ಹಾಯ್ ಬೆಂಗಳೂರ್

ನೂರು ಮುಖ ಸಾವಿರ ದನಿ: ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್

ಕನ್ನಡ  ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬ

ಚಿತ್ರಬ್ರಹ್ಮ ಮಹಾತ್ಮ ಪಿಕ್ಚರ್ಸ್‌ನ ಡಿ.ಶಂಕರ್ ಸಿಂಗ್

  • ಭಾಗ-೫

ಗುಬ್ಬಿ ವೀರಣ್ಣ, ಸುಬ್ಬಯ್ಯನಾಯ್ಡು, ಆರ್.ನಾಗೇಂದ್ರ ರಾವ್ ಮುಂತಾದ ಬೆರಳೆಣಿಕೆಯಷ್ಟು ಕುಟುಂಬಗಳು ಕನ್ನಡ ಚಿತ್ರರಂಗದ ಆಧಾರ ಸ್ಥಂಭಗಳಷ್ಟೇ ಅಲ್ಲ ಬಿಳಲು ಬಿಟ್ಟ ದೊಡ್ಡ ಆಲದಮರಗಳೂ ಹೌದು. ಅಂದರೆ ಈ ಮೂಲ ವ್ಯಕ್ತಿಯೇ ಒಂದು ಶಕ್ತಿಯುತ, ಫಲದಾಯಕ ಆಲದಮರವಿದ್ದಂತೆ. ಚಿತ್ರರಂಗದಲ್ಲಿ ಮುಂದುವರೆದ ಅವರ ಮಕ್ಕಳು, ಮೊಮ್ಮಕ್ಕಳು ಅದರ ಬಿಳಲುಗಳು ಅಂತ ಹೇಳಬಹುದು. ಡಿ.ಶಂಕರ್‌ಸಿಂಗ್ ಅವರದು ಸಹ ಆ ಸಾಲಿಗೆ ಸೇರುವ ಆಲದಮರದಂತಹ ಕುಟುಂಬ.

ಏಕೆಂದರೆ ನಿರ್ಮಾಪಕ, ನಿರ್ದೇಶಕ ಡಿ.ಶಂಕರ್ ಸಿಂಗ್ ಅವರ ಕುಟುಂಬದ ಎರಡನೇ ಪತ್ನಿಯಾಗಿ ಸೇರ್ಪಡೆಯಾದವರು ಅಭಿನೇತ್ರಿ ಚೆಲುವೆ ಪ್ರತಿಮಾದೇವಿ ಅವರು. ಅವರ ಮಕ್ಕಳು ರಾಜೇಂದ್ರಸಿಂಗ್ ಬಾಬು, ಸಂಗ್ರಾಮ್ ಸಿಂಗ್, ವಿಜಯಲಕ್ಷ್ಮಿಸಿಂಗ್, ಆಕೆಯ ಪತಿ ಜೈಜಗದೀಶ್, ಬಾಬು ಅವರ ಪುತ್ರ ದುಷ್ಯಂತ್‌ಸಿಂಗ್ (ಆದಿತ್ಯ), ಪುತ್ರಿ ರಿಷಿಕಾ ಹಾಗೂ ವಿಜಯಲಕ್ಷ್ಮಿ ಸಿಂಗ್ ಅವರ ಮೂವರು ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ ಸೇರಿದಂತೆ ಎಲ್ಲರೂ ಕನ್ನಡ ಚಿತ್ರರಂಗದಲ್ಲಿ ನಟ-ನಟಿಯರಾಗಿ , ನಿರ್ದೇಶಕ-ನಿರ್ಮಾಪಕರಾಗಿ ಒಂದಲ್ಲ ಒಂದು ರೀತಿ ತೊಡಗಿಸಿಕೊಂಡವರೇ! ಆದ್ದರಿಂದ ಡಿ.ಶಂಕರ್‌ಸಿಂಗ್ ಅವರ ಚಿತ್ರ(ರಂಗ) ಕುಟುಂಬ, ನಮ್ಮ ಚಿತ್ರರಂಗದ ಆಲದಮರಗಳಲ್ಲೊಂದು ಅಂತ ಹೇಳಿದ್ದೇನೆ..

