ಹಾಯ್ ಬೆಂಗಳೂರ್

ಜಾತಿ ಗುಣ, ನೆಲದ ಗುಣ, ಹುಟ್ಟು ಗುಣ ಇತ್ಯಾದಿ…

  • ಸೈಡ್‌ವಿಂಗ್:
ಜಾತಿ ಗುಣ, ನೆಲದ ಗುಣ, ಹುಟ್ಟು ಗುಣ ಇತ್ಯಾದಿ…

ಗುಣ…

ಹುಟ್ಟು ಗುಣ ಎನ್ನುತ್ತೇವೆ. ಸುಟ್ಟರು ಹೋಗುವುದಿಲ್ಲ ಅನ್ನುತ್ತೇವೆ. ಆ ಜಾತಿಯೇ ಇಷ್ಟು ಅನ್ನುತ್ತೇವೆ. ಎಲ್ಲವೂ ಅನುಭವ ಜನ್ಯವಾದ ಮಾತುಗಳಾಗಿರಬಹುದು. ಆದರೆ ಯುಗಧರ್ಮ ಕಾಲಕಾಲಕ್ಕೆ ಬದಲಾಗುತ್ತದೆ. “ಹರ್ ಧರ್ಮ್ ಹರ್ ಯುಗ್ ಮೆ ಬದಲ್‌ತಾ ಹೈ. ಕಿಸ್ ಧರ್ಮ್ ಕೋ ತುಮ್ ಅಪನಾವೋಗೆ?” ಎಂಬ ದಾರ್ಶನಿಕ ಸಾಲನ್ನು ಮಹಾನ್ ಉರ್ದು ಲೇಖಕ ಸಾಹಿರ್ ಲುಧಿಯಾನವಿ ಬರೆಯುತ್ತಾನೆ. ಅರ್ಥವಿಷ್ಟೇ, ಯುಗಧರ್ಮ, ಕಾಲಧರ್ಮ ಮತ್ತು ನಿಯಮಗಳು ಬದಲಾಗುತ್ತಲೇ ಇರುತ್ತವೆ. ಜಾತಿ ಮತ್ತು ಧರ್ಮ ಎರಡೂ ಸಾರ್ವಕಾಲಿಕವಲ್ಲ ಮತ್ತು ಶಾಶ್ವತವಲ್ಲ.

ಇಷ್ಟೆಲ್ಲಾ ಹೇಳಿದ ನಂತರವೂ ನಾನು ನನ್ನ ಕೆಲವು ಮಾನದಂಡಗಳ ಮೂಲಕ ಎದುರಿಗೆ ನಿಂತ ವ್ಯಕ್ತಿಯ ಕುರಿತು ಕೆಲವು ಅಭಿಪ್ರಾಯಗಳಿಗೆ ಬರುತ್ತೇನೆ. ಇವು ಕೇವಲ ನನ್ನ ವ್ಯಕ್ತಿಗತ ಅಭಿಪ್ರಾಯಗಳು. ನನ್ನ ಅಳೆಯುವಿಕೆಯ ಮಾನದಂಡಗಳು ಜಾತಿ ಗುಣ, ನೆಲದ ಗುಣ, ವ್ಯಕ್ತಿಯ ಗುಣ ಹಾಗೂ ಆ ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನೂ ಅವಲಂಬಿಸಿರುತ್ತವೆ.

