ಹಾಯ್ ಬೆಂಗಳೂರ್

ಮಾತು ಕಡಿಮೆ ಮಾಡಬೇಕೆಂದರೆ, ಬೆಳಗಿನ ಜಾವಕ್ಕೆ ಏಳಬೇಕು!

  • ಬಾಟಮ್ ಐಟಮ್:

ಮಾತು ಕಡಿಮೆ ಮಾಡಬೇಕೆಂದರೆ, ಬೆಳಗಿನ ಜಾವಕ್ಕೆ ಏಳಬೇಕು!

ಕೆಲವರು ವಿಪರೀತ ಮಾತಾಡುತ್ತಾರೆ. ಅವರನ್ನು ಗಮನಿಸಿ. ಅವರ ಅರ್ಧ ಮಾತು purposeless ಆಗಿರುತ್ತದೆ. ಅರ್ಥಹೀನ ಮಾತು ಅಂತಾರಲ್ಲ, ಅಂಥವು. ಇನ್ನರ್ಧ ಮಾತು ತಮ್ಮ ಕುರಿತಾದ ಮಾತೇ ಆಗಿರುತ್ತವೆ. ತಮ್ಮ ಬಗ್ಗೇನೇ ಪುಂಖಾನುಪುಂಖವಾಗಿ ಮಾತಾಡುತ್ತಾ ಹೋಗುತ್ತಾರೆ. ಆಗ ಪ್ರಶ್ನಿಸಿಕೊಳ್ಳಿ. ಒಬ್ಬ ಮನುಷ್ಯ ಎಷ್ಟು ಹೊತ್ತು ಅಂತ ತನ್ನ ಬಗ್ಗೇನೇ ಮಾತಾಡಬಲ್ಲ? ಎಲ್ಲೋ ಒಂದು ಕಡೆಗೆ ತನ್ನ ಬಗ್ಗೆ ಮಾತಾಡಬೇಕಾದದ್ದು ಮುಗಿದುಹೋಯಿತು ಅನ್ನಿಸಲೇಬೇಕು. ಹಾಗೆ ಅನಿಸಿದ ಮೇಲೂ ಆತ ಮಾತಾಡುತ್ತಿದ್ದಾನೆಂದರೆ, ಒಂದೋ-ಸುಳ್ಳು ಹೇಳುತ್ತಿರಬೇಕು. ಅದು ತಪ್ಪಿದರೆ ಆಡಿದ ಮಾತನ್ನೇ ಮತ್ತೆ ಮತ್ತೆ ಆಡುತ್ತಿರಬೇಕು.

ಹೆಚ್ಚಿನ ಸಲ ಅವರು ಆಡಿದ ಮಾತನ್ನೇ ಆಡುತ್ತಿರುತ್ತಾರೆ. ಹೇಳಿದ ಘಟನೆಯನ್ನೇ ಹೇಳುತ್ತಿರುತ್ತಾರೆ. ಜೋಕುಗಳು ರಿಪೀಟಾಗುತ್ತಿರುತ್ತವೆ. ಅದರ ಅರ್ಥವಿಷ್ಟೆ; ಸರಕು ಮುಗಿದಿದೆ. ಆತ ಅಂಗಡಿ ಮುಚ್ಚಲೊಲ್ಲ!

ಅವರನ್ನು ಗದರಿಸಿ ನೋಡಿ. ‘ಸ್ವಲ್ಪ ಬಾಯ್ಮುಚ್ಕೊಂಡಿರಯ್ಯ’ ಅಂತ ಅಂದು ನೋಡಿ. ಸ್ವಲ್ಪ ಮಂಕಾಗುತ್ತಾರೆ. ಸ್ವಲ್ಪ ಹೊತ್ತು ಸುಮ್ಮನಾಗಿಯೂ ಬಿಡುತ್ತಾರೆ. ಕಡೇ ಪಕ್ಷ ಹಾಗೆ ಗದರಿಸಿದವನ ತಂಟೆಗೆ ಬಾರದಂತೆ, ಅವನ ಮುಂದೆ ಹೆಚ್ಚು ಮಾತಾಡದಂತೆ ಇದ್ದುಬಿಡುತ್ತಾರೆ. ಆದರೆ ಅದು ಸ್ವಲ್ಪ ಹೊತ್ತು! ಹೋಯಿತು ಅಂದುಕೊಂಡ ನೆಗಡಿ ಮತ್ತೆ ಶುರುವಾದಂತೆ, ನಿಂತ ಲೂಸ್ ಮೋಷನ್ನು ಮತ್ತೆ ಆರಂಭವಾದಂತೆ-ಅವರ ವರಾತ ಆರಂಭವಾಗುತ್ತದೆ!

ಆದರೆ ಅವರು ಉಪದ್ರವಿಗಳಲ್ಲ. ನಿಮ್ಮನ್ನು ಯಾವುದಕ್ಕೂ ಒತ್ತಾಯ ಮಾಡುವವರಲ್ಲ. ಏನನ್ನೋ ಮಾರಿ, ನಿಮ್ಮ ತಲೆಗೆ ಕಟ್ಟುವವರೂ ಅಲ್ಲ. ಕೆಟ್ಟ ಮಾತು, ಪರನಿಂದೆ ಎರಡೂ ಅವರಲ್ಲಿಲ್ಲ. ಒಂದೇ ಸಮಸ್ಯೆಯೆಂದರೆ-ಭಯಂಕರ ಮಾತು. ‘ನೋಡಯ್ಯಾ, ಈ ರಾಜಕಾರಣಿ ಹ್ಯಾಗೆ ರಾಜೀನಾಮೆ ಕೊಟ್ಟುಬಿಟ್ಟ’ ಅಂತ ಯಾರಾದರೂ ಅಂದುಬಿಟ್ಟರೆ ಸಾಕು. ಅವರ ಮಾತು ಆರಂಭವಾಗಿಬಿಡುತ್ತದೆ. ತಾವು ರಾಜೀನಾಮೆ ಕೊಟ್ಟಾಗ ಆಫೀಸಿನಲ್ಲಿ ಏನಾಯ್ತು ಎಂಬುದರಿಂದ ಶುರುವಾಗಿ, ತಮ್ಮ ಆಫೀಸಿನಲ್ಲಿ ಯಾರ್‍ಯಾರು ಹೇಗ್ಹೇಗೆ ರಾಜೀನಾಮೆ ಕೊಟ್ಟರು ಎಂಬಲ್ಲಿಯ ತನಕ! ಅಲ್ಲಿಗಾದರೂ ಅದು ನಿಲ್ಲುತ್ತದಾ? ಉಹುಂ, ಮಾತು ಅಪಾಯಿಂಟ್‌ಮೆಂಟ್‌ಗಳ ಕಡೆಗೆ ಸರಿಯುತ್ತದೆ. ಅಲ್ಲಿನ ಲಂಚಕೋರತನದ ಬಗ್ಗೆ ಶುರುವಾಗುತ್ತದೆ. ಹ್ಯಾಗೆ ಜಪಾನ್‌ನಂಥ ದೇಶದಲ್ಲಿ ಲಂಚವೇ ಇಲ್ಲ ಎಂಬುದನ್ನು ವಿವರಿಸತೊಡಗುತ್ತಾರೆ. ಅಸಲಿಗೆ ಜಪಾನ್ ದೇಶ ಯಾವ ದಿಕ್ಕಿಗಿದೆ ಎಂಬುದೂ ಇವರಿಗೆ ಗೊತ್ತಿರುವುದಿಲ್ಲ!

“ಇಷ್ಟು ಹೊತ್ತು ಮಾತಾಡಿದೆಯಲ್ಲ? ಏನೇನು ಮಾತಾಡಿದೆ ಅಂತ ನೆನಪು ಮಾಡಿಕೊಂಡು ಅದನ್ನೆಲ್ಲ ಸಂಕ್ಷಿಪ್ತವಾಗಿ ಒಂದು notes ಮಾಡಿಕೊಡು” ಅಂತ ಅವರಿಗೆ ಹೇಳಿ ನೋಡಿ. ಹತ್ತನೇ ಸಾಲು ಬರೆಯುವ ಹೊತ್ತಿಗೆ ಬೆವೆತುಹೋಗುತ್ತಾರೆ!