ದಕ್ಷಿಣ ಕನ್ನಡದ ಉಡುಪಿ ಮೂಲದ ಶ್ರೀಮತಿ ಪ್ರತಿಮಾದೇವಿ ಅವರ ಜನ್ಮ ದಿನಾಂಕ: ೯-೪-೧೯೩೨. ಈಗ ಅವರ ವಯಸ್ಸು ಎಂಬತ್ತೆಂಟು. ಈ ವಯಸ್ಸಿನಲ್ಲೂ ಇಂದಿಗೂ ಅವರು ಪ್ರತಿದಿನ `ವಾಕ್’ ಮಾಡುತ್ತಾರೆ. ಈ ಇಳಿವಯಸ್ಸಿನಲ್ಲೂ ಸಹ ಸದಾ ಚಟುವಟಿಕೆಯಿಂದ ಇರುವ ಉತ್ಸಾಹದ ಚಿಲುಮೆಯೇ ಆಗಿದ್ದಾರೆ. ಅರಸೀಕೆರೆಯಿಂದ ಮೈಸೂರಿಗೆ ಬಂದು ಚಿತ್ರರಂಗದಲ್ಲಿ ಧುಮುಕಿ ಅದರಲ್ಲೇ ಯಶಸ್ಸು ಕಂಡ ಡಿ.ಶಂಕರ್‌ಸಿಂಗ್ ಅವರು ಮೈಸೂರನ್ನೇ ತಮ್ಮ ಖಾಯಂ ವಾಸ್ತವ್ಯವನ್ನಾಗಿ ಮಾಡಿಕೊಂಡರು. ಚಿತ್ರರಂಗಕ್ಕೆ ಉಡುಪಿಯಿಂದ ಮೈಸೂರಿಗೆ ಬಂದ ಶ್ರೀಮತಿ ಪ್ರತಿಮಾದೇವಿ ಅವರು ಶಂಕರ್‌ಸಿಂಗ್ ಅವರ ಚಿತ್ರಗಳಲ್ಲಿ ಅಭಿನಯಿಸುತ್ತಲೇ ಅವರ ಮಡದಿಯೂ ಆಗಿ ಹೋದರು. ಪರಿಣಾಮ ಪತಿ ಶಂಕರ್ ಅವರೊಂದಿಗೆ ಚಿತ್ರರಂಗದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಲ್ಲದೆ ಅವರ ಜೊತೆಯಲ್ಲಿ ಅದೇ ಮೈಸೂರಿನಲ್ಲಿ ಸಂಸಾರ ಮಾಡಿದರು. ಶಂಕರ್‌ಸಿಂಗ್ ಅವರು ಇರುವವರೆಗೆ ಅವರ ಚಿತ್ರ ನಿರ್ಮಾಣದ ಕೇಂದ್ರ ಮೈಸೂರೇ ಆಗಿತ್ತೆಂಬುದನ್ನು ಈಗಾಗಲೇ ಹೇಳಿದ್ದೇನೆ.

