ಹಾಯ್ ಬೆಂಗಳೂರ್

ಎಂ.ವಿ.ರೇವಣಸಿದ್ದಯ್ಯ@ನೂರು ಮುಖ ಸಾವಿರ ದನಿ : ಹಾಸ್ಯ ಚಕ್ರವರ್ತಿ ನರಸಿಂಹರಾಜು ಎಂಬ ಅದ್ವಿತೀಯ ನಟನ ನೆನೆಯುತ್ತಾ…

ತಮಿಳು ಚಿತ್ರರಂಗದಲ್ಲಿ ಏಕಮೇವ ಹಾಸ್ಯನಟನಾಗಿ ಮೆರೆದ ತಾಯ್‌ನಾಗೇಶ್ ಕರ್ನಾಟಕದ ಕಡೂರು ಮೂಲದ ಮಾಧ್ವ ಬ್ರಾಹ್ಮಣ ಕುಟುಂಬದ ಕನ್ನಡಿಗ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಅದ್ವಿತೀಯ ಹಾಸ್ಯ ನಟನಾಗಿ ಮೆರೆದದ್ದು ಅದ್ಭುತ ನಟ ಟಿ.ಆರ್. ನರಸಿಂಹರಾಜು. ಮೂಲಸ್ಥಳ ತಿಪಟೂರು. ಬಾಲಕೃಷ್ಣ-ನರಸಿಂಹರಾಜು ಜೋಡಿ ಅತ್ಯಂತ ಜನಪ್ರಿಯ. ಇಬ್ಬರೂ ಸೇರಿದರೆ ಹಾಸ್ಯದ ಹೊನಲು ಗ್ಯಾರಂಟಿ. ಅತ್ಯಂತ ಬಡತನದ ಸಾಧಾರಣ ಕುಟುಂಬದಲ್ಲಿ ಜನಿಸಿದ ನರಸಿಂಹರಾಜು ಅವರದು ಅಸಾಧಾರಣ ಪ್ರತಿಭೆ. ಇವರದು ಎಂಥ ದೈತ್ಯ ಪ್ರತಿಭೆ ಅಂದರೆ ನರಸಿಂಹರಾಜು ಇರುವ ದೃಶ್ಯಗಳಲ್ಲಿ ಸಹ ನಟ, ನಟಿಯರು ಯಾರೇ ಇರಲಿ ಅವರು ಅತ್ಯುತ್ತಮ ನಟರೇ ಆಗಿದ್ದರೂ ಸಹ ಅವರೆಲ್ಲರನ್ನೂ ಮೀರಿ ಇಡೀ ದೃಶ್ಯದಲ್ಲಿ ತನ್ನ ಛಾಪು ಮೂಡಿಸಿ, ತಾನು, ತನ್ನ ಪಾತ್ರವೇ ಮೇಲೆದ್ದು ಖಾಯಂ ನೆನಪು ಉಳಿಯುವಂತೆ ಮಾಡುವ ಮಂತ ಪ್ರತಿಭೆ ಅವರದು.

೨೪-೭-೧೯೨೩ರಂದು ತಿಪಟೂರಿನ ಪೊಲೀಸ್ ಕಾನ್ಸ್‌ಟೇಬಲ್ ರಾಮರಾಜು ಮತ್ತು ಶ್ರೀಮತಿ ವೆಂಕಟಲಕ್ಷ್ಮಿಯವರ ಮಗನಾಗಿ ಜನಿಸಿದ ಇವರನ್ನು ಬಡತನವಿದ್ದ ಕಾರಣ ಇವರ ಚಿಕ್ಕಪ್ಪ ಲಕ್ಷ್ಮೀಪತಿರಾಜು ಹೊಟ್ಟೆಪಾಡಿಗಾಗಿ ಸಿ.ಬಿ. ಮಲ್ಲಪ್ಪನವರ “ಚಂದ್ರಮೌಳೇಶ್ವರ’ ಡ್ರಾಮಾ ಕಂಪೆನಿಗೆ ಸೇರಿಸುತ್ತಾರೆ. ಬಾಲಕ ನರಸಿಂಹರಾಜು ಆಗ “ಪ್ರಹ್ಲಾದ’ (ಭಕ್ತ ಪ್ರಹ್ಲಾದ) “ಲೋಹಿತಾಶ್ವ’ (ಸತ್ಯಹರಿಶ್ಚಂದ್ರ) “ಕೃಷ್ಣ’ ಮತ್ತು “ಮಾರ್ಕಂಡೇಯ’ ಹೀಗೆ ಬಾಲನಟನಾಗಿ ಅಭಿನಯಿಸುತ್ತಾರೆ. ವಯಸ್ಸಿಗೆ ಬಂದ ನಂತರ ಸ್ವಂತ ನಾಟಕ ಕಂಪೆನಿ ಆರಂಭಿಸಿ “ಗೋರಾ ಕುಂಬಾರ’, “ಹರಿಶ್ಚಂದ್ರ’ ಮುಂತಾದ ನಾಟಕಗಳನ್ನಾಡುತ್ತಾರೆ. ಆದರೆ ಅದರಲ್ಲಿ ನಷ್ಟ ಅನುಭವಿಸಿ ನಂತರ “ಎಡತೊರೆ’ ಡ್ರಾಮಾ ಕಂಪೆನಿ ಎಂಬ ಕಂಪೆನಿ ಸೇರುತ್ತಾರೆ. ಅಲ್ಲಿ ವಿಶ್ವಾಮಿತ್ರ, ರಾಮ, ರಾವಣ, ಭರತ ಮುಂತಾದ ಪಾತ್ರ ಮಾಡುತ್ತಾರೆ. ಆನಂತರ ಹಿರಣ್ಣಯ್ಯ ಮಿತ್ರ ಮಂಡಳಿ (ಮಾಸ್ಟರ್ ಹಿರಣ್ಣಯ್ಯನವರ ತಂದೆ), ಭಾರತ ಲಲಿತಕಲಾ ಸಂಘ, ಗುಂಡಾ ಜೋಯಿಸರ ಕಂಪೆನಿ ಮುಂತಾದ ಕಂಪೆನಿಗಳನ್ನು ಸೇರಿ ಅಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಾರೆ.

ಕೊನೆಗೆ ಸೇರಿದ್ದು ರಂಗಬ್ರಹ್ಮ, ಚಿತ್ರದ್ರೋಣ ಗುಬ್ಬಿ ವೀರಣ್ಣನವರ ಗುಬ್ಬಿ ಚನ್ನಬಸವೇಶ್ವರ ನಾಟಕ ಸಂಘ. ಅಲ್ಲಿ ಡಾ. ರಾಜ್ ಆಗ ಮುತ್ತುರಾಜ್. ಇವರ ಜೊತೆಗೆ ಮೂಗಿನ ತುದಿಗೆ ವಿಶ್ವಾಮಿತ್ರ ಕೋಪ ಇರುವ ಸಿಡುಕ ಹಾಗೂ ನಂತರ ಚಿತ್ರಬ್ರಹ್ಮನೂ ಆದ ಜಿ.ವಿ. ಅಯ್ಯರ್. ಇವರಿಬ್ಬರ ಜೊತೆ ರಂಗಭೀಷ್ಮ ಗುಬ್ಬಿ ವೀರಣ್ಣನವರ ಗರಡಿಯಲ್ಲಿ ನರಸಿಂಹರಾಜು ಸಹ ಅಭಿನಯ ಮುಂದುವರೆಸುತ್ತಾರೆ. ನಂತರ ಎ.ವಿ.ಎಂ. ನಿರ್ಮಾಣದ “ಬೇಡರ ಕಣ್ಣಪ್ಪ’ ಚಿತ್ರಕ್ಕೆ ಇದೇ ತ್ರಿಮೂರ್ತಿಗಳು (ರಾಜ್, ಅಯ್ಯರ್ ಮತ್ತು ನರಸಿಂಹ ರಾಜು) ಆಯ್ಕೆಯಾಗುತ್ತಾರೆ. ಅಂದರೆ ೧೯೫೪ರಲ್ಲಿ ಇವರೆಲ್ಲ ಒಟ್ಟಿಗೆ ಚಿತ್ರರಂಗ ಪ್ರವೇಶ ಮಾಡುತ್ತಾರೆ. ನಂತರ ಈ ಮೂವರ ಸಾಧನೆ ಚರಿತ್ರೆ. ೧೯೫೪ರಲ್ಲಿ ಚಿತ್ರರಂಗ ಪ್ರವೇಶಿಸಿದ ನರಸಿಂಹರಾಜು ೧೯೭೯ರ ಅವಧಿಯಲ್ಲಿ ಅಂದರೆ ಇಪ್ಪತ್ತೈದು ವರ್ಷಗಳಲ್ಲಿ ಇನ್ನೂರೈವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಡಾ. ರಾಜ್, ಉದಯ್, ಕಲ್ಯಾಣ್ ಇವರೆಲ್ಲ ಮಹಾನ್ ಪ್ರತಿಭೆಗಳು ಹಾಗೂ ನಾಯಕ ನಟರು. ಆದರೆ ಈ ಮೂರೂ ಜನರ ಜೋಡಿ ಅಥವಾ ಪ್ರತ್ಯೇಕ ನಾಯಕತ್ವದ ಯಾವುದೇ ಚಿತ್ರಗಳಿಗೆ ಕಾಲ್‌ಶೀಟ್ ಕೇಳಲು ನಿರ್ಮಾಪಕ ಅಥವಾ ನಿರ್ದೇಶಕರು ಬಂದಾಗ ಈ ಮೂವರೂ ನಾಯಕರು ಮೊದಲು ನರಸಿಂಹರಾಜು ಅವರ “ಕಾಲ್‌ಶೀಟ್’ ಪಡೆಯಿರಿ, ನಂತರ ನಮ್ಮದು ಅಂತ ಹೇಳುತ್ತಿದ್ದರು. ಅಷ್ಟು ಬ್ಯುಸಿ ಹಾಗೂ ಅನಿವಾರ್ಯವಾಗಿದ್ದರು ನರಸಿಂಹರಾಜು. ಇಂತಹದೇ ಸ್ಥಾನ ತಮಿಳಿನಲ್ಲಿ ಹಿಂದೆ ತಾಯ್‌ನಾಗೇಶ್ ಹಾಗೂ ತೆಲುಗಿನಲ್ಲಿ ಇಂದಿಗೆ ಬ್ರಹ್ಮಾನಂದಂರವರಿಗೂ ಇದೆ.

ನರಸಿಂಹರಾಜು ಅವರ ಸಂಭಾಷಣೆ ಬೇಡ, ಅಭಿನಯವೂ ಬೇಡ, ಅವರು ಮುಖ ತೋರಿಸಿದರೆ ಸಾಕು ಪ್ರೇಕ್ಷಕರು ನಗಲು ಆರಂಭಿಸುತ್ತಿದ್ದರು. ಅದರಲ್ಲೂ ೧೯೫೦-೬೦ರ ದಶಕದ ಅನೇಕ ಚಿತ್ರಗಳಲ್ಲಿ ಇವರ ಮೇಲಿನ ಸಾಲಿನಲ್ಲಿ ಎರಡು ಕೃತಕ ಹಲ್ಲು (ಉಬ್ಬುಹಲ್ಲು) ಜೋಡಿಸಲಾಗುತ್ತಿತ್ತು. ಆಗಂತೂ ಅವರ ಮುಖ ಕಂಡರೆ, ಅದರಲ್ಲೂ ಬಾಯಿಬಿಟ್ಟರೆ ಸಾಕು ಜನ ನಗೆಗಡಲಲ್ಲಿ ತೇಲುತ್ತಿದ್ದರು. ನಂತರ ಕೃತಕ ಉಬ್ಬುಹಲ್ಲು ಕೈಬಿಡಲಾಯಿತು. ಅವರ ಅಭಿನಯ, ಅವರ ಮ್ಯಾನರಿಸಂ, ಅವರ ಡೈಲಾಗ್ ಡೆಲಿವರಿ, ಅವರ ಕಾಮಿಡಿ ಟೈಮಿಂಗ್ ಇವುಗಳ ಬಗ್ಗೆ ವಿವರಿಸಲು ಸಾಧ್ಯವೇ ಇಲ್ಲ. ಅವರು ಅಭಿನಯಿಸುತ್ತಿದ್ದರೆ, ತಮ್ಮ ಪಾತ್ರದ ಡೈಲಾಗ್ ಹೇಳುತ್ತಿದ್ದರೆ ಅದರ ಬಗ್ಗೆ ಏನು, ಹೇಗೆ ಅಂತ ವಿಶ್ಲೇಷಣೆ ಮಾಡಲೂ ಸಾಧ್ಯವಾಗದು. ಅವರು ಪಾತ್ರವೇ ತಾವಾಗಿ ಅನುಭವಿಸಿ ಜೀವ ತುಂಬುತ್ತಿದ್ದರು. ಪ್ರಥಮ ಚಿತ್ರ “ಬೇಡರ ಕಣ್ಣಪ್ಪ’ದಿಂದ ಹಿಡಿದು ಎಲ್ಲಾ ಚಿತ್ರಗಳಲ್ಲೂ ಅವರದು ಸಹಜ ಹಾಗೂ ಅದ್ಭುತ ಅಭಿನಯ.

