ಮಸೀದಿಯಿಂದ ಬಂದು ಪ್ರಸಾದ ಕೊಟ್ಟರು

in ಲೀಡ್ ನ್ಯೂಸ್
  • ದಿಲ್ಲಿ ಅಬ್ ದೂರ್ ನಹಿ : ಡಿ. ಉಮಾಪತಿ

ಇಷ್ಟಕ್ಕೂ ತಬ್ಲೀಘ್ ಎಂದರೇನು? ಅದು ಬಹಳ ಸರಳ. ನಮಾಜು ಮಾಡಲಿಕ್ಕೆ ಬಾರದೆ ಇರುವವರಿಗೆ ನಮಾಜು ಹೇಳಿಕೊಡುವುದು ಈ ತಬ್ಲೀಘ್ ನ ಉದ್ದೇಶ. ಇಡೀ ದೇಶದ ಜನಕ್ಕೆ ನಮಾಜು ಹೇಳಿಕೊಟ್ಟಿದೆ. ಅಲ್ಲಾ ಅವರನ್ನು ರಕ್ಷಿಸಲಿ ಎಂದು ಇಡೀ ಇಸ್ಲಾಂ ನಿರೀಕ್ಷಿಸುತ್ತಿದೆ. ಪಾಪ…. ಅಲ್ಲಾಗೆ ವಿಪರೀತ ಕೆಮ್ಮು.

ನಿಜಾಮುದ್ದೀನ್ ಮರ್ಕಾಝ್ ಕೊರೋನಾ ಕಂಪನಕೇಂದ್ರ

ಮಸೀದಿಯಿಂದ ಬಂದು ಪ್ರಸಾದ ಕೊಟ್ಟರು

ದಕ್ಷಿಣ ದೆಹಲಿಯ ಮರ್ಕಾಝ್ ನಿಜಾಮುದ್ದೀನ್ ಇದೀಗ ದೇಶದ ಕೊರೋನಾ ವೈರಸ್ ಸೋಂಕಿನ ‘ಕಂಪನ ಕೇಂದ್ರ’.
ಮರ್ಕಾಝ್ ನಿಜಾಮುದ್ದೀನ್ ಎಂಬುದು ಮುಸ್ಲಿಂ ಧಾರ್ಮಿಕ ಸಂಸ್ಥೆ ತಬ್ಲೀಘೀ ಜಮಾಅತ್ ನ ಪ್ರಧಾನ ಕೇಂದ್ರ. ಆರು ಅಂತಸ್ತುಗಳ ಕಟ್ಟಡ. ಹದಿನೈದು ದಿನಗಳ ಹಿಂದೆ ಅಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಮ್ಮೇಳನವೊಂದಕ್ಕೆ ನಾಲ್ಕು ಸಾವಿರ ಮಂದಿ ಸೇರಿದ್ದರು. ಬಾಂಗ್ಲಾದೇಶ, ಇಂಡೋನೇಶ್ಯಾ, ಮಲೇಶಿಯಾ ಹಾಗೂ ಸಿಂಗಪುರದ ಪ್ರತಿನಿಧಿಗಳೂ ಭಾಗವಹಿಸಿದ್ದರು. ನಿಜಾಮುದ್ದಿನ್ ವಿವಾದದ ಮೂಲ ಈ ವಿದೇಶಿಯರೇ ಎಂದು ಶಂಕಿಸಲಾಗಿದೆ.

ಈ ಸಮ್ಮೇಳನದಿಂದ ದೇಶದ ನಾನಾ ಭಾಗಗಳಿಗೆ ವಾಪಸಾಗಿರುವ ಕೊರೋನಾ ವೈರಸ್ ಶಂಕಿತ ಸೋಂಕಿತರನ್ನು ಗುರುತಿಸಿ ಕ್ವಾರಂಟೈನ್ ಗೆ ಹಾಕಲು ಇಪ್ಪತ್ತೈದು ರಾಜ್ಯಗಳು ಪರದಾಡುತ್ತಿವೆ. ದೆಹಲಿ ಪೊಲೀಸ್ ಬೇಹುಗಾರಿಕೆ ಮೂಲಗಳ ಅಂದಾಜಿನ ಪ್ರಕಾರ ಮಾರ್ಚ್ 10 ರಿಂದ 24ರ ನಡುವೆ ಮರ್ಕಾಝ್ ಕೇಂದ್ರಕ್ಕೆ 6,500 ರಿಂದ 7000 ಮಂದಿ ಭೇಟಿ ನೀಡಿರಬಹುದು. ಈ ಪೈಕಿ ವಿದೇಶಿಯರು 300 ಮಂದಿ. ಇಂಡೋನೇಷ್ಯಾಕ್ಕೆ ಸೇರಿದ ಒಂಬತ್ತು ಮಂದಿ ಸೋಂಕಿತರು ತೆಲಂಗಾಣಕ್ಕೆ ತೆರಳಿ ಅಲ್ಲಿ ಸತ್ತಿದ್ದಾರೆ.

