ಹಾಯ್ ಬೆಂಗಳೂರ್

ನೀ ಸಿಗದೇ ಬಾಳೊಂದು ಬಾಳೆ….

ಆಕೆಯನ್ನು ಕಳೆದುಕೊಂಡ ಮೇಲೆ ಹುಚ್ಚನಂತಾದೆ. ಆಕೆಯ ಗುಲಾಬಿ ಬಣ್ಣದ ಗೆನ್ನೆಗಳು, ನೀಳವಾಗಿದ್ದ ಸಂಪಿಗೆಯಂತಹ ನಾಸಿಕ. ಕಮಲದಂತೆ ಅರಳಿನಿಂತ ಕಣ್ಣುಗಳು, ಕೆಂಗುಲಾಬಿಯಂತಹ ತುಟಿಗಳು ತೀಡಿ ನೇಯ್ದಂತಿದ್ದ ಹುಬ್ಬುಗಳು, ಸದಾ ಮೋಹದ ಬಲೆ ಬೀಸುವ ಮಂದಹಾಸ ಹೀಗೆ ಬೆರಗಿನ ಸಂಗತಿಗಳೆಲ್ಲವೂ ಒಂದೆಡೆಗೆ ನೆರೆದಾಗ ದಕ್ಕುವ ಸ್ವರ್ಗಸುಖವೇ ಬಣ್ಣಿಸಲಸದಳ. ಇವೆಲ್ಲವೂ ಒಟ್ಟಾಗಿ ರಸಾನಂದವೇ ಉಕ್ಕುವ ಹೊಳೆಯಾಗಿ, ಕೆಲವೊಮ್ಮೆ ರಸಗಂಧವಾಗಿ ಹರಿಯುತ್ತಿತ್ತು. ಇಂತಹ ಚೆಲುವೆಯನ್ನು ಕಣ್ತುಂಬಿಕೊಳ್ಳುವುದೇ ಮಹಾನವಮಿ ನನಗೆ. ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನೆಲ್ಲಾ ಮುಗಿಸಿ ಕಾಯಕಕ್ಕಾಗಿ ಸಿದ್ಧಗೊಂಡು  ಹೊರಟೆನೆಂದರೆ ಇವಳು ಆರತಿಯೆತ್ತಲೇಬೇಕು. “ಯಶಸ್ವಿಯಾಗಿ ಕಾಯಕ ಮುಗಿಸಿ ಮರಳಿಬನ್ನಿ” ಎಂದು ಹಣೆಗೆ ಬೊಟ್ಟಿಡುವ ಕಟ್ಟಿಕೊಂಡ ಹೆಂಡತಿ ಒಂದೆಡೆಯಾದರೆ, ಬಿಟ್ಟರೂ ಬಿಡೆನು ಎಂದು ಜನ್ಮಾಂತರಗಳೆಲ್ಲವುಗಳಲ್ಲಿಯೂ ಸದಾ ಜೊತೆಗಾತಿಯಾಗಿರುತ್ತೇನೆಂದು ಬೆನ್ನುಬಿದ್ದ ಈ ಲಾವಣ್ಯವತಿ ಮಗದೊಂದೆಡೆಗೆ. ಮನೆಯಲ್ಲಿದ್ದಾಗ ನನ್ನ ಯೋಗಕ್ಷೇಮಗಳನ್ನೆಲ್ಲಾ ವಿಚಾರಿಸುವ ಜವಾಬ್ದಾರಿ ನನ್ನ ಅರ್ದಾಂಗಿಯದಾದರೆ, ಹೊರಗೆ ಹೊರಟೆನೆಂದರೆ ನನ್ನೆಲ್ಲಾ ಹೊಣೆ ಹೊತ್ತುಕೊಳ್ಳುವವಳು ಈ ಮನಮೆಚ್ಚಿದ ಸಖಿ. ನನ್ನ ಮನಸೆಳೆಯುವ ಇವಳ ಚೆಲುವನ್ನು ಕಂಡು ಸದಾ ಕರುಬುವ ನನ್ನ ಹೆಂಡತಿಯನ್ನು ಸಂಭಾಳಿಸುವುದೇ ಹರಸಾಹಸ ಕಾರ್ಯ ನನಗೆ‌. ಅಸೂಯೆಯಿಂದ ಕೋಪವನ್ನು ನೆತ್ತಿಗೇರಿಸಿಕೊಂಡು ಚೀರಾಡಿ ಕುಣಿದರೂ ತನ್ನಷ್ಟೇ ಆಕೆಯೂ ನನಗೆ ಅನಿವಾರ್ಯವೆಂಬ ಸತ್ಯ ತಿಳಿದು ಸುಮ್ಮನಾಗುವಳು.

