ನನ್ನ ಮಗನಿಗೆ ಎಸ್ಟೇಟಿಗೆ ಬಂದ ಹುಲಿಯ ಭಾಷೆಯೂ ಅರ್ಥವಾಗುತ್ತದೆನೋ?

in ಖಾಸ್ । ಬಾತ್

ಖಾಸ್‌ಬಾತ್:

ನನ್ನ ಮಗನಿಗೆ ಎಸ್ಟೇಟಿಗೆ ಬಂದ ಹುಲಿಯ ಭಾಷೆಯೂ ಅರ್ಥವಾಗುತ್ತದೆನೋ?

ನನ್ನ ಎಸ್ಟೇಟ್‌ಗೆ ಬಂದ ಮುದ್ದು ಹುಲಿ ಆ ಸ್ವಾಮಿಗಿಂತ ನಿಜಕ್ಕೂ ಶ್ರೇಷ್ಠ. ಅದು ಹಸಿವಾಗದ ಹೊರತು ಬೇಟೆಯಾಡುವುದಿಲ್ಲ. ಬೆದೆಗೆ ಬರದ ಹೊರತು ಸಂಭೋಗ ಮಾಡುವುದಿಲ್ಲ. ಅಸಲಿಗೆ ನಮಗೆ ‘ಸಂಭೋಗ’ವೆಂದರೆ ಏನೆಂದೇ ಗೊತ್ತಿಲ್ಲ. ಆ ಶಬ್ದವನ್ನು ವಿಸ್ತರಿಸಿದರೆ ಅದು ‘ಸಮ ಭೋಗ’. Mutual act. ಪಾಶ್ಚಾತ್ಯರು ‘I fucked her’ ಅಥವಾ ‘He fucked me’ ಅಂತ ಅನ್ನುವುದೇ ಇಲ್ಲ. ‘we fucked’ ಅನ್ನುತ್ತಾರೆ.

ಹುಲಿ ಬಂದಿದೆ.

ನಾನು ಥಕ ಥಕ ಥಕ ಕುಣಿಯುತ್ತಿದ್ದೇನೆ. ನನ್ನ ಜೊಯಿಡಾ ಎಸ್ಟೇಟ್‌ಗೆ ಹುಲಿ ಬಂದಿದೆ. ಅಲ್ಲಿ ನಮಗೆ ಚಿರತೆ ಒಂಥರಾ ನಾಯಿ- ಬೆಕ್ಕುಗಳಿಗೆ ಸಮಾನ. ಅಷ್ಟು ಚಿರತೆಗಳು ಓಡಾಡುತ್ತವೆ. ಎಸ್ಟೇಟ್‌ನಲ್ಲಿ ಇರಲಿ ಅಂತ ನಾನು ಮುದ್ದಾದ ಎರಡು ಡಾಬರ್‌ಮನ್ ನಾಯಿಮರಿಗಳನ್ನು ಒಯ್ದು ಅಲ್ಲಿಟ್ಟೆ. ಮೂರೇ ತಿಂಗಳುಗಳಲ್ಲಿ ನನ್ನ ಮುದ್ದಿನ ಎರಡೂ ಡಾಬರ್‌ಮನ್ ಮರಿಗಳನ್ನು ಚಿರತೆ ಎತ್ತಿಕೊಂಡು ಹೋಗಿ ಭೋಜನ ಮಾಡಿ ಇನ್ನೊಂದು ಇದೆಯಾ ಎಂಬಂತೆ ನೋಡಿತು. ತಪ್ಪು ನಮ್ಮದೇ, ಅವುಗಳಿರುವ ಜಾಗಕ್ಕೆ ನಾವು ಹೋಗಿ ಮನೆ ಕಟ್ಟಿಕೊಂಡಿದ್ದೇವೆ. ಚಿರತೆ ಇನ್ನೇನು ದಾಂಡೇಲಿಗೆ ಹೋಗಿ ರೂಮ್ ಮಾಡಿಕೊಂಡಿರುತ್ತದಾ? ತನ್ನ ಮನೆಗೆ ತಾನು ಬರುತ್ತದೆ. ಅದು ಸಹಜ. ಜೊಯಿಡಾದ ನನ್ನ ಬಂಗಲೆ ಎಂತಹ ಘನಘೋರ ಕಾಡಿನ ನಡುವೆ ಇದೆ ಅಂದರೆ ಸಂಜೆ ನಾನು ಎಸ್ಟೇಟ್‌ನ ಬಾಗಿಲಲ್ಲಿ ನಿಂತರೆ ಒಂದು ಹಿಂಡು ಕಾಡೆಮ್ಮೆಗಳು ಆರಾಮಾಗಿ ನಡೆಯುತ್ತಾ ಹೋಗುವುದು ಕಾಣಿಸುತ್ತದೆ. ಅಪರೂಪಕ್ಕೊಮ್ಮೆ ಒಂದು ಕಾಡೆಮ್ಮೆ ನನ್ನ ಕಡೆಗೆ ತಿರುಗಿ ನೋಡಿ ‘ಯಾವಾಗ ಬಂದೆ’ ಎಂಬಂತೆ ತನ್ನ ದೊಡ್ಡ ಕಣ್ಣು ಅರಳಿಸಿ ನಸುನಕ್ಕು ಮುಂದೆ ಹೋಗುತ್ತದೆ. ಸ್ವತಃ ಮಳಗಾಂವ್‌ಕರ್ ಅವರು ರಸ್ತೆಯ ಮೇಲೆ ಉದ್ದೋ ಉದ್ದಕ್ಕೆ ಮಲಗಿದ್ದ ಹುಲಿಯನ್ನು ನೋಡಿದ್ದನ್ನು ನೆನೆಸಿಕೊಳ್ಳುತ್ತಿದ್ದರು. ಇಡೀ ಕರ್ನಾಟಕದಲ್ಲಿ ಜೊಯಿಡಾ ಸುತ್ತಲಿನ ಕಾಡು ಒಂದು ಅದ್ಭುತ ಠ್ಚಿ. ಅಂತಹ ದಟ್ಟ ಕಾಡು ಇನ್ನೆಲ್ಲೂ ಇಲ್ಲ. ಅಲ್ಲಿನ ಅರಣ್ಯ ಇಲಾಖೆ ತುಂಬ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿದೆ. ಯಾರಿಗೂ ಒಂದು ಕೊಂಬೆ ಮುರಿಯಲಿಕ್ಕೂ ಬಿಡುವುದಿಲ್ಲ. I am so happy. ಇರುವ ಅಂಗೈ ಅಗಲದ ಕಾಡನ್ನೂ ಸವರಿ ಹಾಕಿದರೆ ಗತಿ ಏನು?

