ಹಾಯ್ ಬೆಂಗಳೂರ್

“ಸಹವಾಸಕ್ಕೆ ಬಿದ್ದು ಕೆಟ್ಟ” ಎಂಬ ಮಾತಿರುವಂತೆಯೇ “ಸಹವಾಸದಿಂದಾಗಿ ಸರಿ ಹೋದ” ಎಂಬ ಮಾತೂ ಇದೆ!

  • ಬಾಟಮ್ ಐಟಮ್

“”Oh no!” ಹಾಗಂತ ಮೊದಲ ದಿನವೇ ಅನ್ನಿಸಿತ್ತು: ಈ ಮನೆಯಲ್ಲಿ ಕಲ್ಚರ್ ಇಲ್ಲ. ಇಲ್ಲಿನ ಜನ ಕೊಂಚ ಒರಟರು. ಅಂತರಂಗದಲ್ಲಿ ರಾಕ್ಷಸರು. ಅಮ್ಮನ ಮನೆಯವರಷ್ಟು soft ಅಲ್ಲ. ಸುಸಂಸ್ಕೃತರಲ್ಲ. ಇವರೊಟ್ಟಿಗೆ ಬದುಕುವುದು ಹೇಗೆ? ಗಂಡ ತೀರ ದುಷ್ಟನಲ್ಲ. ಆದರೆ ಸಂಸ್ಕೃತಿಯ ಕೊರತೆಯಿದೆ. ಒಳ್ಳೆಯತನದ ಕೊರತೆಯಿದೆ. ಇನ್‌ಸೆನ್ಸಿಟಿವ್ ಫೆಲೋ. ಇವನೊಂದಿಗೆ ಜೀವನ ಪರ್ಯಂತ ಏಗುವುದು ಹೇಗೆ?

ಹಾಗಂತ ಅಂದುಕೊಳ್ಳುತ್ತಲೇ ಮೂರು ವರ್ಷ ಕಳೆದಾಯಿತು. ಈಗ ಮಡಿಲಲ್ಲಿ ಒಂದು ಪುಟಾಣಿ ಮಗು ಬೇರೆ. ಮನಸ್ಸಿನ ಸಂಘರ್ಷಗಳು ಮಾತ್ರ ಮುಗಿದಿಲ್ಲ. ಅತ್ತೆಯ ಮನೆಯವರು cultureless ಅನ್ನಿಸುತ್ತಾರೆ. ಎಲ್ಲೋ ಒಂದು ಕಡೆ ರಾಕ್ಷಸೀ ಪ್ರವೃತ್ತಿ. ಇದರ ಮಧ್ಯೆ ಬದುಕುತ್ತಲೇ ತನ್ನ ಸುನೀತತೆ, ಅಮ್ಮನ ಮನೆಯ culture, ಅಂತರಂಗದ ಒಳ್ಳೆಯತನ ಇವುಗಳನ್ನೆಲ್ಲ ಉಳಿಸಿಕೊಳ್ಳಬೇಕಾ? ತಾನೂ ಈ ಒರಟರಂತೆಯೇ ಪುಟ್ಟ ರಕ್ಕಸಿಯಾಗಿ, ಇನ್‌ಸೆನ್ಸಿಟಿವ್ ಆಗಿ, ಇವರ ಭಾಷೆಯಲ್ಲಿ ಹೇಳುವುದಾದರೆ-ಗಟ್ಟಿಗಿತ್ತಿಯಾಗಿ ಪರಿವರ್ತಿತಗೊಳ್ಳಬೇಕಾ? ಹಾಗಾದರೆ, ನನ್ನೊಳಗಿನ ಸುನೀತತೆ, ಭಾವುಕತೆ, ಒಳ್ಳೆಯತನಗಳನ್ನೆಲ್ಲ ಎಲ್ಲಿಗೆ ಕಳಿಸಲಿ?