ಧಾರವಾಹಿಯ ಹೊಡೆತಕ್ಕೆ ಸಿಲುಕಿದ ನನ್ನ ಸತಿಯ ಹಿತ್ತಾಳೆ ಕಿವಿಗಳಿಗೆ ಯಾರೋ ಪಕ್ಕದ ಮನೆಯವರು ಬಂದು ಊದಿದರೆ ಸಾಕು, ಬಣ್ಣದ ತಗಡಿನ ತುತ್ತೂರಿ ಸದ್ದು ಮಾಡಲಾರಂಭಿಸಿತೆಂದೇ ಅರ್ಥ. ಜಿ.ಪಿ. ರಾಜರತ್ನಂ ನೆನಪಾಗಿ “ಪಾರು ಮಾಡಿಬಿಡಿ ಇದೊಂದು ಬಾರಿ ಕವಿವರ್ಯರೇ” ಎಂದು ಬೇಡಿಕೊಳ್ಳುತ್ತೇನೆ. ಬಗೆಹರಿಯದ ಸಮಸ್ಯೆಯಾಗಿ ಜಗಳ ತಾರಕಕ್ಕೇರಿದಾಗ ಚೆಲುವೆಯನ್ನು ಬಿಟ್ಟು ಹಾಗೆಯೇ  ಹೊರಟುಬಿಡುತ್ತೇನೆ ವಿಧಿಯಿಲ್ಲದೇ. 

ಸದಾ ನನ್ನೊಂದಿಗಿದ್ದು ಸಾಯಂಕಾಲದ ಹೊತ್ತಿಗೆ ನನ್ನಂತೆಯೇ ದುಡಿದು ಆಯಾಸದಿಂದ ಬಳಲುತ್ತಿರುವವಳನ್ನು  ಜೋಪಾನವಾಗಿ ಮನೆಗೆ ಕರೆತರುತ್ತೇನೆ. ಪುಳಕಿತಳಾಗುವ ಮಡದಿ ಇನ್ನಾದರೂ ತನ್ನ ಬೆಲೆ ಗೊತ್ತಾಯಿತಲ್ಲ ಎಂದು ಹಿರಿಹಿರಿ ಹಿಗ್ಗುತ್ತಲೇ ನಾನು ಕರೆತಂದವಳನ್ನು ಮೂಲೆಯಲ್ಲಿ ಕೂಡ್ರಿಸುತ್ತಾಳೆ. ಬಾಯಿಗೆ ಬಂದಂತೆ ಅವಳ ಮುಖಕ್ಕೆ ಮಂಗಳಾರತಿ ಮಾಡುತ್ತಾಳೆ. ಅಲ್ಲಿಗೆ ಆ ದಿನದ ಅವಳ ಸಖ್ಯ ಮುಗಿಯಿತೆಂದೇ ಅರ್ಥ. ನನ್ನ ಸ್ನಾನ ಪೂಜಾದಿಗಳು ಬೆಳಗಿನಲ್ಲಿ ಜರುಗಿದರೆ ಅವಳದು ತದ್ವಿರುದ್ಧ. ಸಾಯಂಕಾಲವೇ ಅವಳದು ಸುಗಂಧದಿಂದೊಡಗೂಡಿದ ಮಜ್ಜನ.    ಸಿಂಟೆಕ್ಸ್ ನ ಕೊಳದೊಳಗೆ ಮುಳುಗೇಳುವ ಸಂಧ್ಯಾವಂದನೆಯ ದಿಬ್ಬಣ. ಮನೆಗೆ ಬಂದವನೇ ಮುಖಮಜ್ಜನಗೈದು ನನ್ನವಳೊಂದಿಗೆ ಚಹಾದ ಗುಟುಕನ್ನು ಸವಿಯುತ್ತಾ ಮಾತಿಗಿಳಿಯುತ್ತೇನೆ. ಇದನ್ನು ಕಂಡು ಕರುಬುವ ಆ ಚೆಲುವೆಯದೂ ತಂತಿಯ ಮೇಲಿನ ನಡಿಗೆ. ಆ ನಡಿಗೆಯಲ್ಲಿಯೇ ಮುನಿಸಿಕೊಳ್ಳುವ ಒಯ್ಯಾರವೂ ಜೊತೆಯಾಗಿ ಬಳುಕುವ ಬಳ್ಳಿಯಂತೆ ತುಳುಕುತ್ತಾಳೆ. ಸಂಜೆಯಾಗುತ್ತಲೇ ನನ್ನನ್ನು ಕಡೆಗಣಿಸುವ ಇವರನ್ನು ಹೇಗಾದರೂ ಮಾಡಿ ದೂರ ಮಾಡಬೇಕು ಎಂದು