ನಾವು ಯಾವತ್ತೋ ಯಾರಿಗೋ ಹೇಗೋ ನೆನಪಾಗುತ್ತೇವೆ

in ಖಾಸ್ । ಬಾತ್

ಸಾಫ್ಟ್‌ಕಾರ್ನರ್:

ನಾವು ಯಾವುದೋ ಕಾರಣಕ್ಕಾಗಿ ಯಾರಿಗೋ, ಯಾವಾಗಲೋ, ಹೇಗೋ ನೆನಪಾಗುತ್ತೇವೆ.

ನಾನು ಯಾವಾಗಾದರೊಮ್ಮೆ ಫೇಸ್‌ಬುಕ್ ತಡಕಾಡುತ್ತೇನೆ. ಕೆಲವೊಮ್ಮೆ ಸುಮ್ಮನೆ ಒಂದು ವಾಕ್ಯ ಅಥವಾ ಶಬ್ದವನ್ನ ನನ್ನ ಫೇಸ್‌ಬುಕ್ ಗೋಡೆಗೆ ಹಾಕಿ ಅಕ್ಷರಶಃ ಅದನ್ನು ಮರೆತೆಬಿಡುತ್ತೇನೆ. ಮೊನ್ನೆ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ರಂಜನ್ ಗೊಗೊಯಿಯನ್ನು ಮೋದಿ ಗ್ಯಾಂಗ್ ರಾಜ್ಯಸಭೆಗೆ ನೇಮಕ ಮಾಡಿದಾಗ ಸುಮ್ಮನೆ subtle ಆಗಿ ‘ಬಂತಲ್ಲ ಗೊಗ್ಗಯ್ಯ’ ಅಂತ ಬರೆದು ಸುಮ್ಮನಾಗಿಬಿಟ್ಟೆ. ಅನೇಕರಿಗೆ ಅದು ಅರ್ಥವಾಗಲಿಲ್ಲ. ನೀವು ಕೊರೋನಾ ಬಗ್ಗೆ ಹೀಗೆ ಬರೆದಿದ್ದೀರಲ್ಲವಾ? ಅಂತ ಕೆಲವರು ಕೇಳಿದರು. ಕೆಲವು ಜಾಣರು ಮಾತ್ರ ಅರ್ಥ ಮಾಡಿಕೊಂಡು ‘‘ಇನ್ನು ಮೇಲೆ ಗೊಗ್ಗಯ್ಯ ರಾಜ್ಯಸಭೆಯಲ್ಲಿ ಕಾಣಿಸಿಕೊಳ್ಳುತ್ತದೆ” ಅಂತ ಪ್ರತಿಕ್ರಿಯಿಸಿದರು. ಇದೇ ತರಹದ ಇನ್ಯಾವುದೋ ಒಂದು ಪೋಸ್ಟ್ ಹಾಕಿದ್ದಕ್ಕೆ ಒಬ್ಬ ಮಹಾನುಭಾವ ‘‘ನಾನು ನಾಲ್ಕನೇ ಕ್ಲಾಸ್‌ನಲ್ಲಿದ್ದಾಗಲೇ ಈ ‘ಹಾಯ್ ಬೆಂಗಳೂರ್!’ ಓದೋದನ್ನು ನಿಲ್ಲಿಸಿಬಿಟ್ಟೆ. ಇವನದು ತುಂಬ ದುಷ್ಟ ಮನಸು. ಮೊನ್ನೆ ಆಶಿಕ್ ಮುಲ್ಕಿ ‘ಹಾಯ್ ಬೆಂಗಳೂರ್!’ಗೆ ಸೇರಿಕೊಂಡನೆಂಬ ಕಾರಣಕ್ಕೆ ಆ ‘ಪತ್ರಿಕೆ’ಯನ್ನು ತರಿಸಿಕೊಂಡು ಓದಿದೆ. ಈ ಮನುಷ್ಯ ಇವತ್ತಿಗೂ ಬದಲಾಗಿಲ್ಲ. ಎಷ್ಟೊಂದು ವಿಷ ಕಾರುತ್ತಾನೆ. ಯಾಕಿಷ್ಟು ನಂಜು….” ಅಂತೆಲ್ಲ ಬರೆದಿದ್ದ. ಅವನಿಗೆ ಉತ್ತರವಾಗಿ ನಾನು ಹೆಚ್ಚೇನೂ ಬರೆಯಲು ಹೋಗಲಿಲ್ಲ. ಸುಮ್ಮನೆ ‘ನಾಲ್ಕನೇ ಕ್ಲಾಸ್ ಪಾಸ್ ಆಯ್ತಾ’ ಅಂತ ಬರೆದು ಸುಮ್ಮನಾಗಿಬಿಟ್ಟೆ. ನನಗೆ ಗೊತ್ತು, ಹೀಗೆ ಅಂಡು ಚಿಗುಟಿ ಕೈ ಬಿಟ್ಟಾಗ ಚಿಗುಟಿಸಿಕೊಂಡವನು ದಿನಗಟ್ಟಲೆ ಕಿರುಚುತ್ತಿರುತ್ತಾನೆ ಮತ್ತು ನಾನು ಅದನ್ನು ಎಲ್ಲೋ ಕುಳಿತು ಆನಂದಿಸುತ್ತಿರುತ್ತೇನೆ. ನಾವು ಜಗಳಗಳನ್ನು ರೊಚ್ಚಿಗೆ ಬಿದ್ದು ಮಾಡಬಾರದು. ಯಾರನ್ನಾದರೂ ಹಾಗೆ ದಿನಗಟ್ಟಲೆ, ವರ್ಷಗಟ್ಟಲೆ hate ಮಾಡುವುದಕ್ಕೆ ನಮಗೆ ಸಮಯವಾದರೂ ಎಲ್ಲಿದೆ? ಶತ್ರುಗಳನ್ನು ಪ್ರೀತಿಸಲಿಕ್ಕೆ ಸಾಧ್ಯವಾಗದಿದ್ದರೆ ಕಡೇಪಕ್ಷ ಅವರನ್ನು ನಾವು ignore ಮಾಡೋದನ್ನ ಕಲಿಯಬೇಕು. ಹೆಚ್ಚೆಂದರೆ ಅವರನ್ನು confuse ಮಾಡಿ ಕೈ ಬಿಡಬೇಕು. ಕೆಲವೊಂದು ಸಲ ಕಾಂಜೀಪೀಂಜಿಗಳು ಫೇಸ್‌ಬುಕ್‌ನಲ್ಲಿ ಬಾಯಿಗೆ ಸಿಕ್ಕಂತೆ ಬರೆಯುತ್ತಾರೆ. ಫೇಸ್‌ಬುಕ್‌ಗೆ ಅಪ್ಪ-ಅಮ್ಮ ಎರಡೂ ಇಲ್ಲ. ನಿನ್ನೆಯ ತನಕ ನನ್ನನ್ನು ಮಹಾನ್ ದೇಶಪ್ರೇಮಿ ಎಂದು ಹೆಗಲ ಮೇಲೆ ಹೊತ್ತುಕೊಂಡು ಕುಣಿಯುತ್ತಿದ್ದವರು ಮೋದಿಯ ವಿರುದ್ಧ ಒಂದೇ ಒಂದು ಸಲ ಬರೆದದ್ದು ಕಂಡು ನನ್ನನ್ನು ದೇಶದ್ರೋಹಿ ಅಂತ ತೀರ್ಮಾನಿಸಿ ಬಾಯಿಗೆ ಸಿಕ್ಕಂತೆ ಬರೆದು ಬೈಯುತ್ತಾರೆ. ಈ ಮೋದಿ ಭಕ್ತರ ಅತಿರೇಕ ಯಾವ ಮಟ್ಟಕ್ಕೆ ಹೋಗಿ ನಿಲ್ಲುತ್ತದೆಂದರೆ ಹಿರಿಯರಾದ ದೊರೆಸ್ವಾಮಿಯವರನ್ನು ಬಾಯಿಗೆ ಸಿಕ್ಕಂತೆ ಬೈದನೆಂಬ ಕಾರಣಕ್ಕಾಗಿ ಮನುಷ್ಯ ಮಾತ್ರರು ಪ್ರೀತಿಸಲಿಕ್ಕೆ ಸಾಧ್ಯವೇ ಇಲ್ಲದ third rate ರಾಜಕಾರಣಿ ಬಸನಗೌಡ ಯತ್ನಾಳ್‌ನನ್ನು ‘ಜೈ ಯತ್ನಾಳ್’ ಎಂದು ಹೊಗಳಿ ಕೊಂಡಾಡುತ್ತಾರೆ.

ನನಗೆ ಆತಂಕವಾಗುವುದೇ ಆಗ. ನಮ್ಮ ಯುವಕರು- ಯುವತಿಯರು ಈ ದಿಕ್ಕಿನಲ್ಲಿ ಮುಂದೆ ಸಾಗಬಾರದು. ಪರಿಸ್ಥಿತಿ ತೀರ ಈ ಪರಿ rabid ಆಗಬಾರದು. ಮತ್ತದೇ ಮಾತನ್ನು ಹೇಳುತ್ತೇನೆ. ನಾವು ಯಾವತ್ತೋ, ಯಾರಿಗೋ, ಹೇಗೋ ನೆನಪಾಗುತ್ತೇವೆ. ಆ ನೆನಪು ಮಧುರವಾಗಿರಬೇಕು. ಅದಷ್ಟೇ ನನ್ನ ಆಸೆ.

-ಬೆಳಗೆರೆ

Leave a Reply

Your email address will not be published.

*

Latest from ಖಾಸ್ । ಬಾತ್

Go to Top