ಇದು, ಅಮ್ಮನ ಮನೆಯಿಂದ ಗಂಡನ ಗೂಡಿಗೆ ವಲಸೆ ಹೋದ ಸಾವಿರಾರು ಪುಟ್ಟ ಗೃಹಿಣಿಯರ ಬಹುಮುಖ್ಯ ಪ್ರಶ್ನೆ. ಒಂದರ್ಥದಲ್ಲಿ ಎಲ್ಲ ಹೆಣ್ಣು ಮಕ್ಕಳ ಬದುಕಿನಲ್ಲೂ ಹುಟ್ಟಿಕೊಳ್ಳುವ common question. ಏಕೆಂದರೆ, ಮದುವೆಯ ಕಾರಣದಿಂದಾಗಿ ಉಂಟಾಗುವ ವಲಸೆ-ಅದು ಕೇವಲ ಒಂದು ಜೀವದ ವಲಸೆಯಲ್ಲ. ಎರಡು cultureಗಳ ಢಿಕ್ಕಿ. ಎರಡು ದೇಹಗಳ ಘರ್ಷಣೆ ಮಾತ್ರವಲ್ಲ: ಎರಡು ಫಿಲಾಸಫಿಗಳ ಘರ್ಷಣೆ. ಇಬ್ಬರೂ ಹೊಂದಿಕೊಂಡು ಹೋದರೆ, ಅದನ್ನು ಮುಚ್ಚಟೆಯಾಗಿ ‘ಬೆಸುಗೆ’ ಅನ್ನುತ್ತೇವೆ. ಇಬ್ಬರ ನಡುವೆ ವೈರುಧ್ಯಗಳು ಬಂದರೆ ‘ಘರ್ಷಣೆ’ ಅನ್ನುತ್ತೇವೆ. ತಮಾಷೆಯೆಂದರೆ, ಸಂಸಾರವೆಂಬುದು ಎರಡು ಬೆಸುಗೆಗಳ, ಎರಡು ಘರ್ಷಣೆಗಳ ನಡುವೆಯೇ ಅರಳಿ ನಿಲ್ಲುವ ಒಂದು ಮೊತ್ತ. ತೊಡೆಯ ಮೇಲೆ ಕುಳಿತಿರುವುದು ಕೇವಲ ಕೂಸಲ್ಲ. ಅದು ಎರಡು ಅನುನಯಗಳ ಮೊದಲ ಫಲಿತಾಂಶ.