ಹಾತೊರೆದು ಬೀಸದ ಗಾಳಿಗೆ ಮೈಯ್ಯೊಡ್ಡಿ ಬಿದ್ದಂತೆ ನಾಟಕವಾಡುತ್ತಾಳೆ. ಅವಳ ಬಯಲಾಟವೆಲ್ಲಾ ಗೊತ್ತಿದ್ದ ನನ್ನ ಹೆಂಡತಿಯಂತೂ ಮುಲಾಜಿಲ್ಲದೇ ಎತ್ತಿ ” ಇದೇ ನಿನಗೆ ಸರಿಯಾದ ಜಾಗ ” ಎಂದು ಮತ್ತೆ ನೀರಿನ ಕೊಳಕ್ಕೆಸೆಯುತ್ತಾಳೆ. ಹಾಗೋ ಹೀಗೋ ಕೈಕಾಲುಗಳನ್ನು ಚಾಚಿಕೊಂಡು ವಿರಮಿಸುತ್ತಿದ್ದ ಆ
ಚೆಲುವೆಯ ದುರ್ಗತಿಯನ್ನು ಹೇಳತೀರದು. 
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ 
ಎಳ್ಳು ಜೀರಿಗೆ ಬೆಳೆಯೊಳ  ಭೂಮ್ತಾಯ
ಎದ್ದೊಂದು ಘಳಿಗೆ ನೆನೆದೇನ 
ಎಂದು ನನ್ನ ತಾಯಿ ಕಾಯಕದಲ್ಲಿ ಮಗ್ನವಾಗಿ ಹಾಡುತ್ತಿದ್ದರೆ, ನಾನು ಈ ಚೆಲುವೆಯನ್ನು ಕುರಿತು ಸುಪ್ರಭಾತ ಪಠಿಸುತ್ತಿರುತ್ತೇನೆಂದರೆ ಆಕೆ ಮಾಡಿದ ಮೋಡಿಯಾದರೂ ಎಂಥದ್ದಿರಬಹುದೆಂದೊಮ್ಮೆ ಊಹಿಸಿ. ಇಷ್ಟು ಗಂಭೀರವಾಗಿ ಗಮನ ಸೆಳೆದ ಮೋಹಿನಿ ಯಾರಿರಬಹುದು ? ಎನ್ನುವಿರೇನು ? ಬೇರಾರೂ ಅಲ್ಲ‌. ಎರಡನೇ ಹೆಂಡತಿಯಂತೆ ಸದಾ ನನ್ನ ಜೊತೆಗಿರುವ ಕರ್ಚೀಫು. (ಕರವಸ್ತ್ರ) !! ಯಕಃಶ್ಚಿತ ಕರವಸ್ತ್ರದ ಮೇಲೇಕೆ ಇದೆಂತಹ ವ್ಯಾಮೋಹ ಎಂದು ಕೋಪಿಸಿಕೊಳ್ಳುತ್ತಿರುವವರಾದರೆ ಒಂದು ಕ್ಷಣ ನಿಲ್ಲಿ. ಇದರ ಹಿಂದಿನ ಕಥೆಯನ್ನೊಮ್ಮೆ ಹೇಳುತ್ತೇನೆ ಕೇಳಿ -ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೆಲೆಯೂರಿದ ಅಂಗಡಿ ಮಳಿಗೆಗಳೊಳಗೆ ಕಣ್ಣಾಡಿಸುವಾಗ ಆಕಸ್ಮಾತ್ ಆಗಿ ನನ್ನನ್ನು ಕೈಬೀಸಿ ಕರೆದವಳು ಈ ವಸ್ತ್ರಾಂಗನೆ. ಅಂಗಡಿಯೊಳಗೆ ಗಿರಾಕಿಗಳಿಗಾಗಿ ಕಾಯುತ್ತಾ ಕುಳಿತಿದ್ದ ನೂರಾರು ಕರ್ಚೀಫುಗಳ ಮಧ್ಯೆ ಕಾಮನಬಿಲ್ಲಿನೊಳಗಿನಿಂದ ಹೆಕ್ಕಿ ತಂದಂತಿದ್ದ ಗುಲಾಬಿಯ ರಂಗಿನೊಳಗೆ ಅದ್ದಿದಂತೆ ಕಂಡ ಈ ಮಾದಕ ಚೆಲುವೆ ನನ್ನ ಮನಸೂರೆಗೊಂಡಳು. ಪಂಪಭಾರತದಲ್ಲಿ ಯೋಜನಗಂಧಿಯಾದ ಸತ್ಯವತಿಯ ಮೋಹಕ್ಕೆ ಪರವಶನಾದ ಶಂತನು ಅವಳ ಕೈಹಿಡಿದು ಒಲುಮೆಯನ್ನು ಬೇಡಿದಾಗ ಆಕೆ ಹೇಳಿದ ” ಬೇಡುವೊಡೆ ಎನ್ನಯ್ಯನಂ ಬೇಡಿರೆ ” ಎಂಬ ಮಾತುಗಳು ನನಗೆ ನೆನಪಾಗಿ  ಈಕೆಯ ಹಾವಭಾವವೂ ಅದೇ ರೀತಿ ಕಂಡಿತೆನಗೆ. ಇದಕ್ಕೆ ಅವಕಾಶವಿಲ್ಲದಂತೆ ನಾನು ಇವಳ ತಂದೆಯಂತಿದ್ದ ಮಾಲೀಕನ ಹತ್ತಿರ ಅನುಮತಿ ಪಡೆದುಕೊಂಡೇ ಇವಳ ಸ್ನೇಹ ಬಯಸಿದೆ. ನನ್ನವಳಾದಳು ಗುಲಾಬಿ ಕೆನ್ನೆಯ ಕರವಸ್ತ್ರದಾಕೆ. ನೋಯಿಸಬಾರದೆಂದು ಆಕೆಯ ಜೊತೆಗಿದ್ದ ಸಖಿಯರನ್ನೂ ಕರೆದೊಯ್ದೆ. ಈಕೆಯನ್ನು ಬಿಟ್ಟಿರಲಾಗದ ಮೋಹಪಾಶದೊಳಗೆ ಸಿಲುಕಿದ ನನ್ನ ವರ್ತನೆಗಳನ್ನು ಗಮನಿಸಿದ ಸತಿಗೆ ಸವತಿ ಬಂದಂತಾಯಿತು ಮನೆಗೆ. ಈ ಕರ್ಚೀಫು ರಾಣಿಯನ್ನು ಕಂಡಾಗಲೊಮ್ಮೆ ನನಗೆ ನೆನಪಾಗುವುದು ಶಿಶುನಾಳ ಶರೀಫರ ಈ ಹಾಡು
“ಸ್ನೇಹ ಮಾಡಬೇಕಿಂಥವಳ! – ಒಳ್ಳೇ
ಮೋಹದಿಂದಲಿ ಬಂದು – ಕೂಡುವಂಥವಳ
ಚಂದ್ರಗಾವಿ ಶೀರೀನುಟ್ಟು – ದಿವ್ಯ
ಕೆಂದಾವರಿ ಮಗ್ಗಿ ಕುಪ್ಪಸ ತೊಟ್ಟು
ಬಂದಳು ಮಂದಿರ ಬಿಟ್ಟು – ನಾಲ್ಕು
ಮಂದಿಯೊಳು ಬಂದು ನಾಚುವಳೆಷ್ಟು!.
ಇಂತಹ ನಾಚಿಕೆಯಿಂದಲೇ ನನ್ನೆಡೆಗೆ ಬಂದವಳೀಗ  ಮನಸ್ಸನ್ನಾವರಿಸಿಕೊಂಡ ರಾಣಿ. ಕಾಯಕಕ್ಕಾಗಲಿ, ಯಾವುದೇ ಕಾರ್ಯಕ್ರಮಕ್ಕಾಗಲಿ, ಸಮಾರಂಭಗಳಿಗಾಗಲಿ ಹೆಂಡತಿಗಿಂತಲೂ ನನ್ನ ಅಚ್ಚುಮೆಚ್ವಿನ ಜೊತೆಗಾತಿಯೆಂದರೆ ಈ ವಸ್ತ್ರಾಂಗನೆ. ಏಕೆಂದರೆ ಈಕೆಯನ್ನು ಮುಖ ಮೇಲಾಗುವಂತೆ ಮಡಚಿ, ಜೇಬಿನಲ್ಲಿಟ್ಟುಕೊಂಡು  ಸಲೀಸಾಗಿ ಕರೆದೊಯ್ಯಬಹುದು. ಆದರೆ ಹೆಂಡತಿಯನ್ನು ಕರೆದೊಯ್ಯಲು ಮತ್ತೊಂದು ವಾಹನದ ಅಗತ್ಯಬೀಳುತ್ತದೆ ಎಂದ ಮೇಲೆ ನೀವೇ ಊಹಿಸಿ ಯಾವುದು ಸರಳಸುಲಭವೆಂದು!.
ಗುಲಾಬಿಯ ಹೂವಿನಂತಿದ್ದ ಈಕೆಯೇನಾದರೂ ನನ್ನೊಡನೆ ಬರಲು ಕೆಲವೊಮ್ಮೆ  ಸಿದ್ಧವಾಗದೇ, ತಡವಾಯಿತೆಂದಾಗ, ನೀಲಿ ಕಂಗಳ ಚೆಲುವೆಯಾದ ಇವಳ ಮತ್ತೊಬ್ಬ ಸಖಿಯು ಜೊತೆಯಾದಳು. ಹೀಗೆ ಕರ್ಚೀಫು ರಾಣಿಯರ ಮಧ್ಯದ  ಜೀವನದ ರಸಘಳಿಗೆಗಳು ಬದುಕಿಗೊಂದು ನವ ಚೈತನ್ಯವನ್ನು ನೀಡುತ್ತಲೇ ಬಂದಿವೆ.
ಇಂತಿಪ್ಪ ಗುಲಾಬಿ ಕರ್ಚೀಫು ರಾಣಿಯೊಂದಿಗಿನ ನನ್ನ ಜೀವನದಲ್ಲೊಮ್ಮೆ ಬಿರುಗಾಳಿ ಬೀಸಿದ ಅನುಭವವಾಯಿತು. ಅದ್ಯಾರ ಕಣ್ಣುಗಳು ತಟ್ಟಿದವೋ ನಮ್ಮ ಸುಖಿ ಸಂಸಾರಕೆ. ಅಂದು ನನ್ನೂರಿನಿಂದ ಬಾಗಲಕೋಟೆಗೆಂದು ಯಾವುದೋ ಕೆಲಸದ ಮೇಲೆ ತೆರಳಲು ಸಿದ್ಧವಾಗಿ ಬಸ್ ನಿಲ್ದಾಣದ ಹೊರಗೆ ಬಸ್ಸಿಗಾಗಿ ಕಾಯುತ್ತಿದ್ದೆ. ಟೆಂಪೋವೊಂದು ಶಬ್ದ ಮಾಡುತ್ತಾ ಬಂದಾಗ  ” ಸಾಧನ ಯಾವುದಾದರೇನು ? ಕೊಂಡೊಯ್ಯುವ ಗುರಿ ಮಾತ್ರ ದೇವನೆಡೆಗೆ ಅಲ್ಲವೇ ? ಎಂದುಕೊಂಡು ಸೀಟು ಹಿಡಿಯಲು ಮುಂದಾದೆ. ಗದ್ದಲವಿದ್ದುದರಿಂದ  ಕಿಟಕಿಬದಿಯ ಸೀಟಿಗಾಗಿ, ನನ್ನ ಮುದ್ದಿನ ಗುಲಾಬಿ‌ ಕರ್ಚೀಫು ರಾಣಿಗೆ ಹೇಳಿ ಅವಳನ್ನು ಕೂಡ್ರಿಸಿದೆ. ಹೇಗೋ ಏರಿ ಕುಳಿತೆ. ಟೆಂಪೋ ಚಲಿಸಿತು. ಪ್ರಯಾಣ ಪ್ರವಾಸವೆಂದರೆ ಹಾಲು ಕುಡಿದಷ್ಟು ಮಹದಾನಂದವನ್ನನುಭವಿಸುವ ನಾನು ಕಿಟಕಿಯಾಚೆಗಿನ ಪ್ರಕೃತಿ ಬಿಡಿಸಿದ ಕಲಾಕೃತಿಗಳನ್ನು ಕಣ್ತುಂಬಿಕೊಂಡು ತಣಿಯುವುದರಲ್ಲಿ ತಲ್ಲೀನನಾದೆ. ಅದುವರೆಗೂ ಹಿತವಾಗಿ ಬೀಸುತ್ತಿದ್ದ ಮಿತಗಾಳಿಯು ಈ ರಸಾನಂದದ ಸ್ವರ್ಗಕ್ಕೆ ಹಾದಿಯನ್ನು ತೋರಿತು. ಕರವಸ್ತ್ರ ರಾಣಿಯೂ ಒಮ್ಮೆ  ಪ್ರಕೃತಿಯ ಈ ಲಾವಣ್ಯವನ್ನು ಆನಂದಿಸಲಿ ಎಂದು ಅವಳನ್ನು ಕೈಯ್ಯಲ್ಲಿಯೇ ಹಿಡಿದುಕೊಂಡು ಕುಳಿತಿದ್ದೆ. ಬೀಸುತ್ತಿದ್ದ ತಂಗಾಳಿಗೆ ಮೈಮನಗಳನ್ನರಳಿಸಿಕೊಂಡು ನನ್ನ ಅಂಗೈಯ್ಯನ್ನು ಸುತ್ತಿ ಬಳಸಿ‌ ಬೆರಳುಗಳನ್ನು ತಬ್ಬಿಕೊಂಡು  ಧ್ಯಾನಾನಂದದಲಿ ತೇಲುತ್ತಿದ್ದಳಾಕೆ. ನಾನು ಕೆಲ ಕ್ಷಣಗಳಲ್ಲಿ ಪರಿಸರದ ಸೌಂದರ್ಯವನ್ನು ಆಸ್ವಾದಿಸುತ್ತಲೇ ಕಣ್ಮುಚ್ಚಿ ಮೈಮರೆತೆ. ಕನಿಷ್ಠ ಹದಿನೈದು ನಿಮಿಷವಾದರೂ ಬೇಕು ಒಂದು ಆವೃತ್ತಿಯ ನನ್ನ ಧ್ಯಾನಕ್ಕೆ. ಇದೇ ಸದವಕಾಶವೆಂದು, ಮೈಮನಗಳ ಸುಳಿಯನ್ನು ಮರೆತು ಆಕಾಶಗಮನಿಯಾದೆ ಖೇಚರರಂತೆ. ಕೆಲ ಹೊತ್ತಿನ ನಂತರ ಸಮಯವಾಯಿತೆಂದು ಕೆಳಗಿಳಿದು ನಿಧಾನವಾಗಿ ಕಣ್ಣುತೆರೆದೆ. ಒಮ್ಮೆಲೇ ಆಘಾತವಾಯಿತು. ಕೈಯ್ಯಲ್ಲಿನ  ರಾಣಿಯೇ ಮಂಗಮಾಯ!! ತಡಬಡಾಯಿಸಿ ಮೇಲೆ, ಕೆಳಗೆ, ಅಕ್ಕ ಪಕ್ಕದಲ್ಲೆಲ್ಲಾ ಹುಡುಕಿದೆ.
“ಚಿಲಿಪಿಲಿಯೆಂದೋದುವ ಗಿಳಿಗಳಿರಾ ನೀವು ಕಾಣಿರೆ ನೀವು ಕಾಣಿರೆ
ಸರವೆತ್ತಿ ಪಾಡುವ ಗಿಳಿಗಳಿರಾ ನೀವು ಕಾಣಿರೆ ನೀವು ಕಾಣಿರೆ ….”  ಎಂದು ಅಕ್ಕನಂತೆ ಹಾಡುವ ದುಃಖ ನನ್ನದಾಯಿತು. ಸುಳಿವೇ ಸಿಗದೇ ಕಂಗಾಲಾದೆ. ಮನಸು ತಡೆಯಲಾರದೇ ಪಕ್ಕದವರನ್ನು ಕೇಳಿದೆ – ನೋಡಿಲ್ಲವೆಂದರು. ಎದುರಿಗಿದ್ದವರನ್ನು ಕೇಳಿದೆ – ನೀವು ಮಲಗಿದ್ದಾಗ ಹಾರಿ ಹೋಗುವುದನ್ನು ನೋಡಿದೆ….ತಡೆಯಲಾಗಲಿಲ್ಲ….” ಎಂದರು. “ಘಾತವಾಯಿತು, ನಿಲ್ಲಿಸಿ ಗಾಡಿಯನ್ನು..” ಎಂದು‌ ಗದ್ಗದಿತನಾಗಿ ಕೂಗಿದೆ. ಟೆಂಪೋದಲ್ಲಿದ್ದವರೆಲ್ಲರೂ ಗಾಬರಿಯಾಗಿ ” ಏನಾಯಿತು ಏನಾಯಿತು” ಎಂದರು. ” ಕರ್ಚೀಫು ಹಾರಿಹೋಗಿದೆ …” ಎಂದರು ಎದುರಿನಲ್ಲಿ ಕುಳಿತಿದ್ದ ಮಹನೀಯರು. ಗೊಳ್ ಎಂದು ನಕ್ಕರು ಅಲ್ಲಿದ್ದವರೆಲ್ಲರೂ. “ನಡೀರಿ ನಡೀರಿ ಮತ್ತೊಂದು ತಗೊಂಡ್ರಾಯ್ತು…” ಹಿಂದೆ ಕುಳಿತಿದ್ದವರೊಬ್ಬರು ಸಲಹೆ ನೀಡಿದರು. ನಿಮಗದು ಕೇವಲ ಕರ್ಚೀಫಾಗಿರಬಹುದು ನನಗದು ಆತ್ಮಸಂಗಾತಿ. ಸವೆದ ಜೀವನದಲ್ಲಿ ಆಕಸ್ಮಿಕವಾಗಿ ಜೊತೆಯಿದ್ದು ಇದುವರೆಗೂ ಮುನ್ನಡೆಸಿದ ಜೊತೆಗಾತಿ. ಎಂದು ಮನದಲ್ಲಿಯೇ ಹಳಹಳಿಸಿ ಉತ್ತರಿಸಿದೆ. ಕರ್ಚೀಫಿನ ರಾಣಿ ಹಾರಿ ಹೋಗಿದ್ದ ದಿಕ್ಕಿಗೆ ಓಡಿ ಹೋದೆ.  ಬಾಣಗಳ ಮೇಲೆ ಮಲಗಿದ ಭೀಷ್ಮನಂತೆ ರಸ್ತೆ ಬದಿಯ ಗಿಡದ ಮುಳ್ಳುಗಳಿಗೆ ಸಿಲುಕಿರುವಳೋ ಏನೋ ಎಂದು ಹುಡುಕಾಡಿದೆ‌. ಎಲ್ಲೂ ಕಾಣಲಿಲ್ಲ. ಕನಿಷ್ಠ ಸುಳಿವು ಕೂಡ ದಕ್ಕಲಿಲ್ಲ.‌ ದಾರಿ ಕಾಣದಾಗಿದೆ ಎಂದು ದಿಕ್ಕೆಟ್ಟು ಕಂಗಾಲಾಗಿ ಅಲೆದಾಡಿದೆ. ಅಷ್ಟರಲ್ಲಿ ಟೆಂಪೋದಲ್ಲಿದ್ದವರು “ಬರ್ರೀ ಬರ್ರೀ …..ಹೊತ್ತಾತು ಹೋಗೋಣ..”  ಎಂದು ಎಳೆದೊಯ್ದು ಕೂಡ್ರಿಸಿದರು. ನೆನಪುಗಳ ದಾರಿ ತೆರೆಯಿತು.
ಆಕೆ ನನ್ನ ಮನೆಗೆ ಬಂದು ಎರಡು ವರುಷಗಳಾಗಿರಬೇಕಷ್ಟೇ.  ಅದುವರೆಗೂ ಜೊತೆಯಾಗಿದ್ದು, ನನ್ನ ಸಕಲ ಕಷ್ಟಸುಖಗಳಲ್ಲೆಲ್ಲಾ ಭಾಗಿಯಾಗಿ ಸಂತೈಸುತ್ತಿದ್ದ,  ಪರಮಾಪ್ತ ಜೀವವೊಂದನ್ನು ಕಳೆದುಕೊಂಡಂತಹ ದುಃಖವನ್ನನುಭವಿಸಿದೆ. ಕಷ್ಟಕಾಲದಲ್ಲಿ ನನ್ನ ಕಣ್ಣೀರನ್ನೇ ಕುಡಿದು ಸಂಕಟಗಳನ್ನು ನೀಗಿಸುತ್ತಿದ್ದ ಆ ರಾಣಿಯ ನೆನಪುಗಳು ದಂಡಿಯಾಗಿ ಮುತ್ತಿದವು. ನಾನು ದುಡಿಯುವಾಗ ಹರಿದ ಬೆವರಿನ ಹನಿಗಳನ್ನೇ ಕುಡಿದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ ಆಪದ್ಬಾಂಧವಳನ್ನು ಇಲ್ಲವಾಗಿಸಿಕೊಂಡ ನೋವು ನನ್ನದಾಯಿತು.  ಡಾ. ಎನ್.ಎಸ್ . ಲಕ್ಷ್ಮೀನಾರಾಯಣಭಟ್ಟರ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ 
ನಾ ತಾಳಲಾರೆ ಈ ವಿರಹ ಕೃಷ್ಣ
ಕಮಲವಿಲ್ಲದ ಕೆರೆ ನನ್ನ ಬಾಳು 
ಚಂದ್ರ ಇಲ್ಲದಾ ರಾತ್ರಿ ಬೀಳು 
ನೀ ಸಿಗದೇ ಉರಿ ಉರಿ ಕಳೆದೆ ಇರುಳ
ಮಾತೆಲ್ಲ ಬಿಗಿದಿದೆ ದುಃಖ ಕೊರಳ
