ಹಾಯ್ ಬೆಂಗಳೂರ್

ನೂರು ಮುಖ ಸಾವಿರ ದನಿ: ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ನಾಗರಕಟ್ಟೆ

  • ಭಾಗ 1 :

ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ನಾಗರಕಟ್ಟೆ

ಡಾ|| ರಾಜ್ ಬಾಂಡ್ ಆಗಿ ಅಭಿನಯಿಸಿದ್ದ `ಗೋವಾದಲ್ಲಿ ಸಿಐಡಿ ೯೯೯’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ತಾರೆ ಜ್ಯೂಲಿ ಲಕ್ಷ್ಮೀ ಅನಂತ್‌ನಾಗ್‌ರದು ಒಳ್ಳೆಯ ಜೋಡಿ.  ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ  ಈ ಜೋಡಿ ಅಭಿನಯಸಿದೆ. ಈ ಎಲ್ಲ ಚಿತ್ರಗಳ ಗೆಲುವಿಗೆ ಈ ಯಶಸ್ವಿ ಜೋಡಿಯೇ ಕಾರಣ ಅನ್ನುವುದು ನಿರ್ವಿವಾದ. ಅವುಗಳಲ್ಲಿ ಹೆಚ್ಚಿನ ಚಿತ್ರಗಳು ಕಾದಂಬರಿಗಳ ಆಧಾರಿತ. ಹೆಚ್ಚು ಕಡಿಮೆ ಎಲ್ಲ ಚಿತ್ರಗಳು ಒಂದಲ್ಲ ಒಂದು ಅಥವಾ ಒಂದಕ್ಕೂ ಹೆಚ್ಚಿನ ಪ್ರಶಸ್ತಿ ಗಳಿಸಿದವುಗಳೇ ಆಗಿವೆ.

೧೯೭೫ರಲ್ಲಿ ನಾನು ನನ್ನ ಹೆಂಡ್ತಿ ದಾವಣಗೆರೆಯಿಂದ ಚಿತ್ರದುರ್ಗದ ಬೆಟ್ಟಕ್ಕೆ ಹೋಗಿದ್ದೆವು. ಕೋಟೆಯ ಮಹಾದ್ವಾರದಿಂದ ಪ್ರವೇಶಿಸಿ ಗೋಪಾಲಸ್ವಾಮಿ ಹೊಂಡ ದಾಟಿ ಮುಂದೆ ಹೊರಟೆವು. ಎದುರಿಗೆ ವಿ.ಆರ್.ಕೆ. ಪ್ರಸಾದ್ (ನಂತರ ವಿನಯಾಪ್ರಸಾದ್ ಪತಿ) ಸಿಕ್ಕರು. ಜಿ.ವಿ.ಅಯ್ಯರ್ ಅವರ ಬಳಿ ಅಸೋಸಿಯೇಟ್ ಆಗಿದ್ದ ಆತ ಚಿತ್ರೀಕರಣಕ್ಕಾಗಿ ಬೇಕಾಗಿದ್ದ ಏನನ್ನೋ ತರಲು ಬೆಟ್ಟದಿಂದ ಕೆಳಗಡೆಗೆ ಓಡುತ್ತಿದ್ದರು. ಮೇಲೆ `ಹಂಸಗೀತೆ’ ಚಿತ್ರದ ಚಿತ್ರೀಕರಣ ನಡೆಯುತ್ತಿರುವುದಾಗಿ ಆತ ಹೇಳಿದರು. ನಂತರ ನಾನು ನನ್ನ ಹೆಂಡ್ತಿ ಮುಂದೆ ಹೊರಟೆವು.

ಮುಂದೆ ಸ್ವತಃ ಅನಂತ್ ನಾಗರಕಟ್ಟೆ ಹಾಗೂ ಆ ಚಿತ್ರದ ನಾಯಕಿ ರೇಖಾರಾವ್ ಅವರ ತಾಯಿ ಸಿಕ್ಕರು. ಇಬ್ಬರನ್ನೂ ಮಾತನಾಡಿಸಿ ನಮ್ಮ ಪರಿಚಯ ಹೇಳಿದೆವು. ನಂತರ ಅವರಿಬ್ಬರೂ ಹಾಗೂ ನನ್ನ ಶ್ರೀಮತಿ ಅವರು ಜೊತೆಗಿರುವ ಫೊಟೋ ನಾನು ತೆಗೆದೆ. ಕೇವಲ ಇಪ್ಪತ್ತೈದು ರೂಪಾಯಿಯ ಫುಟ್‌ಪಾತಿನಲ್ಲಿ ನಾನು ಕೊಂಡಿದ್ದ ಡಬ್ಬ ಕ್ಯಾಮೆರಾದಲ್ಲಿ ನಾನು ತೆಗೆದಿದ್ದ ಫೊಟೋ ಅದು. ಅದರಿಲಿ ಬಿಡಿ. ಕ್ರಮೇಣ ಮುಂದೆ ಚರಿತ್ರ ನಟನೇ ಆಗಿರುವ ಪ್ರತಿಭಾನ್ವಿತ ಅನಂತ್‌ನಾಗ್ ಮತ್ತು ನನ್ನ ಭೇಟಿ ನನ್ನ ಹುಟ್ಟೂರಿನ ಜಿಲ್ಲೆಯಾದ ಚಿತ್ರದುರ್ಗದ ಬೆಟ್ಟದಲ್ಲಿ ಆದದ್ದು ಹೀಗೆ. ನಂತರ ಮುಂದೆ ಹೋಗಿ ಚಿತ್ರೀಕರಣ ಸಹ ನೋಡಿದೆವು. ಮೈಸೂರು ಮಠ್ ಹಾಗೂ ರೇಖಾರಾವ್ ಅಭಿನಯದ ದೃಶ್ಯದ ಚಿತ್ರೀಕರಣ ನೋಡಿದೆವು. ಪ್ರೇಮಾ ಕಾರಂತ ಕಲಾ ನಿರ್ದೇಶನ ಮಾಡಿದ್ದರು.

ತ.ರಾ.ಸು. ಅವರ ಪ್ರಸಿದ್ಧ ಕಾದಂಬರಿ ಹಂಸಗೀತೆ. ಈ ಕಾದಂಬರಿ ಆಧಾರಿತ ಅದೇ ಹೆಸರಿನ ಚಿತ್ರ ಅದು. ಜಿ.ವಿ.ಅಯ್ಯರ್ ಅವರ ಆ ಚಿತ್ರಕ್ಕೂ ಮುನ್ನ ಅನಂತನಾಗರಕಟ್ಟೆ (ಕನ್ನಡ) ಚಿತ್ರರಂಗ ಪ್ರವೇಶಿಸಿದ್ದರು. ಪಿ.ವಿ.ನಂಜರಾಜ ಅರಸು ಅವರ ನಿರ್ಮಾಣ ಮತ್ತು ನಿರ್ದೇಶನದ ಹೊಸ ಬಗೆಯ ವಿಭಿನ್ನ ಚಿತ್ರ `ಸಂಕಲ್ಪ’. ೧೯೭೩ರ ಈ ಚಿತ್ರ ಅನಂತ್‌ನಾಗ್ ಅವರ ಕನ್ನಡದ ಪ್ರಥಮ ಚಿತ್ರವೂ ಹೌದು. ಮನೋವೈದ್ಯನ ಪಾತ್ರದಲ್ಲಿ ತಮ್ಮ ಪ್ರಥಮ ಚಿತ್ರದಲ್ಲೇ ಮನೋಜ್ಞವಾದ ಅದ್ಭುತ ಅಭಿನಯ ನೀಡಿರುವುದು ಅನಂತ್ ಅವರ ಪ್ರತಿಭೆಗೆ ಸಾಕ್ಷಿ. ಅಷ್ಟರಲ್ಲಾಗಲೇ ಮುಂಬಯಿಯ ರಂಗಭೂಮಿಯಲ್ಲಿ ಮರಾಠಿ, ಹಿಂದಿ, ಕೊಂಕಣಿ ಮತ್ತು ಕನ್ನಡ ನಾಟಕಗಳಲ್ಲಿ ( ಗಿರೀಶ್ ಕಾರ್ನಾಡ್‌ರ ಗರಡಿ) ಅಭಿನಯಿಸಿ ಅವರು ಪಳಗಿದ್ದರು. ೧೯೭೩ರಲ್ಲಿ ಹಿಂದಿ ಚಿತ್ರ `ಅಂಕುರ್’ನಲ್ಲಿ ಸಹ ಅವರಿಗೆ ಒಂದು ಉತ್ತಮ ಪಾತ್ರ ದೊರಕಿತ್ತು. ಅವರು ಅದನ್ನು ಸಹ ಸಮರ್ಥವಾಗಿ ನಿಭಾಯಿಸಿದ್ದರು. ಆ ಹಿಂದಿ ಚಿತ್ರದ ನಿರ್ದೇಶಕರು ಯಾರು ಗೊತ್ತೆ? ಅಪ್ಪಟ ಕನ್ನಡಿಗ  ಶ್ಯಾಮ್ ಬೆನೆಗಲ್ ಅವರು.