ಕನ್ನಡ ಭಾಷೆ ಮತ್ತು ಕರ್ನಾಟಕ ಅದರಲ್ಲೂ ಮೈಸೂರಿನ ಬಗ್ಗೆ ಅವರಿಗೆ ಇದ್ದ ಅಭಿಮಾನ ಅವರನ್ನು ಚಿತ್ರರಂಗದ ಅತ್ಯಗತ್ಯದ ಅನಿವಾರ್ಯಗಳಲ್ಲೂ ಅವರು ಮೈಸೂರು ಕೇಂದ್ರವನ್ನು ಬದಲಿಸಿ ಚಿತ್ರ ನಿರ್ಮಾಣದಲ್ಲಿ ಆಗ ಉತ್ತುಂಗದಲ್ಲಿದ್ದ ಮದರಾಸಿಗೆ ಯಾವುದೇ ಕಾರಣಕ್ಕೂ ವಲಸೆ ಹೋಗಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಎರಡೇ ಎರಡು ಉದಾಹರಣೆಗಳನ್ನು ನಾನು ಕೊಡುತ್ತೇನೆ. ತಮಿಳುನಾಡಿನ `ಮಕ್ಕಳ ತಿಲಕಂ’ ಎಂ.ಜಿ.ರಾಮಚಂದ್ರನ್ ಅವರು ತಮಿಳು ಚಿತ್ರರಂಗದ ಮೂವರು ಅಧಿ ನಾಯಕರಲ್ಲಿ (ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್) ಒಬ್ಬರು. ದುಷ್ಟ ಶಿಕ್ಷಣ-ಶಿಷ್ಟ ರಕ್ಷಣದ ಸಿದ್ಧ ಸೂತ್ರದ ಹಾಗೂ ಅತಿ ಹೆಚ್ಚು ಹೊಡೆದಾಟದ ದೃಶ್ಯಗಳಿರುವ ಅವರ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸದಾ ಗೆಲ್ಲುತ್ತಿದ್ದವು. ಅವರ ಕಾಲ್‌ಶೀಟ್‌ಗಾಗಿ ಅನೇಕ ನಿರ್ಮಾಪಕರು ಅವರ ಮನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಅಂತಹ ಮಹಾನ್ ನಟ ತಮಿಳುನಾಡಿನ ಆರಾಧ್ಯ ದೈವವೇ ಆಗಿದ್ದ ಎಂ.ಜಿ.ರಾಮಚಂದ್ರನ್ ಅವರು ನಮ್ಮ ಡಿ.ಶಂಕರ್‌ಸಿಂಗ್ ಅವರಿಗೆ `ಕಾಲ್‌ಶೀಟ್ ಕೊಡುತ್ತೇನೆ ತಮಿಳಿನಲ್ಲಿ ಒಂದು ಚಿತ್ರ ಮಾಡಿ’ ಅಂದರಂತೆ. ಯಾಕೆ ಗೊತ್ತೇ? ಅಷ್ಟರಲ್ಲಿ ಅವರು ಕನ್ನಡ ಚಿತ್ರರಂಗದ ಈ ಶಂಕರ್‌ಸಿಂಗ್ ಅವರ ಪತ್ರಿಭೆ ಹಾಗೂ ಸಾಧನೆಗಳ ಬಗ್ಗೆ ತಿಳಿದುಕೊಂಡಿದ್ದರು. ರುಚಿಕಟ್ಟಾದ ಅಡುಗೆಯಲ್ಲಿ  ಸಿದ್ಧಹಸ್ತರಾಗಿದ್ದ ಪ್ರತಿಮಾದೇವಿ ಅವರ ಕೈಯಡುಗೆಯ ರುಚಿಯನ್ನು ಸಿಂಗ್ ಅವರ ಮನೆಯಲ್ಲೇ ಅವರು ಸವಿದಿದ್ದರು. ಆಗ ಚತುರ್ಭಾಷಾ ತಾರೆಯೊಬ್ಬರು ಸಹ ಜೊತೆಗಿದ್ದರು.