ತುಂಬ ಮಾತಾಡುವ ಚಟದ ಸಮಸ್ಯೆಯೇ ಇದು. ಆ ಮಾತಿನಲ್ಲಿ ತಿರುಳಿರುವುದಿಲ್ಲ. ಅವರಿಗೇ ಅದರ ಸಾರಾಂಶ ಸಿಕ್ಕುವುದಿಲ್ಲ. ಈ ಜಗತ್ತಿನಲ್ಲಿ ತುಂಬ ಮಾತಾಡುವವರು ಎರಡೇ ತರಹದ ಜನ. ತುಂಬ ತಿಳಿದುಕೊಂಡವರು ಮತ್ತು ಏನೂ ತಿಳಿದಿರದವರು. ಮೊದಲಿನವರ ಮಾತನ್ನು ಎಷ್ಟು ಹೊತ್ತು ಬೇಕಾದರೂ ಕೇಳಬಹುದು. ಎರಡನೇ ಗುಂಪಿನವರ ಕೈಗೆ ಸಿಕ್ಕಿ ಹಾಕಿಕೊಂಡರೆ ಅದೊಂದು ಕರ್ಮ!

ನೀವು ನಂಬಲಿಕ್ಕಿಲ್ಲ. ಕೆಲವರೊಂದಿಗೆ ಎರಡು ತಾಸು ಮಾತನಾಡಿದರೆ ಒಂದು ಇಡೀ ಪುಸ್ತಕ ಓದಿದಂತೆ ಭಾಸವಾಗುತ್ತದೆ. ಸತ್ಯಕಾಮ, ಬೆಳಗೆರೆ ಕೃಷ್ಣಶಾಸ್ತ್ರಿ, ಖುಷ್ವಂತ್ ಮುಂತಾದವರು ನನಗೆ ಇಂಥದೊಂದು ಅನುಭೂತಿ ನೀಡಿದ್ದಾರೆ. ಅವರೊಂದಿಗೆ ಮಾತು ಕೊಟ್ಟು-ತೆಗೆದುಕೊಳ್ಳುವಂಥದು; ಅದು ಏಕಮುಖವಲ್ಲ. ಆದರೆ ಅಂಥವರ ಸಂಖ್ಯೆ ತುಂಬ ಚಿಕ್ಕದಿರುತ್ತದೆ.

ಸಾಮಾನ್ಯವಾಗಿ, ಚಿಕ್ಕವರಿದ್ದಾಗ ನಿರಾದರಣೆಗೊಳಗಾದವರು, ಕೀಳರಿಮೆಯಿಂದ ನರಳುವಂಥವರು, ಒಬ್ಬಂಟಿಗರು, ಮನೆಯಲ್ಲಿ ಯಾರಿಗೂ ಬೇಡವಾದವರು, ಐಡೆಂಟಿಟಿ ಕ್ರೈಸಿಸ್‌ನಿಂದ ನರಳುವವರು-ಈ ತೆರನಾದ ಮಾತಿನ ಚಟಕ್ಕೆ ಬಲಿಯಾಗುತ್ತಾರೆ. ಕೆಲವೊಮ್ಮೆ ಇದು ಜನ್ಮತಃ ಬರುವ ಖಾಯಿಲೆಯಾದರೂ ಆಗಿರಬಹುದು. ಅದರಿಂದ ತಪ್ಪಿಸಿಕೊಳ್ಳಲು ಅವರು ಬಯಸಿದರೆ ಅದಕ್ಕೆ ಅನೇಕ ದಾರಿಗಳಿವೆ.