ಹೀಗೆ ಕಿರಿಯ ವಯಸ್ಸಿನಲ್ಲೇ ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್ ನಾಗರಕಟ್ಟೆ ಅವರು ಈ ಎರಡು (ಕನ್ನಡ ಮತ್ತು ಹಿಂದಿ) ಚಿತ್ರಗಳ ನಂತರ ಹಿಂದಿರುಗಿ ನೋಡಲಿಲ್ಲ. ಅಂದಿನಿಂದ ಇಂದಿನವರೆಗೂ ಅವರು ಅತ್ಯಂತ `ಬಿಝಿ’ ನಟ. ಇದಕ್ಕೆ ಕಾರಣ ಏನು ಗೊತ್ತೆ? ಈ ಇಳಿವಯಸ್ಸಿನಲ್ಲೂ ಅವರು ಉತ್ಸಾಹದ ಚಿಲುಮೆಯೇ ಆಗಿರುವ ಅವರು ಲವಲವಿಕೆಯ ಜೀವಂತ ಸಹಜಾಭಿನಯ. ಅವರು ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲದೆ ಮರಾಠಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯ ಚಿತ್ರಗಳಲ್ಲೂ ಸಹ ಅಭಿನಯಿಸಿದ್ದಾರೆ. ದೈತ್ಯ ಪ್ರತಿಭೆಯ ತಮ್ಮ ಶಂಕರ್‌ನಾಗರ್‌ನ ಪ್ರಸಿದ್ಧ ಟಿ.ವಿ. ಧಾರಾವಾಹಿ `ಮಾಲ್ಗುಡಿ ಡೇಸ್’ನಲ್ಲೂ ಸಹ ಅಭಿನಯಿಸಿದ್ದಾರೆ.

೧೯೪೮ರ ಸೆಪ್ಟೆಂಬರ್ ನಾಲ್ಕರಂದು ಮುಂಬೈನ ಚೌಪಾಟಿಯಲ್ಲಿ ಇವರು ಜನಿಸಿದರೂ ಸಹ ಇವರು ಮತ್ತು ಇವರ ಕುಟುಂಬದ ಮೂಲ ಹಾಗೂ ಬೇರುಗಳು ಕರ್ನಾಟಕವೇ ಆಗಿದೆ. ಇವರ ತಾಯಿಯ ಹೆಸರು ಆನಂದಿ ಹಾಗೂ ತಂದೆಯ ಹೆಸರು ಸದಾನಂದ ನಾಗರಕಟ್ಟೆ. ಇವರ ಅಕ್ಕನ ಹೆಸರು ಶ್ಯಾಮಲಾ ಮತ್ತು ತಮ್ಮ ಶಂಕರ್‌ನಾಗ್.  ತನ್ನ `ಮಿಂಚಿನ ಓಟ’ದ `ಚಿತ್ರ’ ಜೀವನದಲ್ಲಿ ಅಗಾಧ ಸಾಧನೆ ಮಾಡಿ ಮಿಂಚಿ ಮಾಯಾವಾದವನು ಆತ. ದಕ್ಷಿಣ ಕನ್ನಡದ ಆನಂದಾಶ್ರಮ, ಉತ್ತರ ಕನ್ನಡದ ಚಿತ್ರಾಪುರ ಮಠ ಮತ್ತು ಭಟ್ಕಳದ ಸಮೀಪದ ಶಿರಾಲಿ ಇವರ ಶಾಲಾ ದಿನಗಳ ತಾಣಗಳು. ಏಳನೇಯ ತರಗತಿಯ ನಂತರ ಮುಂಬೈನಲ್ಲಿ ಇವರ ಓದು ಮುಂದುವರಿಕೆ. ಆ ಕಾಲದಲ್ಲೇ ಇವರಿಗೆ ರಂಗಭೂಮಿಯ ನಂಟು, ಆಕರ್ಷಣೆ ಹಾಗೂ ಪ್ರವೇಶ.  ಕೆ.ಕೆ.ಸುವರ್ಣ, ಗಿರೀಶ್ ಕಾರ್ನಾಡ್ (ಯಯಾತಿ ಇತ್ಯಾದಿ) ಅಮೋಲ್ ಪಾಲೇಕರ್, ಸತ್ಯದೇವ್ ದುಬೆ ಮುಂತಾದವರ ನಾಟಕಗಳಲ್ಲಿ ಇವರದು ವಿವಿಧ ಪಾತ್ರಗಳಲ್ಲಿ ವೈವಿಧ್ಯಮಯ ಅಭಿನಯ. ಬ್ಯಾಂಕ್ ಉದ್ಯೋಗದಲ್ಲಿದ್ದ ಇವರು ನಂತರ ರಂಗಭೂಮಿ ಹಾಗೂ ಅದರಲ್ಲೂ ಚಿತ್ರರಂಗದಲ್ಲಿ `ಬಿಝಿ’ ಆದ ಕಾರಣ ಆ ನೌಕರಿಯನ್ನು ಬಿಡಬೇಕಾಯಿತು, ಬಿಟ್ಟರು.

ಡಾ|| ರಾಜ್ ಬಾಂಡ್ ಆಗಿ ಅಭಿನಯಿಸಿದ್ದ `ಗೋವಾದಲ್ಲಿ ಸಿಐಡಿ ೯೯೯’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ತಾರೆ ಜ್ಯೂಲಿ ಲಕ್ಷ್ಮೀ ಅನಂತ್‌ನಾಗ್‌ರದು ಒಳ್ಳೆಯ ಜೋಡಿ.  ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ  ಈ ಜೋಡಿ ಅಭಿನಯಸಿದೆ. ಈ ಎಲ್ಲ ಚಿತ್ರಗಳ ಗೆಲುವಿಗೆ ಈ ಯಶಸ್ವಿ ಜೋಡಿಯೇ ಕಾರಣ ಅನ್ನುವುದು ನಿರ್ವಿವಾದ. ಅವುಗಳಲ್ಲಿ ಹೆಚ್ಚಿನ ಚಿತ್ರಗಳು ಕಾದಂಬರಿಗಳ ಆಧಾರಿತ. ಹೆಚ್ಚು ಕಡಿಮೆ ಎಲ್ಲ ಚಿತ್ರಗಳು ಒಂದಲ್ಲ ಒಂದು ಅಥವಾ ಒಂದಕ್ಕೂ ಹೆಚ್ಚಿನ ಪ್ರಶಸ್ತಿ ಗಳಿಸಿದವುಗಳೇ ಆಗಿವೆ.

`ಬಯಲುದಾರಿ’, `ಚಂದನದ ಗೊಂಬೆ’, `ಬೆಂಕಿಯ ಬಲೆ’, `ನಾ ನಿನ್ನ ಬಿಡಲಾರೆ’, `ಇಬ್ಬನಿ ಕರಗಿತು’, `ಮುದುಡಿದ ತಾವರೆ ಅರಳಿತು’ ಮುಂತಾದವು  ಯಶಸ್ವೀ ಹಾಗೂ ಪ್ರಶಸ್ತಿ ವಿಜೇತ ಚಿತ್ರಗಳು.

ಇವರಿಗೆ ಸಂದ ರಾಜ್ಯ ಪ್ರಶಸ್ತಿಗಳ ವಿವರ ಹೀಗಿದೆ. `ಮಿಂಚಿನ ಓಟ'(೧೯೭೯-೮೦), `ಹೊಸ ನೀರು’ (೧೯೮೫-೮೬), `ಅವಸ್ಥೆ’ (೧೯೮೭-೮೮), ಮತ್ತು `ಗಂಗವ್ವ ಗಂಗಮಾಯಿ’ (೧೯೯೪-೯೫) ಚಿತ್ರಗಳಲ್ಲಿ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗಿದೆ. ಇವರಿಗೆ ಸಂದ ಫಿಲಂ ಫೇರ್ (ದಕ್ಷಿಣ) ಪ್ರಶಸ್ತಿಗಳ ವಿವರ ಹೀಗಿದೆ: ೧೯೭೯ರ `ನಾ ನಿನ್ನ ಬಿಡಲಾರೆ’, ೧೯೮೨ರ `ಬರ’, ೧೯೮೯ರ `ಹೆಂಡ್ತಿಗ್ಹೇಳ್ಬೇಡಿ’, ೧೯೯೦ರ `ಉದ್ಭವ’, ೧೯೯೧ರ `ಗೌರಿ ಗಣೇಶ’, ಮತ್ತು ೨೦೧೬ರ `ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ಚಿತ್ರಗಳ ಇವರ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಫಿಲಂ ಫೇರ್ ಸಂಸ್ಥೆ ಇವರಿಗೆ ನೀಡಿದೆ. ೨೦೧೧-೧೨ರ ವಿಷ್ಣುವರ್ಧನ ಅವರ ಹೆಸರಿನ ಜೀವಮಾನ ಸಾಧನೆ ರಾಜ್ಯ ಪ್ರಶಸ್ತಿ ಸಹ ಇವರಿಗೆ ದೊರಕಿದೆ. ಇವಲ್ಲದೆ ೨೦೦೮ರ `ತಾಜ್ ಮಹಲ್’ ಮತ್ತು `ಅರಮನೆ’ ಹಾಗೂ ೨೦೧೫ರ `ವಾಸ್ತು ಪ್ರಕಾರ’ ಚಿತ್ರಗಳ ಇವರ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಪ್ರಶಸ್ತಿಗಳು ಸಹ ದೊರಕಿವೆ.

ಇವುಗಳಷ್ಟೇ ಅಲ್ಲ ೨೦೧೬ರ `ಆಟಗಾರ’ ಚಿತ್ರದ ಇವರ ಪೋಷಕ ಪಾತ್ರದ ಅತ್ಯುತ್ತಮ ನಿರ್ವಹಣೆ ಐ.ಐ.ಎಫ್.ಎ ಪ್ರಶಸ್ತಿಗೆ ಇವರ ಹೆಸರನ್ನು ನಾಮ ನಿರ್ದೇಶನ ಮಾಡಲಾಗಿದೆ. ಅದೇ ರೀತಿ ೨೦೧೭ರ `ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಪುರುಷ ಪ್ರಧಾನ ಪಾತ್ರ ಹಾಗೂ ೨೦೧೭ರ `ಮದುವೆಯ ಮಮತೆಯ ಕರೆಯೋಲೆ’ ಚಿತ್ರದ ಅತ್ಯುತ್ತಮ ಪೋಷಕ ಪಾತ್ರ ನಿರ್ವಹಣೆಗೆ ಅದೇ ಸಂಸ್ಥೆಯ ಪ್ರಶಸ್ತಿಗಳಿಗೆ ಸಹ ಇವರು ನಾಮ ನಿರ್ದೇಶನಗೊಂಡಿದ್ದಾರೆ.

ಇವರು ಅಭಿನಯಿಸಿರುವ ಹಿಂದಿ ಚಿತ್ರಗಳ ವಿವರ ಹೀಗಿದೆ. `ನಿಷಾಂತ್’ (೧೯೭೫), `ಮಂಥನ್’ (೧೯೭೫), `ಭೂಮಿಕಾ ದಿ ರೋಲ್’ (೧೯೭೭), `ಕೊಂಡುರಾ` (೧೯೭೮), `ಗೆಹ್ರಾಯಿ’ (೧೯೮೦), `ಮಂಗಲ್ ಸೂತ್ರ್’ (೧೯೮೧), `ಕಲಿಯುಗ್’ ( ೧೯೮೧), `ಸೂಖಾ’ (೧೯೮೨), `ರಾತ್’ (೧೯೯೧), `ಮಾಯಾ’ (೨೦೦೧), ಮತ್ತು `ಯುವ’ (೨೦೦೪). ಇವರು ಅಭಿನಯಿಸಿದ ತೆಲುಗು ಚಿತ್ರಗಳ ವಿವರ ಹೀಗಿದೆ. ೧೯೭೬ರ `ಪ್ರೇಮಲೇಖಲು’, ೧೯೭೮ರ `ಅನುಗ್ರಹಂ’ ಮತ್ತು ೨೦೦೩ರ ` ಸಂಖಾರವರಂ’. ಇವರು ಅಭಿನಯಿಸಿದ ತಮಿಳು ಚಿತ್ರ ೧೯೯೧ರ `ನಾಟ್ಟುಕ್ಕು ಒರು ನಲ್ಲವನ್’ ಮತ್ತು ಇವರ ಅಭಿನಯದ ಮಲೆಯಾಳರಂ ಚಿತ್ರ ೧೯೮೭ರ `ಸ್ವಾತಿ ತಿರುನಾಳ್’ ಆಗಿದೆ. ಇವರ ಅಭಿನಯದ ಮರಾಠಿ ಚಿತ್ರ ೨೦೦೨ರ `ಅನಹತ್’ ಹಾಗೂ ಇವರ ಅಭಿನಯದ ಇಂಗ್ಲೀಷ್ ಚಿತ್ರ ೨೦೦೨ರ `ಸ್ಟಂಬಲ್’. ಇವರು ಅಭಿನಯಿಸಿದ ಕಿರುತೆರೆಯ ಚಿತ್ರ ಹಾಗೂ ಧಾರಾವಾಹಿಗಳ ವಿವರ ಹೀಗಿದೆ. ೧೯೮೭ರ ಯಶಸ್ವೀ ಸರಣಿ ಆರ್.ಕೆ.ನಾರಾಯಣ್ ಅವರ `ಮಾಲ್ಗುಡಿ ಡೇಸ್’, ೨೦೦೨ರ `ಗರ್ವ’, ೨೦೦೬-೦೮ರ `ಪ್ರೀತಿ ಇಲ್ಲದ ಮೇಲೆ’, ೨೦೧೩ರ `ಚಿಟ್ಟೆ ಹೆಜ್ಜೆ’ ಮತ್ತು `ಲಾಟರಿ ಹಾಗೂ ನಿತ್ಯೋತ್ಸವ’ ಇವುಗಳು.