ಎಂ.ಜಿ.ಆರ್. ಅವರು ಊಟದ ನಂತರ ಸಿಂಗ್ ಅವರಿಗೆ ತಮಿಳು ಚಿತ್ರಕ್ಕಾಗಿ ಕಾಲ್‌ಶೀಟ್ ಕೊಡುತ್ತೇನೆ ಅಂತ ಹೇಳಿದಾಗ ಬೇರೆ ಯಾವುದೇ ನಿರ್ಮಾಪಕ, ನಿರ್ದೇಶಕರಾಗಿದ್ದರೆ ತಕ್ಷಣ ಈ ಸುವರ್ಣವಕಾಶವನ್ನು ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ಅಪ್ಪಟ ಕನ್ನಡಾಭಿಮಾನಿ ಶಂಕರ್‌ಸಿಂಗ್ ಅವರು ಅಂತಹ ಸುವರ್ಣಾವಕಾಶವನ್ನು ನಯವಾಗಿ ನಿರಾಕರಿಸಿದರು. ಇದಕ್ಕೆ ಕಾರಣ ಅವರ ಕನ್ನಡಾಭಿಮಾನ ಹಾಗೂ ಕರ್ನಾಟಕದ (ಮೈಸೂರಿನ) ಮೇಲಿನ ಪ್ರೀತಿ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿದರ್ಶನ/ಘಟನೆ ಯಾವುದು ಗೊತ್ತೇ? ಮಹಾತ್ಮಾ ಪಿಕ್ಚರ್ಸ್ ಜಂಟಿ ಪಾಲುದಾರಿಕೆಯಿಂದ ಹೊರ ಬರುವ ಮುನ್ನ ಬಿ.ವಿಠಲಾಚಾರ್ಯ ಅವರು ಶಂಕರ್ ಸಿಂಗ್ ಅವರಿಗೆ ಹೀಗೆ ಹೇಳಿದ್ದರು. `ಕನ್ನಡ ಚಿತ್ರಗಳನ್ನು ಕನ್ನಡಿಗರೇ ನೋಡಲ್ಲ. ಅವುಗಳ ನಿರ್ಮಾಣದಿಂದ ಪ್ರಯೋಜನವೇ ಇಲ್ಲ. ನಾವು ಮದರಾಸಿಗೆ ಹೋಗಿ ಅಲ್ಲಿ ಚಿತ್ರ ನಿರ್ಮಾಣ ಮುಂದುವರೆಸೋಣ’ ಅಂದರು. ಯಥಾಪ್ರಕಾರ ಶಂಕರ್‌ಸಿಂಗ್ ಅವರು ಅದಕ್ಕೆ ಒಪ್ಪಲಿಲ್ಲ. ಆ ಕಾರಣಕ್ಕಾಗಿಯೇ ಬಿ.ವಿಠಲಾಚಾರ್ಯ (ಮಹಾತ್ಮಾ) ಪಾಲುದಾರಿಕೆಯಿಂದ ಹೊರಬಂದು ಮದರಾಸಿಗೆ ಹೋಗಿ ನಂತರ ತೆಲುಗು ಚಿತ್ರರಂಗದಲ್ಲಿ ನೆಲೆಯೂರಿದ್ದು.

ಡಿ.ಶಂಕರ್ ಸಿಂಗ್ ಮತ್ತು ಬಿ.ವಿಠಲಾಚಾರ್ಯ ಜೋಡಿಯ ಮಹಾತ್ಮಾ ಪಿಕ್ಚರ್ಸ್ ಅವರ ಪ್ರಥಮ ನಿರ್ಮಾಣದ ಚೊಚ್ಚಲ ಚಿತ್ರ `ಶ್ರೀಕೃಷ್ಣಲೀಲಾ’ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರತಿಮಾದೇವಿ ಅವರು ಒಂದು ದಶಕಕ್ಕೂ ಮೀರಿ ನಾಯಕಿಯಾಗೇ ಉಳಿದರು. ನಂತರದ ಒಂದು ದಶಕ ಸಹ ನಾಯಕಿಗಿಂತ ಕಡಿಮೆಯೇನಲ್ಲದ ಮಹತ್ವದ ಪಾತ್ರಗಳಲ್ಲಿ ಅಭಿನಯಿಸುತ್ತಾ ಬಂದರು. ಕನ್ನಡ ಚಲನಚಿತ್ರಗಳು ಅತ್ಯಂತ ಕಡಿಮೆ ಸಂಖ್ಯೆಗಳಲ್ಲಿ ತಯಾರಾಗುತ್ತಿದ್ದ ಕಾಲದಲ್ಲಿ ಹೆಚ್ಚು ಚಿತ್ರಗಳನ್ನು ನಿರ್ಮಿಸಿದವರು ಶಂಕರ್‌ಸಿಂಗ್. ಅದೇ ರೀತಿ ಮಹಾತ್ಮಾ ಪಿಕ್ಚರ್ಸ್‌ನ ಹೆಚ್ಚು ಕಡಿಮೆ ಎಲ್ಲಾ ಚಿತ್ರಗಳಲ್ಲೂ ಅಭಿನಯಿಸಿದವರು ಕೂಡ ಪ್ರತಿಮಾದೇವಿಯವರೇ. ಅಂದಾಜು ಮೂರು ದಶಕಗಳ ಅವಧಿಯ ಚಿತ್ರರಂಗದಲ್ಲಿ ಅವರು ಅಭಿನಯ ವೃತ್ತಿ, ಪ್ರವೃತ್ತಿ ಸೇರಿದಂತೆ ಪತಿ ಶಂಕರ್‌ಸಿಂಗ್ ಅವರ ಚಿತ್ರ ನಿರ್ಮಾಣ ಸೇರಿದಂತೆ ಅಡಿಗೆಯಿಂದ ಹಿಡಿದು ಎಲ್ಲಾ ರೀತಿಯ ಸಹಕಾರ ನೀಡುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದವರು ಪ್ರತಿಮಾದೇವಿ. ಚಿತ್ರರಂಗದಲ್ಲೇ ವೃತ್ತಿ ಮತ್ತು ಸಂಸಾರವನ್ನು ಸರಿದೂಗಿಸಿಕೊಂಡು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಸಹ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ನೀಡಿದಾಕೆ ಅವರು.

ವಿಜಯಲಕ್ಷ್ಮಿಸಿಂಗ್ & ಮಕ್ಕಳು

ಎಷ್ಟೇ ಸಾಧನೆ, ಹೆಸರು, ಹಣ, ಸ್ಥಾನಮಾನ ಗಳಿಸಿದರೂ ಸಹ ಎಂದೂ ಅವರು ಅಹಂ ಪಟ್ಟವರಲ್ಲ. ಸದಾ ನಗುಮುಖದ ಅವರು ಅತ್ಯಂತ ಸರಳ ವ್ಯಕ್ತಿ. ಶಂಕರ್‌ಸಿಂಗ್ ಅವರಾದರೂ ಅಷ್ಟೇ ಅವರು ಕಡು ಸ್ವಾಭಿಮಾನಿ ಹಾಗೂ ಅಪ್ಪಟ ಕನ್ನಡಾಭಿಮಾನಿಯಾಗಿದ್ದರೇ ಹೊರತು ಆ ಕಾಲದಲ್ಲಿ ಅವರು ಎಷ್ಟೇ ಸಾಧನೆ ಮಾಡಿದ್ದರೂ ಅದಕ್ಕಾಗಿ ಅವರೆಂದೂ ಸೊಕ್ಕು, ಅಹಂಕಾರ ಮಾಡಿದವರಲ್ಲ. ತನಗೆ ದುಡಿಮೆಗೆ ದಾರಿ, ಬದುಕಿಗೆ ಮಾರ್ಗ ಹಾಕಿಕೊಟ್ಟ ಮೈಸೂರಿನಲ್ಲಿ ನೆಲೆನಿಂತ ಪ್ರತಿಮಾದೇವಿ ಅವರು ಪತಿ ಶಂಕರ್‌ಸಿಂಗ್ ತೀರಿದ ನಂತರವಾಗಲೀ, ಅದರಲ್ಲೂ ಮಗ, ಮಗಳು, ಮೊಮ್ಮಕ್ಕಳು ಬೆಂಗಳೂರಿಗೆ ವಾಸ್ತವ್ಯ ಬದಲಿಸಿದಾಗಲಾಗಲೀ ತನ್ನ ಪತಿಯ ಕರ್ಮಭೂಮಿಯಾಗಿದ್ದ ಮೈಸೂರನ್ನು, ಅವರು ಕಟ್ಟಿಸಿದ್ದ ಮನೆಯನ್ನೂ ತೊರೆದು ಬೆಂಗಳೂರಿಗೆ ಬರಲೇ ಇಲ್ಲ. ಇಂದಿಗೂ ಬಂದಿಲ್ಲ. ಮೈಸೂರಿನಲ್ಲಿ ತಮ್ಮದೇ ಆದ ಮನೆಯಲ್ಲಿ ಒಬ್ಬಂಟಿಯಾಗಿ ಇದ್ದು ಪತಿಯ ಸ್ಮರಣೆಯಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ಬೇಕು ಅನಿಸಿದಾಗ ಅಥವಾ ಮಕ್ಕಳು, ಮೊಮ್ಮಕ್ಕಳು ಅಕ್ಕರೆಯ ಒತ್ತಾಯದ ಕರೆಗೆ ಓಗೊಟ್ಟು ಬೆಂಗಳೂರಿಗೆ ಬಂದು ನಾಲ್ಕಾರು ದಿನ ಇದ್ದು ಹೋಗುತ್ತಾರೆ.

೨೦೧೪ರಲ್ಲಿ ನಮ್ಮ `ರಂಗಚೇತನ’ ಸಂಸ್ಥೆಯಿಂದ ಕೊಡ ಮಾಡುವ ವಾರ್ಷಿಕ ಚಿತ್ರರತ್ನ ಪ್ರಶಸ್ತಿಗೆ ಶ್ರೀಮತಿ ಪ್ರತಿಮಾದೇವಿಯವರನ್ನು ಆರಿಸಿದ್ದು ನಮ್ಮ ಸಂಸ್ಥೆಯ ಸೌಭಾಗ್ಯ. ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಡಿ.ಕೆ.ಚೌಟ, ಡಾ.ಸಿ.ಎನ್.ಮಂಜುನಾಥ್ ಮತ್ತು ನ್ಯಾ|| ಶಿವರಾಜ ಪಾಟೀಲ್, ಶ್ರೀ ನಂಜುಂಡಸ್ವಾಮಿ ತೊಟ್ಟವಾಡಿ ಹಾಗೂ ನಾನೂ ಸಹ ಇದ್ದ ತಂಡ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿತು. ಕನ್ನಡ ಚಿತ್ರರಂಗದ ಶೈಶವಾವಸ್ಥೆಯ ಕಾಲದಿಂದ ಮೂರೂವರೆ ದಶಕಗಳ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಇಂದಿಗೂ ಇರುವ ಈ ಮಹಾನ್ ಚಿತ್ರ ಚೇತನಕ್ಕೆ ನಾವು ನೀಡಿದ ಪ್ರಶಸ್ತಿಯಿಂದ ಆ ಪ್ರಶಸ್ತಿಗೆ ಹಿರಿಮೆ ದಕ್ಕಿದಂತಾಗಿದೆ ಅಂತ ಹೇಳಬಹುದು. ಬೆಂಗಳೂರಿನ ಕಲಾಗ್ರಾಮದ ಪ್ರಪ್ರಥಮ ಸಾಂಸ್ಕೃತಿಕ ಸಮಾರಂಭದಲ್ಲಿ ಇವರಿಗೆ ಚಿತ್ರರಂಗದ ಪ್ರಶಸ್ತಿಯನ್ನು ನೀಡಿದವರು ನಮ್ಮೆಲ್ಲರ ನೆಚ್ಚಿನ ನ್ಯಾಯಮೂರ್ತಿ ಶಿವರಾಜ ಪಾಟೀಲರು.

ರಾಜೇಂದ್ರ ಸಿಂಗ್ ಬಾಬು, ವಿಜಯಲಕ್ಷ್ಮಿಸಿಂಗ್ ಅವರಿಗೆ ಚಿತ್ರರಂಗದಲ್ಲಿ ಅವರ ನಿರ್ಮಾಣ ನಿರ್ದೇಶನ, ಅಭಿನಯಗಳಿಗಾಗಿ ಪ್ರಶಸ್ತಿಗಳು ಲಭಿಸಿವೆ. ಆದರೆ ಕನ್ನಡ ಚಿತ್ರರಂಗದ ಭೀಷ್ಮ-ದ್ರೋಣ, ಚಿತ್ರಬ್ರಹ್ಮ ಹಾಗೂ ಅಡಿಪಾಯವೇ ಆಗಿರುವ ಶಂಕರ್‌ಸಿಂಗ್ ಅವರಿಗೆ ತಕ್ಕ  ಸ್ಥಾನಮಾನ ಹಾಗೂ ಸೂಕ್ತ ಪ್ರಶಸ್ತಿಗಳು ಸಿಗಲೇ ಇಲ್ಲ. ಪ್ರತಿಮಾದೇವಿ ಅವರಿಗೂ ಅಷ್ಟೇ. ಆದರೆ ದಿ|| ಶಂಕರ್‌ಸಿಂಗ್ ಹಾಗೂ ಪ್ರತಿಮಾದೇವಿ ದಂಪತಿಗಳು ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ತಲೆಕೆಡಿಸಿಕೊಂಡವರೇ ಅಲ್ಲ. ತಮ್ಮ ಕರ್ತವ್ಯ ಮತ್ತು ಸಾಧನೆಗಳನ್ನು ಮಾಡುತ್ತಲೇ ಬಂದರು. ಇಂತಹ ಮಹಾನ್ ಸಾಧಕ ಶಂಕರ್‌ಸಿಂಗ್ ಅವರ ಹೆಸರಿನಲ್ಲಿ ಚಿತ್ರರಂಗದ ಪ್ರತಿಷ್ಠಿತ ಸಂಘ, ಸಂಸ್ಥೆಗಳಾಗಲೀ, ಅಕಾಡೆಮಿಗಳಾಗಲೀ, ರಾಜ್ಯ ಸರ್ಕಾರವಾಗಲೀ ಒಂದೇ ಒಂದು ಪ್ರಶಸ್ತಿ ಸಹ ಘೋಷಿಸಿಲ್ಲ. ಅವರ ಹೆಸರನ್ನು ಯಾವುದೇ ರಸ್ತೆ, ವೃತ್ತ ಅಥವಾ ಚಿತ್ರರಂಗಕ್ಕೆ ಸಂಬಂಧಿಸಿದ ಕಟ್ಟಡಗಳಿಗೆ ಇಟ್ಟಿಲ್ಲ. ಇದು ಕನ್ನಡಿಗರ, ಕನ್ನಡ ನಾಡಿನ ಹಾಗೂ ನಮ್ಮ ನಿಮ್ಮೆಲ್ಲರ ದುರಂತ ಹಾಗೂ ವಿಪರ್ಯಾಸ. ಈಗಲಾದರೂ ಈ ದಂಪತಿಗಳ ಬಗ್ಗೆ, ಅವರ ಚಿತ್ರಗಳ ಬಗ್ಗೆ, ಅವರ ಸಾಧನೆಗಳ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ದಾರಿದೀಪವಾಗುವಂತೆ ತಿಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಈ ದಿಕ್ಕಿನಲ್ಲಿ ನಾವು, ನೀವು, ಸಂಘ-ಸಂಸ್ಥೆಗಳು ಮತ್ತು ಸರ್ಕಾರ ಗಮನ ಹರಿಸೋಣ.

(ಮುಗಿಯಿತು)

Leave a Reply

Your email address will not be published. Required fields are marked *