ನಾನು ಎಸ್ಟೇಟಿಗೆ ಹೋಗಿ ನಾಲ್ಕು ತಿಂಗಳ ಮೇಲಾಗಿದೆ. ಕೆಲಸ, ಚಿಕ್ಕ ಅನಾರೋಗ್ಯ, ಈ ಕಾಲಕ್ಕೂ ನಾನು ಮಿಸ್ ಮಾಡಿಕೊಳ್ಳಲು ಇಚ್ಛಿಸದ ನನ್ನ ಮಗ ಹಿಮವಂತ ಮುಂತಾದ ಕಾರಣಗಳಿಗಾಗಿ ಹೋಗಲಾಗಿಲ್ಲ. I miss my forest. ಅಲ್ಲಿಗೆ ಹೋಗಲಿಕ್ಕೆಂದೇ ನಾನು ಹೊಚ್ಚ ಹೊಸ ಕಾರು Land Rover Discovery ಖರೀದಿಸಿದೆ. ಅದರಲ್ಲಿ ಒಂದು ಲಾಂಗ್ ಜರ್ನಿ ಮಾಡುವುದು ತುಂಬ ಸಂತೋಷಕರ. ಆದರೆ ಇಟ್ಟಿಗೆ, ಕಲ್ಲುಗಳ ಮಧ್ಯೆ ಹೇಗೆ ಬಂಧಿತನಾಗಿದ್ದೇನೆಂದರೆ ಬೆಂಗಳೂರು ದಾಟಿ ಬಿಡದಿಗೆ ಹೋಗಲೂ ನನಗೆ ಆಗಿಲ್ಲ. ನಿಜಕ್ಕೂ ನನಗೆ ಬೆಂಗಳೂರು ಅಸಹನೀಯ ಅನ್ನಿಸುತ್ತಿದೆ. ಇದು ಆವಾಸ ಯೋಗ್ಯವಾಗಿ ಉಳಿದಿಲ್ಲ. ಮೊನ್ನೆ ದಿಲ್ಲಿಯಿಂದ ಬಂದ ನನ್ನ ಹಚ್ಚ ಹಳೆಯ ಮಿತ್ರ ಗುರು, ‘ಸುಮ್ಮನಿರು ರವೀ ದಿಲ್ಲಿಗಿಂತ ಬೆಂಗಳೂರು ಸಾವಿರ ಪಾಲು ಚೆಂದ. ದಿಲ್ಲಿಯಲ್ಲಿ ಬದುಕು ಇನ್ನೂ ಭಯಂಕರ’ ಅಂದದ್ದು ನೂರಕ್ಕೆ ನೂರು ಸತ್ಯ. ದಿಲ್ಲಿಯ ಪರಿಸ್ಥಿತಿ ಏನಾಗಿದೆಯೆಂದರೆ ಎಷ್ಟೋ ದಿನ ಅಲ್ಲಿ ವಿಮಾನಗಳು ಇಳಿಯಲಿಕ್ಕೆ ಆಗದೆ ಹಿಂತಿರುಗುತ್ತವೆ. ಆ ಪರಿ ಹೊಗೆ ಮತ್ತು ಭರಿಸಲಾಗದ Pollution ಅಲ್ಲಿನ ಪರಿಸ್ಥಿತಿ ಹೇಗಾಗಿದೆ ಎಂದರೆ ದಯವಿಟ್ಟು ನಿಮ್ಮ ಕಾರು ಹೊರಕ್ಕೆ ತರಬೇಡಿ. ಅಕ್ಕಪಕ್ಕದ ಮನೆಗಳವರು ಒಂದೇ ಕಾರಿನಲ್ಲಿ ಆಫೀಸ್‌ಗಳಿಗೆ ಹೋಗಿ ಅಂತ ಸರ್ಕಾರ ಕಾನೂನು ಮಾಡುತ್ತಿದೆ. Car pooling ಅಲ್ಲಿ ಅನಿವಾರ್ಯವಾಗಿದೆ. ಬೆಂಗಳೂರಿನ ಬಿ.ಎಂ.ಟಿ.ಸಿ.ಯವರು ನಿಮ್ಮ ಕಾರು ಬಿಟ್ಟು ದಯವಿಟ್ಟು ನಮ್ಮ ಸಿಟಿ ಬಸ್ಸಿನಲ್ಲಿ ಓಡಾಡಿ ಎಂದು ಕರೆ ನೀಡುತ್ತಿದ್ದಾರೆ. ಇಲ್ಲಿನ ಟ್ರಾಫಿಕ್ ಜಾಮ್‌ಗಳು ಹೇಸಿಗೆ ಹುಟ್ಟಿಸುತ್ತಿವೆ. ಸ್ಕೂಟರಿನವರು, ಬೈಕಿನವರು ಎಷ್ಟು ಅಸಹಾಯಕರು