ನಿಮಗೆ ಗೊತ್ತು ನಾನು ಜಾತಿ ನಂಬುವವನಲ್ಲ. ಆದರೆ ಗಮನಿಸಿ ನೋಡಿ. ನೀವು ಒಬ್ಬ ವಕ್ಕಲಿಗನನ್ನು ಅತಿ ಚಿಕ್ಕ ಕಾರಣಕ್ಕಾಗಿ ಜಗಳಕ್ಕೆ ಇಳಿಸಬಹುದು. ಅದರರ್ಥ ವಕ್ಕಲಿಗ ಜಗಳಗಂಟ ಎಂದಲ್ಲ. ಆತನ ಬೇರುಗಳು ನೆಲದಲ್ಲಿವೆ. ನೆಲಕ್ಕೆ, ಜಮೀನಿಗೆ, ಭೂಮಿಗೆ ಅಂಟಿಕೊಂಡ ಮನುಷ್ಯ ಅವುಗಳಿಗಾಗಿ ಜೀವ ಬೇಕಾದರೂ ಕೊಡುತ್ತಾನೆ. ಆದರೆ ನೀವು ಒಬ್ಬ ಮಾರವಾಡಿಯನ್ನೋ, ಶ್ರೇಷ್ಠಿಯನ್ನೋ ಕದನಕ್ಕೆ ಕರೆಯಲಾರಿರಿ. ಈ ಮಾತು ಬಣಜಿಗರಿಗೂ ಅನ್ವಯಿಸುತ್ತದೆ. ಏಕೆಂದರೆ ಅವರು ವ್ಯಾಪಾರಸ್ಥರು. ಅವರಿಗೆ ತಮ್ಮ ವ್ಯಾಪಾರ, ವ್ಯವಹಾರಗಳನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಲು ಇಷ್ಟವಾಗುವುದಿಲ್ಲ. ಬ್ರಾಹ್ಮಣ ತುಂಬಾ ನಿಷ್ಠಾವಂತ ಎಂಬ ತಪ್ಪು ಕಲ್ಪನೆ ನಮಗಿದೆ. ಎಲ್ಲಾ ಜಾತಿಗಳಲ್ಲಿ ಇರುವಂತೆಯೇ ಬ್ರಾಹ್ಮಣರಲ್ಲಿಯೂ ಕಳ್ಳರು, ವಂಚಕರು, ಲಂಚಕೋರರು ಇದ್ದಾರೆ ಮತ್ತು ಇರುತ್ತಾರೆ. ಆದರೆ ದೈಹಿಕವಾಗಿ, ಸಾಮಾಜಿಕವಾಗಿ ಬಲಿಷ್ಠನಲ್ಲದ ಬ್ರಾಹ್ಮಣ ಕದಿಯುವುದಕ್ಕೂ ಒಂದು ಹೆದರಿಕೆ ಇಟ್ಟುಕೊಂಡು ಕದಿಯುತ್ತಾನೆ.

ನಾನು ಬಯಲುಸೀಮೆಯವನು. ನನ್ನ ನೆಲದ ಗುಣ ಸದಾ ನನ್ನೊಂದಿಗೆ ಇದೆ. ಕೊಂಚ ಒರಟು, ಕೊಂಚ ದುಡುಕು, ಕೆಲವೊಮ್ಮೆ ದುರ್ಭಾಷೆ ಇವು ಬಯಲುಸೀಮೆಯ ನೆಲದ ಗುಣಗಳು. ಈ ಮಾತನ್ನು ಮಲೆನಾಡಿನ ಯಾವುದೇ ವ್ಯಕ್ತಿಗೆ ಅನ್ವಯಿಸುವುದು ಸಾಧ್ಯವಿಲ್ಲ. ಕರಾವಳಿ ಮೂಲದ ವ್ಯಕ್ತಿ ಅತ್ಯಂತ ಮೃದು, ಸುಶಿಕ್ಷಿತ ಮತ್ತು ಜಾಣ. ಅದರರ್ಥ ಉಳಿದ ಸೀಮೆಯ ಜನ ಇದ್ಯಾವುದೂ ಅಲ್ಲ ಎನ್ನಲು ಬರುವುದಿಲ್ಲ. ಆದರೆ, ನೆಲದ ಗುಣಗಳು ನಮ್ಮ ವ್ಯಕ್ತಿತ್ವದೊಂದಿಗೇ ಬೆರೆತು ಬಂದಿರುತ್ತವೆ.

