ಬಾಟಮ್ ಐಟಂ:

ಅಂದಹಾಗೆ ಮೋದಿ ಹೇಳಿದ್ದಾರೆ ದೀಪ ಹಚ್ಚಬೇಕು!

in ಬಾಟಮ್ ಐಟಮ್

ಅಂದಹಾಗೆ ಮೋದಿ ಹೇಳಿದ್ದಾರೆ ದೀಪ ಹಚ್ಚಬೇಕು!

ಈ ಮಹಾಮಾರಿಗೆ ಸರಳವಾದ ಚಿಕಿತ್ಸೆಗಳಿವೆ. ಮುಖ್ಯವಾಗಿ ಪ್ರಾತಃಕಾಲದಲ್ಲಿ ಬಿಸಿನೀರು ಕುಡಿಯಬೇಕು. ಅದಕ್ಕೆ ಲಿಂಬೂ ಬೆರೆಸಿ ಕುಡಿಯುವುದು ಒಳ್ಳೆಯದು. ಒಂದು ಅವಗಾಹನೆಯ ಪ್ರಕಾರ ದೇಹವನ್ನು ಪ್ರವೇಶಿಸುವ ಕೊರೋನಾ ಗಂಟಲುನಾಳದಲ್ಲಿ ಕೆಲಕಾಲ ಉಳಿಯುತ್ತದೆ. ಬಿಸಿನೀರು, ಚಹಾ, ಕಾಫಿ, ಇತ್ಯಾದಿಗಳು ಕುಡಿಯುವುದರ ಮೂಲಕ ರೋಗಾಣು ನಾಶವಾಗುತ್ತದೆ. ಯಾವ ಕಾರಣಕ್ಕೂ ರೆಫ್ರಿಜರೇಟರಿನ ಯಾವುದೇ ವಸ್ತುವನ್ನೂ ತಿನ್ನಬಾರದು. ಅದರಲ್ಲೂ ಮಕ್ಕಳಿಗೆ ತಣ್ಣೀರು, ಐಸ್ ಕ್ಯೂಬು ಇತ್ಯಾದಿಗಳನ್ನು ಅಪ್ಪಿತಪ್ಪಿ ಕೂಡ ಕೊಡಬಾರದು. ಶೀತಲ ವಾತಾವರಣದಲ್ಲಿ ಕೊರೋನಾ ದಿವಿನಾಗಿ ಬೆಳೆಯುತ್ತದೆ. ಯಾರೋ ಒಬ್ಬರು ಸೋಂಕಿತರು ಅಂತ ಗೊತ್ತಾದ ಕೂಡಲೇ ವಿಪರೀತ ಭಯ ಪಡಬೇಕಾಗಿಲ್ಲ. ಅವರನ್ನು ಕೂಡಲೇ ಕ್ವಾರಂಟೈನ್ ಮಾಡಬೇಕು. ಅಂದರೆ ಸಂಪೂರ್ಣಾಗಿ  ದೂರವಿಡಬೇಕು. ಅವರ ಮನೆಯವರು ಕೂಡ ಅವರಿಂದ ದೂರವಿರಬೇಕು. ವಿಶೇಷವಾಗಿ ಮಕ್ಕಳನ್ನ, ವೃದ್ಧರನ್ನ ಈ ಸೋಂಕಿತರಿಂದ ದೂರವಿಡಲೇಬೇಕು. ಮನೆಗೆ ಪೇಪರ್ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿ. ಹಾಲಿನ ಪ್ಯಾಕೆಟ್ ತಂದುಕೊಳ್ಳುವಾಗ ಅದನ್ನು ಕನಿಷ್ಟ ಪಕ್ಷ ಇಪ್ಪತ್ತು ಸೆಕೆಂಡು ನೀರಿನಲ್ಲಿ ತೊಳೆಯಬೇಕು. ಯಾವುದೇ ಉಷ್ಣಾಂಶ ಪರಿಸ್ಥಿತಿಯಲ್ಲಿ ಕೊರೋನಾ ಬದುಕುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಹೆಂಡತಿ ಕ್ರುದ್ಧಗೊಂಡು ಉಷ್ಣ ಉಷ್ಣ ಕಣ್ಣು ಬಿಟ್ಟರೆ ಕೊರೋನಾ ಹಾಗಿರಲಿ ಗಂಡನೇ ವರಾಂಡದಲ್ಲಿ ಸ್ಥಾಪಿತನಾಗುವುದು ಒಳ್ಳೆಯದು.

ಸಮಯ ಕಳೆಯಲಿಕ್ಕೆ ಸಾಕಷ್ಟು ವಿಧಿ ವಿಧಾನಗಳಿವೆ. ಇಂದು ಮಾಡೋಣ ನಾಳೆ ಮಾಡೋಣ ಅಂತ ಮುಂದಕ್ಕೆ ಹಾಕುತ್ತಾ ಬಂದ ಕೆಲಸಗಳನ್ನೆಲ್ಲ ಈಗ ಮಾಡಿ ಮುಗಿಸಬಹುದು. ನಾವು ಗಂಡಸರು ಇಲ್ಲದ ಹಮ್ಮುಬಿಮ್ಮು ಬಿಟ್ಟು  ಮನೆ ಗುಡಿಸಬಹುದು. ಮೂಲೆಯಲ್ಲಿ ಕಟ್ಟಿದ ಜೇಡವನ್ನು ಪಟ್ಟಪಟ್ಟಿ ನಿಕ್ಕರು ಹಾಕಿಕೊಂಡು ಸ್ಟೂಲಿನ ಮೇಲೆ ಹತ್ತಿ ಆಯ ತಪ್ಪದಂತೆ ನಿಂತುಕೊಂಡು ಜೇಡ ತೆಗೆದು be careful ಆಗಿ ನೆಲಕ್ಕೆ ಇಳಿಯಬಹುದು. ಅಡುಗೆ ಮಾಡಿದ್ದು ಅವಳೇ ಇರಲಿ, ಗಂಡನೇ ಆಗಲಿ, ಗಂಡೆಂಬ ಅಹಂಕಾರವನ್ನು ಬಿಟ್ಟು ಪಾತ್ರೆಗಳನ್ನು ಚಕಚಕನೆ, ಲಕಲಕನೆ vim ಹಾಕಿ ತೊಳೆದು ‘ಎಂಗೆ?’ ಅಂತ ಅವಳತ್ತ ಒಮ್ಮೆ ನೋಡಿ ಅನೇಕ ವರ್ಷ ಬಾಕಿ ಇದ್ದ ಭೇಷ್ ಗಿರಿ ಪಡೆಯಬಹುದು. ಮನೆಮಂದಿಯೆಲ್ಲರ ಉಗುರು ತೆಗೆಯಬಹುದು. ಉಗುರು ಸಂದಿಯ ಕೊಳೆ ತೆಗೆಯಬಹುದು. ಮಕ್ಕಳ ಚಡ್ಡಿ ಬಿಚ್ಚಿ ಹಾಕಿ ಅವರ ಮೃದುವಾದ ತಿಕ ತೊಳೆಯಬಹುದು. ಅಜ್ಜ-ಅಜ್ಜಿಯರಿಂದ ದೂರವೇ ಉಳಿದು ಅವರಿಗೆ ಯಲಡಿಕೆ ಕುಟ್ಟಿಕೊಡಬಹುದು. ನಶ್ಯಾ, ಬೀಡಿ, ಸಿಗರೇಟು, ದೇವತಾ ಸಾಮಗ್ರಿ, ಬಿಪಿ ಮಾತ್ರೆ, ಡಯಾಬಿಟೀಸ್ ಮಾತ್ರೆ ಇತ್ಯಾದಿಗಳನ್ನು ಯಾವುದಕ್ಕೂ ಕೆಲಸಕ್ಕೆ ಬಾರದ ಹಳೆಯ ಪ್ರಜಾವಾಣಿಯಲ್ಲಿ ಇರಿಸಿ ಒಂದು ಉದ್ದನೆಯ ಕಡ್ಡಿಯಿಂದ ಆ ವೃದ್ಧರತ್ತ ತಳ್ಳುತ್ತ ‘ದೋಣಿ ಸಾಗಲಿ, ಮುಂದೆ ಹೋಗಲಿ’ ಎಂದು ವಿಕಾರವಾಗಿ ಹಾಡಿಕೊಳ್ಳಬಹುದು.

ಹೆಂಡತಿಗಷ್ಟೆ ಅಲ್ಲದೆ ತಂಗಿಯರಿಗೂ ತಲೆ ಬಾಚುತ್ತೇನೆಂದು ಕೂತು ಅವರ ಅಳಿದುಳಿದ ಕೇಶರಾಶಿಯನ್ನು  ಬಾಚಿ ಕೆಳಗೆ ಬಿದ್ದ ರಾಶಿ ಕೇಶವನ್ನು ಎಂದೋ ನಿಂತು ಹೋದ ವಿಶ್ವವಾಣಿ ಪತ್ರಿಕೆಯಲ್ಲಿ ಸುತ್ತಿ ಮನೆಯ ಆಸುಪಾಸಿನಲ್ಲೆಲ್ಲೂ ಕಾಣದಂತೆ ಎಸೆಯಬಹುದು.  ನಿಮಗೆ ಗೊತ್ತು, ನಾನು ಪುಸ್ತಕದ ಹುಳು. ನನಗೆ ಬರೆಯಲೇ ಬೇಕಾದ ಪುಸ್ತಕಗಳ ರಾಶಿ ಇದೆ. ಇದಲ್ಲದೆ ಚೈನಾದ ಮಹಾನ್ ಕುತಂತ್ರಕ್ಕೆ ಸಂಬಂಧಿಸಿದಂತೆ ಒಂದು ಪುಸ್ತಕ ಓದುತ್ತಿದ್ದೇನೆ. ಒಂದು  ಸೈಂಟಿಫಿಕ್ ಥ್ರಿಲ್ಲರ್ ಓದುತ್ತಿದ್ದೇನೆ. ನನ್ನ ಅತ್ಯಂತ ಪ್ರೀತಿಯ ಲೇಖಕ ‘ಆಲ್ಬರ್ಟ್ ಕಮು’ ಬರೆದ ‘ದಿ ಪ್ಲೇಗ್’ ಓದುತ್ತಿದ್ದೇನೆ. ಅದೇಕೋ ಗೊತ್ತಿಲ್ಲ. ಏನೋ ನೆನಪಾದವನಂತೆ ಗರುಡ ಪುರಾಣ ಓದುತ್ತಿದ್ದೇನೆ. ಅವನ್ಯಾವನವನು ನಾಸ್ಟ್ರಡಾಮಸ್? ಅವನು ಬೊಗಳಿದ ಶತಶತಮಾನಗಳ ಸುಳ್ಳು ಓದಿ ಪುನೀತನಾಗುತ್ತಿದ್ದೇನೆ. ಇನ್ನು ಕೈವಾರ ತಾತಯ್ಯ… ಆ ಮುದುಕನಿಗೆ ಈಗಾಗಲೇ ಕೊರೋನಾ ಅಮರಿಕೊಂಡಿದೆ ಎಂಬ ವರ್ತಮಾನವಿದೆ. ದಿಲ್ಲಿಯ ಮರ್ಕಜ್ ನಿಂದ ಬಂದ ಕರ್ಮಠ ಮುಸ್ಲಿಮರು ಒತ್ತಟ್ಟಿಗಿರಲಿ, ನಮ್ಮ ಬಡಪಾಯಿ ಮುಸ್ಲಿಮರನ್ನು ಕರೆದು ಅವರಿಗೆ ದಿನಸಿ, ಔಷಧಿ ಇತ್ಯಾದಿಗಳನ್ನು ಕೊಟ್ಟು ಬೆನ್ನು ತಟ್ಟುತ್ತಿದ್ದೇನೆ. ಬೇರೇನೂ ಮಾಡಲು ಕೆಲಸವಿಲ್ಲದಿದ್ದಾಗ ಫೇಸ್ ಬುಕ್ಕಿಗೆ ನುಗ್ಗಿ ಕಂಡ ಕಂಡವರ ತಂಟೆ ಮಾಡುತ್ತಿದ್ದೇನೆ. ನನ್ನ ದೈತ್ಯ ಗಾತ್ರದ ನಾಯಿ ಸಿದ್ದು ಮತ್ತು ಜೂಲು ಜೂಲು ದೇಹದ ಭಜ್ಜು ಎರಡನ್ನೂ ಇನ್ನಿಲ್ಲದ ಕ್ರೋಧದಿಂದ ತೊಳೆಯುತ್ತಿದ್ದೇನೆ. ಯಾಕೋ ವಾಚಾಳಿ ಸಾರಾ ಸುಮ್ಮನೆ ಕುಳಿತು ನನ್ನನ್ನೇ ದಿಟ್ಟಿಸಿ ನೋಡುತ್ತಿದೆ. ಅವಳಿಗೀಗ ಔಷಧಿ ಕೊಡಿಸಬೇಕು.  ನನಗೆ ನೂರಾ ಎಂಟು ಸ್ನೇಹಿತರು ಫೋನು ಮಾಡುತ್ತಿದ್ದಾರೆ. ಆ ಹುಡುಗಿ ಮೊನಿಶಾ ತನ್ನ ತಾಯಿಯ ಅತ್ಯಂತ ಪ್ರಮುಖ ಅಂಗಗಳು ಸಾಯುತ್ತಿರುವುದರ ಬಗ್ಗೆ ಗಾಬರಿಗೊಂಡು ಮಾತನಾಡುತ್ತಿದ್ದಾಳೆ. ಪ್ರಾರ್ಥನಾದ ಆಡಳಿತ ಮಂಡಳಿಯಿಂದ ಆ ಶಿಕ್ಷಕಿಗೆ ಔಷಧಿ ಒದಗಿಸುವ ಏರ್ಪಾಟು ಮಾಡುತ್ತಿದ್ದೇನೆ. ನಮ್ಮ ಬೀದಿಯ ಗಂಡು-ಹೆಣ್ಣು, ಮಕ್ಕಳು-ಮರಿ, ಮುದುಕರು ಎಲ್ಲರನ್ನೂ ಗುಂಪು ಗುಂಪಾಗಿ ದೂರ ದೂರ ನಿಲ್ಲಿಸಿ ಇವತ್ತು ಏನು ಅಡುಗೆ? ಸೊಪ್ಪಿಗೆ ಎಷ್ಟು ಉಪ್ಪು ಹಾಕಿದ್ದೀರಿ? ವಿನೆಗರ್ ಹಾಕಿದರೆ ಅಡುಗೆ ರುಚಿಯಾಗುತ್ತದಾ? ನಿಮ್ಮ ಮನೆಯ ಪಲ್ಯದಲ್ಲಿ ಏಕೋ ಕೂದಲು ಬಿದ್ದಿತ್ತು ಅಂತ ನಿಮ್ಮ ಚಿಂಟು ಹೇಳಿದ್ದು ಬಹುಶಃ ಸುಳ್ಳಿರಬೇಕಲ್ಲವೇ? ಅಂತೆಲ್ಲ ಹರಟುತ್ತಿದ್ದೇನೆ. ಅಪ್ಪಿತಪ್ಪಿ ಕೂಡ ಟಿವಿ ನೋಡುವುದಿಲ್ಲ. ಜನರಿಗೆ ‘ಆತ್ಮಹತ್ಯೆ ಮಾಡಿಕೊಳ್ಳಿ’ ಎಂದು ಕರೆ ನೀಡಿದ ಪಬ್ಲಿಕ್ ಟಿವಿ ರಂಗನು ಒಂದೇ ಸಮನೆ ಖವ್ವೋ ಖವ್ವೋ ಎಂದು ಕೆಮ್ಮುತ್ತಿರುವುದು ಕೇಳಿ ಬಿಟೀವಿ ರಾಧಕ್ಕ ಗಳಗಳನೆ ಅತ್ತ ವರ್ತಮಾನವಿದೆ.

ಅಂದಹಾಗೆ ಮೋದಿ ಹೇಳಿದ್ದಾರೆ. ದೀಪ ಹಚ್ಚಬೇಕು.

-ರವೀ

Leave a Reply

Your email address will not be published.

*

Latest from ಬಾಟಮ್ ಐಟಮ್

Go to Top