳು ಹಾಗೂ ಪವಾಡ ಪುರುಷರು ಎಂದು ಜನತೆ ನಂಬುವವರಿಗೆ ಪಾದ ಪೂಜೆ, ತುಲಾಭಾರ, ಕ್ಷೀರಧಾರೆ ಸರ್ವೇ ಸಾಮಾನ್ಯ. ಥಾಯ್‌ಲಂಡ್‌ನಲ್ಲಿ ಮೃತನಾದ ಬೌದ್ಧ ಸನ್ಯಾಸಿಯೊಬ್ಬನ ದೇಹವನ್ನು ಮಮ್ಮಿಯಂತೆ ಇರಿಸಿರುವ ಶವದ ಪೆಟ್ಟಿಗೆಯಿಂದ ಹೊರತೆಗೆದು ಮುಖಕ್ಕೆ ನಮ್ಮಲ್ಲಿ ಹುಟ್ಟುಹಬ್ಬದ ದಿನ ಕೇಕ್ ಬಳಿಯುವಂತೆ ಭಕ್ತಾದಿಗಳು ಚಿನ್ನದ ಲೇಪನ ಮಾಡುವ ಅಪರೂಪದ ಸಂಪ್ರದಾಯದ ಕಥೆ ಇದು.

ಬ್ಯಾಂಕಾಕ್ ಬಳಿ ಇರುವ ಬೌದ್ಧ ಕ್ಷೇತ್ರವೊಂದರ ಗುರುವಾಗಿದ್ದ ಲೂಂಗ್ ಫೋ ಹಲವಾರು ಸಂಕಷ್ಟಗಳನ್ನು ಎದುರಿಸಿ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ಮೃತನಾದ. ಈತನ ಇಚ್ಛೆಯಂತೆ ದೇಹವನ್ನು ಶವ ಸಂಸ್ಕಾರ ಮಾಡದೆ, ಶವ ಪೆಟ್ಟಿಗೆಯಲ್ಲಿ ಕೊಳೆಯದಂತೆ ವ್ಯವಸ್ಥೆ ಮಾಡಿ ಇಡಲಾಯಿತು. ಅಪಾರ ಜನಾನುರಾಗಿಯಾಗಿದ್ದ ಈ ಬೌದ್ಧ ಸನ್ಯಾಸಿ  ಹುಟ್ಟುಹಬ್ಬದಂದು ಶಿಷ್ಯರು ಆತನ ಶವವನ್ನು ಪೆಟ್ಟಿಗೆಯಿಂದ ಹೊರ ತೆಗೆದು ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಶೃಂಗರಿಸುತ್ತಾರೆ. ಅಂದು ಸಾಕ್ಷಾತ್ ದೇವರನ್ನು ಕಂಡಂತೆ ಭಕ್ತಿ ಪರವಶರಾಗುವ ಥಾಯ್‌ಲಂಡ್‌ನ ಜನ ತಮ್ಮ ಧರ್ಮ ಗುರುವಿನ ಮುಖಕ್ಕೆ ಚಿನ್ನದ ಎಲೆಗಳಿಂದ ಲೇಪನ ಮಾಡುತ್ತಾರೆ. ಧಾರ್ಮಿಕ ವಿಧಿಗಳು ಮುಗಿದ ನಂತರ ಸತ್ತರೂ, ಸಾಯದ ಈ ಬೌದ್ಧ ಗುರು ಮತ್ತೆ ಹನ್ನೆರಡು ತಿಂಗಳುಗಳ ಕಾಲ ಶವ ಪೆಟ್ಟಿಗೆ ಸೇರುತ್ತಾನೆ. ಎಲ್ಲವನ್ನೂ ತ್ಯಜಿಸಿ ಎಂದು ಹೇಳಿದ ಬೌದ್ಧರಿಗೇಕೆ ಈ ಅಮರತ್ವದ ಹಂಬಲ ಬಂತೋ? ಬುದ್ಧನೇ ಬಲ್ಲ!

Leave a Reply

Your email address will not be published. Required fields are marked *