ಹಾಯ್ ಬೆಂಗಳೂರ್

ಒಡೆದು ಬಿದ್ದ ಕೊಳಲ ಕೊಳಲು ಬರುವನೊಬ್ಬ ಧೀರನೂ…

ಹಾಗೆ ನಾನು ಹೊತ್ತಲ್ಲದ ಹೊತ್ತಿನಲ್ಲಿ ಬಳ್ಳಾರಿಯ ಕಪ್ಪಗಲ್ ರಸ್ತೆಯ ಮುಲ್ಲಂಗಿ ಚಂದ್ರಶೇಖರ ಚೌಧುರಿಯ ಬುಲೆಟ್ ಮೋಟರ್ ಸೈಕಲನ್ನು ಕಡ ತೆಗೆದುಕೊಂಡು ಆ ಹೆಣ್ಣು ಮಗಳ ಮಗುವಿನ ಹೆಣವನ್ನು ಮೋಕ ಎಂಬ ಹಳ್ಳಿಗೆ ತಲುಪಿಸಿ ಬಂದ ಮೇಲೆ ಕೆಲವು ಘಟನೆಗಳು ಜರುಗಿದವು.

ಬಳ್ಳಾರಿಯಲ್ಲೊಂದು ಬೀದಿಯಿದೆ. ಹುಡುಕಿದರೂ ಹತ್ತು ಬ್ರಾಹ್ಮಣರ ಮನೆ ಸಿಗುವುದು ಕಷ್ಟ. ಅದರ ಹೆಸರು ಮಾತ್ರ ಬ್ರಾಹ್ಮಣರ ಬೀದಿ. ಆ ಬೀದಿಯಲ್ಲಿರುವ ಮೀನಾಕ್ಷಿ ಭವನವೆಂಬ ಹೊಟೇಲಿನ ಮುಂದಿರುವ ಜಗುಲಿಯ ಮೇಲೆ ಕೂಡುವ ಕೆಲವರನ್ನು ನೀವು ನೋಡಬೇಕು. ಅವರು ಹೆಣ ಹೊರುವವರು! ಬ್ರಾಹ್ಮಣರು ಸಾಮಾನ್ಯವಾಗಿ ಬ್ರಾಹ್ಮಣರ ಹೆಣಗಳನ್ನೇ ಹೊರುತ್ತಾರೆ. ಅಡಿಗೆ ಕೆಲಸಗಳಿಗೆ ಹೋಗುತ್ತಾರೆ. ಕೆಲಸವಿಲ್ಲದ ದಿನಗಳಲ್ಲಿ ಮೀನಾಕ್ಷಿ ಭವನದ ಜಗುಲಿಯ ಮೇಲೆ ಕುಳಿತು ಕಾಯುತ್ತಾರೆ. ಅವರ ಅದೃಷ್ಟ ನೆಟ್ಟಗಿದ್ದರೆ ಊರಿನ ಬ್ರಾಹ್ಮಣರ ಪೈಕಿ ಯಾವನಾ/ಯಾವಳಾದರೊಬ್ಬ ಸಾಯುತ್ತಾನೆ. ಅವರಿಗೆ ಊಟಕ್ಕೊಂದು ದಾರಿಯಾಗುತ್ತಾನೆ.

ಉಳಿದೆಲ್ಲ ಊರುಗಳ ಪರಿಸ್ಥಿತಿ ಹೇಗಿದೆಯೋ ಕಾಣೆ; ಆದರೆ ಬಳ್ಳಾರಿಯಲ್ಲಿ ಮಾತ್ರ ಬ್ರಾಹ್ಮಣರ ಹೆಣ ಸಾಗಿಸುವುದೊಂದು ದೊಡ್ಡ ಫಜೀತಿಯೇ. ಮುಸ್ಲಿಮರು, ಕ್ರಿಶ್ಚಿಯನ್ನರು, ಮಾರವಾಡಿಗಳು, ಲಿಂಗಾಯಿತರು-ಹೀಗೆ ಎಲ್ಲಾ ಜಾತಿಗಳವರೂ ಶವಯಾತ್ರೆಗೆ ಸಂಬಂಧಿಸಿದಂತೆ ತಂತಮ್ಮ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕುಲಬಾಂಧವನೊಬ್ಬ ಕಣ್ಮುಚ್ಚಿದರೆ ಆ ಜಾತಿಯ  ಜನ ಸೇರುತ್ತಾರೆ. ಹೆಣಕ್ಕೆ ಸಿಂಗಾರ ಮಾಡಿ, ಸಿದಿಗೆ ಕಟ್ಟಿ ಹೆಗಲ ಮೇಲೋ, ಹೆಣದ ಪೆಟ್ಟಿಗೆಯಲ್ಲೋ , ಎತ್ತಿನ ಬಂಡಿಯಲ್ಲೋ ಹೆಣ ಸಾಗಿಸುತ್ತಾರೆ. ದುಡ್ಡಿದ್ದವರು ಮೆರವಣಿಗೆ ಮಾಡುತ್ತಾರೆ. ಹೆಣದ ಮೇಲೆ ಚಿಲ್ಲರೆ ಚೆಲ್ಲುತ್ತಾರೆ. (ಅದರಲ್ಲೂ ಲಿಂಗಾಯಿತರು ತುಂಬ ವ್ಯವಸ್ಥಿತವಾಗಿ ಶವಯಾತ್ರೆಗಳನ್ನು ಏರ್ಪಡಿಸುತ್ತಾರೆ. ಬಳ್ಳಾರಿಯ ಅಲ್ಲಂ ಕರಿಬಸಪ್ಪನವರ ಪತ್ನಿ ಅಲ್ಲಂ ಸುಮಂಗಳಮ್ಮ ತೀರಿಕೊಂಡಾಗ ನಾವು ಕೆಲವರು ಹುಡುಗರು ಚಿಲ್ಲರೆ ಆರಿಸಲೆಂದೇ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದೂ, ಆ ಕಾಲಕ್ಕೆ ನನ್ನದೊಬ್ಬನದೇ ಆರು ರುಪಾಯಿಯಷ್ಟು ಚಿಲ್ಲರೆ ಕಲೆಕ್ಟ್ ಆಗಿದ್ದುದೂ… ಇನ್ನೂ ನೆನಪಿದೆ.)