ಮುಖ್ಯವಾಗಿ ನಾನು ಹೇಳಬಯಸುವುದು ವ್ಯಕ್ತಿ ಗುಣದ ಬಗ್ಗೆ. ಅದು ಒಂದಷ್ಟು ಅಂಶ ನಮ್ಮ ತಂದೆ ತಾಯಿ, ಅಜ್ಜಿ ತಾತಂದಿರು ಎಲ್ಲರಿಂದಲೂ ನಾವು ಜನ್ಮತಃ ತಂದುಕೊಳ್ಳುವ ಗುಣಗಳಲ್ಲಿ ಒಂದಾಗಿರುತ್ತದೆ. ಆದರೆ ಇವು ನಮ್ಮಲ್ಲಿ ಅನೇಕ ಸಲ ಸುಪ್ತವಾಗಿ, dormant ಆಗಿ ಇರುತ್ತವೆ. ಹೇಗೆ ನಾವು ನಮ್ಮ ಅಣ್ಣ ತಮ್ಮಂದಿರನ್ನ choose ಮಾಡಲು ಸಾಧ್ಯವಿಲ್ಲವೋ ಹಾಗೆಯೇ ವ್ಯಕ್ತಿ ಗುಣಗಳು (gene pool) ಕೂಡ ತಂತಾನೆ ಬದಲಾಗುವುದಿಲ್ಲ. ಆದರೆ ನಾವು ನಮ್ಮ best friendನ್ನು ಆಯ್ಕೆ ಮಾಡಿಕೊಳ್ಳಬಹುದು. ನಮ್ಮ ಗುರುವನ್ನ, ಮೆಚ್ಚಿನ ಲೇಖಕನನ್ನ, ಪತ್ನಿಯನ್ನ ಆಯ್ಕೆ ಮಾಡಿಕೊಳ್ಳಬಹುದು. ಇವು ನಾನು ಮೊದಲು ಹೇಳಿದ ಜಾತಿ ಗುಣ, ನೆಲದ ಗುಣ ಮುಂತಾದವುಗಳೆಲ್ಲವನ್ನೂ ಬದಲಾಯಿಸಿಕೊಳ್ಳಲು ನಮಗೆ ಅವಕಾಶ ನೀಡುತ್ತವೆ. ನನ್ನ ಮನೆಯಿಂದ ಜಾತಿಯನ್ನು ಹೊಡೆದೊಡಿಸಿದ ಕೀರ್ತಿ ನನ್ನ ಅಜ್ಜ ಬೆಳಗೆರೆ ಚಂದ್ರಶೇಖರ ಶಾಸ್ತ್ರಿಗಳದು. ಅಲ್ಲೂ ನನ್ನ ಅಮ್ಮ, ನನ್ನ ಮಾವ, ನನ್ನ ಹೆಂಡತಿ, ನನ್ನ ಮಕ್ಕಳು, ನನ್ನ `ಪತ್ರಿಕೆ’, `ಪ್ರಾರ್ಥನಾ’ ಸ್ಕೂಲ್ ತನಕ ಸಾಂಕ್ರಾಮಿಕವಾಗಿ ಎಂಬಂತೆ ಹರಡಿಕೊಂಡಿದೆ. ಇದು ಕೇವಲ gene pool ಅಲ್ಲ. ಅದು ನಾನು ರೂಢಿಸಿಕೊಂಡ, ವಿಸ್ತರಿಸಿಕೊಂಡ ವ್ಯಕ್ತಿ ಗುಣ. ನನ್ನ ಅಳೆಯುವಿಕೆಯ ಮಾನದಂಡ ಸಂಪೂರ್ಣವಾಗಿ ಬದಲಾಗಲಿಕ್ಕೆ ಇದು ಮುಖ್ಯ ಕಾರಣ.

ನೀವೊಮ್ಮೆ ಈ ದಿಕ್ಕಿನಲ್ಲಿ try ಕೊಟ್ಟು ನೋಡಿದರೆ ನಿಮಗೆ ನಾನು ಋಣಿ.

-ರವೀ

Leave a Reply

Your email address will not be published. Required fields are marked *