ಎಲ್ಲಕ್ಕಿಂತ ಉತ್ತಮವಾದ ದಾರಿಯೆಂದರೆ, ‘ನನಗೆ ಗೊತ್ತಿರುವ ಸಬ್ಜೆಕ್ಟಿನ ಹೊರತಾಗಿ ನಾನು ಬೇರೇನನ್ನೂ ಮಾತನಾಡುವುದಿಲ್ಲ’ ಅಂತ ತೀರ್ಮಾನಿಸುವುದು. ಸುಮ್ಮನೆ ಎಲ್ಲ ವಿಷಯಗಳಿಗೂ ತಲೆ ಹಾಕುವುದು ತಪ್ಪುತ್ತದೆ. ಇಬ್ಬರು ಸೈಂಟಿಸ್ಟುಗಳು ತಮ್ಮ ಪ್ರಯೋಗಗಳ ಬಗ್ಗೆ ಮಾತನಾಡುವಾಗ ಅದಕ್ಕೆ ಸಂಬಂಧಿಸಿರದ ನಾವು ಹೇಗೆ ತೆಪ್ಪಗೆ ಕೂತು, ನಮಗರ್ಥವಾಗುವುದೇನಾದರೂ ಇದ್ದರೆ ಅರ್ಥ ಮಾಡಿಕೊಳ್ಳುತ್ತೇವೋ-ಹಾಗೆಯೇ ನಮ್ಮದಲ್ಲದ ಸಬ್ಜೆಕ್ಟನ್ನು ಯಾರಾದರೂ ಮಾತನಾಡುತ್ತಿದ್ದರೆ, ಆಗಲೂ ತೆಪ್ಪಗಿರುವುದನ್ನು ರೂಢಿ ಮಾಡಿಕೊಳ್ಳಬೇಕು.

ಎರಡನೆಯದಾಗಿ, ಜನರಲ್ ಟಾಪಿಕ್‌ಗಳ ಬಗ್ಗೆ ಮಾತನಾಡುವುದಿಲ್ಲ ಅಂತ ತೀರ್ಮಾನಿಸಬೇಕು! ‘ಇವತ್ತು ತುಂಬ ಬಿಸಿಲಿದೆ’ ಅಂತ ಯಾರಾದರೂ ಅಂದಕೂಡಲೇ, “ಹೈದ್ರಾಬಾದ್ನಲ್ಲಿ ಹೇಗಿರುತ್ತೆ ಗೊತ್ತಾ ಬಿಸ್ಲೂ…” ಅಂತ ಶುರು ಮಾಡಿಬಿಡಬಾರದು. ನಾವು ಹವಾಮಾನ ತಜ್ಞರಲ್ಲ. ಬಿಸಿಲ ಬಗ್ಗೆ ಮಾತನಾಡಿ ಸದ್ಯಕ್ಕೆ ಆಗಬೇಕಾದುದೇನೂ ಇಲ್ಲ. ಸುಮ್ಮನಿದ್ದುಬಿಡೋಣ ಅಂತ ತೀರ್ಮಾನಿಸಿ, ಮೌನವಹಿಸಬೇಕು.

ಮೂರನೆಯದಾಗಿ, ‘ನನ್ನ ಬಗ್ಗೆ ನಾನು ಮಾತನಾಡುವುದಿಲ್ಲ’ ಅಂತ ನಿರ್ಧರಿಸಬೇಕು. ಅಕಸ್ಮಾತ್ ಮಾತನಾಡಿದರೂ ಅವಶ್ಯಕತೆ ಇದ್ದಷ್ಟೇ ಮಾತಾಡಬೇಕು. ಪರಿಚಯ ಹೇಳಿಕೊಳ್ಳುವುದು, ವೈದ್ಯರಲ್ಲಿಗೆ ಹೋದಾಗ ದೇಹ ಕಷ್ಟ ಹೇಳಿಕೊಳ್ಳುವುದು-ಇಂಥವನ್ನು ಹೊರತುಪಡಿಸಿ ಮತ್ತೆಲ್ಲೂ ನಮ್ಮ ಬಗ್ಗೆ ಮಾತನಾಡಲು ಮುಂದಾಗಬಾರದು.

ನಾಲ್ಕನೆಯದಾಗಿ, ಈಗಾಗಲೇ ಈ ವಿಷಯದ ಬಗ್ಗೆ ಮಾತನಾಡಿದ್ದೇನಾ? ಈ ಜೋಕು ಹೇಳಿದ್ದೇನಾ? ಈ ಸಲಹೆ ನೀಡಿದ್ದೇನಾ? ಹೇಳಬೇಕಾದ್ದನ್ನು ಹೇಳಿ ಮುಗಿಸಿದ್ದೇನಾ? ಎಂಬ ಪ್ರಶ್ನೆಗಳನ್ನು ಪದೇಪದೆ ಕೇಳಿಕೊಳ್ಳುತ್ತಿರಬೇಕು. ಒಂದು ಸಲ ಆಡಿದ ಮಾತನ್ನು ಮತ್ತೆ ಆಡುವುದಿಲ್ಲ ಎಂದು ಹಲ್ಲುಕಚ್ಚಿ ಸುಮ್ಮನಾಗಬೇಕು.