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹೇಳಿಕೆಯ ಪ್ರಕಾರ ಬುಧವಾರ ಮುಂಜಾನೆಯ ವೇಳೆಗೆ ಈ ಕೇಂದ್ರದಿಂದ 2,346 ಮಂದಿಯನ್ನು ಖಾಲಿ ಮಾಡಿಸಲಾಗಿದೆ. ಈ ಪೈಕಿ 536 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 167 ಮಂದಿಯನ್ನು ಮಂಗಳವಾರ ಸಂಜೆ ತುಘಲಕಾಬಾದ್ ನ ಹಂಗಾಮಿ ಕ್ವಾರಂಟೈನ್ ಗೆ ಸ್ಥಳಾಂತರಿಸಲಾಗಿದೆ. ಸೋಂಕು ಲಕ್ಷಣಗಳಿಲ್ಲದ 1,810 ಮಂದಿಯನ್ನು ನಿರೀಕ್ಷಣೆಯಲ್ಲಿ ಇಡಲಾಗಿದೆ.
ಮಾರ್ಚ್ 13ರಂದು ಮರ್ಕಾಝ್ ನಿಜಾಮುದ್ದೀನ್ ನಲ್ಲಿ 3,500 ಮಂದಿ ಸಮ್ಮೇಳನಕ್ಕೆ ಕಲೆತಿದ್ದರು. 200ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲವೆಂದು ಆ ಹೊತ್ತಿಗೆ ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು. 16ರ ಹೊತ್ತಿಗೆ ಈ ಮಿತಿಯನ್ನು ಐವತ್ತು ಮಂದಿಗೆ ತಗ್ಗಿಸಲಾಗಿತ್ತು. ಆದರೂ ಮರ್ಕಾಝ್ ನಲ್ಲಿ ಜನ ಚೆದುರದೆ ತಂಗಿದ್ದರು. ಮಾರ್ಚ್ 24ಕ್ಕೆ ಪ್ರಧಾನಿ ಮೋದಿ ರಾಷ್ಟ್ರೀಯ ಲಾಕ್ ಡೌನ್ ಘೋಷಿಸಿದರು. ಪೊಲೀಸರು ಕೇಂದ್ರವನ್ನು ಬಂದ್ ಮಾಡುವಂತೆ ಮರ್ಕಾಝ್ ಗೆ ನೋಟಿಸು ಕಳಿಸಿದರು. ಮಾರ್ಚ್ 25ರಂದು ಮರ್ಕಾಝ್ ನಲ್ಲಿ ಸಾವಿರ ಮಂದಿ ಉಳಿದಿದ್ದರು. ಶ್ರೀನಗರದ ಪ್ರತಿನಿಧಿಯೊಬ್ಬರು ಮರುದಿನ ಸೋಂಕಿಗೆ ಬಲಿಯಾಗುತ್ತಾರೆ. 27ರಂದು ಆರು ಮಂದಿ ಶಂಕಿತ ಸೋಂಕಿತರನ್ನು ಖಾಲಿ ಮಾಡಿಸಿ ಹರಿಯಾಣದ ಜಝ್ಝರ್ ಕ್ವಾರಂಟೈನ್ ಗೆ ಕಳಿಸಲಾಗುತ್ತದೆ. ಮಾರ್ಚ್ 28ರಂದು 33 ಮಂದಿಯನ್ನು ಖಾಲಿ ಮಾಡಿಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗಳಿಗೆ ಸೇರಿಸಲಾಗುತ್ತದೆ. ಮರುದಿನ ದೆಹಲಿ ಪೊಲೀಸರು ಉಳಿದ ಎಲ್ಲರನ್ನೂ ಖಾಲಿ ಮಾಡಿಸತೊಡಗುತ್ತಾರೆ. ಈ ನಡುವೆ ಸೋಂಕು ತಗುಲಿರುವ ಮತ್ತು ಪ್ರತಿನಿಧಿಗಳ ಸಂಖ್ಯೆ ಕುರಿತು ಮರ್ಕಾಝ್ ಕೇಂದ್ರ ಸುಳ್ಳು ಹೇಳಿರುವ ಆರೋಪಗಳು ಕೇಳಿ ಬಂದಿವೆ.

ಜನತಾ ಕರ್ಫ್ಯೂ ಮತ್ತು ಮಾರ್ಚ್ 24ರಿಂದ ಘೋಷಿಸಲಾದ 21 ದಿನಗಳ ಹಠಾತ್ ಲಾಕ್ ಡೌನ್ ಕಾರಣ ಪ್ರತಿನಿಧಿಗಳು ತಮ್ಮ ಸ್ಥಳಗಳಿಗೆ ವಾಪಸಾಗುವುದು ದುಸ್ತರವಾಯಿತು. ಕರ್ಫ್ಯೂ ಪಾಸ್ ಗಳನ್ನು ನೀಡಬೇಕೆಂಬ ಮನವಿಗೆ ದೆಹಲಿ ಸರ್ಕಾರ ಓಗೊಡಲಿಲ್ಲ ಎಂದು ಮರ್ಕಾಝ್ ಕೇಂದ್ರ ಸಮಜಾಯಿಷಿ ನೀಡಿದೆ.