ಎಂಬ ಹಾಡಿನಲ್ಲಿಯ ವಿರಹವು ರಾಣಿಯನ್ಹು ಕಳೆದುಕೊಂಡು ಅಲೆಯುತ್ತಿದ್ದ ನನ್ನನ್ನೂ ಬಾಧಿಸದೇ ಇರಲಿಲ್ಲ. ಹೋಲಿಕೆಯಲ್ಲಿ ನೈದಿಲೆಯನ್ನೇ ಪರಿಪಾಲಿಸುತ್ತಿದ್ದ ಕರವಸ್ತ್ರರಾಣಿಯಿಲ್ಲದ ಬಾಳು ಕಮಲವಿಲ್ಲದ ಕೆರೆಯಂತಾಯಿತು. ಚಂದಿರನಿಲ್ಲದ ರಾತ್ರಿಯಂತಾಯಿತು. ಗೋಳಿಟ್ಟೆ. ಬೇರೆ ದಾರಿ ಇಲ್ಲದೇ ಮನೆಗೆ ಬಂದು ಅಶ್ರುತರ್ಪಣ ಕೊಟ್ಟೆ. ಸುದ್ದಿ ಕೇಳಿ ತಲ್ಲಣಗೊಂಡ ಬಕೆಟ್ಟಿನೊಳಗಿದ್ದ ಅವಳ ಸಖಿಯರು ಇನ್ನಿಲ್ಲದಂತೆ ದುಃಖಿಸಿದರು.  ಮುಂಗಾರು ಮಳೆಯಲ್ಲಿ ಯೋಗರಾಜ ಭಟ್ಟರು ಬರೆದ ಪ್ರೇಮ ಮಧುರ ತ್ಯಾಗ ಅಮರವೆಂಬ ಸತ್ಯ ನೆನಪಾಯಿತು. ಕೆಲವೇ ದಿನಗಳ ಮರೆಯಲಾಗದ ಗೆಳತಿಯನ್ನು ಈಗಲೂ ಸ್ಮರಿಸಿಕೊಳ್ಳುತ್ತಿರುತ್ತೇನೆ ಅವಳ ಸಖಿಯರ ಮುಂದೆ ನಿಂತು. ಕೈಜಾರಿದ ರಾಣಿಯಿಂದಾಗಿ ಒದಗಿದ ದುಃಖವನ್ನು ಅವಳ ಸಖಿಯೆದುರು ಕುಳಿತು  ದಿಟ್ಟಿಸಿ ನೋಡಿ “ನೀ ಹಿಂಗ ನೋಡಬ್ಯಾಡ ನನ್ನ ” ಎಂದು ಹಾಡಿ ಪಶ್ಚಾತ್ತಾಪ ಪಟ್ಟಿದ್ದೇನೆ. ಆಕೆಯ ನಂತರ ಅದೆಷ್ಟೋ ರಂಗು ರಂಗಿನ ವಸ್ತ್ರಾಂಗನೆಯರು ನಮ್ಮ ಮನೆಗೆ ಬಂದಿದ್ದಾರೆ. ಆದರೆ ಆ ಗುಲಾಬಿರಾಣಿಯಂಥವಳಂತೆ ನನ್ನ ಮನಸನ್ನು ಸೆಳೆದವರಿಲ್ಲ ಎನ್ನುವುದೇ ನನಗೆ ಬೇಸರ ತರಿಸುವ ಸಂಗತಿ. ಆಕೆ ಈಗಲೂ ನನ್ನನ್ನು ಕರಗಿಸುತ್ತಿರುವ ಜನ್ಮಾಂತರದ ಸತಿ. ಅವಳನ್ನು ಕಳೆದುಕೊಂಡ ಸಂಕಟವೇ ಹಾಡಾಗಿ ಹರಿದರ ಹೇಗಿರಬಲ್ಲದು ಎಂಬುದಕ್ಕೆ ಕವಿವರ್ಯ ಎಚ್.ಎಸ್. ವೆಂಕಟೇಶ ಮೂರ್ತಿಯವರ ಕೆಳಗಿನ ಸಾಲುಗಳು ಉತ್ತರದಂತಿವೆ –
“ಸಾವಿರಾರು ಮುಖದ ಚೆಲುವು ತೆರೆದು ತೋರಿಯೂ
ಒಂದಾದರೂ ಉಳಿಯಿತೇನು ಕನ್ನಡಿಯ ಪಾಲಿಗೆ”
 ಪ್ರೊ. ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು,
ಬೀಳಗಿ ಜಿ ಬಾಗಲಕೋಟ ಮೊ.ನಂ.9972409345

Leave a Reply

Your email address will not be published. Required fields are marked *