‘ಸುಮ್ನೆ ಹೊಂದ್ಕೊಂಡು ಹೋಗಿಬಿಡಮ್ಮ’ ಎಂಬುದು ಗೊಡ್ಡು ಹಿರಿಯರು ಕೊಡುವ ಸಾತ್ವಿಕ ಸಲಹೆ. ಆದರೆ ಜೀವನ ಪರ್ಯಂತ ‘ಹೊಂದಿಕೊಂಡೇ’ ಹೋಗುವುದಿದೆಯಲ್ಲ? ಅದು ನರಕ. ತನ್ನನ್ನು ತುಂಬಾನೇ ಪ್ರೀತಿಸುವ ಗಂಡ ಸದಾ ಪಕ್ಕದ ಮನೆಯವರೊಂದಿಗೆ, ಅಣ್ಣ ತಮ್ಮಂದಿರೊಂದಿಗೆ, ಬೀದಿಯಲ್ಲಿ ಯಾರೋ ಅಪರಿಚಿತರೊಂದಿಗೆ ಕೆಟ್ಟಾ-ಕೊಳಕ ಮಾತು ಬೈದುಕೊಳ್ಳುತ್ತಾ ಶರಂಪರ ಜಗಳವಾಡುತ್ತಾನೆ ಅಂತಾದರೆ, ಅವನು ನಿಜಕ್ಕೂ cultureless ಅನ್ನಿಸುತ್ತಾನೆ. ಅವನ ತಾಯಿ ಏನೇ ಒಳ್ಳೆಯವರಾದರೂ, ದೊಡ್ಡ ದನಿಯಲ್ಲಿ ಭಯಂಕರ ಒರಟು ಮಾತುಗಳನ್ನು ಆಡಿಕೊಂಡು ತಿರುಗುವ ಹೆಂಗಸರು ಅಂತಾದರೆ, ಆಕೆಗೆ ತೀರ ಹೊಂದಿಕೊಂಡು ಆಕೆಯಲ್ಲೊಬ್ಬ ‘ಅಮ್ಮ’ನನ್ನು ಕಾಣುವುದು ಕಷ್ಟವಾಗುತ್ತದೆ. ದಿನಪತ್ರಿಕೆಯನ್ನೂ ಓದದ ಮಾವನಿಗೂ, ಸದಾ ಪುಸ್ತಕಗಳಲ್ಲೇ ಮುಳುಗಿರುತ್ತಿದ್ದ ಅಪ್ಪನಿಗೂ-ಎಷ್ಟು ಬೇಡವೆಂದರೂ ಮನಸ್ಸು ಹೋಲಿಕೆ ಹುಡುಕಿ ಖಿನ್ನಗೊಳ್ಳುತ್ತದೆ. ಒಟ್ಟಿನಲ್ಲಿ ಅಷ್ಟು ವರ್ಷ ಬೆಳೆದ ಆ ಮನೆಗೂ ಬದುಕಿನ ಇನ್ನಷ್ಟೂ ವರ್ಷ ಕಳೆಯಬೇಕಿರುವ ಈ ಮನೆಗೂ ಇರುವ ವ್ಯತ್ಯಾಸ ಕಂಡುಕೊಂಡು ಹುಡುಗಿ ಗಲಿಬಿಲಿಗೊಳ್ಳುವುದು ಸಹಜ.

ಆದರೆ ಎರಡು ಸಂಸ್ಕೃತಿಗಳ ಸಮಾಗಮ ಪ್ರತಿ ಮದುವೆಯಲ್ಲೂ ಅನಿವಾರ್ಯ. ಹೊಂದಿಕೊಂಡು ಹೋಗಬೇಕಾದುದೂ ಅನಿವಾರ್ಯವೇ. ಆದರೆ ಅದರರ್ಥ, ತನ್ನ ಮೂಲ ವ್ಯಕ್ತಿತ್ವವನ್ನೇ ಕಳೆದುಕೊಂಡು ಗಂಡನ ಮನೆಯವರ ಪೈಶಾಚಿಕತೆ ಮೈಗೂಡಿಸಿಕೊಂಡು ಬಿಡಬೇಕು ಅಂತ ಖಂಡಿತ ಅಲ್ಲ.