ಐದನೆಯದಾಗಿ, ಬೆಳಗಿನ ಜಾವಕ್ಕೆ ಏಳಬೇಕು. ಮನೆಯಲ್ಲೊಂದು ಮೌನವಿರುತ್ತದೆ. ಆ ಮೌನ ನಮಗೆ ಸಹನೀಯವಾಗಬೇಕು, ರೂಢಿಯಾಗಬೇಕು, ಹಿತವೆನ್ನಿಸಲಾರಂಭಿಸಬೇಕು. ಮೌನವೆಂಬುದು ನಮ್ಮೊಂದಿಗೆ ನಾವೇ ಮಾತನಾಡಿಕೊಳ್ಳಲು ದೊರಕುವ ದಿವ್ಯ ಸಮಯ. ಬೆಳಗಿನ ಜಾವ ನಾಲ್ಕರಿಂದ ಏಳರ ತನಕ ಯಾರೂ ಮಾತಿಗೆ ಸಿಗುವುದಿಲ್ಲ. ಆಗ ಚಡಪಡಿಸುವ ಬಾಯಿಯನ್ನು ಗದರಿ ನಿಗ್ರಹಕ್ಕೆ ತಂದುಕೊಳ್ಳಬೇಕು. ಬೇರೆ ಯೋಚನೆಗಳ ಕಡೆಗೆ ಮನಸ್ಸನ್ನು ತಿರುಗಿಸಬೇಕು. ಮಧ್ಯಾಹ್ನವಿಡೀ ಮಾತಾಡಬೇಕು ಎಂಬ ಕಾರಣಕ್ಕಾದರೂ, ಹೊಸದೇನನ್ನೋ ಓದಬೇಕು. ವಿಷಯ ತಿಳಿದುಕೊಳ್ಳಬೇಕು. ಮನನ ಮಾಡಿಕೊಳ್ಳಬೇಕು!

ಇವೆಲ್ಲಕ್ಕಿಂತ ಒಳ್ಳೆಯ ದಾರಿಯೆಂದರೆ, ಓದು. ಪುಸ್ತಕಗಳು ಹತ್ತಿರಾದಂತೆಲ್ಲ ಮಾತು ಕಡಿಮೆಯಾಗುತ್ತವೆ. ಕಂಪ್ಯೂಟರು (ಇಂಟರ್‌ನೆಟ್) ನಿಮ್ಮ ಮಾತು ಕಡಿಮೆ ಮಾಡುತ್ತದೆ. ಟೀವಿ ಆಫ್ ಮಾಡುವುದೂ ಒಳ್ಳೆಯದೇ. ಅಪರಿಚಿತರೊಂದಿಗೆ ಹರಟೆಗಿಳಿಯುವುದಿಲ್ಲ, ಒಬ್ಬರಿಗಿಂತ ಹೆಚ್ಚಿನವರಿದ್ದರೆ ಮಾತನಾಡುವುದಿಲ್ಲ, ಆಫೀಸಿನವರೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತು-ಹೀಗೆ ನಿಮಗೇ ತೋಚುವ ನಿರ್ಣಯಗಳನ್ನು ತೆಗೆದುಕೊಳ್ಳಿ. ಮಾತು ತಂತಾನೇ ಕಡಿಮೆಯಾಗುತ್ತದೆ.

ಮಾತು ಕಡಿಮೆ ಮಾಡಿ ನೋಡಿ: ನಿಮ್ಮ ವ್ಯಕ್ತಿತ್ವದ ತೂಕ ಮತ್ತು ವರ್ಚಸ್ಸು ಬೆಳೆಯುತ್ತದೆ. ನಿಮ್ಮ ಮಾತಿಗೊಂದು ಕಿಮ್ಮತ್ತೂ ಸಿಗುತ್ತದೆ!

-ರವೀ

Leave a Reply

Your email address will not be published. Required fields are marked *