ಮಾಸ್ಕ್ ಕಟ್ಟಿಕೊಂಡು ದೂರ ದೂರ ಕೂತಿರುವ ನಮಗೆ…

in ಖಾಸ್ । ಬಾತ್/ಹಲೋ ಎಡಿಟೋರಿಯಲ್

ಸಾಫ್ಟ್ ಕಾರ್ನರ್:

 

ಎಲ್ಲವೂ ಬದಲಾಗುತ್ತಿದೆ. `ಪತ್ರಿಕೆ’ಯೂ ಬದಲಾಗಲೇಬೇಕು. ನನಗನ್ನಿಸುವ ಮಟ್ಟಿಗೆ ಈ ಕೊರೋನಾ ತಾನು ಮುಗಿಯುವ ಹೊತ್ತಿಗೆ ಇಡೀ ಗ್ಲೋಬನ್ನೂ, ನಕಾಶೆಯನ್ನೂ ಬದಲಾಯಿಸಲಿದೆ. ನಾನು ನನ್ನ `ಪತ್ರಿಕೆ’ಗೆ ಒಂದು ವಾರ ರಜೆ ಘೋಷಿಸಿದ್ದೆ. `ಪ್ರಾರ್ಥನಾ’ ಶಾಲೆಯ ಸಿಬ್ಬಂದಿಗೂ ರಜೆ ಘೋಷಿಸಿದ್ದೆ. ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊದಲು ಪತ್ರಿಕಾ ಕಚೇರಿ ಮೌನವಾಗಿತ್ತು. ಅದು ನನ್ನ ಸಿಬ್ಬಂದಿಯನ್ನು, ನನ್ನ ಶಾಲೆಯ ಶಿಕ್ಷಕ-ಶಿಕ್ಷಕಿಯೇತರ ಸಿಬ್ಬಂದಿಯನ್ನು ನಾನು ಪ್ರೀತಿಸುವ, ರಕ್ಷಿಸುವ ಪರಿ. ಸಾಮಾನ್ಯವಾಗಿ ಪ್ರತೀ ತಿಂಗಳು ಐದನೇ ತಾರೀಕು ಕೊಡುವ ಸಂಬಳವನ್ನು ಈ ಬಾರಿ ಮಾರ್ಚ್ ಇಪ್ಪತ್ತೆಂಟಕ್ಕೇ ಕೊಡಮಾಡಿದ್ದೇನೆ. ಅದೇನು ದೊಡ್ಡ ಹೆಗ್ಗಳಿಕೆಯಲ್ಲ. ನನ್ನ ಕರ್ತವ್ಯ. ನಾನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಇನ್ನೊಂದೆಡೆ ನನ್ನ ಕಚೇರಿಯ ಆಸುಪಾಸಿನ ಕಟ್ಟಡ ಕಾರ್ಮಿಕರ ಸುಮಾರು ನಲವತ್ತಾರು ಕುಟುಂಬಗಳನ್ನು ದತ್ತಕಕ್ಕೆ ತೆಗೆದುಕೊಂಡು ಗೆಳೆಯರೊಂದಿಗೆ ಸೇರಿ ಅವರಿಗೆ ಬೇಕಾಗುವ ಪ್ರತಿನಿತ್ಯದ ದಿನಸಿ ಮುಂತಾದವುಗಳನ್ನು ವಿತರಿಸುತ್ತಿದ್ದೇನೆ. ನಾನು ವಿನಂತಿಸಿದರೆ ಜಗತ್ತಿನ ನಾನಾ ಭಾಗಗಳಲ್ಲಿರುವ ನನ್ನ ಓದುಗರು, ಕೇಳುಗರು, ಸ್ನೇಹಿತರು ನನಗೆ ಹಣ ಕಳಿಸುತ್ತಾರೆ. ಈ ಅನುಭವ ನನಗಿದೆ. ಇಪ್ಪತ್ತು ವರ್ಷಗಳ ಹಿಂದೆ ಕಾರ್ಗಿಲ್ ಕದನ ನಡೆದಾಗ ನಾನು ನನ್ನ ಓದುಗ ಸಮೂಹವನ್ನು ಯುದ್ಧದಲ್ಲಿ ಮಡಿದ ಕರ್ನಾಟಕದ ಯೋಧರಿಗೆ ಹಣ ನೀಡಿ ಅಂತ ವಿನಂತಿಸಿದ್ದೆ. ಓದುಗರ ಔದಾರ್ಯ ಎಂಥ ದೊಡ್ಡದು ಎಂದರೆ ನನಗೆ ಆ ಕಾಲಕ್ಕೆ (೧೯೯೯) ಹದಿನೇಳು ಲಕ್ಷ ರುಪಾಯಿ ಕಳಿಸಿ ಕೊಟ್ಟಿದ್ದರು. ಅದನ್ನು ನಾನು ಹದಿನೇಳು ಯೋಧರ ಕುಟುಂಬಗಳಿಗೆ ಕಳಿಸಿದ್ದೆ. ಮುಂದೆ ಅದನ್ನು ಸಂಸ್ಥೆಗಳು, ಮಠ-ಮಾನ್ಯಗಳು ಮಾಡಿದವು. ಒಂದೊಂದು ಕುಟುಂಬಕ್ಕೆ ಅಜಮಾಸು ಎರಡೆರಡು ಕೋಟಿ ಒದಗಿ ಬಂತು. ಆದರೆ ಈಗ ಆ ಕೆಲಸ ಮಾಡಬೇಕಾ ಅಂತ ಯೋಚಿಸುತ್ತಿದ್ದೇನೆ. ದಾನಿಗಳಿಂದ ಹಣ ತರಿಸಿಕೊಳ್ಳುವುದು ಸುಲಭ. ಅದು ಸರಿಯಾದ ರೀತಿಯಲ್ಲಿ ವಿತರಣೆಯಾಗದಿದ್ದರೆ ಬೇಸರವಾಗುತ್ತದೆ. ನನಗೆ ಈಗ ಖಂಡಿತವಾಗಿಯೂ ಯಾವುದೇ ಅಪವಾದ ಹೊರುವ ಉಮ್ಮೇದಿ ಇಲ್ಲ.

`ಪತ್ರಿಕೆ’ ಬದಲಾಗಬೇಕು ಅಂತ ಹೇಳಿದೆನಲ್ಲ. ಇವತ್ತಿನ ಸ್ಥಿತಿಯಲ್ಲಿ ಪತ್ರಿಕೆಯನ್ನು ಹೇಗೋ ಪ್ರಿಂಟ್ ಮಾಡಬಹುದು. ಆದರೆ ಲಕ್ಷಾಂತರ ಪ್ರತಿಗಳನ್ನು ನಾನಾ ಊರುಗಳಿಗೆ ತಲುಪಿಸುವುದು ಹೇಗೆ? ಅವುಗಳನ್ನು ನನ್ನ ಏಜೆಂಟರು ಮಾರುತ್ತಾರಾದರೂ ಹೇಗೆ? ಇಡೀ ದೇಶ ನಿರ್ಜನವಾಗಿದೆ. `ಪತ್ರಿಕೆ’ ಈ ಮೊದಲೂ ಕೂಡ ಅಂತರ್ಜಾಲ (ಆನ್‌ಲೈನ್)ದಲ್ಲಿ ಲಭ್ಯವಾಗುತ್ತಿತ್ತು. ಆದರೆ ಈ ಬಾರಿ ತುರ್ತಿಗೆ ಸ್ಪಂದಿಸಿ `ಹಾಯ್ ಬೆಂಗಳೂರ್!’ ಹಾಗೂ `ಓ ಮನಸೇ…’ ಎರಡನ್ನೂ ಆನ್‌ಲೈನ್‌ನಲ್ಲಿ ದೊರಕುವಂತೆ ಮಾಡಿದ್ದೇನೆ. ನಾವು ತೀರ ಅವಶ್ಯಕವಾದ ಕೆಲವೇ ಕೆಲವು ಸಿಬ್ಬಂದಿಗಳು ಮಾಸ್ಕ್ ಕಟ್ಟಿಕೊಂಡು, ದೂರ ದೂರ ಕುಳಿತುಕೊಂಡು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮಗೆಲ್ಲ ದಯವಿಟ್ಟು ಕೋಸಂಬ್ರಿ, ಪಾನಕ ಕಳಿಸಿಕೊಡ್ತೀರಾ?

-ಬೆಳಗೆರೆ

Leave a Reply

Your email address will not be published.

*

Latest from ಖಾಸ್ । ಬಾತ್

Go to Top