ಇಡೀ ಪ್ರಕರಣದಲ್ಲಿ ಮರ್ಕಾಝ್ ಕೇಂದ್ರದ ಬೇಜವಾಬ್ದಾರಿ ಎದ್ದು ಕಂಡಿದೆ. ಸೋಂಕಿನ ದಿನಗಳಲ್ಲಿ ಇಷ್ಟು ದೊಡ್ಡ ಸಮ್ಮೇಳನವನ್ನು ನಡೆಸಿದ್ದು ಕ್ರಿಮಿನಲ್ ಕೃತ್ಯ. ‘ಸಾಮಾಜಿಕ ದೂರ’ ಕಾಯ್ದುಕೊಳ್ಳಬೇಕೆಂಬ ವಿಧಿಯನ್ನು ಈ ಸಮ್ಮೇಳನದ ಧಾರ್ಮಿಕ ನಾಯಕರೊಬ್ಬರು ಲೇವಡಿ ಮಾಡಿರುವುದು ಸಲ್ಲದು. ಜನತಾ ಕರ್ಫ್ಯೂ ದಿನ ಸಂಜೆ ಜಾಗಟೆ, ತಟ್ಟೆ ಬಾರಿಸಿ, ಶಂಖ ಊದಿದ ನಂತರ ದೇಶದ ನಾನಾ ಭಾಗಗಳಲ್ಲಿ ಜನ ಕೊರೋನಾ ಗೆದ್ದೆವೆಂದೇ ಬೀಗಿ ಗುಂಪು ಗುಂಪಾಗಿ ಬೀದಿಗಿಳಿದು ಮೆರವಣಿಗೆ ಹೊರಟಷ್ಟೇ ದಟ್ಟ ಮೂರ್ಖತನವಿದು. ಕೋವಿಡ್-19 ರಾಷ್ಟ್ರೀಯ ಸ್ವಾಸ್ಥ್ಯ ತುರ್ತು ಪರಿಸ್ಥಿತಿ ಅಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಮಾರ್ಚ್ 13ರಂದು ಘೋಷಿಸಿದ್ದು ಹೌದು. ಆದರೂ ಇಂತಹ ದೊಡ್ಡ ಸಮಾವೇಶವನ್ನು ನಡೆಸಕೂಡದಿತ್ತು.

ಮರ್ಕಾಝ್ ಸಮ್ಮೇಳನ ಪ್ರಕರಣ ವರದಿಯಾದ ನಂತರ ಕೋಮುವಾದಿ ಹದ್ದುಗಳು ರೆಕ್ಕೆ ಬಡಿದು ಹೂಂಕರಿಸತೊಡಗಿವೆ. ಬಿಜೆಪಿಯ ನಾಯಕರು ಈ ಘಟನೆಯನ್ನು ಇಸ್ಲಾಮಿಕ್ ವಿಪ್ಲವ, ಕೊರೋನಾ ಭಯೋತ್ಪಾದನೆ ಎಂದು ಕರೆಯತೊಡಗಿದ್ದಾರೆ. ಕೊರೋನಾ ಮಹಾಮಾರಿಯ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ತಬ್ಲೀಘ್ ನ್ನು ಬಲಿಪಶು ಮಾಡುವುದು ತರವಲ್ಲ. ಕೊರೋನ ಸೋಂಕು ಕಾಲಿಟ್ಟಾಗಿನಿಂದ ಕೋಮುವಾದಿ ಕಾರ್ಯಸೂಚಿ ಇಲ್ಲದೆ ಪರದಾಡುತ್ತಿದ್ದ ದೃಶ್ಯ ಮಾಧ್ಯಮಗಳು ಇಡೀ ಕೃತ್ಯಕ್ಕೆ ಕೋಮುವಾದಿ ಬಣ್ಣ ಬಳಿದು, ಎಂದಿನ ಮುಸ್ಲಿಂ ದ್ವೇಷ ಬಿತ್ತನೆಯ ನಂಜುಭರಿತ ಕೃಷಿಯಲ್ಲಿ ಬಿಡುವಿಲ್ಲದೆ ತೊಡಗಿವೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ಮತಾಂಧತೆ. ವಿಶೇಷವಾಗಿ ಮಹಾಮಾರಿ ದೇಶದ ಮೇಲೆ ಎರಗಿರುವ ಈ ದಿನಗಳಲ್ಲಿ ಕೋಮುಸೌಹಾರ್ದ ಕಲಕುವುದು ಪರಮಪಾಪದ ಕೃತ್ಯ. ಈ ದಟ್ಟ ದ್ವೇಷವು ಸೋಂಕಿತರ ಪತ್ತೆ ಕೆಲಸವನ್ನು ಮತ್ತಷ್ಟು ಕಠಿಣವಾಗಿಸಲಿದೆ.

ತಬ್ಲೀಘಿ ಜಮಾತ್ ಮಸೀದಿ

ನಿರಂತರವಾಗಿ ಮುಸಲ್ಮಾನರನ್ನು ಹೊರಗಿನವರೆಂದೂ ಇತರರೆಂದೂ ಕಾಣಲಾಗುತ್ತಿದೆ. ಮೂರನೆಯ ದರ್ಜೆಯ ಪ್ರಜೆಗಳಂತೆ ಬಿದ್ದಿರಬೇಕೆಂಬ ಸಂದೇಶಗಳನ್ನು ಕಳೆದ ಐದು ವರ್ಷಗಳಲ್ಲಿ ಬಗೆಬಗೆಯಾಗಿ ಅವರಿಗೆ ರವಾನಿಸುತ್ತ ಬರಲಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಹಾಡಹಗಲೇ ದಾರಿ ಹೆದ್ದಾರಿಗಳಲ್ಲಿ ಅವರನ್ನು ಜಜ್ಜಿ ಕೊಂದವರನ್ನು ಕೊಂಡಾಡಲಾಯಿತು. 370ನೆಯ ಕಲಮಿನ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತು, ಉಸಿರುಕಟ್ಟಿಸುವ ಹಲವು ನಿರ್ಬಂಧಗಳ ವಿಧಿಸಿ ಮುಕ್ಕಾಲು ಕೋಟಿ ಜನರು ಬದುಕುವ ಕಾಶ್ಮೀರ ಕಣಿವೆಗೆ ತಿಂಗಳುಗಟ್ಟಲೆ ಬೀಗ ಜಡಿಯಲಾಯಿತು. ಅವರು ಈ ದೇಶದ ನಾಗರಿಕರೇ ಅಲ್ಲ ಎಂಬ ತಳಮಳಕ್ಕೆ ತಳ್ಳಲಾಯಿತು. ಅವರ ಕುರಿತು ಸಾಮಾನ್ಯ ಜನಮಾನಸದಲ್ಲಿ ಪೂರ್ವಗ್ರಹ ಮತ್ತು ದ್ವೇಷವನ್ನು ಬಡಿದೆಬ್ಬಿಸಲಾಯಿತು. ಇತ್ತೀಚಿನ ದೆಹಲಿ ಕೋಮುಗಲಭೆಯಲ್ಲಿ ಅವರನ್ನು ಬೇಟೆಯಾಡಿದ ಪರಿ 2002ರ ಗುಜರಾತ್ ಭೀಭತ್ಸವನ್ನು ನೆನಪಿಸಿತ್ತು. ಮುಸಲ್ಮಾನರೊಂದಿಗೆ ಕೈ ಕಲೆಸಿ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳನ್ನು ಮಟ್ಟ ಹಾಕುವ ಕೃತ್ಯ ಲಾಗಾಯ್ತಿನಿಂದ ಚಾಲೂ ಇದ್ದೇ ಇದೆ. ಅವರ ಕುರಿತು ಸಹಾನುಭೂತಿ ತೋರುವ ಉದಾರವಾದಿಗಳು, ವಿಚಾರವಂತರನ್ನು ದೇಶದ್ರೋಹಿಗಳೆಂದೂ, ಅವರನ್ನು ಗುಂಡಿಟ್ಟು ಕೊಲ್ಲಬೇಕೆಂದೂ ಕೇಂದ್ರ ಮಂತ್ರಿಗಳಿದ್ದ ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಲಾಯಿತು. ದೇಶದ ಮುಸ್ಲಿಂ ಸಮುದಾಯ ಇಂದು ಭಯ ಮತ್ತು ಅನಿಶ್ಚಿತತೆಯಲ್ಲಿ ತೊಳಲಾಡಿದೆ.