ಎಂದರೆ ಫುಟ್‌ಪಾತ್‌ಗಳ ಮೇಲೆ ಡ್ರೈವ್ ಮಾಡಿ ಟ್ರಾಫಿಕ್ ಜಾಮ್‌ನ ಗಂಡಾಂತರದಿಂದ ತಪ್ಪಿಸಿಕೊಳ್ಳುತ್ತಾರೆ. ನಿಮ್ಮ ಭಾರತೀಯರಿಗೆ ಟ್ರಾಫಿಕ್ ಸೆನ್ಸ್ ಇಲ್ಲ ಎಂದು ನಮ್ಮ ಅನಿವಾಸಿ ಭಾರತೀಯರು ಸ್ಟುಪಿಡ್ ಆಗಿ ಮಾತನಾಡುತ್ತಾರೆ. ನನ್ನ ಕಾಡಿನಲ್ಲಿ ಇದ್ಯಾವ ರಗಳೆಯೂ ಇಲ್ಲ. ಸಂತಸದ ಸಂಗತಿ ಎಂದರೆ ಎಲ್ಲಿಂದಲೋ ಬಂದ ಹುಲಿಯೊಂದು ಮೊದಲ ಎರಡು ರಾತ್ರಿ ಕಾಂಪೌಂಡಿನೊಳಗಿನ ಶೆಡ್‌ನ ಸುತ್ತ ಓಡಾಡಿ ಗರ್ಜಿಸಿದೆ. ಮೂರನೆಯ ದಿನ ಅದು ಅಲ್ಲಿನ ಸಣ್ಣ ಕೊಚ್ಚೆಯಲ್ಲಿ ಯಾವ ಪರಿ ಓಡಾಡಿದೆ ಎಂದರೆ ನನ್ನ ಕೆಲಸಗಾರರು ಹೆಜ್ಜೆ ಗುರುತು ನೋಡಿ ತತ್ತರಿಸಿ ಹೋಗಿದ್ದಾರೆ. ನನಗಿಂತ ನನ್ನ ಮಗ ಹಿಮವಂತ ಎಕ್ಸೈಟ್ ಆಗಿದ್ದಾನೆ. ಅವನದು ಒಂದೇ ಹಟ ‘ಅಪ್ಪಾ, ಎಸ್ಟೇಟ್‌ಗೆ ಹೋಗೋಣ. ನಾನು ಹುಲಿ ನೋಡಬೇಕು’. ನಾವು ಹೋಗುವ ತನಕ ಕಾದು ನಿಲ್ಲಲು ಹುಲಿ ಏನು ಗರ್ಲ್‌ಫ್ರೆಂಡಾ? ಕಾಡಿನ ಮಧ್ಯೆ ಅದೆಲ್ಲಿ ಅನ್ನ ಹುಡುಕಿಕೊಂಡು ಓಡಾಡುತ್ತಿದೆಯೋ. ಸಾಮಾನ್ಯವಾಗಿ ಹುಲಿ ಹಾಗೆಲ್ಲ ಮನುಷ್ಯ ನಿವಾಸದ ಕಡೆ ಬರುವುದಿಲ್ಲ. ಅದು ಶುದ್ಧ ಒಂಟಿ ಜೀವಿ. Loner. ಹಸಿವಾದಾಗ ಬೇಟೆಯಾಡುತ್ತದೆ. ಹೆಣ್ಣು ಹುಲಿ ಬೆದೆಗೆ ಬಂದಾಗ ಗಂಡು ಹುಲಿಯನ್ನು ತಾನೇ ಕರೆಯುತ್ತದೆ. ಮುಗಿಬೀಳುವ ಮೂರ್ನಾಲ್ಕು ಹುಲಿಗಳ ಮಧ್ಯೆ ಯಾವ ಪರಿ ಕಾದಾಟವಾಗುತ್ತದೆ ಎಂದರೆ ಹೆಣ್ಣು ಹುಲಿ ಆ ಕಾದಾಟವನ್ನು ನೋಡಿ ಅವುಗಳ ಪೈಕಿ ಗೆಲ್ಲುವ ಅತ್ಯಂತ ಶಕ್ತಿಶಾಲಿ ಗಂಡು ಹುಲಿಯನ್ನು ಸೆಲೆಕ್ಟ್ ಮಾಡಿಕೊಂಡು ಪರಸ್ಪರ ಸುಖ ಅನುಭವಿಸಲು ಸಿದ್ಧವಾಗುತ್ತದೆ. ಅದು ಪ್ರಕೃತಿ ನಿಯಮ. ಒಬ್ಬ ಹುಡುಗಿ ಕೂಡ ತನ್ನೆಡೆಗೆ ಬರುವ ಹುಡುಗರ ಪೈಕಿ selects the best.  ಅವಳಿಗೆ ಆ ಸ್ವಾತಂತ್ರ ಇರಬೇಕಷ್ಟೆ.

ಗಂಡು ಹುಲಿ ತನ್ನ ಗೆಳತಿಯೊಂದಿಗೆ ಸಂತಾನ ಸುಖವನ್ನೂ ಅನುಭವಿಸುತ್ತದೆ. ಮರಿಗಳಿಗೆ ಈಜು ಕಲಿಸುತ್ತದೆ, ಬೇಟೆ ಕಲಿಸುತ್ತದೆ.  ಆದರೆ ಕೆಲವು ಕಾಲದ ನಂತರ ಹೆಣ್ಣು ಹುಲಿ ಆ ಶಕ್ತಿಯುತ ಗಂಡು ಹುಲಿಯನ್ನು ಬೆದರಿಸಿ ಓಡಿಸಿ ಬಿಡುತ್ತದೆ. ಏಕೆಂದರೆ ಗಂಡು ಹುಲಿ ತನ್ನ ಮಗಳತ್ತ ಕಣ್ಣು ಹಾಕುವುದನ್ನು ಅದು ಸಹಿಸುವುದಿಲ್ಲ. ಬಹುಶಃ ಅದನ್ನೇ ಇತ್ತೀಚೆಗೆ ಹೆಣ್ಣು ಮಗಳೊಬ್ಬಳು ರಾಘವೇಶ್ವರ ಸ್ವಾಮಿ ಎಂಬ ದುಷ್ಟನಿಗೆ ಮಾಡಿದಳು. ಅದೊಂದು ಸೆಕ್ಸ್ ಸ್ಕ್ಯಾಂಡಲ್. ಅದನ್ನು ಎಕ್ಸ್‌ಪೋಸ್ ಮಾಡಿದ್ದೇ ನಾನು. ನಮ್ಮ ಹವ್ಯಕವರೇಣ್ಯ ವಿಶ್ವವಿಖ್ಯಾತ ಪತ್ರಕರ್ತ ಭಟ್ಟರು ಯಾವ ಪರಿ ಅಸಹ್ಯಕರವಾಗಿ ಸ್ವಾಮಿಯ ಬೆಂಬಲಕ್ಕೆ ನಿಂತರೆಂದರೆ ಬಾಯಿಂದ ಕಕ್ಕಸು ವಾಸನೆ ಗಪ್ಪನೆ ಹೊಡೆಯುತ್ತಿತ್ತು. ಆಕೆ ಸ್ವಾಮಿಯ ವಿರುದ್ಧ ‘ಆತ ನನ್ನನ್ನು ಅರವತ್ತು-ಎಪ್ಪತ್ತು ಸಲ ರೇಪ್ ಮಾಡಿದ’ ಎಂದು ಕೇಸು ಹಾಕಿದಳು. ಆದರೆ ನ್ಯಾಯಾಲಯ ಒಂದು ದಿಟ್ಟ ತೀರ್ಪು ನೀಡಿತು. ‘ಇದು ರೇಪ್ ಅಲ್ಲ, ಪರಸ್ಪರ ಒಪ್ಪಿಗೆಯ ಕಾರಣಕ್ಕೆ ನಡೆದ ನಿರಂತರ ಸಂಭೋಗ’ ಎಂದು ಹೇಳಿತು. ದುರಂತವೆಂದರೆ ‘ನೀನು ರೇಪ್ ಮಾಡಿಲ್ಲ ನಿಜ. ಆದರೆ ಆಕೆಯೊಂದಿಗೆ ನಿರಂತರ ದೇಹ ಸಂಬಂಧ ಇಟ್ಟುಕೊಂಡಿದ್ದಿ. ಒಬ್ಬ ಸ್ವಾಮಿಯಾಗಿ ಈ ಕೆಲಸ ಮಾಡಿದ ಮೇಲೆ ಮತ್ತು ಅದು ಫ್ರೂವ್ ಆದ ಮೇಲೆ ನೀನು ಹೇಗೆ ಪೀಠಾಧಿಪತಿಯಾಗಿ ಉಳಿಯುತ್ತೀಯಯ್ಯಾ’ ಎಂದು ಒಬ್ಬೇ ಒಬ್ಬ ಹವ್ಯಕ ಸಮೂಹದಿಂದ ಕೂಗೆಬ್ಬಿಸಲಿಲ್ಲ. ಕೂಗೆಬ್ಬಿಸಲು ಬಂದ ಬೆರಳೆಣಿಕೆಯ ಕೆಲವರನ್ನು ಸ್ವಾಮಿಯ ದುಡ್ಡು, ದೌರ್ಜನ್ಯ ಮತ್ತು ಅಮೇಧ್ಯ ಭಕ್ಷಕ ಪತ್ರಕರ್ತರ ಸಮೂಹ ತುಳಿದು ಹೊಸಕಿ ಹಾಕಿತು. ಇವೆಲ್ಲವನ್ನೂ ನಾವು ಸಹಿಸಿಕೊಂಡು ಸುಮ್ಮನಿರಬೇಕಾಗಿದೆ.

ನನ್ನ ಎಸ್ಟೇಟ್‌ಗೆ ಬಂದ ಮುದ್ದು ಹುಲಿ ಆ ಸ್ವಾಮಿಗಿಂತ ನಿಜಕ್ಕೂ ಶ್ರೇಷ್ಠ. ಅದು ಹಸಿವಾಗದ ಹೊರತು ಬೇಟೆಯಾಡುವುದಿಲ್ಲ. ಬೆದೆಗೆ ಬರದ ಹೊರತು ಸಂಭೋಗ ಮಾಡುವುದಿಲ್ಲ. ಅಸಲಿಗೆ ನಮಗೆ ‘ಸಂಭೋಗ’ವೆಂದರೆ ಏನೆಂದೇ ಗೊತ್ತಿಲ್ಲ. ಆ ಶಬ್ದವನ್ನು ವಿಸ್ತರಿಸಿದರೆ ಅದು ‘ಸಮ ಭೋಗ’. Mutual act. ಪಾಶ್ಚಾತ್ಯರು ‘I fucked her’ ಅಥವಾ ‘He fucked me’ ಅಂತ ಅನ್ನುವುದೇ ಇಲ್ಲ. ‘we fucked’ ಅನ್ನುತ್ತಾರೆ. ಇಂತಹುದೊಂದು ಪ್ರಜ್ಞೆ ಇದ್ದಿದ್ದರೆ ನಮ್ಮ ಆಂಧ್ರದಲ್ಲಿ ಆ ಘನಘೋರ ಕೃತ್ಯ ನಡೆಯುತ್ತಲೇ ಇರಲಿಲ್ಲ. ಅಲ್ಲಿ ಸಾಮೂಹಿಕ ಮಾನಭಂಗ ಒಬ್ಬ ಪಶುವೈದ್ಯೆಯ ಮೇಲೆ ನಡೆಯಿತು. ಆ ಕಾಮುಕರ ಕೈಗೆ ಸಿಗುವ ಮುನ್ನ ಆ ನಿಸ್ಸಹಾಯಕ ಪಶುವೈದ್ಯೆ ತನ್ನ ತಂಗಿಗೆ ಫೋನ್ ಮಾಡುತ್ತಾಳೆ. ‘ಯಾಕೋ ಭಯವಾಗ್ತಿದೆ ಕಣೇ. ನನ್ನ ಸ್ಕೂಟರ್ ಪಂಕ್ಚರ್ ಆಗಿದೆ. ಫೋನ್ ಇಡಬೇಡ’ ಎಂದು ಮೊರೆ ಇಡುತ್ತಾಳೆ. ಅವಳ ತಂಗಿ ‘ಅಷ್ಟ್ಯಾಕೆ ಭಯಪಡ್ತೀಯಾ. ಅಲ್ಲೇ ಹತ್ತಿರವಿರುವ ಟೋಲ್ ಗೇಟ್ ಹತ್ತಿರ ನಿಂತುಕೋ. ಅಲ್ಲಿ ಜನ ಇರುತ್ತಾರೆ. ನಾನು ಬ್ಯುಸಿ ಇದ್ದೇನೆ. ಆಮೇಲೆ ಫೋನ್ ಮಾಡ್ತೇನೆ’ ಎಂದು ಕಾಲ್ ಕಟ್ ಮಾಡ್ತಾಳೆ. ಇಂತಹ ನಿಸ್ಸಹಾಯಕ ಸ್ಥಿತಿ ಯಾವ ಹೆಣ್ಣು ಮಗಳಿಗೂ ಬರಬಾರದು. ಅದಾದ ಕೆಲವೇ ನಿಮಿಷಗಳಿಗೆ ಆ ಪಶುವೈದ್ಯೆಯನ್ನು ನಾಲ್ಕು ಜನ ಲಾರಿ ಡ್ರೈವರ್‌ಗಳ ಗುಂಪು ಹೊತ್ತೊಯ್ದು ಸಾಮೂಹಿಕ ಮಾನಭಂಗ ಮಾಡಿ ಅತಿ ಕ್ರೂರವಾಗಿ ಕೊಂದು ಸುಟ್ಟು ಹಾಕಿತು. ಮುಂದೆ ನಮ್ಮ ಕರ್ನಾಟಕದ ಗದಗು ಮೂಲದ ಐಪಿಎಸ್ ಅಧಿಕಾರಿ ಸಜ್ಜನರ್ ಹೊತ್ತೊಯ್ದು ಆ ನಾಲ್ವರನ್ನೂ ಗುಂಡಿಕ್ಕಿ ಕೊಂದು ಕೈ ತೊಳೆದುಕೊಂಡರು. ಇಂತಹ ಎನ್‌ಕೌಂಟರ್‌ಗಳು ಮಾನವೀಯ ನೆಲೆಯಿಂದ ನೋಡಿದರೆ ಸರಿ ಅನ್ನಿಸುತ್ತದೆ. ಕಾನೂನಿನ ನೆಲೆಯಿಂದ ನೋಡಿದರೆ ಇವು ಪೊಲೀಸ್ ಅಧಿಕಾರಿಯೊಬ್ಬ ಮಾಡಿದ ಘೋರ ಹತ್ಯೆಗಳು. ಯಾವುದು ಸರಿ ಎಂದು ನಿರ್ಧರಿಸುವವರು ಯಾರು? ನಾನು ಎಲ್ಲಕ್ಕಿಂತ ಹೆಚ್ಚಾಗಿ ಈ ಮಾನಭಂಗ ಪ್ರಕರಣಗಳು ನಡೆದಾಗ ತುಂಬ ವಿಚಲಿತನಾಗಿ ಹೋಗುತ್ತೇನೆ. ಉತ್ತರ ಪ್ರದೇಶದ ಲಕ್ನೋ ಬಳಿಯ ಉನ್ನಾವೋ ಎಂಬಲ್ಲಿ ನಡೆದ ಘಟನೆ ಇದಕ್ಕಿಂತ ಭಯಾನಕ. ಹುಡುಗಿಯೊಬ್ಬಳ ಮೇಲೆ ಇಬ್ಬರು ಮಾನಭಂಗವೆಸಗುತ್ತಾರೆ. ಹುಡುಗಿಯ ದೂರಿನಿಂದಾಗಿ ಅವರು ಜೈಲಿಗೆ ಹೋಗುತ್ತಾರೆ. ದುರಂತವೆಂದರೆ ನ್ಯಾಯಾಲಯ ವಿಚಾರಣೆ ನಡೆಯುತ್ತಿರುವಾಗಲೇ ಅವರಿಗೆ ಜಾಮೀನು ನೀಡುತ್ತದೆ. ಹೊರಬಂದ ಇಬ್ಬರು ಮತ್ತೆ ಮೂವರನ್ನು ಸೇರಿಸಿಕೊಂಡು ನ್ಯಾಯಾಲಯಕ್ಕೆ ಹಾಜರಾಗಲು ಹೋಗುತ್ತಿದ್ದ ಆ ಹುಡುಗಿಯನ್ನು ದಾರಿಯಲ್ಲಿ ಇರಿದು ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಾರೆ. ಜೀವ ಉಳಿಸಿಕೊಳ್ಳಲು ಸುಮಾರು ಒಂದು ಕಿಲೋ ಮೀಟರ್ ಓಡುವ ಹುಡುಗಿ ತನ್ನನ್ನು ರಕ್ಷಿಸಿ ಎಂದು ಭೋರಿಡುತ್ತಾಳೆ. ಯಾರೋ ಪೊಲೀಸರಿಗೆ ತಿಳಿಸುತ್ತಾರೆ. ಪೊಲೀಸರು ಅವಳನ್ನು ರಕ್ಷಿಸಿ ಹೆಲಿಕಾಪ್ಟರ್‌ನಲ್ಲಿ ಕೊಂಡೊಯ್ದು ಲಕ್ನೋದ ಆಸ್ಪತ್ರೆಯಲ್ಲಿ ಸೇರಿಸುತ್ತಾರೆ. ದೇಹದ ತೊಂಬತ್ತು ಪರ್ಸೆಂಟ್ ಸುಟ್ಟು ಹೋದ ಸ್ಥಿತಿಯಲ್ಲಿದ್ದ ಆಕೆ ‘ಡಾಕ್ಟ್ರೇ, ನನ್ನನ್ನು ಉಳಿಸಿ. ನಾನು ಆ ಐವರು ನೇಣಿಗೇರುವುದನ್ನು ನೋಡಬೇಕು’ ಎಂದು ಮೊರೆ ಇಟ್ಟು ಕಡೆಗೆ ಸತ್ತು ಹೋಗುತ್ತಾಳೆ. ನಿಮಗೆ ಗೊತ್ತಿರಲಿ, ಅವಳನ್ನು  ಕೊಂದ ಐವರಲ್ಲಿ ಪ್ರಮುಖ ಆರೋಪಿಗಳು ಬ್ರಾಹ್ಮಣರು. ಕ್ರೌರ್ಯಕ್ಕೆ ಜಾತಿಯುಂಟೇ?

ಹಿಂದೆ ಬೆಂಗಳೂರಿಗೆ ಬಂದ ಲಾಲೂಪ್ರಸಾದ್ ನಮಗೆ ಅಂದರೆ ಪತ್ರಕರ್ತರಿಗೆ ಹೇಳಿದ ಮಾತು ನೆನಪಾಗುತ್ತದೆ. ‘ನೀವೆಂಥಾ ಪುಳಿಚಾರ್ ಬ್ರಾಹ್ಮಣರು. ನಮ್ಮ ಕಡೆ ಬ್ರಾಹ್ಮಣರು ಎಲ್ಲರಿಗಿಂತ ಬಲಿಷ್ಠರು. ಅವರು ಏನು ಬೇಕಾದರೂ ಮಾಡುತ್ತಾರೆ.’ ಲಾಲೂಪ್ರಸಾದ್ ಮಾತು ನೂರಕ್ಕೆ ನೂರು ಸತ್ಯ. ನಾನು ಉತ್ತರ ಭಾರತದ ಅತಿ ಬಲಿಷ್ಠ ಭೂಮಿಹಾರರಿಗಿಂತ ಬಲಿಷ್ಠರಾದ ಮತ್ತು ಕ್ರೂರಿಗಳಾದ ಬ್ರಾಹ್ಮಣರನ್ನು ನೋಡಿದ್ದೇನೆ. ಅಲ್ಲಿನ ದ್ವಿವೇದಿಗಳು, ತ್ರಿವೇದಿಗಳು, ಚತುರ್ವೇದಿಗಳು ನಿಜಕ್ಕೂ ಭಯಂಕರ. ಇಪ್ಪತ್ತು ವರ್ಷಗಳ ಹಿಂದೆ ನಾನು ಕಾಶ್ಮೀರದ ಪಂಡಿತರ ಮನೆಯಲ್ಲಿ ಒಂದಷ್ಟು ದಿನ ತಂಗಿದ್ದೆ. ಅವರು ಕಂಠಮಟ್ಟ ಕುಡಿಯುತ್ತಿದ್ದರು. ಅತ್ಯದ್ಭುತವಾದ ಕಾಶ್ಮೀರದ ಕುರಿಯ ಮಾಂಸ ತಿನ್ನುತ್ತಿದ್ದರು. ಇದೆಂಥಾ ಪಂಡಿತರು ನೀವು? ಇದೆಂಥಾ ಬ್ರಾಹ್ಮಣಿಕೆ ಅಂತ ಕೇಳಿದದ್ದಕ್ಕೆ ‘ಹಮೇ ಶಿವುಜೀ ನೇ ಪರ್ಮಿಷನ್ ದಿಯಾ ಹೇ’ (ನಮಗೆ ಭಗವಂತನಾದ ಶಿವನು ಒಪ್ಪಿಗೆ ನೀಡಿದ್ದಾನೆ) ಅಂದಾಗ ಸುಮ್ಮನೆ ನಕ್ಕೆ. ಅದು ನಿಸರ್ಗ ನಿಯಮ. ಕಾಶ್ಮೀರದ ಚಳಿಯಲ್ಲಿ ಅನ್ನ-ಸಾರು ತಿಂದು ಬದುಕಲು ಸಾಧ್ಯವಿಲ್ಲ. ಅಲ್ಲಿ ಮದ್ಯ ಕುಡಿಯಲೇ ಬೇಕು, ಮಾಂಸ ತಿನ್ನಲೇ ಬೇಕು. ಇದನ್ನು ಇವತ್ತು ಬರೆದರೆ ಮೋದಿಯ ಭಕ್ತರು ಮೈಮೇಲೆ ಮಿಡತೆಗಳಂತೆ ಬಿದ್ದು ಪರಚಾಡಿ ಜಗಳಕ್ಕೆ ನಿಲ್ಲುತ್ತಾರೆ. ‘ನೀನು ಕಾಂಗ್ರೆಸ್ಸಿಗ. ಕಾಶ್ಮೀರಿ ಬ್ರಾಹ್ಮಣ ನೆಹರೂವಿನ ಭಕ್ತ. ಅದಕ್ಕೆ ಹೀಗೆ ಬರೆಯುತ್ತೀಯ’ ಅನ್ನುತ್ತಾರೆ. ನಿಮಗೆ ಗೊತ್ತು, ನಾನು ಕಾಂಗ್ರೆಸ್ಸಿಗನಲ್ಲ. ನನಗೆ ನೆನಪಿರುವುದೆಂದರೆ ನೆಹರೂ ಸತ್ತಾಗ ನಮ್ಮ ಶಾಲೆಗೆ ರಜೆ ನೀಡಿದ್ದರು. ನಾನು ಬಾಲ್ಯದಲ್ಲಿ ಅನುಭವಿಸಿದ ಅತಿ ದೊಡ್ಡ ಸಂತಸವೆಂದರೆ ಅದು. ನಾನು ಮೊದಲ ಬಾರಿ ನಮ್ಮ ಹಿಂದಿನ ಮನೆಯಲ್ಲಿದ್ದ ಬ್ಲ್ಯಾಕ್ ಅ್ಯಂಡ್ ವೈಟ್ ಟೀವಿ ನೋಡಿದ್ದು ಇಂದಿರಾಗಾಂಧಿ ಸತ್ತಾಗ. ಆಗ ಸರ್ಕಾರಿ ದೂರದರ್ಶನವು ಒಂದೇ ಸಮನೆ ಏಳು ದಿನ ಇಂದಿರಾಗಾಂಧಿಯ ಶವಯಾತ್ರೆ ತೋರಿಸಿ ಶೋಕಾಚರಣೆಯ ಹೆಸರಿನಲ್ಲಿ ಉದ್ದೋ ಉದ್ದಕ್ಕೆ ಶಹನಾಯಿ ಬಾರಿಸಿ ನಮಗೆಲ್ಲ ಬೋರು ಹೊಡೆಯುವಂತೆ ಮಾಡಿತ್ತು. ಇವತ್ತು ನನ್ನ ಮನೆಯಲ್ಲಿ ಪ್ರತಿ ಫ್ಲೋರ್‌ನಲ್ಲೂ ಟೀವಿಗಳಿವೆ. ನನ್ನ ಆಫೀಸಿನಲ್ಲಿ, ನನ್ನ ಛೇಂಬರ್‌ನಲ್ಲಿ ಟೀವಿಗಳಿವೆ. ಛಾನಲ್‌ಗಳ ಮಾತು ಬೇಡವೇ ಬೇಡ. ಮರಕ್ಕೊಂದು ಛಾನಲ್ ಇದೆ. ನಾನು ಅಪ್ಪಿತಪ್ಪಿ ಕೂಡ ಟೀವಿ ನೋಡುವುದಿಲ್ಲ. ನನ್ನ ಮಗ ಹಿಮವಂತನಿಗೆ ನಾನು ಮಾಡಿದ ಏಕೈಕ ವಿನಂತಿ ಎಂದರೆ ‘ಪುಟ್ಟು, ನಾನು ಮನೆಗೆ ಬಂದ ಮೇಲೆ ಟೀವಿ ಆಫ್ ಮಾಡು ಮತ್ತು ಮೊಬೈಲ್ ಮುಟ್ಟಬೇಡ’. ಅವನು ನನ್ನೆಡೆಗೆ ದೀನನೇತ್ರನಾಗಿ ನೋಡಿ ಹೇಳಿದ್ದು ‘ಅಪ್ಪಾ, ನೀನು ಮನೆಗೆ ಲೇಟ್ ಆಗಿ ಬಾ’.

ಈ ಸ್ಥಿತಿಗೆ ಏನು ಮಾಡುವುದು. ನನ್ನ ಪತ್ನಿ ಯಶೋಮತಿ ಅವನನ್ನು ಎಷ್ಟು ಕಟ್ಟುನಿಟ್ಟಾಗಿ ಬೆಳೆಸುತ್ತಾಳೆಂದರೆ ಮುಂಜಾನೆ ಆರೂವರೆಯಿಂದ ಸಂಜೆ ಎಂಟರ ತನಕ ಬಿಡುವೇ ಸಿಗದಂತೆ ಎಂಗೇಜ್ ಮಾಡಿರುತ್ತಾಳೆ. ಅವನನ್ನು ಮೊಬೈಲ್‌ನಿಂದ ಪಾರು ಮಾಡಲು ನಾನು ಮಾಡಿದ ಅತ್ಯುತ್ತಮ ಕೆಲಸವೆಂದರೆ ಅವನಿಗೆ African grey bird ಎಂಬ ಹಕ್ಕಿಯನ್ನು ತಂದುಕೊಟ್ಟಿದ್ದು. ಅದು ಅವನೊಂದಿಗೆ ಮಾತನಾಡುತ್ತದೆ. ಹತ್ತಿರಕ್ಕೆ ಕರೆದು ‘ಏನೇ ಸಾರಾ’ ಎಂದು ಕೇಳಿದರೆ ‘ಹೋಗಲೋ’ ಅನ್ನುತ್ತದೆ. ಎಂತಹ ಹರಟೆಕೋರ ಹಕ್ಕಿ ಎಂದರೆ ಟೀವಿಯ ಮುಂದೆ ಕುಳಿತು ಟೀವಿಯಲ್ಲಿ ಬರುವುದನ್ನೆಲ್ಲಾ ನಿರಂತರವಾಗಿ ಮಿಮಿಕ್ ಮಾಡುತ್ತದೆ. ‘ಇದೇನೋ ಹಿಮ’ ಅಂತ ಕೇಳಿದರೆ ಅವನು ‘ಅಪ್ಪಾ, ನನಗೆ ಹಕ್ಕಿಗಳ ಭಾಷೆ ಅರ್ಥವಾಗುತ್ತದೆ. ನಮ್ಮ ಮನೆಯ ನಾಯಿಗಳಾದ ಸಿದ್ದು ಮತ್ತು ಬಜ್ಜುಗಳಿಬ್ಬರೂ ಮಾತನಾಡುವುದು ಅರ್ಥವಾಗುತ್ತದೆ. ನಿಮಗೆ ಗೊತ್ತಿಲ್ಲ, I understand the animal language and they understand my language ಅನ್ನುತ್ತಾನೆ.

ಗೊತ್ತಿಲ್ಲ.

ಅವನಿಗೆ ಹುಲಿಯ ಭಾಷೆಯೂ ಅರ್ಥವಾಗುತ್ತದಾ? ಈ ಸಲದ ರಜೆಗೆ ಅವನನ್ನು ಎಸ್ಟೇಟ್‌ಗೆ ಕರೆದೊಯ್ಯಬೇಕು.

ನಿಮ್ಮವನು, ಆರ್.ಬಿ.

Tags:

Leave a Reply

Your email address will not be published.

*

Latest from ಖಾಸ್ । ಬಾತ್

Go to Top