ಒಂದಷ್ಟು ಪುಸ್ತಕ ಹೊತ್ತು ನಿಮ್ಮಲ್ಲಿಗೆ ಬರಲಿದ್ದೇನೆ

in ಅಫಿಡೆವಿಟ್ಟು
  • ಸಾಫ್ಟ್ ಕಾರ್ನರ್

ಒಂದಷ್ಟು ಪುಸ್ತಕ ಹೊತ್ತು ನಿಮ್ಮಲ್ಲಿಗೆ ಬರಲಿದ್ದೇನೆ

ಇದು ಬೆಪ್ಪಾ? ಹುಚ್ಚಾ? ಶಿವಲೀಲೆಯಾ? ನೀವೇ ನಿರ್ಧರಿಸಿ. ಎಂದಿನಂತೆ ನಾನು ಒಂದೇ ಸಲಕ್ಕೆ ಒಂದಷ್ಟು ಪುಸ್ತಕಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ. ಕಡೆಗೂ `ಗೌರಿ ಹತ್ಯೆ’ಯ ಪುಸ್ತಕ ಮುಗಿಯುತ್ತಾ ಬಂದಿದೆ. ಊರಿಗೆ ಬಂದ ಗೌರಿ ನೀರಿಗೆ ಬಾರದಿರುತ್ತಾಳೆಯೇ? ಇದರೊಂದಿಗೆ ಎಂದೋ ನಿಮ್ಮ ಕೈಯಲ್ಲಿರಬೇಕಾಗಿದ್ದ ಪುಸ್ತಕ `ರೇಖಾ-ಅಮಿತಾಬ್’ ಕೂಡ ಈಗ ಸಿದ್ಧವಾಗಿದೆ. ಈ ಹಿಂದೆಯೇ ನೀವು ನನ್ನ `ಉಡುಗೊರೆ’ ಪುಸ್ತಕವನ್ನು ಓದಿದ್ದೀರಿ. ಅದರ ಪ್ರತಿಗಳು ನನ್ನ ನಿರೀಕ್ಷೆ ಮೀರಿ ಮಾರಾಟವಾದವು. ಈಗ ಅದೇ ಧಾಟಿಯ, ಆದರೆ ಅದಕ್ಕಿಂತ ತುಂಬ ಭಿನ್ನವಾದ ಪುಸ್ತಕ `ದಿ ಗಿಫ್ಟ್’ ಸಿದ್ಧವಾಗುತ್ತಿದೆ. ಇದನ್ನು ನೀವು ನಿಮ್ಮ ಗೆಳೆಯನಿಗೆ, ಗೆಳತಿಗೆ, ಮಕ್ಕಳಿಗೆ, ತಮ್ಮ-ತಂಗಿಯರಿಗೆ, ವೃದ್ಧ ತಂದೆಗೆ-ತಾಯಿಗೆ, ಹಸೆಮಣೆಯ ಮೇಲೆ ಕುಳಿತ ವಧು-ವರರಿಗೆ, ನಿಮ್ಮ ಮೇಷ್ಟ್ರಿಗೆ, ನಿಮ್ಮ ಪತ್ನಿಗೆ, ನಿಮ್ಮ ಪತಿ ದೇವರಿಗೆ-ಹೀಗೆ ಯಾರಿಗೆ ಬೇಕಾದರೂ ಗಿಫ್ಟ್ ಆಗಿ ನೀಡಬಹುದು. ಇದರ ಬೆಲೆಯೂ ಕೂಡ ಅಂಥ ದುಬಾರಿಯದಲ್ಲ. ಇನ್ನು ಕಾಲಾನುಕಾಲದಿಂದ ಅನೇಕ ಹುಡುಗಿಯರ ಮತ್ತು ಹುಡುಗರ ತಲೆ ಕೆಡಿಸಿದ ನನ್ನ ನಾಲ್ಕು `ಲವ್‌ಲವಿಕೆ’ ಪುಸ್ತಕಗಳ ಪೈಕಿ ಅತ್ಯುತ್ತಮವಾದ ಮತ್ತು ರುಚಿಕಟ್ಟಾದ `ಲವ್‌ಲವಿಕೆ’ಗಳನ್ನು ಆಯ್ದು