ತಮಿಳುನಾಡು ಮಂಗಳವಾರ ಪ್ರಕಟಿಸಿದ ಒಟ್ಟು 57 ಕೋವಿಡ್-19 ಪಾಸಿಟಿವ್ ಕೇಸುಗಳ ಪೈಕಿ 50 ಕೇಸುಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡ ವ್ಯಕ್ತಿಗಳು. ಸೋಮವಾರ ತೆಲಂಗಾಣದಲ್ಲಿ ಮರಣಿಸಿದ ಎಲ್ಲ ಐವರು ಕೋವಿಡ್-19 ಸೋಂಕಿತರು ಕೂಡ ನಿಜಾಮುದ್ದೀನ್ ಮರ್ಕಾಝ್ ನಲ್ಲಿದ್ದವರು.

ಸಮ್ಮೇಳನದಲ್ಲಿ ಭಾಗವಹಿಸಿ ಹಿಂತಿರುಗಿರುವ 711 ಮಂದಿಯನ್ನು ಆಂಧ್ರಪ್ರದೇಶ ಗುರುತು ಹಚ್ಚಿದೆ. ಈ ಪೈಕಿ 87 ಮಂದಿ ಈವರೆಗೂ ನಾಪತ್ತೆಯಾಗಿದ್ದಾರೆ. ಉಳಿದವರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ತೆಲಂಗಾಣದಿಂದ ಕನಿಷ್ಠ 400 ಮಂದಿ ಭಾಗವಹಿಸಿದ್ದಾಗಿ ತಿಳಿದು ಬಂದಿದೆ. ಕರೀಮ್ ನಗರಕ್ಕೆ ಸೇರಿದ ಗುಂಪು ವಾಪಸು ಬರುವಾಗ ಹತ್ತು ಮಂದಿ ಇಂಡೋನೇಷ್ಯನ್ನರನ್ನು ಕರೆತಂದಿದೆ. ದೆಹಲಿಯಿಂದ ರೈಲುಗಾಡಿಯ ಸ್ಲೀಪರ್ ಕೋಚ್ ನಲ್ಲಿ ಇವರೆಲ್ಲ ಪ್ರಯಾಣಿಸಿದ್ದಾರೆ. ಪೆದ್ದಪಲ್ಲಿಯ ರಾಮಗುಂಡಂನಲ್ಲಿ ಇಳಿದು ಆಟೋರಿಕ್ಷಾಗಳಲ್ಲಿ ಓಡಾಡಿ ಸ್ಥಳೀಯ ಮಸೀದಿಗಳಿಗೆ ಭೇಟಿ ನೀಡಿದ್ದಾರೆ. ಮರುದಿನ ಕರೀಮ್ ನಗರ ತಲುಪಿ ನಾಲ್ಕು ಮಸೀದಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಒಡನಾಡಿದ್ದಾರೆ. ಹತ್ತು ಮಂದಿ ಇಂಡೋನೇಷ್ಯನ್ನರ ಪೈಕಿ ಒಬ್ಬಾತ ಮಾರ್ಚ್ 17ರಂದು ಕೋವಿಡ್-19 ಸೋಂಕಿತನೆಂಬುದು ಖಚಿತಪಟ್ಟಿದೆ. ಉಳಿದ ಒಂಬತ್ತು ಮಂದಿಗೂ ಸೋಂಕು ತಗುಲಿರುವುದು ಮರುದಿನ ದೃಢಪಟ್ಟಿದೆ.

ತಮಿಳುನಾಡಿನಿಂದ ಸಮ್ಮೇಳನಕ್ಕೆ ಹಾಜರಾದವರು 1,031 ಮಂದಿ. ಈ ಪೈಕಿ 300 ವ್ಯಕ್ತಿಗಳು ಈಗಲೂ ಪತ್ತೆಯಾಗಿಲ್ಲ. ಎಲ್ಲರೂ ವಾಪಸು ಬಂದಿದ್ದಾರೆ. ಹಲವರ ಫೋನುಗಳು ಸ್ವಿಚಾಫ್ ಆಗಿವೆ. ಉಳಿದವರು ಅವರ ವಿಳಾಸಗಳಲ್ಲಿ ಇಲ್ಲ. 400 ಮಂದಿ ಈಗಲೂ ದೆಹಲಿಯಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ.