೧೯೬೨ರ ರತ್ನಮಂಜರಿ ಚಿತ್ರದಲ್ಲಿನ “ಯಾರು ಯಾರು ನೀ ಯಾರು ಎಲ್ಲಿಂದ ಬಂದೆ ಯಾವೂರು” ಹಾಡಿನ ಭಯಾನಕ ಸನ್ನಿವೇಶದಲ್ಲಿ ಹೆದರುತ್ತ ಆ ಹಾಡು ಹೇಳುತ್ತಾ ಅವರು ನೀಡಿದ್ದ ಅಭಿನಯ ಎಂದೂ ಯಾರೂ ಮರೆಯಲು ಅಸಾಧ್ಯವಾದದ್ದು. ಕನ್ನಡದಲ್ಲಿ ನಿರ್ಮಾಣ, ನಿರ್ದೇಶನ ಆರಂಭಿಸಿ ನಂತರ ತೆಲುಗು ಚಿತ್ರರಂಗದ ಬ್ರಹ್ಮನೇ ಆದ ಬಿ.ವಿಠ್ಠಲಾಚಾರ್ಯ ಅವರ ನಿರ್ಮಾಣ, ನಿರ್ದೇಶನದ “ಮನೆ ತುಂಬಿದ ಹೆಣ್ಣು’ ಚಿತ್ರದಲ್ಲಿ ಹೆಂಡತಿಯ ಹಿಂದೆ ಬಟ್ಟೆ ಗಂಟು ಹಿಡಿದು ಹೆಂಡತಿ ಮಾಡಿದ ಹಾಗೆ, ಹೆಂಡತಿ ಹೇಳಿದ ಮಾತುಗಳನ್ನು ಪುನರ್ ಹೇಳುತ್ತಾ ಮಾಡಿದ ಪೆದ್ದ ಗಂಡನ ಅಭಿನಯ ಮರೆಯಲು ಸಾಧ್ಯವೇ ಇಲ್ಲ. ಆಗ ನನಗೆ ಒಂಬತ್ತು ವರ್ಷ ವಯಸ್ಸು. ಭದ್ರಾವತಿಯಲ್ಲಿ ನೋಡಿದ್ದೆ. ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‌ಪ್ರೈಸಸ್ ಅವರ ನಿರ್ಮಾಣದ ಎಂ.ಆರ್.ವಿಠಲ್ ನಿರ್ದೇಶನದ ೧೯೬೭ರಲ್ಲಿ ಬಿಡುಗಡೆಯಾದ ಎಂ.ರಂಗರಾವ್ ಸಂಗೀತ ನೀಡಿದ್ದ “ನಕ್ಕರೆ ಅದೇ ಸ್ವರ್ಗ’ ಚಿತ್ರದ “ನಗಬೇಕು, ನಗಿಸಬೇಕು. ಇದೇ ನನ್ನ ಧರ್ಮ. ನಗಲಾರೆ ಅಳುವೆ ಅಂದರೆ ಅದು ನಿಮ್ಮ ಕರ್ಮ.” ಈ ಹಾಡಿಗೆ ತಮ್ಮದೇ ವೃತ್ತಿಯ ಘಟನೆಗಳನ್ನು ತೆರೆಯ ಮೇಲೆ ತಂದು ನರಸಿಂಹರಾಜು ಅವರು ನೈಜವಾಗಿ ಅಭಿನಯಿಸಿದ್ದರು. ಆ ಚಿತ್ರದ ಹೀರೋ ಅವರೇ. ಅವರ ಹಾಸ್ಯ ಜೀವನವೇ ಆ ಚಿತ್ರದ ಕಥಾವಸ್ತು.

೧೯೭೪ರಲ್ಲಿ ತಾವೇ ನಿರ್ಮಿಸಿ ಅಭಿನಯಿಸಿದ `ಪ್ರೊಫೆಸರ್ ಹುಚ್ಚೂರಾಯ’ ಚಿತ್ರದಲ್ಲಿ ಇವರದೇ ಮುಖ್ಯ ಪಾತ್ರ. ಎಂ.ಆರ್. ವಿಠಲ್ ನಿರ್ದೇಶನ, ರಾಜನ್-ನಾಗೇಂದ್ರ ಸಂಗೀತದ, ವಿಷ್ಣುವರ್ಧನ್-ಮಂಜುಳ ಸಹ ತಾರಾಗಣದಲ್ಲಿದ್ದ ಈ ಚಿತ್ರದಲ್ಲಿ ಪ್ರೊಫೆಸರ್ ಹುಚ್ಚೂರಾಯನಾಗಿ ಇವರದು ವಿಭಿನ್ನ ಅಭಿನಯ. ತೆಲುಗಿನಲ್ಲಿ ಪದ್ಮನಾಭಂ ನಟಿಸಿದ್ದ “ಜಾತಕ ರತ್ನ ಮಿಡತಾಂಬೊಂಟ್ಲು’ ತೆಲುಗು ಸಿನೆಮಾ ಕನ್ನಡದಲ್ಲಿ “ಜಾತಕರತ್ನ ಗುಂಡಾ ಜೋಯಿಸ’ ಆಗಿ ತಯಾರಾಯಿತು. ಅದ್ಭುತ ನಟ ಪದ್ಮನಾಭಂನ ಅಭಿನಯ ಸರಿಗಟ್ಟುವಂತೆ ಅಥವಾ ಅದಕ್ಕಿಂತ ಒಂದು ಕೈ ಮೇಲಾಗಿಯೂ ನಟಿಸಿದರು ನರಸಿಂಹರಾಜು. ತೆಲುಗಿನ “ಗಾಡಿದಾ’ ಹಾಡು ಕನ್ನಡದಲ್ಲಿ “ಗಾರ್ದಭಾ’. ಈ ಹಾಡಿನಲ್ಲಿ ನರಸಿಂಹರಾಜು ಅಭಿನಯ ಮನೋಜ್ಞ. “ಜಾತಕರತ್ನ ಗುಂಡಾ ಜೋಯಿಸ’ ಚಿತ್ರದಲ್ಲಿ ಜಾತಕ, ಭವಿಷ್ಯ ಇತ್ಯಾದಿ ಹೇಳುವ ಪರಿಣಿತ ಜ್ಯೋತಿಷಿ ಪಾತ್ರ ಅವರದು. ಆದರೆ ವಾಸ್ತವವಾಗಿ ಅವರು ಭವಿಷ್ಯ ಹೇಳಿ ಅದನ್ನು ನಿಜ ಮಾಡಲು ತಾವೇ ಶ್ರಮಿಸಿ ಹೆಣಗಾಡುವ ಪಾತ್ರ ಅದು. ಏನಾದರೂ ಕಳೆದುಕೊಂಡವರು ಬಂದು ಕೇಳಿದಾಗ ನಾಳೆ ಬೆಳಿಗ್ಗೆ ನಿಮ್ಮ ಮನೆಯಲ್ಲಿರುತ್ತದೆ ಅಂತ ಹೇಳಿ ರಾತ್ರಿ ಎಲ್ಲ ಹುಡುಕಿ ತಂದು ಸಂಬಂಧಿಸಿದ ಮನೆಯ ಬಳಿ ಅವರಿಗೆ ತಿಳಿಯದೇ ಇಟ್ಟು ಹೋಗುತ್ತಿದ್ದರು. ಒಮ್ಮೆ ಕತ್ತೆ ಕಳೆದಿದೆ ಅಂದಾಗ ಇಡೀ ರಾತ್ರಿ “ಗಾರ್ದಭಾ, ಗಾರ್ದಭಾ ದಯೆ ತೋರು ಗಾರ್ದಭಾ” ಅಂತ ಹಾಡು ಹೇಳುತ್ತಾ ರಾತ್ರಿಯಿಡೀ ಹುಡುಕಿ ತಂದು ಕಳೆದುಕೊಂಡವರ ಮನೆಯ ಬಳಿ ಬಿಟ್ಟು ಹೋಗುತ್ತಾರೆ.

ಚಾರ್ಲಿ ಚಾಪ್ಲಿನ್ ಅವರ ಪ್ರಭಾವ ನರಸಿಂಹರಾಜು ಅವರ ಮೇಲಿದ್ದರೂ ಸಹ ಅವರು ತಮ್ಮದೇ ಆದ ಶೈಲಿಯಲ್ಲಿ ನಟಿಸಿದರು. ಅವರನ್ನು ಅನುಕರಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ನರಸಿಂಹರಾಜು ಅವರ ಸಂಗಾತಿ ಹಾಸ್ಯ ನಾಯಕಿಯರೂ ಅವರಿಗೆ ಒಳ್ಳೆಯ ಸಾಥ್ ನೀಡುತ್ತಿದ್ದರು. ಪ್ರಾರಂಭದಲ್ಲಿ ಅನೇಕ ಚಿತ್ರಗಳಲ್ಲಿ ರಮಾದೇವಿ ಸಂಗಾತಿ. ನಂತರ ಅನೇಕ ಚಿತ್ರಗಳಲ್ಲಿ ರಮಾದೇವಿ, ನರಸಿಂಹರಾಜು ಸಂಗಾತಿಯ ಅತ್ತೆ. ನಂತರ ಎಮ್.ಎನ್.ಲಕ್ಷ್ಮಿದೇವಿ, ಜಯಾ, ಆರ್.ಟಿ.ರಮಾ, ಜ್ಯೂ.ರೇವತಿ, ಬಿ.ವಿ.ರಾಧಾ ಹೀಗೆ ಅನೇಕರು ನರಸಿಂಹರಾಜು ಅವರ ಜೀವಂತ ಹಾಸ್ಯ ದೃಶ್ಯಗಳಿಗೆ ಸಾಥ್ ನೀಡಿದರು. ಇನ್ನೂರೈವತ್ತು ಚಿತ್ರಗಳಲ್ಲಿ ನಟಿಸಿರುವ ನರಸಿಂಹರಾಜು ಅವರ ವಿಭಿನ್ನ ಪಾತ್ರಗಳು ಹಾಗೂ ವೈವಿಧ್ಯ ಪಟ್ಟಿ ಮಾಡುವುದು ತುಂಬಾ ಕಷ್ಟ. ದೇವರು ಕೊಟ್ಟ ತಂಗಿ, ಗಂಧದ ಗುಡಿ, ರಂಗಮಹಲ್ ರಹಸ್ಯ, ಶ್ರೀಕೃಷ್ಣದೇವರಾಯ, ಬಾಂಡ್ ಚಿತ್ರಗಳು, ರೌಡಿ ರಂಗಣ್ಣ, ಬ್ಲಾಕ್-ಮಾರ್ಕೆಟ್ ಒಂದೇ ಎರಡೇ. ಹೆಚ್ಚೂ ಕಡಿಮೆ ಅವರ ಹಾಸ್ಯಾಭಿನಯ ಎಲ್ಲ ಚಿತ್ರಗಳಲ್ಲೂ ನಗುವಿನ ಹೊಳೆ ಹರಿಸುವಂಥಾದ್ದು. ಸತ್ಯಹರಿಶ್ಚಂದ್ರದಲ್ಲಿನ ಅವರ “ನಕ್ಷತ್ರಿಕ’ನ ಪಾತ್ರವನ್ನು ತೆಲುಗಿನಲ್ಲಿ ರಮಣಾರೆಡ್ಡಿ ಅಭಿನಯಿಸಿದರಾದರೂ ನರಸಿಂಹರಾಜುವಿನಂತಹ ಪರಿಣಾಮಕಾರಿ ಅಭಿನಯ ಅಲ್ಲಿ ಇಲ್ಲ.

ಕನ್ನಡದ “ಬೆಂಗಳೂರು ಮೈಲ್’ ಚಿತ್ರ ತಮಿಳಿನಲ್ಲಿ “ನೀಲಗಿರಿ ಎಕ್ಸ್‌ಪ್ರೆಸ್’, ತೆಲುಗಿನಲ್ಲಿ “ಸರ್ಕಾರ್ ಎಕ್ಸ್ ಪ್ರೆಸ್’, ಮಲಯಾಳಂನಲ್ಲಿ “ಕೊಚ್ಚಿನ್ ಎಕ್ಸ್‌ಪ್ರೆಸ್’, ಹಿಂದಿಯಲ್ಲಿ “ದಿ ಟ್ರೈನ್’ ಆಗಿ ಬಂದಿತು. ಆದರೆ ಕನ್ನಡದಲ್ಲಿ ತಿಪಟೂರು ತೆಂಗಿನಕಾಯಿ ನರಸಿಂಹರಾಜು ಅವರ ಅಭಿನಯ ನಿರ್ವಹಣೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದವರಿಂದ ಕಂಡುಬರುವುದಿಲ್ಲ. ನರಸಿಂಹರಾಜು ಅವರ ಪುತ್ರಿ ಸುಧಾ ನರಸಿಂಹರಾಜು ಸಹ ನಾಟಕ, ಕಿರುತೆರೆ ಮತ್ತು ಹಿರಿತೆರೆ ಕಲಾವಿದೆಯೇ. ಚಿಕ್ಕಂದಿನಿಂದಲೂ ನರಸಿಂಹರಾಜು ಅವರ ಅಭಿನಯ ನೋಡಿ ಆನಂದಿಸುತ್ತಾ, ನಕ್ಕು ನಲಿಯುತ್ತಾ ಬೆಳೆದ ನನಗೆ ಮುಂದೊಮ್ಮೆ ಅವರ ಪುತ್ರಿಯ ಜೊತೆ ಅಭಿನಯಿಸುವ ಅವಕಾಶ ಸಿಗುತ್ತೆ ಅಂತ ಖಂಡಿತಾ ನಾನಂದುಕೊಂಡಿರಲಿಲ್ಲ. ೧೯೯೪ರಲ್ಲಿ “ಮಂಗಳಾ ನನ್ನ ಅತ್ತಿಗೆ’ ಎಂಬ ನಾಟಕದಲ್ಲಿ ನನ್ನದು ಡಾಕ್ಟರ್ ರಾಜು ಪಾತ್ರ. ಸುಧಾ ನರಸಿಂಹರಾಜು ನನ್ನ ತಮ್ಮ (ಇಂದೂಧರ)ನ ಕಾಲೇಜ್ ಸಹಪಾಠಿ ಹಾಗೂ ಆತನ ಪ್ರೇಮಿ. ಆದರೆ ನಂತರ ನನಗೆ ಹೆಂಡತಿಯಾಗಿ ಬರುತ್ತಾಳೆ. ಆ ಪಾತ್ರ ಆಕೆಯದು. ಹಾವೇರಿಯಲ್ಲಿ ಆ ನಾಟಕ ಹೌಸ್‌ಫುಲ್. ದಾವಣಗೆರೆಯಲ್ಲಿ ಸಹ ಅದನ್ನು ಪ್ರದರ್ಶಿಸಿದೆವು. ಅಲ್ಲಿ ಸಹ ಉತ್ತಮ ಕಲೆಕ್ಷನ್ ಆಗಿತ್ತು.

ಸುಧಾ ನರಸಿಂಹರಾಜು ಸಹ ಒಳ್ಳೆಯ ನಟಿ, ಪ್ರತಿಭಾನ್ವಿತೆ. ಆದರೆ ಆಕೆಗೆ ಕಿರುತೆರೆ-ಹಿರಿತೆರೆಗಳಲ್ಲಿ ಉತ್ತಮ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳಲ್ಲಿ ಆಕೆಯ ಪ್ರತಿಭೆಗೆ ತಕ್ಕ ವ್ಯಾಪ್ತಿ ಇರಲಿಲ್ಲ. “ಪುತ್ರ ಶೋಕಂ ನಿರಂತರಂ” ಎಂಬ ನಾಣ್ಣುಡಿಯ ಹಾಗೆ ಇದ್ದ ಒಬ್ಬ ಮಗನನ್ನು (ಇಬ್ಬರು ಹೆಣ್ಣುಮಕ್ಕಳು) ಅಪಘಾತದಲ್ಲಿ ಕಳೆದುಕೊಂಡ ನರಸಿಂಹರಾಜು ಪುತ್ರಶೋಕದಿಂದ ಜರ್ಝರಿತರಾದರು. ನಂತರ ತಮ್ಮ ಐವತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ತಾಯ್‌ನಾಗೇಶ್ ತಮ್ಮ ಎಪ್ಪತ್ತೈದರ ಇಳಿ ವಯಸ್ಸಿನವರೆಗೂ ಅಭಿನಯಿಸುತ್ತಲೇ ಇದ್ದರು. ನಮ್ಮ ಕಲ್ಚರಲ್ ಕಮೆಡಿಯನ್ ನರಸಿಂಹರಾಜು ಬದುಕಿದ್ದರೆ, ತಾಯ್‌ನಾಗೇಶ್ ಅವರಂತೆಯೇ ಸಾವಿರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೇನೋ? ಅವರೀಗ ನೆನಪು ಮಾತ್ರ. ಆದರೆ ಅವರು ಬಿಟ್ಟುಹೋಗಿರುವ ಅವರ ಜೀವಂತ ಅಭಿನಯದ ಚಿತ್ರಗಳು, ಹಾಸ್ಯ ದೃಶ್ಯಗಳು ನೋಡಿದೊಡನೆ ಎಂತಹ ಶೋಕಸಾಗರದಲ್ಲಿ ಮುಳುಗಿದ್ದವರನ್ನೂ ಕಚಗುಳಿ ಇಟ್ಟು ನಗಿಸಿಬಿಡುತ್ತವೆ. ಇಂತಹ ಅದ್ಭುತ ನಟನ ಹೆಸರಿನಲ್ಲಿ ಒಂದು ಪ್ರಶಸ್ತಿ ಸ್ಥಾಪಿಸಲಾಗಿದೆ. ಆದರೆ ಅವರು ಇದ್ದಾಗ ಅಥವಾ ನಂತರ ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಅವರಿಗೆ ಯಾವುದೇ ಪ್ರಶಸ್ತಿ, ಪುರಸ್ಕಾರ ನೀಡಲಿಲ್ಲ.

ಹೋಗಲಿ ಬಿಡಿ, ಅವರು ತೀರಿ ಇಪ್ಪತ್ತೈದು ವರ್ಷಗಳಾದರೂ ಅವರು ಜನಮಾನಸದಿಂದ ಮರೆಯಾಗಿಲ್ಲ, ಆಗುವುದೂ ಇಲ್ಲ. ಅವರಿಲ್ಲದೆ ಕನ್ನಡ ಚಿತ್ರರಂಗದ ಇತಿಹಾಸ ಅಪೂರ್ಣ. ಅವರನ್ನು ಕನ್ನಡ ಚಿತ್ರರಂಗ, ಕನ್ನಡ ಜನತೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದ ಅತ್ಯಮೂಲ್ಯ ತಾರೆಗಳಲ್ಲಿ ಅವರೂ ಒಬ್ಬರು. ನರಸಿಂಹರಾಜು ಅವರು ಅಭಿನಯಿಸಿದ ಕನ್ನಡೇತರ ಚಿತ್ರ ಎರಡು. ಅವು ಯಾವುವೆಂದರೆ ರಾಜ್‌ಕಪೂರ್ ಮತ್ತು ನರ್ಗಿಸ್ ನಟಿಸಿದ್ದ “ಚೋರಿ ಚೋರಿ’ ಹಿಂದಿ ಚಿತ್ರ. ಆ ಚಿತ್ರದಲ್ಲಿ ಅವರು “ಅತಿಥಿ ನಟ’ರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ “ಮಿಸ್ ಮೇರಿ’ ಹಿಂದಿ ಚಿತ್ರದಲ್ಲೂ ಸಹ ಅವರು ನಟಿಸಿದ್ದಾರೆ. “ಚೋರಿ ಚೋರಿ’ ಚಿತ್ರದಲ್ಲಿ ನಟಿಸಿದ್ದ ನರಸಿಂಹರಾಜುವಿಗೆ ರಾಜ್‌ಕಪೂರ್ “ಹಿಂದಿ ಚಿತ್ರರಂಗದಲ್ಲೇ ಉಳಿಯಿರಿ, ನೀವು ತುಂಬಾ ಪ್ರಸಿದ್ಧರಾಗುವಿರಿ” ಅಂದರಂತೆ. ಆಗ ನರಸಿಂಹರಾಜು ಅವರು “ನಾನು ಕನ್ನಡ ಚಿತ್ರರಂಗದಲ್ಲೇ ಖುಷಿಯಾಗಿದ್ದೇನೆ. ಆಹ್ವಾನಿಸಿದ್ದಕ್ಕೆ ಧನ್ಯವಾದಗಳು” ಅಂದರಂತೆ. “ಚೋರಿ ಚೋರಿ’ ಚಿತ್ರೀಕರಣದ ಸಮಯದಲ್ಲಿ “ಹಸಿವು’ ಅಂದ ನರ್ಗಿಸ್‌ಗೆ ನರಸಿಂಹರಾಜು ಅಡುಗೆ ಕೋಣೆಯಿಂದ ಎರಡು “ಮಿರ್ಚಿ’ ತಂದು ಕೊಟ್ಟರಂತೆ. ಅದನ್ನು ತಿಂದ ನರ್ಗಿಸ್ “ಹಾ ಹಾ’ (ಖಾರ) ಅಂತ ಕಣ್ಣಲ್ಲಿ ನೀರು ತುಂಬಿ ಕೊಂಡು “ಹಾ’ ಗುಟ್ಟಿದ್ದರಂತೆ.

ಮಿನುಗುತಾರೆ ಕಲ್ಪನಾ ಚಿತ್ರನಟಿಯಾಗಲು ಮದರಾಸಿಗೆ ಬಂದಾಗ ನರಸಿಂಹರಾಜು ಮನೆಯಲ್ಲಿ ಆಕೆಗೆ ಆಶ್ರಯ ನೀಡಿದ್ದರು. ನಂತರ ಕಲ್ಪನಾ ತೀರಿಕೊಂಡು ಗುಬ್ಬಲಾಳದ ತೋಟದಲ್ಲಿ ಅವರನ್ನು ಸಮಾಧಿ ಮಾಡಿದಾಗ. “ಈ ಹುಡುಗಿಯ ಅರ್ರಗೇಟ್ರಂ ನಮ್ಮ ಮನೆಯಲ್ಲೇ ಆಗಿತ್ತು. ಈಗ ಅವಳ ವಿದಾಯದಲ್ಲೂ ನಾನಿದ್ದೇನೆ’ ಅಂದಿದ್ದರು.

Leave a Reply

Your email address will not be published. Required fields are marked *