ಒಂದೇ ಪ್ರೇಮ ಗ್ರಂಥವನ್ನಾಗಿ ಮಾಡಿ ಪ್ರೀತಿಸುವ ಸಮಸ್ತ ಹೃದಯಗಳಿಗೆ ಕೊಡಮಾಡುತ್ತಿದ್ದೇನೆ. ಇದರೊಂದಿಗೆ ಒಂದು ಕ್ರೈಂ ಥ್ರಿಲ್ಲರ್ : `ಸುಂದರಿ ನನ್ನನ್ನು ಕೊಲ್ಲಬೇಡ’ ಕೂಡ ಬಿಡುಗಡೆಯಾಗಲಿದೆ. ಇದು ನಾನು ಇತ್ತೀಚಿನ ದಿನಗಳಲ್ಲಿ ಬರೆದ ನಿಜವಾದ ಥ್ರಿಲ್ಲರ್. ಯಾವತ್ತಿದ್ದರೂ ನನ್ನ ಮನಸು ವಾಲುವುದು ಪ್ರೇಮದ ಕಡೆಗೆ ಎಂಬ ವಿಷಯ ಗೊತ್ತು. ನನ್ನ ಪ್ರೀತಿಯ ಕವಯಿತ್ರಿ ಅಮೃತಾ ಪ್ರೀತಮ್ ಹಾಗೂ ಆಕೆಯೊಂದಿಗೆ ಬದುಕು ಹಂಚಿಕೊಂಡ ಇಮ್ರೋಜ್ ನಡುವಿನ ಸಂಬಂಧವನ್ನು ತುಂಬ ಆರ್ಟಿಸ್ಟಿಕ್ ಆಗಿ ನಾನು ಕಟ್ಟಿಕೊಟ್ಟಿರುವುದು `ಅಮೃತಾ ಇಮ್ರೋಜ್ ಒಂದು ಪ್ರೇಮ್ ಕಹಾನಿ’ ಎಂಬ ಒಂದು ಪುಟ್ಟ ಪುಸ್ತಿಕೆಯಲ್ಲಿ. ಇವೆಲ್ಲ ಪುಸ್ತಕಗಳು ನಿಮಗೆ ಇಷ್ಟವಾಗಬಹುದು, ಇಷ್ಟವಾಗದೇ ಇರಬಹುದು. ಆದರೆ ನನ್ನ ಕಥೆಗಳಿವೆಯಲ್ಲ ಅವು sure shot! ನನ್ನ ಈವರೆಗಿನ ಕಥೆಗಳ ಜೊತೆ ಒಂದೆರಡು ಹೊಸ ಕತೆಗಳನ್ನು ಸೇರಿಸಿ ಒಂದು ಪುಸ್ತಕ ಮಾಡಿದ್ದೇನೆ. ಹೆಸರು `ನಗ್ನ ರಾತ್ರಿ’ ಮತ್ತು ಇತರ ಕತೆಗಳು.

ಸದ್ಯಕ್ಕೆ ಇವಿಷ್ಟನ್ನೂ ಬಿಡುಗಡೆ ಮಾಡಲಿದ್ದೇನೆ. ಮಾರ್ಚ್ ಹದಿನೈದು ನನ್ನ ಜನ್ಮದಿನ. ಅವತ್ತೇ ಇವುಗಳನ್ನು ಬಿಡುಗಡೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕೊಂಚ ಅತ್ತಿತ್ತ ಆದರೂ ಪುಸ್ತಕಗಳು ನಿಮ್ಮ ಕೈ ತಲುಪುವುದು ನಿಶ್ಚಿತ. ಪ್ರೀತಿ ಇರಲಿ.

-ಬೆಳಗೆರೆ

Leave a Reply

Your email address will not be published.

*

Latest from ಅಫಿಡೆವಿಟ್ಟು

Go to Top