ಐವತ್ತು ಮಂದಿ ವಿದೇಶಿಯರೂ ಸೇರಿದಂತೆ 78 ಮಂದಿಯನ್ನು ಕರ್ನಾಟಕ ಕ್ವಾರಂಟೈನ್ ನಲ್ಲಿ ಇರಿಸಿದೆ. ಮಾರ್ಚ್ 27ರಂದು ತುಮಕೂರಿನಲ್ಲಿ ನಿಧನವಾದ 60 ವರ್ಷ ವಯಸ್ಸಿನ ವ್ಯಕ್ತಿ ಕೂಡ ನಿಜಾಮುದ್ದೀನ್ ಸಮ್ಮೇಳನದಲ್ಲಿ ಸೋಂಕು ತಗುಲಿಸಿಕೊಂಡವನು. ಮಾರ್ಚ್ ಎಂಟರಿಂದ ಹನ್ನೊಂದರ ತನಕ ನಡೆದ ಸಮ್ಮೇಳನದಲ್ಲಿ ಕರ್ನಾಟಕದ 300 ಮಂದಿ ಪಾಲ್ಗೊಂಡಿದ್ದರು. ಇವರೆಲ್ಲರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇಡುವ ಪ್ರಯತ್ನ ಜರುಗಿದೆ. ಕೇರಳದಿಂದ ಭಾಗವಹಿಸಿದ್ದ 59 ಮಂದಿಯನ್ನು ಗುರುತಿಸುವ ಪ್ರಕ್ರಿಯೆ ಜರುಗಿದೆ. ಉತ್ತರಪ್ರದೇಶದ 19 ಜಿಲ್ಲೆಗಳ 569 ಮಂದಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಒಂಬತ್ತು ಮಂದಿ ಮಾತ್ರ ವಾಪಸಾಗಿದ್ದಾರೆ. ಈ ಪೈಕಿ ಆರು ಮಂದಿ ಸೋಂಕಿತರು. ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಂಟು ಮಂದಿ ಇಂಡೋನೇಷ್ಯನ್ನರಿಗೆ ಆಶ್ರಯ ನೀಡಿದ್ದ ಬಿಜನೋರಿನ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜನೋರಿಗೆ ಬರುವ ಮುನ್ನ ಅವರು ದೆಹಲಿಯಿಂದ ಒಡಿಶಾಗೂ ಪ್ರಯಾಣ ಮಾಡಿದ್ದರು. ಈ ಪ್ರಯಾಣದ ವಿವರಗಳನ್ನು ಶೋಧಿಸಲಾಗುತ್ತಿದೆ. ಹರಿಯಾಣ 480 ಮಂದಿಯನ್ನು ಗುರುತಿಸಿದೆ. ಈ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕಿದೆ.

ಅಸ್ಸಾಮಿನಲ್ಲಿ ಬುಧವಾರ ಪರೀಕ್ಷಿಸಿ ಸೋಂಕು ಪೀಡಿತರೆಂದು ಖಚಿತವಾಗಿರುವ ಎಲ್ಲ 13 ಮಂದಿ ಸಮ್ಮೇಳನದಿಂದ ವಾಪಸಾದವರು. ಪಶ್ಚಿಮ ಬಂಗಾಳದ ಸಮ್ಮೇಳನಾರ್ಥಿಗಳ ಸಂಖ್ಯೆ 73. ಅವರನ್ನು ಗುರುತಿಸುವ ಕೆಲಸ ಜರುಗಿದೆ. ಝಾರ್ಖಂಡ 40, ರಾಜಸ್ತಾನ 183 ಮಂದಿಯ ಗುರುತು ಹಚ್ಚಿದೆ. ಬಿಹಾರ ತನ್ನ 86 ನಾಗರಿಕರ ಪೈಕಿ 30 ಮಂದಿಯನ್ನು ಗುರುತಿಸಿದೆ. ಮಹಾರಾಷ್ಟ್ರ 200 ಮಂದಿಯನ್ನು ಗುರುತಿಸಿದ್ದು, ಈ ಪೈಕಿ ಮುಂಬಯಿಯವರೇ 39 ಮಂದಿ. ಜಮ್ಮು-ಕಾಶ್ಮೀರ 800 ಮಂದಿಯ ಪಟ್ಟಿ ತಯಾರಿಸಿದೆ. ಈ ಪೈಕಿ ಸಮ್ಮೇಳನದಿಂದ ವಾಪಸಾದವರ ಸಂಪರ್ಕದಲ್ಲಿದ್ದವರೂ ಸೇರಿದ್ದಾರೆ. 350 ಮಂದಿಯನ್ನು ಪತ್ತೆ ಮಾಡಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.

