ಹಾಯ್ ಬೆಂಗಳೂರ್

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲೆಟಿಸ್ ಸ್ಫೋಟಕ್ಕೆ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಡೀ ರಾಜ್ಯದಲ್ಲಿ ಎಗ್ಗಿಲ್ಲದೆ ಎಲ್ಲ ಕಡೆ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ. ಅದನ್ನು ತಡೆಗಟ್ಟುವುದು ಇವರಿಗೆ (ಸರ್ಕಾರ ಮತ್ತು ಅಧಿಕಾರಿಗಳು) ಬೇಕಾಗಿಲ್ಲ. ಯಾಕೆಂದರೆ ಜೀವಗಳಿಗೆ ಇವರು ಬೆಲೆ ಕೊಡುವುದಿಲ್ಲ. ಇಂಥ ಘಟನೆ ನಡೆದಾಗ ಮಾತ್ರ ಮಂತ್ರಿಗಳು ಬಂದು ಮಾಧ್ಯಮಗಳ ಎದುರು ಮಾತನಾಡುತ್ತಾರೆ. ಎಲ್ಲ ಸರಿ ಹೋಗುತ್ತೆ ಅಂತಾರೆ. ಆದರೆ ಕೆಲ ದಿನಗಳ ನಂತರ ಅದನ್ನು ಮರೆತು ತಮ್ಮ ಪಾಡಿಗಿದ್ದು ಬಿಡುತ್ತಾರೆ ಅಂತ ಎಚ್ಡಿಕೆ ತಮ್ಮ ಮನದ ಆಕ್ರೋಶವನ್ನು ಹೊರಗೆಡವಿದ್ದಾರೆ.

ರಾಮನಗರದಿಂದ ರೇಷ್ಮೆ ಮಾರುಕಟ್ಟೆ ಸ್ಥಳಾಂತರಗೊಳ್ಳುತ್ತಿರುವುದಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅದೇನಾಗಬೇಕೋ ಅದು ಆಗಲಿದೆ ಬಿಡಿ. ನಾನಂತೂ ಯಾವುದೇ ಒತ್ತಡಗಳಿಗೆ ಮಣಿಯುವ ಮನುಷ್ಯ ಅಲ್ಲ. ರಾಮನಗರದ ಅಭಿವೃದ್ಧಿಯೇ ನನ್ನ ಧ್ಯೇಯ. ಅದಕ್ಕಾಗಿ ನಾನು ಸದಾಕಾಲ ಶ್ರಮಿಸಿದ್ದೇನೆ. ಮುಂದೆಯೂ ಶ್ರಮಿಸುತ್ತೇನೆ ಎಂದಿದ್ದಾರೆ.

ಈ ಸರ್ಕಾರವಂತೂ ಹಗಲು ರಾತ್ರಿ ಎಗ್ಗಿಲ್ಲದೆ ಲೂಟಿ ಹೊಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರು ಭ್ರಷ್ಟಾಚಾರ ತಡೆಯುವ ಬಗ್ಗೆ ಮಾತನಾಡುತ್ತಾರೆ. ಅವರ ತಟ್ಟೆಯಲ್ಲಿ ಕಾಗೆಯೇ ಸತ್ತು ಬಿದ್ದಿದೆ. ಅದನ್ನು ನೋಡೋದು ಬಿಟ್ಟು ಬೇರೆಯವರ ತಟ್ಟೆಯಲ್ಲಿ ಸತ್ತಿರುವ ನೊಣವನ್ನು ನೋಡುತ್ತಾರೆ. ಇವರೆಲ್ಲ ದೇಶವನ್ನು ಉದ್ಧಾರ ಮಾಡುತ್ತಾರಾ ಅಂತ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ಅಚ್ಚುಕಟ್ಟು ಪ್ರದೇಶಗಳಿಗೆ ಆರು ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ. ಆದರೆ ಈ ಸರ್ಕಾರ ಅದನ್ನು ವಾಪಸ್ ಪಡೆಯಲು ಮುಂದಾಗಿದೆ. ಯಾಕೆ ಅಂತ ಗೊತ್ತಾಗ್ತಿಲ್ಲ ಅಂತ ಹರಿಹಾಯ್ದಿದ್ದಾರೆ. ತಮಿಳುನಾಡಿನವರು ಮಾತ್ರ ಕೇಂದ್ರ ಸರ್ಕಾರದಿಂದ ಆರು ಸಾವಿರ ಕೋಟಿ ಅನುದಾನ ಪಡೆಯಲು ಮುಂದಾಗಿದ್ದಾರೆ. ಅಲ್ಲಿನ ಕೆರೆ ಕುಂಟೆಗಳನ್ನು ತುಂಬಿಸುವ ಯತ್ನದಲ್ಲಿದ್ದಾರೆ. ನಮ್ಮವರು ಅದೇನು ಮಾಡ್ತಿದ್ದಾರೋ ಗೊತ್ತಾಗ್ತಾ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *