ಹಾಯ್ ಬೆಂಗಳೂರ್

ಒಂದು ರುಪಾಯಿಗೆ ಬೆಳಗಾವಿಯ ಬೀದಿಯಲ್ಲಿ ಬೇಡಿದೆ!

  • ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಒಂದು ರುಪಾಯಿಗೆ ಬೆಳಗಾವಿಯ ಬೀದಿಯಲ್ಲಿ ಬೇಡಿದೆ!

`ಸತ್ಯಕಾಮ’ರ ನೆನಪಿನ ಕಾರ್ಯಕ್ರಮ ಮತ್ತು ಅವರ ಪುಸ್ತಕಗಳ ಅನಾವರಣ. `ನೀವು ಬರಲೇ ಬೇಕು’ – ವೀಣಾ ಬನ್ನಂಜೆಯವರ ಪ್ರೀತಿ ಮತ್ತು ಆಗ್ರಹದ ಮಾತು. ಜೊತೆಗೆ ಅಲ್ಲೊಂದು ಕೆರೆ ನಿರ್ಮಾಣಕ್ಕೆ ಆಕೆ ತುಂಬಾ ಶ್ರಮಪಟ್ಟಿದ್ದಳು. ಅದರ ಲೋಕಾರ್ಪಣೆ ಬೇರೆ… ಹಿಂದೆ ಎರಡು ಬಾರಿ ಅವಳ ಆಹ್ವಾನವನ್ನು ಒಪ್ಪದೇ ಇರುವಾಗ ಈಗ `ಬರ್‍ತೀನಿ’ ಎಂದಿದ್ದೆ. ಕಲ್ಲಹಳ್ಳಿಯ ಶಹಾಪುರ ತೋಟ ಇರುವುದು ಜಮಖಂಡಿಯಿಂದ ಹನ್ನೊಂದು ಕಿ.ಮೀ. ದೂರ. ಮೂಡುಬಿದಿರೆಯಿಂದ ಜಮಖಂಡಿಗೆ ಹೋಗಲು ಒಂದೂವರೆ ದಿನವೇ ಬೇಕು.

ಆ ಕಡೆ ನೋಡಿರಲಿಲ್ಲ. ಹೊರಟುಬಿಟ್ಟೆ. ಹೋಗುವಾಗ ಬೆಳಗಾಂ ಸಿಗುತ್ತೆ ಅಂತ ಗೊತ್ತಾಯ್ತು. ಆ ಊರೂ ನೋಡಿರಲಿಲ್ಲ. ಸಣ್ಣ ಬ್ರೇಕ್ ಪ್ರಯಾಣ ಮಾಡುವ ಎಂಬ ಆಸೆ ಆಯ್ತು. ತಕ್ಷಣ ನೆನಪಾದ್ದು ಡುಂಡಿರಾಜ್. ಅವರಿಗೆ ಅಲ್ಲಿಗೆ ವರ್ಗವಾಗಿತ್ತು. ಸಂಜೆ ಬೆಳಗಾಂನಲ್ಲಿ ಉಳಿದು ಮರುದಿನ ಜಮಖಂಡಿಗೆ ಹೊರಟರಾಯ್ತು ಎಂದು ಕಾರ್ಯಕ್ರಮ ಸಿದ್ಧವಾಯಿತು. ಡುಂಡಿಗೆ ಫೋನು ಮಾಡಿದೆ. ಡುಂಡಿ ಖುಷಿಯಾಗಿ ಬೆಳಗಾಂ ಬಸ್‌ಸ್ಟ್ಯಾಂಡಿನಲ್ಲಿ ಕಾರು ತಗೊಂಡು ಬಂದು ಕಾಯುತ್ತಿದ್ದರು. ಅವರ ಮನೆಗೆ ಕರೆದುಕೊಂಡು ಹೋದರು. ಹೊಸದಾಗಿ ಹಿಡಿದ ಬಾಡಿಗೆಮನೆ. ಮಹಡಿಯಲ್ಲಿ ವಾಸ. ಹೆಂಡತಿಯನ್ನು ಇನ್ನೂ ಕರೆಸಿಕೊಂಡಿರಲಿಲ್ಲ. ಇಡೀ ಅವರ ಮನೆಗೆ ನಾವಿಬ್ಬರೇ. ರಾತ್ರಿ ಊಟ ಮಾಡಿಸಲು ಹೊಟೇಲ್‌ಗೆ ಕರೆದುಕೊಂಡು ಹೋದರು. ಬೆಳಗಾಂನ್ನು ಎರಡು ಸುತ್ತು ಹಾಕಿಸಿದರು ಕಾರಿನಲ್ಲಿ.

ಬೆಳಗ್ಗೆ ಎಚ್ಚರವಾದಾಗ ಡುಂ ಅಡುಗೆಮನೆಯಲ್ಲಿ ಏನೋ ತಟಪಟ ಮಾಡುತ್ತಿದ್ದರು. ನಾನು ಎದ್ದು ನೋಡಿದರೆ “ನೋಡಿ ಇವತ್ತು ನಾನು ಇಲ್ಲೇ ತಿಂಡಿ ಮಾಡುತ್ತೇನೆ. ಉಪ್ಪಿಟ್ಟು ಮತ್ತು ಅವಲಕ್ಕಿ” ಎಂದರು. ನಾನು `ಬೆಳಗಿನ ಬೆಳಗಾಂ’ ನೋಡಿ ಬರುತ್ತೇನೆ ಎಂದು ಲುಂಗಿಯಲ್ಲಿ ಚಪ್ಪಲಿ ಮೆಟ್ಟಿ ವಾಕಿಂಗ್‌ಗೆ ಹೊರಟೆ-ನೋಡುತ್ತಾ, ನೋಡುತ್ತಾ ಎಷ್ಟು ದೂರ ಹೋಗಿದ್ದೆನೋ ಗೊತ್ತಿಲ್ಲ. ಕೊನೆಗೆ ಬಿಸಿಲು ಕಂಡು ಬಹಳ ಹೊತ್ತಾಗಿರಬೇಕು ಎಂದುಕೊಂಡು ವಾಪಾಸು `ಡುಂ’ ಮನೆಗೆ ಹೊರಟೆ.

`ಡುಂ’ ಮನೆ ಎಲ್ಲಿದೆ? ಯಾರಿಗೆ ಗೊತ್ತು? ನೆನಪು ಮಾಡಿಕೊಂಡು ಅಡ್ಡ ತಿರುಗಿ, ಬಲಕ್ಕೆ ತಿರುಗಿ, ಎಡಕ್ಕೆ ತಿರುಗಿ ಎಲ್ಲಿ `ಡುಂ’ ಮನೆ. ನಾಲ್ಕು ನಾಲ್ಕು ಸರ್ತಿ ನೆನಪು ಮಾಡಿಕೊಂಡು ಮತ್ತೆ ಮತ್ತೆ ಹೋದೆ… ಉಹೂಂ ಮನೆ ಸಿಗುತ್ತಿಲ್ಲ. ಈ ಎಕ್ಸ್‌ಟೆನ್‌ಷನ್‌ನಲ್ಲಿ – ಮೊನ್ನೆ ಮೊನ್ನೆ ವರ್ಗವಾಗಿ ಬಂದ `ಡುಂ’ ಯಾರಿಗೆ ಗೊತ್ತು? `ಕೆಟ್ಟೇ’ ಎಂದುಕೊಂಡೆ. ಜೇಬಲ್ಲಿ ಒಂದು ಬಿಡಿಗಾಸು ಇಲ್ಲ. ಲುಂಗಿ ಉಟ್ಟುಕೊಂಡಿದ್ದ ನಾನು ಈಗ ಎಲ್ಲಿಗೆ ಹೋಗೋದು. ಫೋನು ಮಾಡೋಣ ಅಂದ್ರೆ ಫೋನು ನಂಬರ್ ಗೊತ್ತಿಲ್ಲ. ಯಾರಿಗೆ ಫೋನು ಮಾಡೋದು, ಜೇಬಲ್ಲಿ ಒಂದು ರುಪಾಯಿ ಇಲ್ಲ. ಹೇಗೆ ಫೋನು ಮಾಡುವುದು…. ಮೊದಲ ಬಾರಿಗೆ ಕಂಗಾಲಾಗಿಬಿಟ್ಟೆ. ಒಂದು ನಿರ್ಧಾರಕ್ಕೆ ಬಂದೆ. ಬೆಳಗ್ಗೆ ಹತ್ತು ಘಂಟೆಯವರೆಗೆ ಇಲ್ಲೇ ಎಲ್ಲಾದರೂ ಕಟ್ಟೆಯ ಮೇಲೆ ಇಲ್ಲ ಮರದ ಕೆಳಗೆ ಕುಳಿತುಕೊಳ್ಳುವುದು. ನಂತರ ಒಂದು ರಿಕ್ಷಾ ಹಿಡಿದು ಎಲ್ಲಾ ಕಾರ್ಪೋರೇಷನ್ ಬ್ಯಾಂಕ್‌ಗಳಿಗೆ ಹೋಗಿ ಈ `ಡುಂ’ನನ್ನು ಹುಡುಕಿ ಅವನ ಹತ್ತಿರ ಹಣ ಪಡೆದು ರಿಕ್ಷಾ ಬಾಡಿಗೆ ಕೊಡುವುದು… (ರಿಕ್ಷಾದವನು ನನ್ನ ಲುಂಗಿ, ದೊಗಳೆ ಅಂಗಿ ನೋಡಿ ಮುಂಗಡ ಕೇಳಿದರೆ ಎಂಬ ಚಿಂತೆ ಬೇರೆ ಇತ್ತು.)

ಫಕ್ಕನೆ ನೆನಪಾಯ್ತು. ನಾನು `ಡುಂ’ ಮನೆಯಲ್ಲಿ ನನ್ನ ಮೊಬೈಲ್ ಬಿಟ್ಟು ಬಂದಿದ್ದೇನೆ. ಮೊಬೈಲ್ ನಂಬರ್ ನೆನಪಿತ್ತು. ಆದರೆ ಮೊಬೈಲ್‌ಗೆ ಫೋನು ಮಾಡಲು-ಕಾಯಿನ್ ಬಾಕ್ಸ್‌ನಿಂದ ಫೋನ್ ಮಾಡಲೂ-ಒಂದು ರುಪಾಯಿ ಇರಲಿಲ್ಲ! ನೆನಪಾಯ್ತು ವಿಕ್ರಮಾದಿತ್ಯನ ಬೆನ್ನ ಹತ್ತಿದ ಶನಿ ಕಥಾ ಆಧರಿತ ಹಿಂದೆ ನೋಡಿದ್ದ ಸಿನೆಮಾ-ಏನು ಮಾಡುವುದು? ಗತಿಯೇ ಇರಲಿಲ್ಲ. STD ಅಂಗಡಿ ಕಾಣಿಸಿತು. Coin box ಇತ್ತು. `ಒಂದು ರುಪಾಯಿಗೆ ಆತನನ್ನು ಬೆಳಗಾಂ ಪೇಟೆಯಲ್ಲಿ ಬೇಡಬೇಕು ನೀನು’ ಎಂದು ಆ ಸಾಕ್ಷಾತ್ ದೇವರೇ ಬಂದು ಹೇಳಿದ್ದರೂ `ಇದು ಅಸಂಭವ’ ಎಂದು ಕೈ ಚೆಲ್ಲುತ್ತಿದ್ದೆ. ಈಗ ಬೇಡಬೇಕು… ಬೇಡಲೇ ಬೇಕು… ಗತಿಯಿಲ್ಲ… ಒಂದು ರುಪಾಯಿಗೆ…

ಹೋದೆ. STD ಅಂಗಡಿಯವನನ್ನು ನೋಡಿದೆ. ಆತ ದೇವರ ಫೊಟೋಕ್ಕೆ ಊದುಬತ್ತಿ ಹಚ್ಚುತ್ತಿದ್ದ. ಛೇ!… “ಏನಯ್ಯ ಇನ್ನು ಬೋಣಿಗೇನೇ ಆಗಲಿಲ್ಲ. ಅಲ್ಲಯ್ಯ ಏನು ದಾಡಿಯಾಗಿದೆ ನಿನಗೆ ಕೂಲಿ ಮಾಡೋಕೆ ಆಗಲ್ವ… ಇನ್ನು ಇಡೀ ದಿನ ವ್ಯಾಪಾರ ಆದ ಹಾಗೆ. ಥೂ ದರಿದ್ರದವರು….” ಎಂದುಬಿಟ್ಟರೆ ಮೈ ಕಂಪಿಸಿತು, ಕಾಲು ನಡುಗಿತು, ಕೈ ಅದುರಿತು… ವಾಪಾಸು ಬಂದುಬಿಟ್ಟೆ… ಮತ್ತೆ ಮರದಡಿಗೆ ಹೋಗಿ ನಿಂತೆ…. ಏನು ಮಾಡುವುದು…. `ಅನಾಯಾಸೇನ ಮರಣಂ, ವಿನಾದೈನ್ಯೇನ… ಜೀವನಮ್’… ಅಯ್ಯೋ ಯಾಚಿಸಬೇಕಲ್ಲ… ಆದರೆ ಬೇರೆ ಗತಿಯೇ ಇರಲಿಲ್ಲ… ಕೇವಲ ಒಂದು ರುಪಾಯಿಗೆ… ನಾನು. ನನ್ನ ಅಹಂಕಾರವೆಲ್ಲ ಬೂದಿಯಾಗಿತ್ತು.

ಮತ್ತೊಂದು ತರಕಾರಿ ಅಂಗಡಿ ಬಾಗಿಲು ತೆರೆಯಿತು. ಹೊರಗಡೆ coin box ಇತ್ತು. ಮನಸ್ಸು ಅಲ್ಲಾಡಿತು. ಹೋಗಿ ಇದ್ದ ವಿಷಯ ಹೇಳಿ ಬಿಡುವುದು. ಕೊಡುವುದಾದರೆ ಒಂದು ರುಪಾಯಿ ಕೊಡುತ್ತಾನೆ. ಅದು ಅವನು ಒಂದು ರುಪಾಯಿ ಕೊಟ್ಟರೆ ಅದರಲ್ಲಿ ಅವನ coin boxನಲ್ಲೇ ಫೋನು ಮಾಡುವುದರಿಂದ ಅರವತ್ತು ಪೈಸೆ ಅವನಿಗೇ ಬರುತ್ತದೆ. ಇನ್ನು ಕೇವಲ ನಲವತ್ತು ಪೈಸೆ ವ್ಯವಹಾರ. ಹೋದೆ. ಅಂಗಡಿಯವನನ್ನು ನೋಡಿದೆ. ನನ್ನ ಕಣ್ಣಂಚಿನಲ್ಲಿ ನೀರು ತುಂಬಿತ್ತು. “ನಾನು ಮಂಗಳೂರಿನಿಂದ ಬಂದಿದ್ದೀನಿ…” ಎಲ್ಲಾ ಪ್ರವರ, ವಿಷಯ ಹೇಳಿದೆ. “ಕೊನೆಗೆ ಒಂದು ಮೊಬೈಲ್‌ಗೆ ಫೋನು ಮಾಡಬೇಕು. ಹಣ ಇಲ್ಲ. ಒಂದು ರುಪಾಯಿ ಕೊಡ್ತೀರಾ… ವಾಪಾಸು ಕೊಡ್ತೀನಿ. ಅವರ ಮನೆ ಸಿಕ್ಕಿದ ಕೂಡಲೇ ವಾಪಾಸು ಕೊಡ್ತೀನಿ” ಎಂದು ಎರಡೆರಡು ಬಾರಿ ಹೇಳಿದೆ. ಆತ ಏನೂ ಯೋಚನೆ ಮಾಡದೆ `ಅಯ್ಯೋ ಅದಕ್ಕೇನಂತೆ, ಫೋನು ಮಾಡಿ ವಾಪಾಸು ಕೊಡಬೇಕಾಗಿಲ್ಲ’ ಎಂದುಬಿಟ್ಟ.

ನನ್ನ ಮೊಬೈಲ್‌ಗೆ ಫೋನು ಮಾಡಿದರೆ ಯಾರೂ ಎತ್ತುತ್ತಿಲ್ಲ. ಎಲಾ, ಮತ್ತೆ ಮತ್ತೆ ಮಾಡಿದೆ. ಕೊನೆಗೆ `ಡುಂ’ ಯಾರು ಎಂದ. `ನನ್ನ ಕಥೆ ಕೇಳಿ ಅವನಿಗೆ ನಗಬೇಕೋ, ಅಳಬೇಕೋ ಗೊತ್ತಾಗ್ತಿಲ್ಲ’ ಎಂದ… `ನಿನ್ನ ಅಂಗಡಿ ಎದುರುಗಡೇನೇ ನನ್ನ ಮನೆ’ ಎಂದ. ಅಷ್ಟರೊಳಗೆ ನಾನು ಒಂದು ರುಪಾಯಿಗೆ ಕೈಚಾಚಿಯಾಗಿತ್ತು… “ಸಣ್ಣ ಮೊತ್ತವೂ ಬಹಳ ಮುಖ್ಯ, ದುರ್ಬಲ ಮನುಷ್ಯನೂ ನಾಳೆ ಜೀವನದಲ್ಲಿ ಬೇಕಾಗುತ್ತಾನೆ, ಒಂದು ಸಣ್ಣ ಹುಲ್ಲೂ ಸಹಾ ಅನಿವಾರ್ಯ. ಯಾವುದನ್ನೂ ಕಡೆಗಣಿಸಬೇಡ” ಎಂದು ನನ್ನ ಅಪ್ಪ ಯಾವಾಗಲೂ ಹೇಳುತ್ತಿದ್ದ ಮಾತು ನೆನಪಾಯಿತು…

ಕೊನೆಗೆ ಬರುವಾಗ ಆ ಅಂಗಡಿಯವನಿಗೆ ಒಂದು ರುಪಾಯಿ ಕೊಟ್ಟೇ ಬಂದೆ. ಆ ಮಾತು ಬೇರೆ…

-ಡಾ. ಜಯಪ್ರಕಾಶ್‌ ಮಾವಿನಕುಳಿ, ಕಾರ್ಕಳ

Leave a Reply

Your email address will not be published. Required fields are marked *