ನಜೀಬ್ ಜಂಗ್ ಹೇಳಿದ್ದು

ಕೊರೋನಾ ಸಾವುಗಳು ಮತ್ತು ಈ ಮಹಾಮಾರಿಯ ಸೋಂಕು ದಾಟಿಸಿರುವ ಕೃತ್ಯದ ಹೊಣೆಯನ್ನು ತಬ್ಲೀಘೀ ಜಮಾಅತ್ ಹೊರಲೇಬೇಕು. ಈ ಸಂಸ್ಥೆಯನ್ನು ನಡೆಸುವವರು ಯಾರೇ ಆಗಿರಲಿ, ಅವರನ್ನು ಭಾರತೀಯ ದಂಡ ಸಂಹಿತೆಯ ಪ್ರಕಾರ ದಂಡಿಸಲೇಬೇಕು. ಇಡೀ ದೇಶ ಮಹಾಮಾರಿಯನ್ನು ಸೆಣೆಸುತ್ತ ಕದಗಳ ಹಿಂದೆ ಬಂದಿಯಾಗಿರುವ ಹೊತ್ತಿನಲ್ಲಿ ಹಿಡಿಯಷ್ಟು ಧಾರ್ಮಿಕ ಮೂಲಭೂತವಾದಿಗಳು ಈ ಭಯಾನಕ ಸೋಂಕನ್ನು ಜನಸಮುದಾಯಗಳಿಗೆ ದಾಟಿಸುವ ಹೊಣೆಗೇಡಿತನ ಅರ್ಥವೇ ಆಗದ್ದು. ಈ ಗುಂಪು ನೆಲೆಸಿರುವ ಸಂಗತಿಯನ್ನು ಸ್ಥಳೀಯ ಆಡಳಿತ ಮುಂದಾಗಿಯೇ ತಿಳಿದುಕೊಂಡು ಹೊರಹಾಕಿಸಬೇಕಿತ್ತು ಎನ್ನುತ್ತಾರೆ ದೆಹಲಿಯ ಉಪರಾಜ್ಯಪಾಲರಾಗಿದ್ದ ಮುಸ್ಲಿಮ್ ವಿಚಾರವಂತ ನಜೀಬ್ ಜಂಗ್. ಮಾನ್ಯ ಜಂಗ್ ಅವರು ಐ.ಎ.ಎಸ್. ಅಧಿಕಾರಿಯಾಗಿ ನಿವೃತ್ತರಾದ ನಂತರ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ದೆಹಲಿಯ ಉಪರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಕೇಂದ್ರದಲ್ಲಿ ಸರ್ಕಾರ ಬದಲಾದ ನಂತರ ಹೊಸ ಸರ್ಕಾರದ ತಾಳಕ್ಕೆ ಕುಣಿದು ದೆಹಲಿಯ ಕೇಜ್ರೀವಾಲ್ ಸರ್ಕಾರವನ್ನು ಗೋಳಾಡಿಸಿದವರು.

ಮುಖ್ಯವಾಹಿನಿಯ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವ ಮುಸಲ್ಮಾನ ಮಕ್ಕಳ ಸಂಖ್ಯೆ ಈಗಲೂ ಕಡಿಮೆಯೇ. ಮದರಸಾಗಳಲ್ಲಿ ಕಲಿಯುವವರದೇ ದೊಡ್ಡ ಸಂಖ್ಯೆ. ಇಂಗ್ಲಿಷ್, ವಿಜ್ಞಾನ ಮತ್ತು ಗಣಿತವನ್ನು ಕೆಲವು ಮದರಸಾಗಳಲ್ಲಿ ಕಲಿಸಲಾಗುತ್ತಿದೆ. ಆದರೆ ಅಂತಹವುಗಳ ಸಂಖ್ಯೆ ಬಹಳ ಕಡಿಮೆ. ಖುರಾನ್ ಬಾಯಿಪಾಠವೊಂದೇ ಮುಖ್ಯ ಕಲಿಕೆಯಾಗಿ ಉಳಿದಿದೆ. ಹತ್ತು ಹನ್ನೆರಡು ವರ್ಷಗಳ ಮಗ ಹಾಫೀಜ್ ಆಗಿಬಿಟ್ಟರೆ ಸಾಧಾರಣ ಮುಸ್ಲಿಮ್ ಕುಟುಂಬಕ್ಕೆ ಅದೇ ಹೆಮ್ಮೆಯ ಸಂಗತಿ.

ಮೌಲ್ವಿಗಳು ಮೌಲಾನಾಗಳು ಮುಸ್ಲಿಮ್ ಸಮುದಾಯದ ದೊಡ್ಡ ಸಮಸ್ಯೆ. ಮಸೀದಿಗಳು, ದಾರುಲ್ ಉಲೂಮ್ ಗಳಲ್ಲಿ ಕುಳಿತು ಫತ್ವಾಗಳನ್ನು ಹೊರಡಿಸುವ ಇವರ ಹಿಡಿತದಲ್ಲಿದೆ ಸಮುದಾಯ. ಮುಸಲ್ಮಾನರ ಪರ ದನಿ ಎತ್ತುವ ಮತ್ತು ಕಟ್ಟರ್ ಹಿಂದೂ ಬಲಪಂಥೀಯರು ಮತ್ತು ಬೇಲಿಯ ಮೇಲೆ ಕುಳಿತವರ ವಿರುದ್ಧ ಹೋರಾಡುತ್ತ ಬಂದಿರುವ ಮುಸ್ಲಿಮೇತರ ಉದಾರವಾದಿಗಳಿದ್ದಾರೆ. ಅದರೆ ಮುಸ್ಲಿಮ್ ಸಂಪ್ರದಾಯವಾದ ಮತ್ತು ಗೊಡ್ಡು ನಂಬಿಕೆಗಳ ವಿಷಯ ಬಂದಾಗ ಅವರು ಬಲಪಂಥೀಯರ ಮುಂದೆ ಅಸಹಾಯಕರಾಗುತ್ತಿರುವುದನ್ನು ಕಾಣುತ್ತಿದ್ದೇನೆ.

ಇಂದಿನ ಬಹುತೇಕ ಮುಸಲ್ಮಾನರು ಬೌದ್ಧಿಕ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ. ಈ ಹಿಂದಿನ ಪೀಳಿಗೆಗಳ ಮುಸ್ಲಿಮ್ ವಿದ್ವಾಂಸರು ಇಬ್ನ್ ಅರಬಿ, ಫಖ್ರುದ್ದೀನ್ ರಾಝಿ, ಐನ್ಸ್ಟೀನ್, ಬರ್ಗ್ಸನ್, ರಸೆಲ್ ಹಾಗೂ ಫ್ರಾಯ್ಡ್ ನನ್ನು ಅಧ್ಯಯನ ಮಾಡಿಕೊಂಡಿರುತ್ತಿದ್ದರು. ಅಲ್ಲಾಮಾ ಇಕ್ಬಾಲ್ ಹೇಳಿರುವಂತೆ ಗೌರವಾದರ ಮತ್ತು ಸ್ವತಂತ್ರ ಮನೋವೃತ್ತಿಯಿಂದ ಆಧುನಿಕ ಜ್ಞಾನಸಂಪತ್ತಿನ ಬಳಿ ಸಾರಬೇಕಿದೆ. ಇಸ್ಲಾಮ್ ಬೋಧನೆಗಳನ್ನು ಇದೇ ಜ್ಞಾನದ ಬೆಳಕಿನಲ್ಲಿ ನೋಡಬೇಕಿದೆ. ಯಾವುದೇ ಸಮಾಜ ಅಥವಾ ಯಾವುದೇ ಧರ್ಮ ತನ್ನ ಗತವನ್ನು ಸಾರಾಸಗಟಾಗಿ ಮರೆತುಬಿಡುವುದು ಇಲ್ಲವೇ ತಿರಸ್ಕರಿಸುವುದು ಎಂದಿಗೂ ಸಾಧ್ಯವಿಲ್ಲ. ಪ್ರವಾದಿಯವರು ಗತಿಸಿದ ನಂತರದ ವರ್ಷಗಳಲ್ಲಿ ಇಸ್ಲಾಮ್ ಮತ್ತು ಇಸ್ಲಾಮಿಕ್ ಇತಿಹಾಸ ಉಜ್ವಲ ಶಕೆಯನ್ನು ಕಂಡಿತ್ತು. ಭಾರತದ ಮುಸಲ್ಮಾನರು ಮೌಲಾನಾಗಳ ಮಧ್ಯಯುಗೀನ ಫ್ಯಾಂಟಸಿಯಿಂದ ಹೊರಬಂದು ಹೆಚ್ಚು ಹೆಚ್ಚು ಸಮಕಾಲೀನ ಪ್ರವೃತ್ತಿಗಳನ್ನು ಆಲಿಂಗಿಸಿಕೊಳ್ಳಬೇಕು. ಊಹಾತ್ಮಕ ತತ್ವಜ್ಞಾನಗಳು ಮತ್ತು ಪೂರ್ವಾಚಾರ ಪದ್ಥತಿಗಳ ವಿರುದ್ಧದ ಬಂಡಾಯ ಮತ್ತು ಪ್ರತಿಪಾದಿಸಿದ ಸ್ಥಾಪಕ ತರ್ಕಗಳಿಗಾಗಿ ಪವಿತ್ರ ಖುರಾನನ್ನು ಓದಿ ಅರಿಯಲೇಬೇಕು.

ವೈಜ್ಞಾನಿಕ ಅರಿವು ಮತ್ತು ಜಿಜ್ಞಾಸೆಯ ಹುಡುಕಾಟವನ್ನು ಪ್ರವಾದಿಯವರ ಕಾಲದಿಂದಲೂ ಪ್ರೋತ್ಸಾಹಿಸಲಾಗಿದೆ. ಜ್ಞಾನ ಸಂಪಾದನೆಗೆ ಚೀನಾ ತನಕವೂ ಪ್ರವಾಸ ಮಾಡಿರೆಂದು ಖುದ್ದು ಪ್ರವಾದಿ ತಮ್ಮ ಅನುಯಾಯಿಗಳನ್ನು ಆಗ್ರಹಿಸಿದ್ದರಂತೆ. ಮಂಜಿಲ್ ಸೇ ಆಗೇ ಬಢಕರ್ ಮಂಜಿಲ್ ತಲಾಶ್ ಕರ್, ಮಿಲ್ ಜಾಯೇ ತುಝೇ ದರಿಯಾ, ಸಮಂದರ್ ತಲಾಶ್ ಕರ್ ಎಂಬ ಅಲ್ಲಾಮಾ ಇಕ್ಬಾಲ್ ಕವಿವಾಣಿ ಹೇಳುವುದೂ ಅದನ್ನೇ.

ಈ ಒಂದು ಪ್ರಕರಣಕ್ಕಾಗಿ ಒಟ್ಟಾರೆ ಇಸ್ಲಾಮ್ ಧರ್ಮವನ್ನು ದೂಷಿಸಲಾಗದು. ಅದರ ಕೆಲ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳ ತಲೆಯಾಳುಗಳ ಮುಚ್ಚಿದ ಮನಸುಗಳು ಇಡೀ ಸಮುದಾಯವನ್ನು ವಿನಾಕಾರಣ ಕಟಕಟೆ ಹತ್ತಿಸತೊಡಗಿವೆ. ಹದ್ದುಗಳಂತೆ ಕಾಯುವ ಇಸ್ಲಾಮ್ ದ್ವೇಷಿಗಳಿಗೆ ಹೊಸ ಅವಕಾಶಗಳನ್ನು ಒದಗಿಸುತ್ತಿವೆ.

ಏನಿದು ತಬ್ಲೀಘೀ ಜಮಾಅತ್?

