ಹಾಯ್ ಬೆಂಗಳೂರ್

ನೂರು ಮುಖ ಸಾವಿರ ದನಿ – ಎಂ.ವಿ.ರೇವಣಸಿದ್ದಯ್ಯ: ಕುಮಾರತ್ರಯರ ಕಾಲದಲ್ಲೇ ಡಾ.ವಿಷ್ಣು ಚಿತ್ರರಂಗ ಪ್ರವೇಶ

`ವಿಷ್ಣುವರ್ಧನ್” ರಾಮಾಚಾರಿ ಆಗಿ ನಿರ್ವಹಿಸಿದ್ದ ಪರಿಣಾಮ ಮತ್ತು ಸಾರ್ಥಕ್ಯ ಇತರೆ ಭಾಷೆಗಳ ನಾಯಕರ ನಿರ್ವಹಣೆಯಲ್ಲಿ ಕಂಡುಬರಲಿಲ್ಲ. ನಾಲ್ಕೂ ಚಿತ್ರಗಳನ್ನು ನೋಡಿದಾಗ `ನಾಗರಹಾವು’ ಚಿತ್ರ ಮತ್ತು ರಾಮಾಚಾರಿ ಪಾತ್ರಗಳು ಔಟ್ ಸ್ಟ್ಯಾಂಡಿಂಗ್ ಇದ್ದವು.ನಂತರ ವಿಷ್ಣು ಹಿಂತಿರುಗಿ ನೋಡಲಿಲ್ಲ. ೨೦೦೯ ರವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿ ಬೇಡಿಕೆಯಲ್ಲಿದ್ದ ಅವರು ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಒಟ್ಟು ಇನ್ನೂರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಮೊಟ್ಟ ಮೊದಲ ಪಂಚಭಾಷಾ ನಟನೆಂಬ ಹೆಗ್ಗಳಿಕೆಯೂ ವಿಷ್ಣು ಅವರದು. ೧೯೮೬ರ `ಸತ್ಯಜ್ಯೋತಿ’ ಅವರ ನೂರನೇ ಚಿತ್ರ. ೧೯೯೫ರ `ಮೋಜುಗಾರ ಸೊಗಸುಗಾರ’ ಅವರ ನೂರಾ ಐವತ್ತನೇ ಚಿತ್ರವಾದರೆ ೨೦೦೯ರಲ್ಲಿ ತಯಾರಾದ `ಆಪ್ತ ರಕ್ಷಕ’ ಅವರ ಇನ್ನೂರನೇ ಹಾಗೂ ಕೊನೆಯ ಚಿತ್ರ.

ಇದೇನಿದು! ಅದು ಹೇಗೆ ಸಾಧ್ಯ? ಅಂತ ಹುಬ್ಬೇರಿಸಬೇಡಿ. ಆದರೆ ಇದು ಸತ್ಯ. ಅದು ಹೀಗೆ- ಡಾ||ರಾಜ್ `ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ೧೯೫೪ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಕಲಾರತ್ನ ಕಲ್ಯಾಣ್‌ಕುಮಾರ್ ಸಹ `ನಟಶೇಖರ’ ಚಿತ್ರದ ಮೂಲಕ ಅದೇ ೧೯೫೪ ರಲ್ಲೇ ಚಿತ್ರರಂಗ ಪ್ರವೇಶಿಸಿದರು. ಕಲಾಕೇಸರಿ ಉದಯ ಕುಮಾರ್ ಮಾತ್ರ ೧೯೫೬ರಲ್ಲಿ `ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

೧೯೨೯ರಲ್ಲಿ ಜನಿಸಿದ ಡಾ||ರಾಜ್ ಹಾಗೂ ಕಲ್ಯಾಣ್ ಮತ್ತು ೧೯೩೩ರಲ್ಲಿ ಜನಿಸಿದ ಉದಯ್ ಚಿತ್ರರಂಗ ಪ್ರವೇಶಿಸಿದ ಕಾಲದಲ್ಲೇ ೧೯೫೦ರಲ್ಲಿ ಜನಿಸಿದ ಡಾ||ವಿಷ್ಣುವರ್ಧನ್ ಹೇಗೆ ಚಿತ್ರರಂಗ ಪ್ರವೇಶಿಸಲು ಸಾಧ್ಯ ಎಂಬ ಅಚ್ಚರಿ ಮತ್ತು ಅನುಮಾನ ಸಹಜವೇ. ಆದರೆ ಇದು ಸತ್ಯ. ಡಾ||ವಿಷ್ಣು ಚಿತ್ರರಂಗ ಪ್ರವೇಶಿಸಿದ್ದು ಖಂಡಿತಾ ೧೯೫೫ರಲ್ಲಿ. ಆದರೆ ನಾಯಕನಟನಾಗಿ ಅಲ್ಲ, ಬಾಲನಟನಾಗಿ!

ರಾಜೇಂದ್ರಸಿಂಗ್ ಬಾಬು ಮತ್ತು ವಿಜಯಲಕ್ಷ್ಮಿ ಸಿಂಗ್ ತಂದೆ ಹಾಗೂ ನಟ ಆದಿತ್ಯನ ತಾತ ೧೯೫೦ರ ದಶಕದ ಯಶಸ್ವೀ ನಾಯಕಿ ನಟಿ ಚೆಲುವೆ ಪ್ರತಿಮಾ ದೇವಿ ಅವರ ಪತಿ ಡಿ.ಶಂಕರ್‌ಸಿಂಗ್ ತಮ್ಮ “ಮಹಾತ್ಮ ಪಿಕ್ಚರ್‍ಸ್” ಲಾಂಛನದಲ್ಲಿ ನಿರ್ಮಿಸಿದ್ದ “ಶಿವಶರಣೆ ನಂಬಿಯಕ್ಕ” ಎಂಬ ಪೌರಾಣಿಕ ಕನ್ನಡ ಚಿತ್ರದಲ್ಲಿ ವಿಷ್ಣು ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. ಆಗ ಈತನ ನಿಜ ಹೆಸರು ಸಂಪತ್‌ಕುಮಾರ್.

ನಂತರ ಸಂಪತ್ತು (ವಿಷ್ಣು) ಚಿತ್ರರಂಗದ ಗಂಧಗಾಳಿ, ಅಂಟು-ನಂಟು ಏನೊಂದೂ ಇಲ್ಲದೇ ಆಟ-ಪಾಠ, ತುಂಟತನ, ಹಾಸ್ಯ, ಲಾಸ್ಯಗಳ ಮೂಲಕ ಬೆಳೆದರು. ಮೈಸೂರಿನಲ್ಲಿ ಆರಂಭಿಸಿದ ವಿದ್ಯಾಭ್ಯಾಸ, ಬೆಂಗಳೂರಿನ ಚಾಮರಾಜಪೇಟೆಯ ರಂಗರಾವ್ ರಸ್ತೆಯ ಅಶೋಕ ಶಿಶುವಿಹಾರದಲ್ಲಿ ಮುಂದುವರೆದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪದವೀಧರರಾಗುವುದರೊಂದಿಗೆ ಮುಕ್ತಾಯವಾಯಿತು.

ಪ್ರತಿಭಾನ್ವಿತ ಕಲಾವಿದರಾದ ಸಿ.ಆರ್.ಸಿಂಹ, ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ) ಮತ್ತು ಸುಂದರ್‌ರಾಜ್ ಮುಂತಾದವರು ಇವರ ಸಹಪಾಠಿಗಳಾದರೆ ಇವರ ಪ್ರಾಂಶುಪಾಲರು ಶಿಸ್ತಿನ ಸಿಪಾಯಿ ಎಚ್.ನರಸಿಂಹಯ್ಯನವರು. ಸಂಪತ್ತು ಅವರ ಗರಡಿಯಲ್ಲಿ ಪಳಗಿದರು. ಚಿತ್ರರಂಗದಿಂದ ಸಂಪತ್ತು ದೂರವಿದ್ದರೂ ಸಹ ಶಾಲಾ-ಕಾಲೇಜುಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ನಾಟಕಗಳಲ್ಲಿ ಅಭಿನಯಿಸುವುದು ನಡೆದೇ ಇತ್ತು. ಅದರಲ್ಲೂ ಇವರ ಸ್ತ್ರೀಪಾತ್ರದ ಅಭಿನಯ ಸೌಂದರ್ಯ, ಒನಪು, ವಯ್ಯಾರಗಳು ಯಾವುದೇ ಸುಂದರ ಸ್ತ್ರೀಯರನ್ನು ಮೀರಿಸುವಂತಿತ್ತು.

ಕಾಲೇಜು ವಿದ್ಯಾಭ್ಯಾಸ ಮುಗಿದ ಮೇಲೆ ಸಂಪತ್ತು ಮನಸ್ಸು ಚಿತ್ರರಂಗದತ್ತ ತಿರುಗಿತು. ಸಹಪಾಠಿ ಗೆಳೆಯ ಎಡಕಲ್ಲು ಚಂದ್ರು ಮತ್ತಿತರರ ಜೊತೆ ಚಿತ್ರರಂಗದ ನಂಟು ಇದ್ದ ಕಾನಕಾನಹಳ್ಳಿ ಗೋಪಿ ಮೂಲಕ `ವಂಶವೃಕ್ಷ’ ಚಿತ್ರದಲ್ಲಿ ಅವಕಾಶಕ್ಕಾಗಿ ದಾಳಿ ಇಡುತ್ತದೆ ಸಂಪತ್ತು ಮತ್ತು ಗೆಳೆಯರ ದಂಡು. ಪ್ರಸಿದ್ಧ ಕಾದಂ ಬರಿಕಾರ ಎಸ್.ಎಲ್.ಭೈರಪ್ಪನವರ “ವಂಶವೃಕ್ಷ” ಹೆಸರಿನ ಕಾದಂಬರಿಯನ್ನು ಅದೇ ಹೆಸರಿನಲ್ಲೇ ನಿರ್ಮಿಸ ಹೊರಟಿದ್ದರು ಚಿತ್ರಬ್ರಹ್ಮ ಜಿ.ವಿ.ಅಯ್ಯರ್. ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದವರು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್ ಜೋಡಿ. ನೂರಾರು ಸ್ಪರ್ಧಿಗಳ ನಡುವೆ ಆಶ್ಚರ್ಯಕರ ರೀತಿಯಲ್ಲಿ ಸಂಪತ್ತು ಹಾಗೂ ಚಂದ್ರಶೇಖರ್ ಆಯ್ಕೆಯಾದರು.

`ನಾಗರಹಾವು (ಭಾಗ-೧)’ `ಎರಡು ಹೆಣ್ಣು ಒಂದು ಗಂಡು (ಭಾಗ-೨)’ `ಸರ್ಪ ಮತ್ಸರ (ಭಾಗ-೩)’ ಎಂಬ ಮೂರು ಕಾದಂಬರಿಗಳನ್ನು ರಚಿಸಿದವರು ಪ್ರಸಿದ್ಧ ಸಾಹಿತಿ ತ.ರಾ.ಸು (ಸುಬ್ಬರಾವ್). ಈ ಮೂರು ಕಾದಂಬರಿಗಳನ್ನು ಸೇರಿಸಿ `ನಾಗರಹಾವು’ ಎಂಬ ಹೆಸರಿ ನಲ್ಲಿ ಚಿತ್ರ ನಿರ್ಮಿಸ ಹೊರಟಿದ್ದರು ಈಶ್ವರಿ ಪ್ರೊಡಕ್ಷನ್ಸ್ ಸಂಸ್ಥೆಯ ಎನ್.ವೀರಾಸ್ವಾಮಿ (ಕನಸುಗಾರ, ನಟ, ನಿರ್ಮಾಪಕ, ನಿರ್ದೇಶಕ ವಿ.ರವಿಚಂದ್ರನ್‌ರ ತಂದೆ). ಚಿತ್ರದ ನಿರ್ದೇಶನ ಪುಟ್ಟಣ್ಣ ಕಣಗಾಲ್ ಅವರದು. ತ.ರಾ.ಸು. ಅವರ ಮೇಲಿನ ಮೂರೂ ಕಾದಂಬರಿಗಳ ಸಾಮಾನ್ಯ ನಾಯಕ (ಪಾತ್ರ) “ರಾಮಾಚಾರಿ” ಎಂಬ ಹುಡುಗನದ್ದು. ವಿಷ್ಣು(ಸಂಪತ್ತು)ವಿನ ಬಾಲ್ಯ ಮತ್ತು ಯೌವನದಲ್ಲಿನ ತುಂಟತನ, ಹಾಸ್ಯದ ಲಾಸ್ಯ, ಶೀಘ್ರ ಕೋಪ, ಇತ್ಯಾದಿ ಅನೇಕ ಗುಣ ಸ್ವಭಾವಗಳನ್ನು ನೋಡಿ ತ.ರಾ.ಸು. ಅವರು ತಮ್ಮ ಕಾದಂಬರಿಗಳ ರಾಮಾಚಾರಿ ಪಾತ್ರ ಸೃಷ್ಟಿಸಿದರೇ ಅಥವಾ ಈ ಮೂರೂ ಕಾದಂಬರಿಗಳ ಭಟ್ಟಿಯೇ ಸಂಪತ್ತು ಎಂಬ ಹುಡುಗನೇ ಅಥವಾ ಆ ಕಾದಂಬರಿಗಳು ಈ ಹುಡುಗನ ಮೇಲೆ ಬಾಲ್ಯದಿಂದಲೂ ಆತನ ಬೆಳವಣಿಗೆಯಲ್ಲಿ ಪರಿಣಾಮ ಬೀರಿದವೇ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ತ.ರಾ.ಸು. ಅವರ ಕಾದಂಬರಿಗಳ ನಾಯಕ “ರಾಮಾ ಚಾರಿ” ಅಂದರೆ ವಿಷ್ಣು, ವಿಷ್ಣು ಅಂದರೆ ರಾಮಾಚಾರಿ ಅನ್ನುವಷ್ಟರ ಮಟ್ಟಿಗೆ ರಾಮಾಚಾರಿ ಪಾತ್ರ, ಗುಣ ಸ್ವಭಾವ ಮತ್ತು ವಿಷ್ಣು ಅವರ ಗುಣ ಸ್ವಭಾವಗಳು ಹೊಂದುತ್ತಿದ್ದವು.

ಎರಡೂ ಅಲ್ಲ. ತ.ರಾ.ಸು. ಸಂಪತ್ತು ಎಂಬ ಹುಡುಗನ ಬಾಲ್ಯ, ಯೌವನ, ಗುಣ, ಸ್ವಭಾವ ನೋಡಿ ಈ ಕಾದಂಬರಿಗಳು ಬರೆಯುವ ಪ್ರಶ್ನೆಯೂ ಇಲ್ಲ. ಅದೇ ರೀತಿ ಈ ಕಾದಂಬರಿಗಳನ್ನು ಓದಿ ವಿಷ್ಣು ತನ್ನ ಗುಣ, ಸ್ವಭಾವಗಳನ್ನು ರೂಢಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಎರಡರಲ್ಲಿ ಯಾವುದೂ ನಡೆದಿಲ್ಲ. ಆದರೆ ಇಷ್ಟೆಲ್ಲ ಏಕೆ ಹೇಳಬೇಕಾಯಿತೆಂದರೆ ತ.ರಾ.ಸು. ಕಾದಂಬರಿಗಳ ನಾಯಕ ರಾಮಾಚಾರಿ ಪಾತ್ರದ ಹಠ, ಛಲ, ಸಿಡುಕು, ನಿಷ್ಕಪಟತೆ, ನೇರಮಾತು, ಶೀಘ್ರ ಕೋಪ ಇತ್ಯಾದಿ ಯಾವುದೇ ವಿಷಯಗಳಲ್ಲೂ ಸಹ ವಿಷ್ಣುವರ್ಧನ್ ರಾಮಾಚಾರಿಯ ಪ್ರತಿರೂಪ ಅಥವಾ ಪಡಿಯಚ್ಚೇ ಆಗಿದ್ದರು.

ಒಂದಂತೂ ಆಶ್ಚರ್ಯ ಹಾಗೂ ಸತ್ಯ. ಏನೆಂದರೆ “ರಾಮಾಚಾರಿ” ಪಾತ್ರಕ್ಕಾಗಿ ಸಂದರ್ಶನಕ್ಕೆ ಬಂದಿದ್ದ ಸಾವಿರಾರು ಹುಡುಗರ ಪೈಕಿ ಪುಟ್ಟಣ್ಣ “ಸಂಪತ್ತು”ವನ್ನು ಆ ಪಾತ್ರಕ್ಕೆ ಹೇಗೆ ಆರಿಸಿಕೊಂಡರು ಎಂಬುದು. ಅದು ಹೇಗೆ ಆರಿಸಿಕೊಂಡರೋ ಅವರಿಗೇ ಗೊತ್ತು. ಅದಿರಲಿ ಬಿಡಿ. ಕಾದಂಬರಿಯ ಪಾತ್ರಕ್ಕೆ ಈ ಆಯ್ಕೆ ಅತ್ಯಂತ ಸೂಕ್ತವಾಗಿತ್ತು ಅನ್ನೋದು ನಿರ್ವಿವಾದ. ಅದುವರೆಗೆ ಸಂಪತ್‌ಕುಮಾರ್ ಆಗಿದ್ದ ಅವರಿಗೆ ಪುಟ್ಟಣ್ಣ `ವಿಷ್ಣು ವರ್ಧನ್’ ಎಂಬ ಹೊಸ ಹೆಸರು ನೀಡುತ್ತಾರೆ.

ಇದಕ್ಕಿಂತಲೂ ವೈಶಿಷ್ಟ್ಯ ಅಂದರೆ ಇದೇ “ನಾಗರಹಾವು’ ನಂತರ ತೆಲುಗಿನಲ್ಲಿ `ಕೋಡೆನಾಗು’ (ಶೋಭನ್‌ಬಾಬು), ತಮಿಳಿನಲ್ಲಿ “ರಾಜನಾಗಂ” (ಶ್ರೀಕಾಂತ್ ವೆಣ್ಣಿರ ಆಡೈ ಖ್ಯಾತಿ), ಹಿಂದಿ ಯಲ್ಲಿ `ಜಹ್ರಿಲಾ’ ಇನ್ಸಾನ್” (ರಿಷಿಕಪೂರ್) ತಯಾರಾದವು. ಆದರೆ ಆ ಯಾವುದೇ ಚಿತ್ರಗಳು ಕನ್ನಡದ `ನಾಗರ ಹಾವು’ ಚಿತ್ರದ ಪೊರೆಯ ಮಟ್ಟಕ್ಕೂ ಹತ್ತಲಿಲ್ಲ.

ಅದಕ್ಕಿಂತ ಮಹತ್ವ ಮತ್ತು ವಿಶೇಷ ಅಂದರೆ ಕನ್ನಡ ಚಿತ್ರ `ನಾಗರ ಹಾವು’ನಲ್ಲಿ ವಿಷ್ಣು ಮಾಡಿದ್ದ ರಾಮಾಚಾರಿ ಪಾತ್ರ (ವಿಷ್ಣುವರ್ಧನ ಅವರ ಜೀವನದಲ್ಲಿ ಮೂರನೇ ಚಿತ್ರ, ನಾಯಕನಾಗಿ ಮೊದಲನೇ ಚಿತ್ರ) ಇತರೆ ಭಾಷೆಗಳಲ್ಲಿ ನಿರ್ವಹಿಸಿದ್ದ ತಮಿಳಿನ ಶ್ರೀಕಾಂತ್, ತೆಲುಗಿನ ಶೋಭನ್‌ಬಾಬು ಅಗಲೇ ಪಳಗಿದ ನಟರಾಗಿದ್ದರು. ಕಪೂರ್ (ಪೃಥ್ವಿರಾಜ್‌ಕಪೂರ್, ರಾಜ್ ಕಪೂರ್) ಖಾನ್‌ದಾನ್‌ನ ಮೂರನೇ ತಲೆಮಾರಿನ ಯುವ ನಟ ರಿಷಿಕಪೂರ್ ತನ್ನ ಮೊದಲನೇ ಚಿತ್ರ “ಬಾಬ್ಬಿ” ಯಶಸ್ಸಿನ ಅಲೆಯಲ್ಲಿದ್ದ.

ಆದರೆ “ವಿಷ್ಣುವರ್ಧನ್” ರಾಮಾಚಾರಿ ಆಗಿ ನಿರ್ವಹಿಸಿದ್ದ ಪರಿಣಾಮ ಮತ್ತು ಸಾರ್ಥಕ್ಯ ಇತರೆ ಭಾಷೆಗಳ ನಾಯಕರ ನಿರ್ವಹಣೆಯಲ್ಲಿ ಕಂಡುಬರಲಿಲ್ಲ. ನಾಲ್ಕೂ ಚಿತ್ರಗಳನ್ನು ನೋಡಿದಾಗ `ನಾಗರಹಾವು’ ಚಿತ್ರ ಮತ್ತು ರಾಮಾಚಾರಿ ಪಾತ್ರಗಳು ಔಟ್ ಸ್ಟ್ಯಾಂಡಿಂಗ್ ಇದ್ದವು.ನಂತರ ವಿಷ್ಣು ಹಿಂತಿರುಗಿ ನೋಡಲಿಲ್ಲ. ೨೦೦೯ ರವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿ ಬೇಡಿಕೆಯಲ್ಲಿದ್ದ ಅವರು ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ಒಟ್ಟು ಇನ್ನೂರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಮೊಟ್ಟ ಮೊದಲ ಪಂಚಭಾಷಾ ನಟನೆಂಬ ಹೆಗ್ಗಳಿಕೆಯೂ ವಿಷ್ಣು ಅವರದು. ೧೯೮೬ರ `ಸತ್ಯಜ್ಯೋತಿ’ ಅವರ ನೂರನೇ ಚಿತ್ರ. ೧೯೯೫ರ `ಮೋಜುಗಾರ ಸೊಗಸುಗಾರ’ ಅವರ ನೂರಾ ಐವತ್ತನೇ ಚಿತ್ರವಾದರೆ ೨೦೦೯ರಲ್ಲಿ ತಯಾರಾದ `ಆಪ್ತ ರಕ್ಷಕ’ ಅವರ ಇನ್ನೂರನೇ ಹಾಗೂ ಕೊನೆಯ ಚಿತ್ರ.

೧೯೮೪ರಿಂದ ೧೯೯೪ರ ಅವಧಿಯಲ್ಲಿ ಐದು ಹಿಂದಿ, ೧೯೮೭ರಿಂದ ೧೯೯೨ರ ಅವಧಿಯಲ್ಲಿ ನಾಲ್ಕು ಮಲಯಾಳಂ, ೧೯೭೩ರಿಂದ ೧೯೯೭ರ ಅವಧಿಯಲ್ಲಿ ಆರು ತಮಿಳು ಹಾಗೂ ೧೯೮೭ ಮತ್ತು ೧೯೯೬ರಲ್ಲಿ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿಂದಿಯಲ್ಲಿ ಹೇಮಾಮಾಲಿನಿ, ತಮಿಳಿನಲ್ಲಿ ರಜನಿಕಾಂತ್ (ವಿಡುದಲೈ), ಕಮಲಹಾಸನ್ (ಮರುದನಾ ಯಗಂ), ಮುಮ್ಮಟ್ಟಿ (ಕೌರವರ್), ಮಲಯಾಳಂನಲ್ಲಿ ಗಿನ್ನಿಸ್ ದಾಖಲೆ (ಅನ್ನಬಹುದಾದ) ನಟ ಪ್ರೇಮ್ ನಜೀರ್ ಜೊತೆ ವಿಷ್ಣು ಅಭಿನಯಿಸಿದ್ದಾರೆ.

ಮೈಸೂರಿನ ಚಾಮುಂಡಿಪುರಂನ ವೈದಿಕ ಕುಟುಂಬದಲ್ಲಿ ಸೆಪ್ಟಂಬರ್, ಹದಿನೆಂಟು ೧೯೫೦ರಲ್ಲಿ ಜನಿಸಿದವರು ವಿಷ್ಣು. ಜನ್ಮನಾಮ ಸಂಪತ್‌ಕುಮಾರ್. ತಂದೆ ಪ್ರಜಾವಾಣಿ ಬಳಗದ ಪತ್ರಿಕೋದ್ಯಮಿ, ನಾಟಕಕಾರ ಹಾಗೂ ಸಾಹಿತ್ಯ, ಸಂಗೀತ, ಬರವಣಿಗೆ, ಸಿನಿಮಾ, ನಾಟಕ ರಂಗಗಳ ಆಸಕ್ತರಾಗಿದ್ದ ಎಚ್.ಎಲ್. ನಾರಾಯಣ ರಾವ್. ತಾಯಿ ಕಾಮಾಕ್ಷಮ್ಮ. ರವಿಕುಮಾರ್ ಇವರ ಅಣ್ಣ ಮತ್ತು ಜಯಶ್ರೀ ಇವರ ಅಕ್ಕ. ಇಂದ್ರಾಣಿ, ಪೂರ್ಣಿಮಾ, ರಮಾ ಇವರು ಇವರ ಸಹೋದರಿಯರು. ಪ್ರಸಿದ್ಧ ಪಂಚಭಾಷಾ ಪ್ರತಿಭಾನ್ವಿತ ಅಭಿನೇತ್ರಿ ಭಾರತಿ ಇವರ ಧರ್ಮಪತ್ನಿ. ಕೀರ್ತಿ ಮತ್ತು ಚಂದನ ಈ ದಂಪತಿಯ ದತ್ತು ಪುತ್ರಿಯರು.

ನಾಯಕನಾಗಿ ಪ್ರಥಮ ಚಿತ್ರ ನಾಗರಹಾವಿನಿಂದ ಆರಂಭಿಸಿ ಹೊಂಬಿಸಿಲು, ಬಂಧನ, ಸುಪ್ರಭಾತ, ಲಯನ್ ಜಗಪತಿರಾವ್, ಲಾಲಿ ಮತ್ತು ವೀರಪ್ಪ ನಾಯ್ಕ ಸೇರಿದಂತೆ ಒಟ್ಟು ಏಳು ಚಿತ್ರಗಳಲ್ಲಿನ ಇವರ ಪಾತ್ರಕ್ಕೆ ರಾಜ್ಯಪ್ರಶಸ್ತಿಗಳು ದೊರೆತಿವೆ. ಅಲ್ಲದೆ ರಾಜ್ಯ ಸರ್ಕಾರದಿಂದ ಡಾ|| ರಾಜ್ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ಫಿಲಂಫೇರ್‌ನಿಂದ ಜೀವಮಾನ ಸಾಧನೆ ಮುಂತಾದ ಅತ್ಯುನ್ನತ ಪ್ರಶಸ್ತಿಗಳೂ ಸಹ ಇವರಿಗೆ ದೊರೆತಿವೆ.

ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಅನೇಕ ಸಾಂಸ್ಕೃತಿಕ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು ಸಹ ಇವರಿಗೆ ದೊರೆತಿವೆ. `ಸತ್ಯಂ ಶಿವಂ ಸುಂದರಂ’ ಮತ್ತು `ಸಿಂಹಾದ್ರಿಯ ಸಿಂಹ’ ಚಿತ್ರಗಳಲ್ಲಿ ತ್ರಿಪಾತ್ರಗಳಲ್ಲಿ ಅಭಿನಯಿಸಿದ ವಿಷ್ಣು ಅವರು ಒಂದೆ ರೂಪ ಎರಡು ಗುಣ, ವಿಜಯ್-ವಿಕ್ರಮ, ಯಜ ಮಾನ, ಜಮೀನ್ದಾರ್ರು ಸೇರಿದಂತೆ ಒಟ್ಟು ಹನ್ನೆರಡು ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಾಗರಹಾವು, ಭೂತಯ್ಯನ ಮಗ ಅಯ್ಯು, ಹೊಂಬಿಸಿಲು, ಬಂಧನ, ಸೂರ್ಯವಂಶ ಸೇರಿದಂತೆ ಹತ್ತು ಕನ್ನಡ ಚಿತ್ರಗಳು ಇಪ್ಪತ್ತೈದು ವಾರ ಪ್ರದರ್ಶಿತವಾಗಿವೆ. ಕಳ್ಳ-ಕುಳ್ಳ, ಸಹೋದರರ ಸವಾಲ್, ಸುಪ್ರಭಾತ, ವೀರಪ್ಪನಾಯ್ಕ, ಕೋಟಿಗೊಬ್ಬ, ಯಜ ಮಾನ, ಆಪ್ತಮಿತ್ರ, ಆಪ್ತರಕ್ಷಕ ಸೇರಿದಂತೆ ಇವರ ಸುಮಾರು ನಲವತ್ತೇಳು ಚಿತ್ರಗಳು ಶತದಿನ ಆಚರಿಸಿವೆ. (ಯಜಮಾನ ಮತ್ತು ಆಪ್ತಮಿತ್ರ ಚಿತ್ರಗಳು ಬೆಂಗಳೂರು ಮತ್ತು ಜಿಲ್ಲಾಕೇಂದ್ರಗಳ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಪ್ರದರ್ಶನಗೊಂಡಿವೆ). ನಾಗರಹೊಳೆಯ “ಈ ನೋಟಕೆ ಮೈಮಾಟಕೆ” ಕಿಲಾಡಿ ಕಿಟ್ಟುವಿನ “ಮಡಿಲಲ್ಲಿ ಮಗುವಾಗಿ ನಾನು” ಸಾಹಸಸಿಂಹದ “ಹೇಗಿದ್ದರೂ ನೀನೇ ಚೆನ್ನ” ಜಿಮ್ಮಿಗಲ್ಲುವಿನ “ತುತ್ತು ಅನ್ನ ತಿನ್ನೋಕೆ”, ಮೋಜುಗಾರ-ಸೊಗಸುಗಾರದ “ಕನ್ನಡವೇ ನಮ್ಮಮ್ಮ” ಸೇರಿದಂತೆ ಒಟ್ಟು ಇಪ್ಪತ್ತೈದು ಚಿತ್ರಗಳಲ್ಲಿ ವಿಷ್ಣು ಸ್ವಯಂ ಹಾಡಿದ್ದಾರೆ.

ಚಾಮುಂಡಿ, ಮಂಜುನಾಥ, ಅಯ್ಯಪ್ಪ, ಬನಶಂಕರಿ ಮತ್ತು ಮಲೆಮಹದೇಶ್ವರ ಮುಂತಾದ ದೇವ, ದೇವತೆಗಳ ಆರಾಧನೆಯ ಭಕ್ತಿಗೀತೆಗಳನ್ನು ಇವರೇ ಹಾಡಿದ್ದು, ಅವುಗಳ ಧ್ವನಿಸುರುಳಿ ಸಹ ಬಂದಿವೆ.

ಮೂವತ್ತೇಳು ವರ್ಷಗಳ ತಮ್ಮ ಚಿತ್ರಜೀವನದಲ್ಲಿ ಅನೇಕ ಬಗೆಯ (ಸಾಹಸ, ಹಾಸ್ಯ, ಭಾವನಾತ್ಮಕ, ಥ್ರಿಲ್ಲರ್, ಶೋಕ, ವೀರ ಹೀಗೆ) ವೈವಿದ್ಯಮಯವಾದ ಪಾತ್ರಗಳಲ್ಲಿ ಯಶಸ್ವಿಯಾಗಿ ಅಭಿನಯಿಸಿದ ವಿಷ್ಣು ಕನ್ನಡ ಚಿತ್ರರಸಿಕರ ಹೃದಯಗಳಲ್ಲಿ ಅವಿಸ್ಮರಣೀಯ ಸ್ಥಾನ ಪಡೆದಿದ್ದಾರೆ.

ಡಾ||ರಾಜ್, ಉದಯ್, ಕಲ್ಯಾಣ್ ನಂತರದ ಜನರೇಶನ್‌ಗೆ ಸೇರಿದರೂ ಸಹ ಕುಮಾರತ್ರಯ ನಟರಂತೆ ಹಾಗೂ ನಂತರದ ತಮ್ಮ ಸಮಕಾಲೀನ ನಟರಾದ ಅಂಬರೀಶ್, ನಾಗ್ ಸಹೋದರರು ಮುಂತಾದವರಂತೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತಮ್ಮದೇ ಅಧ್ಯಾಯ ತೆರೆದಿದ್ದಾರೆ. ಅವರ ಹೆಸರು ಉಲ್ಲೇಖ ಸಾಧನೆಗಳನ್ನು ಪರಿಗಣಿಸದೇ ಕನ್ನಡ ಚಿತ್ರರಂಗದ ಇತಿಹಾಸ ಅಪೂರ್ಣ ಅಂತ ಖಂಡಿತಾ ಹೇಳಬಹುದು.

೧೯೬೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕುಮಾರತ್ರಯರ ಹಾಗೆ ತಮಿಳು ಚಿತ್ರರಂಗದಲ್ಲಿ ಇದ್ದವರು ಮಕ್ಕಳ್ ತಿಲಕಂ ಎಂ.ಜಿ.ಆರ್., ನಡಿಗರ್ ತಿಲಕಂ ಶಿವಾಜಿ ಗಣೇಶನ್ ಮತ್ತು ಕಾದಲ್ ಮನ್ನನ್ ಜೆಮಿನಿ ಗಣೇಶನ್ ತ್ರಿಮೂರ್ತಿಗಳು. ಭಾರತೀಯ ಚಿತ್ರರಂಗದಲ್ಲಿ ಸಂಭಾಷಣೆ ಹೇಳುವ ವೈಶಿಷ್ಟ್ಯ ವೈಖರಿಯಲ್ಲಿ ಹಾಗೂ ಅಭಿನಯ ವೈವಿಧ್ಯತೆಯಲ್ಲಿ ಮತ್ತೊಬ್ಬರು ಅನುಕರಿಸಲಾಗದ ಅದ್ಭುತ ನಟ ಎಂ.ಆರ್.ರಾಧಾ (ಪುರುಷ). ಇತ್ತೀಚೆಗೆ ಬಂದ ಉಪ್ಪಿಯ ಚಿತ್ರ `ರಕ್ತ ಕಣ್ಣೀರು’ ಮೂಲ ತಮಿಳು (೧೯೫೪) ಚಿತ್ರದ ನಾಯಕ.

೧೯೬೦ರ ದಶಕದಲ್ಲಿ ನಾನು ಭದ್ರಾವತಿಯಲ್ಲಿದ್ದೆ. ಒಂದು ಸುದ್ದಿ ಕೇಳಿ ಆಶ್ಚರ್ಯ, ಅದ್ಭುತ ಎರಡೂ ಆಗಿದ್ದವು. ನನಗಷ್ಟೇ ಅಲ್ಲ; ಇಡೀ ತಮಿಳುನಾಡು ಹಾಗೂ ಅಕ್ಕಪಕ್ಕದ ರಾಜ್ಯದ ಜನತೆಗೆ. ಅದೇನೆಂದರೆ ಎಂ.ಆರ್. ರಾಧಾ ನಿಜವಾದ ಪಿಸ್ತೂಲಿನಿಂದ ಎಂ.ಜಿ.ಆರ್.ಗೆ ಗುಂಡು ಹಾರಿಸಿದ್ದಾರೆ ಅಂತ. ನಂತರ ಅದು ಸತ್ಯ ಅಂತಲೂ ಗೊತ್ತಾಯಿತು. ಆದರೆ ಗುಂಡು ಎಂ.ಜಿ.ಆರ್. ಕುತ್ತಿಗೆಯ ನಡುವೆ ತೂರುವ ಬದಲು ಕತ್ತಿನ ಪಕ್ಕ ಕಿವಿಯ ಕೆಳಗೆ ಸವರಿಕೊಂಡು ಹೋಗಿತ್ತು. ಅವರ ಮಾತಿನ ಧ್ವನಿ ಪೆಟ್ಟಿಗೆಗೆ ಹಾನಿಯಾಗಿತ್ತು. ನಂತರ ಎಂ.ಜಿ.ಆರ್. ಅವರ ಧ್ವನಿ ಮೊದಲಿನ ಹಾಗೆ ಇರಲಿಲ್ಲ ಅನ್ನಿ. ಆ ಘಟನೆಯಿಂದ ಅವರಿಬ್ಬರ ನಡುವೆ ಕಾರಣಗಳಿದ್ದವು ಅಂತಲೂ ತಿಳಿಯಿತು. ಇದು ಏಕೆ ನೆನಪಾಯಿತೆಂದರೆ `ಗಂಧದ ಗುಡಿ’ ಚಿತ್ರೀಕರಣದ ವೇಳೆ ವಿಷ್ಣು, ಡಾ||ರಾಜ್‌ರ ಕಡೆ ರೈಫಲ್‌ನಿಂದ ನಿಜವಾದ ಗುಂಡು ಹಾರಿಸಿದ್ದರು ಅನ್ನೋ ಸುದ್ದಿ ಸುಂಟರಗಾಳಿಯಂತೆ ತಿರುಗಿ ಕಾಳ್ಗಿಚ್ಚಿನಂತೆ ಹರಡಿತ್ತು.

ಆದರೆ ವಾಸ್ತವವಾಗಿ ಇದರಲ್ಲಿ ವಿಷ್ಣು ಅವರ ಯಾವ ತಪ್ಪೂ ಇರಲಿಲ್ಲ. ಅವರಿಗೆ ಅಂತಹ ಯಾವುದೇ ದುರುದ್ದೇಶ ಇರಲಿಲ್ಲ. ಚಿತ್ರೀಕರಣ ಕಾಲಕ್ಕೆ ನಕಲಿ ಗುಂಡಿನ ರೈಫಲ್ ಸಿಗದ ಕಾರಣ ಎಂ.ಪಿ. ಶಂಕರ್ ಯಾವಾಗಲೂ ಲೋಡ್ ಮಾಡಿ ಇಟ್ಟಿರುತ್ತಿದ್ದ ರೈಫಲ್ ತಿಳಿಯದೇ ಉಪಯೋಗಿಸಿ ರಾದ್ಧಾಂತವಾಯಿತು. ಹಾಗಂತ ಸ್ವತಃ ಎಂ.ಪಿ.ಶಂಕರ್ ಅನೇಕ ಸಲ ಹೇಳಿದ್ದಾರೆ. ತಮ್ಮ ಆತ್ಮಚರಿತ್ರೆಯಲ್ಲೂ ತಿಳಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿ ಬಾಲಣ್ಣ (ಬಾಲಕೃಷ್ಣ) ಸಹ ಇದರ ಬಗ್ಗೆ ಸತ್ಯಾಂಶ ಹೇಳಿದ್ದಾರೆ. ಡಾ||ರಾಜ್ ಅವರಿಗೆ ಪ್ರಾಣಾಪಾಯ ತರುವಂತಹ ಕ್ಷುದ್ರ ಮನೋಭಾವದವರಲ್ಲ ವಿಷ್ಣು. ಅವರಿಗೆ ಅದರ ಅಗತ್ಯವೂ ಇರಲಿಲ್ಲ. ಹಾಗಂತ ಡಾ||ರಾಜ್ ಅವರೂ ಸಹ ಅದನ್ನು ನಿಜ ಸಂಗತಿ ಅಂತ ನಂಬಲೂ ಇಲ್ಲ, ನಂಬುವಂತಹ ವ್ಯಕ್ತಿಯಲ್ಲ, ಮೇರು ವ್ಯಕ್ತಿ ಡಾ|| ರಾಜ್.

ಆದರೆ ಈ ಘಟನೆ ಇಬ್ಬರು ನಟರ ಅಭಿಮಾನಿಗಳಲ್ಲಿ, ಸಂಘಗಳಲ್ಲಿ ಭಾರೀ ವಿವಾದ ಕೋಲಾಹಲ, ಆಗಿ ಘರ್ಷಣೆಗಳಾಗಿದ್ದು ನಿಜ. ನಂತರ ತಣ್ಣಗಾಯಿತು ಅನ್ನಿ.

ವಾಸ್ತವವಾಗಿ ಡಾ||ರಾಜ್ ಬಗ್ಗೆ ವಿಷ್ಣುಗೆ ಚಿಕ್ಕಂದಿನಿಂದಲೂ ಆರಾಧ್ಯದೈವದ ಭಕ್ತಿಭಾವನೆ. ಡಾ||ರಾಜ್‌ಗೂ ಅಷ್ಟೇ, ವಿಷ್ಣು ಬಗ್ಗೆ ತಮ್ಮ ಕಿರಿಯ ಸೋದರನಂತಹ ಭ್ರಾತೃವಾತ್ಸಲ್ಯ. ವಂಶವೃಕ್ಷದಿಂದ ಹಿಡಿದು ನಂತರದ ಅನೇಕ ಚಿತ್ರಗಳ ವಿಷ್ಣು ಅಭಿನಯವನ್ನು ಮುಕ್ತ ಮನಸ್ಸಿನಿಂದ ಹೊಗಳಿದ್ದರು ಡಾ||ರಾಜ್. ಅದೊಂದು ಭಯಂಕರ ಕೆಟ್ಟ ಕನಸಾಗಿ ಬಂದು ಕೆಲಕಾಲ ಕನ್ನಡ ಚಿತ್ರರಂಗದಲ್ಲಿ ಕಾಡಿದ್ದು ನಿಜ. ಈಗ ಇಬ್ಬರೂ ಇಲ್ಲ. ಅವರ ಅದ್ಭುತ ಅಭಿನಯದ ಚಿತ್ರಗಳು ಮಾತ್ರ ನಮ್ಮ ಮುಂದಿವೆ.

Leave a Reply

Your email address will not be published. Required fields are marked *