ಕೆಲವು ಮೂಲಭೂತ ಸ್ವಭಾವಗಳಿರುತ್ತವೆ; ಅವುಗಳನ್ನು ಖಂಡಿತ ಬದಲಿಸಲಾಗದು. ಗಂಡನ ಮನೆಯಲ್ಲಿ ಹಿರಿಯರಿರುತ್ತಾರೆ. ಅವರ ವರ್ತನೆಗಳನ್ನು ಟೀಕಿಸಲಾಗದು. ಅವರು ಸಹಿಸಿಕೊಳ್ಳುವುದೂ ಇಲ್ಲ; ತೀರ ಪ್ರೀತಿಯಿಂದ ಹೇಳದೆ ಹೋದಲ್ಲಿ ಬದಲಿಸಿಕೊಳ್ಳುವುದೂ ಇಲ್ಲ. ಆದರೆ ಗಂಡ ನಿಧಾನವಾಗಿ ಪಳಗಬಲ್ಲ ಪ್ರಾಣಿ. ಆತನ ego hurt ಮಾಡದೆಯೇ ಆತನನ್ನು ತಿದ್ದುವುದು ಸುಲಭ. ಸ್ವಲ್ಪ ಟೈಮು ಹಿಡಿದೀತು; ಆದರೆ ಪ್ರಯತ್ನ ಹುಸಿ ಹೋಗುವುದಿಲ್ಲ. ಹಾಗಂತ ಅಪ್ಪಿತಪ್ಪಿ ಕೂಡ ಆತನ ಅಸಂಸ್ಕೃತ ವರ್ತನೆಯನ್ನು, ಇನ್‌ಸೆನ್ಸಿಟಿವಿಟಿಯನ್ನು ಹೆಂಡತಿಯಾದವಳು ತನ್ನ ತವರು ಮನೆಯವರಿಗೆ (ಅಣ್ಣ-ಅಪ್ಪಂದಿರಿಗೆ) ಯಾವ ಕಾರಣಕ್ಕೂ ಹೋಲಿಸಿ ಮಾತನಾಡಬಾರದು. ಎಂಥ ಗಂಡಸಾದರೂ ಈ ತೆರನಾದ ಹೋಲಿಕೆಗಳು ಇದಿರಾದಾಗ ಅವನ ego ಬಾತುಕೊಳ್ಳುತ್ತದೆ. ಆಗ ಬೇಕೆಂತಲೇ ಹೆಂಡತಿ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆ. ಆತನನ್ನು ಒಲಿಸಿಕೊಳ್ಳುವ, ದಾರಿಗೆ ತಂದುಕೊಳ್ಳುವ, ಮ್ಯಾನರ್ಸು ಕಲಿಸುವ, ಬದಲಾವಣೆಯತ್ತ ಅವನನ್ನು ಅಣಿಗೊಳಿಸುವ ಜಾಣತನ ಹೆಂಗಸಿನಲ್ಲಿರಬೇಕು. ಜಗಳದಿಂದ ಅದು ಖಂಡಿತ ಸಾಧ್ಯವಿಲ್ಲ.