ಶಾಹೀದ್ ಅಫ್ರೀದಿ, ಇಂಝಮಾಮುಲ್ ಹಕ್

ತಬ್ಲೀಘೀ ಜಮಾಅತ್ ನ ಅಕ್ಷರಶಃ ಅರ್ಥ ಧರ್ಮಪ್ರಸಾರ. ಇದೊಂದು ಸುನ್ನಿ ಮುಸಲ್ಮಾನ ಮಿಶನರಿ ಆಂದೋಲನ. ಸಾಮಾನ್ಯ ಮುಸಲ್ಮಾನರನ್ನು ತಲುಪಿ ಅವರ ಧರ್ಮಶ್ರದ್ಧೆಯನ್ನು ಮರುಜಾಗೃತಗೊಳಿಸುವುದು ಇದರ ಉದ್ದೇಶ. ರೂಢಿ ಆಚಾರಗಳು, ದಿರಿಸು, ಹಾಗೂ ವ್ಯಕ್ತಿಗತ ನಡವಳಿಕೆಯ ಮೇಲೆ ಒತ್ತು ನೀಡಲಾಗುತ್ತದೆ. ಆ ಆಂದೋಲನವನ್ನು ಹರಿಯಾಣದ ಮೇವಾಟ್ ಎಂಬಲ್ಲಿ 1927ರಲ್ಲಿ ಹುಟ್ಟಿ ಹಾಕಿದ್ದು ಧಾರ್ಮಿಕ ವಿದ್ವಾಂಸ ಮೌಲಾನಾ ಮಹಮ್ಮದ್ ಇಲ್ಯಾಸ್ ಖಾಂದಾಲಾ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದ ಮೇವಾಟ್ ನ ಮುಸಲ್ಮಾನ ರೈತರು ಬಹುತೇಕ ಹಿಂದೂ ರೂಢಿ ಆಚಾರಗಳನ್ನು ಪಾಲಿಸುತ್ತಿದ್ದರು. ಅವರನ್ನು ಪುನಃ ಇಸ್ಲಾಮ್ ತೆಕ್ಕೆಗೆ ಕರೆತಂದು ಇಸ್ಲಾಮ್ ನ ಸುವರ್ಣಯುಗ (ಖಿಲಾಫತ್) ಸ್ಥಾಪಿಸುವ ಗುರಿಯೊಂದಿಗೆ ಶುರುವಾದ ಚಳವಳಿಯಿದು. ವೇಗವಾಗಿ ಬೆಳೆಯಿತು. 150 ದೇಶಗಳಲ್ಲಿ ಸುಮಾರು ಎಂಟು ಕೋಟಿ ಅನುಯಾಯಿಗಳುಂಟು. ಸಾಮಾನ್ಯವಾಗಿ ರಾಜಕೀಯೇತರ ಮತ್ತು ಶಾಂತಿಪ್ರಿಯ ಆಂದೋಲನ. ಮತಾಂತರದ ಉದ್ದೇಶವಿಲ್ಲದ್ದು.

ತಬ್ಲೀಘೀ ಮುಸ್ಲಿಮ್ ಪುರುಷರು ಉದ್ದ ಗಡ್ಡ ಬಿಟ್ಟು, ದೀರ್ಘಕುರ್ತಾ ತೊಟ್ಟು, ಹಿಮ್ಮಡಿ ಕಾಣುವಷ್ಟು ಮೇಲಕ್ಕೆ ಪಾಯಿಜಾಮಾ ಧರಿಸುತ್ತಾರೆ. ಮಹಿಳೆಯರು ಸಾಮಾನ್ಯವಾಗಿ ಮನೆವಾರ್ತೆಗೆ ಸೀಮಿತ. ಟೀವಿ, ಸಂಗೀತ, ಸೋಫಾದಂತಹ ಸುಖಾಸನಗಳು ವರ್ಜಿತ. ಪಾಕಿಸ್ತಾನದ ಹೆಸರಾಂತ ಕ್ರಿಕೆಟ್ ಆಟಗಾರರಾದ ಶಾಹೀದ್ ಅಫ್ರೀದಿ, ಸಯೀದ್ ಅನ್ವರ್, ಇಂಝಮಾಮುಲ್ ಹಕ್, ಮುಷ್ತಾಕ್ ಅಹ್ಮದ್, ಸಖ್ಲೇನ್ ಮುಷ್ತಾಖ್, ಮಹಮ್ಮದ್ ಯೂಸೂಫ್ ತಬ್ಲೀಘೀ ಜಮಾಅತ್ ಗೆ ಸೇರಿದ ಸೆಲೆಬ್ರಿಟಿಗಳು.

ತಬ್ಲೀಘೀಗಳನ್ನು ಸೌದಿ ಆರೇಬಿಯಾದ ಸುನ್ನೀ ವಹಾಬಿ ಉಲೇಮಾರಂತಹ ಸಂಪ್ರದಾಯವಾದಿ ಧಾರ್ಮಿಕ ಅಧಿಕಾರಿಗಳು ತೀವ್ರವಾಗಿ ಟೀಕಿಸಿದ್ದಾರೆ. ತಮ್ಮ ದೇಶದಲ್ಲಿ ತಬ್ಲೀಘೀ ಬೋಧನೆಯನ್ನು ಮತ್ತು ಸಾಹಿತ್ಯವನ್ನು ನಿಷೇಧಿಸಿ ಫತ್ವಾಗಳನ್ನು ಹೊರಡಿಸಿರುವುದುಂಟು.

Leave a Reply

Your email address will not be published.

*

Latest from ಲೀಡ್ ನ್ಯೂಸ್

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top