೧೯೭೩ರಲ್ಲಿ ಚಿತ್ರರಂಗ ಪ್ರವೇಶಿಸಿದ ಇವರು ಇಂದಿಗೂ ಅಭಿನಯಿಸುತ್ತಲೇ ಇದ್ದಾರೆ. ಇವರ ಚಿತ್ರಜೀವನದ ಆರಂಭದಲ್ಲಿ ಕನ್ನಡದ ಜೊತೆ ಜೊತೆಗೆ ಹಿಂದೀ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ದೊರೆತವು. ಅವರು ಅಲ್ಲಿಯೇ ಮುಂದುವರೆದಿದ್ದರೆ ಬಾಲಿವುಡ್‌ನಲ್ಲಿ ಅಮಿತಾಬ್‌ರಂತೆಯೇ ಹಿಂದಿ ಚಿತ್ರರಂಗದಲ್ಲಿ ಅವರು ಮತ್ತೊಬ್ಬ ಚರಿತ್ರ ನಟರಾಗಬಹುದಿತ್ತು. ಅವರ ಗಳಿಕೆ ಸಹ ಇನ್ನೂ ಹೆಚ್ಚು ಹೆಚ್ಚು ಆಗುತ್ತಿತ್ತು. ಆದರೆ ಕ್ರಮೇಣ ಅವರು ಕನ್ನಡ ಚಿತ್ರರಂಗ ಹಾಗೂ ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಿ ಇಲ್ಲಿಯೇ ಉಳಿದರು. ಕನ್ನಡ ಚಿತ್ರಗಳಲ್ಲೇ ಅವರು ಹೆಚ್ಚು ಅಭಿನಯಿಸಿದರು. ಇದು ಕನ್ನಡಿಗರಾದ ನಮಗೆಲ್ಲ ಹೆಮ್ಮೆ ಹಾಗೂ ಗರಿಮೆಯ ವಿಷಯ. ಅಮಿತಾಬ್ ಆಗಲೀ, ಮತ್ತೊಬ್ಬರಾಗಲೀ ಹೋಲಿಕೆಯನ್ನು ಇಷ್ಟಪಡದ ವ್ಯಕ್ತಿ ಅನಂತ್. ಅವರವರ ಪತ್ರಿಭೆ, ಸಾಧನೆಗಳು, ವೈಶಿಷ್ಟ್ಯಗಳು ಅವರವರದ್ದು. ಹೋಲಿಕೆ ಸರಿಯಲ್ಲ ಎಂಬ ಧೋರಣೆ ಹಾಗೂ ನಿಲುವು ಅವರದು. ಅದೂ ಸಹ ಸರಿಯೇ.

ಪ್ರಥಮ ಕನ್ನಡ ಚಿತ್ರ `ಸಂಕಲ್ಪ’ ಅಥವಾ ಪ್ರಥಮ ಹಿಂದಿ ಚಿತ್ರ `ಅಂಕುರ್’ ಇವುಗಳಲ್ಲಿ ಅವರು ಮರ ಸುತ್ತುವ ನಾಯಕನಂತಹ ಯಾಂತ್ರಿಕ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿಲ್ಲ. ಎರಡೂ ಚಿತ್ರಗಳ ಕಥಾವಸ್ತು ಹಾಗೂ ಇವರ ಪಾತ್ರಗಳು ಅರ್ಥಪೂರ್ಣವೂ, ಔಚಿತ್ಯಪೂರ್ಣವೂ, ವಿಚಾರಪರವೂ ಆಗಿದ್ದವು. ನಂತರದ ಅವರ ಚಿತ್ರರಂಗದ ಪಯಣದಲ್ಲಿ ಅಲ್ಲೊಂದು ಇಲ್ಲೊಂದು ಪ್ರಣಯ, ಪ್ರೇಮ, ಪ್ರೀತಿಯ ವಿಷಯಗಳ ರೋಮ್ಯಾಂಟಿಕ್ ಪಾತ್ರಗಳ ಚಿತ್ರಗಳು ಬಂದವು. ಆದರೆ ಅವರ ಅತಿಹೆಚ್ಚು ಚಿತ್ರಗಳಲ್ಲಿನ ಪಾತ್ರಗಳು ವಿಭಿನ್ನವೂ, ವೈವಿಧ್ಯಮಯವೂ ಆಗಿವೆ. ಯಾವುದೇ ಪಾತ್ರವನ್ನು ಅದರ ಒಳಹೊಕ್ಕು ಆ ಪಾತ್ರವೇ ತಾನಾಗಿ ಅಭಿನಯಿಸುವ ತಾದಾತ್ಮ್ಯತೆ ಅವರದು. ಪಾತ್ರ ನಾಯಕನದಾಗಲೀ, ಖಳ ನಾಯಕನಾಗಲೀ, ಹಾಸ್ಯ ಪಾತ್ರವಾಗಲೀ, ಪೋಷಕ ಪಾತ್ರವಾಗಲೀ ಪುರಾಣದ ನಾರದ ಅಥವಾ ಆಧುನಿಕ ನಾರದ ಹೀಗೆ ಯಾವುದೇ ಪಾತ್ರವಾಗಲೀ ಲೀಲಾಜಾಲವಾದ ಅಭಿನಯ ಅವರದು.

