ಹಾಯ್ ಬೆಂಗಳೂರ್

ಮೊದಲ ಮಗಳ ಚಿಕಿತ್ಸೆಗೆಂದು ಎರಡನೇ ಮಗಳನ್ನು ಮಾರಿದ ಬಡ ದಂಪತಿ

ಇಂತಹ ಸುದ್ದಿಗಳನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಸಂಕಟವಾಗುತ್ತದೆ. ಹಿರಿಯ ಮಗಳ ಚಿಕಿತ್ಸೆಗೆ ಹಣವಿಲ್ಲ ಅಂತ ಕಿರಿಯ ಮಗಳನ್ನು ಹತ್ತು ಸಾವಿರ ರೂಪಾಯಿಗೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಟ್ಟಿರುವಂತಹ ಘಟನೆ ಆಂಧ್ರಪ್ರದೇಶದ ನೆಲ್ಲೋರ್ ನಲ್ಲಿ ನಡೆದಿದೆ.

ಹಿರಿಯ ಮಗಳು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಳು. ಅವಳಿಗೆ ಚಿಕಿತ್ಸೆ ಕೊಡಿಸಲು ಹತ್ತು ಸಾವಿರ ರೂಪಾಯಿಯ ಅವಶ್ಯಕತೆ ಇತ್ತು. ದಿನಗೂಲಿ ಮಾಡುತ್ತಿದ್ದ ದಂಪತಿಗೆ ಅಷ್ಟು ದುಡ್ಡನ್ನೂ ಹೊಂದಿಸಿಕೊಂಡು ತರಲಿಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಅವರು ಬೇರೆ ದಾರಿ ಕಾಣದೆ ತಮ್ಮ ಹನ್ನೆರಡನೇ ವಯಸ್ಸಿನ ಎರಡನೇ ಮಗಳನ್ನು ಹತ್ತು ಸಾವಿರ ಪಡೆದು ಪಕ್ಕದ ಮನೆಯ ಸುಬ್ಬಯ್ಯ ಎಂಬ ಗಡವನಿಗೆ ಮದುವೆ ಮಾಡಿಕೊಟ್ಟಿದ್ದಾರೆ.

ಕೂಲಿ ಮಾಡುತ್ತಿದ್ದ ದಂಪತಿಗಳು ವಾಸವಿದ್ದ ಮನೆಯ ಪಕ್ಕದಲ್ಲೇ ಸುಬ್ಬಯ್ಯ ಎಂಬಾತ ವಾಸವಿದ್ದ. ಆತನಿಗೆ ಈ ದಂಪತಿಯ ಮಕ್ಕಳ ಮೇಲೆ ಕಣ್ಣಿತ್ತು. ದೊಡ್ಡವಳಿಗೆ ಆರೋಗ್ಯ ಸಮಸ್ಯೆ ಇದ್ದುದರಿಂದ ಕಿರಿಯ ಹುಡುಗಿಯನ್ನು ನನಗೆ ಮದುವೆ ಮಾಡಿಕೊಡಿ ಅಂತ ಕೇಳಿಕೊಂಡಿದ್ದ. ಈ ದಂಪತಿಗಳು ಅದಕ್ಕೆ ಒಪ್ಪಿರಲಿಲ್ಲ. ಯಾವಾಗ ಮೊದಲ ಮಗಳಿಗೆ ಚಿಕಿತ್ಸೆ ಕೊಡಿಸಲೇಬೇಕು ಅಂತ ವೈದ್ಯರು ಹೇಳಿದರೋ ಬೇರೆ ದಾರಿ ಕಾಣದೆ ಅವರು ಈ ಗಡವ ಸುಬ್ಬಯ್ಯನನ್ನು ಸಂಪರ್ಕ ಮಾಡಿದ್ದಾರೆ. ಸಿಕ್ಕಿದ್ದೇ ಛಾನ್ಸು ಅಂತ ಆತ ನಿನ್ನ ಎರಡನೇ ಮಗಳನ್ನು ಮದುವೆ ಮಾಡಿಕೊಡು ಅಂತ ಪಟ್ಟು ಹಾಕಿದ್ದಾನೆ. ಸರಿ ಇನ್ನೇನು ಮಾಡೋದು ಅಂತ ದಂಪತಿಗಳು ಒಪ್ಪಿಕೊಂಡಿದ್ದಾರೆ.

ಮೊದಲು ಈ ದಂಪತಿಗಳು ಇಪ್ಪತ್ತೈದು ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಆತ ಹತ್ತು ಸಾವಿರಕ್ಕೆ ಮಾತುಕತೆ ಮುಗಿಸಿ ಕೈಗೆ ಕಾಸಿಟ್ಟು ಈ ಹುಡುಗಿಯನ್ನು ತನ್ನ ಸ್ವಂತ ಊರಿಗೆ ಕರೆದುಕೊಂಡು ಹೋಗಿದ್ದಾನೆ. ಪಾಪ ಹನ್ನೆರಡು ವರ್ಷ ವಯಸ್ಸಿನ ಹುಡುಗಿಗೆ ಏನು ತಾನೇ ಗೊತ್ತಾಗುತ್ತೆ. ಅಳೋಕೆ ಶುರು ಮಾಡಿದ್ದಾಳೆ. ರಾತ್ರಿ ಆಕೆಯ, ಅಳು ಮತ್ತು ಚೀರಾಟ ಜೋರಾಗಿದೆ. ಅಕ್ಕ ಪಕ್ಕದ ಮನೆಯವರು ಏನಾಯಿತು ಅಂತ ಬಾಗಿಲು ಬಡಿದಿದ್ದಾರೆ. ಆಗ ಅವರಿಗೆ ಸತ್ಯ ಗೊತ್ತಾಗಿದೆ. ಕೂಡಲೇ ಮಕ್ಕಳ ಕಲ್ಯಾಣ ಇಲಾಖೆಗೆ ಮತ್ತು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಸದ್ಯ ಹನ್ನೆರಡು ವರ್ಷದ ಹುಡುಗಿ ಬಚಾವ್ ಆಗಿದ್ದಾಳೆ. ಐನಾತಿ ಸುಬ್ಬಯ್ಯ ಕಂಬಿ ಎಣಿಸುತ್ತಿದ್ದಾನೆ. ಬಡವರು ಅಂದರೆ ಅವರ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳಲು ಕೆಲವರು ಕಾಯುತ್ತಲೇ ಇರುತ್ತಾರೆ ಅನ್ನೋದಕ್ಕೆ ಈ ಐನಾತಿ ಸುಬ್ಬಯ್ಯನೇ ಸಾಕ್ಷಿ.

Leave a Reply

Your email address will not be published. Required fields are marked *