‘ಸಹವಾಸಕ್ಕೆ ಬಿದ್ದು ಕೆಟ್ಟ’ ಎಂಬ ಮಾತಿರುವಂತೆಯೇ ‘ಸಹವಾಸದಿಂದಾಗಿ ಸರಿ ಹೋದ’ ಎಂಬ ಮಾತೂ ಇದೆ. ನಾವದನ್ನು ಗುರುತಿಸುವುದಿಲ್ಲ; ಅಷ್ಟೆ. ಹುಡುಗಿ ಜಾಣೆಯಾದರೆ ನಿಧಾನವಾಗಿ ಅತ್ತೆಯ ಮನೆಯ ವಾತಾವರಣವನ್ನೇ ತನಗೆ ಬೇಕಾದಂತೆ ಬದಲಿಸಿಕೊಳ್ಳುತ್ತಾಳೆ. ತೀರ ಅದು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ತನ್ನ ಗಂಡ ಮತ್ತು ಮಗುವನ್ನು ಆ ವಾತಾವರಣದಿಂದ ಹೊರತರುತ್ತಾಳೆ. ಹಾಗಂತ ಮನೆ ಮುರಿಯಬೇಕೆಂದಿಲ್ಲ. ‘ಮನ’ ಮುರಿಯುವಂತಹ ಪರಿಸ್ಥಿತಿ ಪದೇಪದೆ ಬಂದಾಗ ‘ಮನೆ’ ಬದಲಿಸುವುದೇ ಹೆಚ್ಚು ಸೂಕ್ತ. ಅದೂ ಸಾಧ್ಯವಾಗದಿದ್ದಾಗ ‘ಮಗು’ವಿನ ವರ್ತನೆ, ಸಂಸ್ಕೃತಿ, ಅದರ ಮನಸ್ತತ್ವ, ಬೆಳವಣಿಗೆ ಮುಂತಾದವುಗಳನ್ನು ತನಗೆ ಬೇಕಾದಂತೆ ಬದಲಿಸಿಕೊಳ್ಳುವ ಪ್ರಯತ್ನ ಆರಂಭಿಸಬೇಕು. ಹಾಗಂತ ಮಗುವಿನ ಬಗ್ಗೆ ತೀರ ಪೊಸೆಸಿವ್ ಆಗಿ, ಅದು ಥೇಟು ತನ್ನಂತೆಯೇ ಆಗಬೇಕೆಂಬ ಹಟಕ್ಕೂ ಬೀಳಬಾರದು. ತುಂಬ subtle ಆಗಿ, ಘರ್ಷಣೆಗೆ ಎಡೆಯೇ ಮಾಡಿಕೊಡದಂತೆ ಮಗುವನ್ನು ತನ್ನ ಜಾಡಿಗೆ ತಂದುಕೊಳ್ಳಬೇಕು. ಗಂಡನ ತಂದೆ ತಾಯಿಗಳೆಡೆಗೆ ಮಗುವಿನಲ್ಲಿ ಅಸೌಖ್ಯದ ಭಾವನೆ ಬೆಳೆಸದೆ, ಅದು ಮಾನಸಿಕವಾಗಿ ತನ್ನನ್ನೇ ಜಾಸ್ತಿ ಪ್ರೀತಿಸುವಂತೆ, ಅನುಕರಿಸುವಂತೆ ಮಾಡಿಕೊಳ್ಳಬೇಕು. ಅದರರ್ಥ, ಮಗುವಿನ ಅಶಿಸ್ತು ಸಹಿಸುವ, ಕೇಳಿದ್ದನ್ನು ಕೊಡಿಸುವ, ಅನಗತ್ಯ ಕನ್ಸೆಷನ್‌ಗಳನ್ನು ತೋರಿಸುವ ಕೆಲಸ ಮಾಡಬಾರದು. ಇಂಥವುಗಳನ್ನು ಅಸಂಸ್ಕೃತ ಅತ್ತೆ ಮಾವಂದಿರು ನಿಮಗಿಂತ ಚೆನ್ನಾಗಿ ಮಾಡಿಬಿಡಬಲ್ಲವರಾಗಿರುತ್ತಾರೆ. ಅದರ ಬದಲಿಗೆ ನೀವೇ ಮಗುವಿನೊಂದಿಗೆ ಅತ್ಯಂತ ಹೆಚ್ಚು ಸಮಯ positive ಆದ ರೀತಿಯಲ್ಲಿ ಕಳೆಯಿರಿ. ಅವನಲ್ಲೊಬ್ಬ ಗೆಳೆಯನನ್ನು ಹುಟ್ಟು ಹಾಕಿರಿ. ಅವನೊಂದಿಗೆ ಆಡುತ್ತಾ, ಅವನಿಗೆ ಕಲಿಸುತ್ತಾ, ಅವನಿಂದ ಕಲಿಯುತ್ತಾ, ಅವನನ್ನು ನಿಮ್ಮಂತೆಯೇ ರೂಪಿಸುತ್ತಾ, ನೀವು ಅವನಂತೆಯೇ ರೂಪುಗೊಳ್ಳುತ್ತಾ ಅವನೊಂದಿಗೆ ಬೆಳೆಯಿರಿ. ಸುತ್ತಲಿನ ವಾತಾವರಣ ಕ್ರಮೇಣ ತಾನೇ ಬದಲಾಗುತ್ತದೆ. ಅದಾಗದಿದ್ದರೂ ಪರವಾಗಿಲ್ಲ; ನೀವು-ನಿಮ್ಮ ಮಗು ನೀವಾಗಿಯೇ ಉಳಿಯುತ್ತೀರಿ. ಅಷ್ಟು ಸಾಕು. ರಾವಣ ರಾಜ್ಯದಲ್ಲಿ ವಿಭೀಷಣ ಹುಟ್ಟಿದ್ದು ಹಾಗೆಯೇ!

ರವೀ