ಯಾವುದೇ ಇಮೇಜು ಅಥವಾ ಇಸಮುಗಳಿಗೆ ಅಂಟಿಕೊಂಡವರಲ್ಲ ಅವರು. ತಮ್ಮ ಪಾತ್ರ ಹೀಗೇ ಇರಬೇಕು ಎಂಬ ನಿಲುವು ಅವರದ್ದಲ್ಲ. ಯಾವುದೇ ಪಾತ್ರವಾದರೇನು ಅದಕ್ಕೆ ಜೀವ ತುಂಬಿ ಅಭಿನಯ ನೀಡಿ ಅದನ್ನು ಜೀವಂತ ಪಾತ್ರವನ್ನಾಗಿ ಮಾಡುವ ಕಲೆ ಹಾಗೂ ಪ್ರತಿಭೆ ಅವರಿಗಿದೆ. ಚಿತ್ರದ ಇತರೆ ತಾರಾಗಣ ಯಾರಿದ್ದರೇನು, ಯಾರಾದರೇನು, ಯಾರ ಪಾತ್ರಗಳು ಪ್ರಮುಖವಾದರೇನು ಇವರ ಪಾತ್ರ ಪ್ರಮುಖವಲ್ಲದ್ದೂ ಅಥವಾ ಚಿಕ್ಕದು ಇದ್ದರೇನು ತಮಗೆ ದೊರೆತ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನ್ಯಾಯ ಒದಗಿಸುವ ಜಾಯಮಾನ ಹಾಗೂ ಸಾಮರ್ಥ್ಯ ಅವರದು. ಅವರ ಸಂಭಾಷಣೆ, ಅರಳು ಹುರಿದಂತೆ. ಅವರ ಅಭಿನಯ ಲೀಲಾಜಾಲ. ಹಳೆಯ ತಲೆಮಾರಿನಿಂದ ಹಿಡಿದು ತಮ್ಮ ಸಮಕಾಲೀನ ಹಾಗೂ ನಂತರದ ತಲೆಮಾರಿನ ಇಂದಿನ ಪೀಳಿಗೆಯ ನಟರವರೆಗೆ ಎಲ್ಲರೊಡನೆ ಬೆರೆತು ತಮ್ಮ ಪಾತ್ರ ನಿರ್ವಹಣೆಯನ್ನು ಸಮರ್ಥವಾಗಿ ಮಾಡುವ ಸರಳ ವ್ಯಕ್ತಿ ಅನಂತ್‌ನಾಗ್. ಹೀಗಾಗಿಯೇ ಚಿತ್ರರಂಗದ ಕಾಲಮಾನ ಹಾಗೂ ಅವರ ವಯೋಮಾನ ಬದಲಾಗುತ್ತಾ ಬಂದರೂ ಸಹ ಅವರು ಇಂದಿಗೂ ಚಲಿಸುವ ನಾಣ್ಯವಾಗೇ ಉಳಿದಿದ್ದಾರೆ.

(ಮುಂದುವರಿಯುವುದು)

One thought on “ನೂರು ಮುಖ ಸಾವಿರ ದನಿ: ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ ಅನಂತ್‌ನಾಗರಕಟ್ಟೆ

  1. Thanks for finally talking about > ನೂರು ಮುಖ ಸಾವಿರ ದನಿ: ಸಹಜಾಭಿನಯದ ಪ್ರತಿಭಾನ್ವಿತ  ಚಿತ್ರನಟ
    ಅನಂತ್‌ನಾಗರಕಟ್ಟೆ –
    ಹಾಯ್ ಬೆಂಗಳೂರ್ < Loved it!

Leave a Reply to panel sosmed termurah Cancel reply

Your email address will not be published. Required fields are marked *