ಬ್ರಾಹ್ಮಣರ ಮಟ್ಟಿಗೆ ಇದೆಲ್ಲ ದುಸ್ಸಾಧ್ಯ. ಯಾವನಾದರೊಬ್ಬ ಸಾಯುತ್ತಾನೆ ಎಂಬುದು ಖಚಿತವಾದರೆ, ಇನ್ನೂ ಪ್ರಾಣವಿದ್ದಂತೆಯೇ ಅವನನ್ನೆಳತಂದು ಅಂಗಳಕ್ಕೆ ಮಲಗಿಸುವ ಬ್ರಾಹ್ಮಣರು-ಸತ್ತದ್ದು ಖಚಿತವಾದ ಕೆಲವೇ ಗಂಟೆಗಳಲ್ಲಿ ಅವನನ್ನು ಬೆಂಕಿಯ ಮಡಿಲಿಗೆ ಅರ್ಪಿಸಿ ಬರುತ್ತಾರೆ. ಹೆಚ್ಚು ಹೊತ್ತು ಹೆಣವಿಟ್ಟುಕೊಂಡು ಕೂಡಬಾರದೆಂಬುದು ಬ್ರಾಹ್ಮಣರ ನಂಬಿಕೆ. ಹೆಣ ಅಂಗಳದಲ್ಲಿದ್ದಷ್ಟು ಹೊತ್ತೂ ಆ ಬೀದಿಯ ಯಾವ ಮನೆಯವರೂ ಊಟ, ತಿಂಡಿ ಮಾಡಕೂಡದು. ಅದು ಸಂಪ್ರದಾಯ. ಅದು ಅವರ ಕರ್ಮ ಕೂಡ!

ಇಷ್ಟೆಲ್ಲ ಆದರೂ ಬ್ರಾಹ್ಮಣರ ಹೆಣ ಸ್ಮಶಾನಕ್ಕೆ ಸಾಗಿಸುವುದು ನಿಜಕ್ಕೂ ಕಷ್ಟದ ಕೆಲಸ. ತಂದೆ ತಾಯಿ ಬದುಕಿರುವವರಾದರೆ ಸ್ಮಶಾನಕ್ಕೆ ಹೋಗಬಾರದು ಎಂಬಂತಹ ವಿಲಕ್ಷಣ ನಂಬಿಕೆಗಳು ಈ ಕೆಲಸವನ್ನು ಮತ್ತಷ್ಟು ಕಷ್ಟಕರವಾಗಿಸಿವೆ.

ಇದನ್ನೆಲ್ಲ ನೋಡಿ ಬೇಸರವಾಗಿ ನನ್ನ ‘ಬಳ್ಳಾರಿ ಪತ್ರಿಕೆ’ಯಲ್ಲಿ ‘ಬ್ರಾಹ್ಮಣರ ಹೆಣಗಳಿಗೆ ಬೆಂಕಿಯಿಕ್ಕಬೇಕಿದೆ’ ಎಂಬ ಹೆಡ್ಡಿಂಗು ಹಾಕಿ ಒಂದು ಲೇಖನ ಬರೆದೆ. ಆಗ ಭಯಂಕರ ಚರ್ಚೆಗಳಾದವು. ಕೆಲವರು ನನ್ನನ್ನು ವಾಚಾಮಗೋಚರವಾಗಿ ಬೈದರು. ಆದರೆ ಸೇವಾ ಮನೋಭಾವದ ಒಂದಿಷ್ಟು ಜನ ಯುವಕರು ಮಾತ್ರ ಬ್ರಾಹ್ಮಣ ಸಂಘದಲ್ಲಿ ಒಂದು ಸಭೆ ಮಾಡಿ, ಈ ಸಮಸ್ಯೆಗೊಂದು ಮಧ್ಯಂತರ ಪರಿಹಾರ ಹುಡುಕಿದರು. ಸಂಘದ ವತಿಯಿಂದ ನಾಲ್ಕು ಗಾಲಿಯ ತಳ್ಳುಬಂಡಿಯೊಂದನ್ನು ಮಾಡಿಸಿ-ಅದನ್ನು ಬಡವರ ಮನೆಯ ಬ್ರಾಹ್ಮಣರು ಸತ್ತರೆ ಶವಯಾತ್ರೆಗೆ ಉಚಿತವಾಗಿ ಕೊಡಬೇಕೆಂದು ನಿರ್ಧಾರ ಮಾಡಿದರು. ಇದ್ದಕ್ಕಿದ್ದಂತೆ ಶವಯಾತ್ರೆಯ ಸಮಸ್ಯೆಗೊಂದು ಪರಿಹಾರ ಸಿಕ್ಕೇ ಬಿಟ್ಟಿತೆನ್ನಿಸಿತು. ಆದರೆ ಹಿಂದೆಯೇ ಮತ್ತೊಂದು ಸಮಸ್ಯೆ ಉದ್ಭವವಾಯಿತು.

ಹೆಣ ತಳ್ಳುವ ಬಂಡಿಯನ್ನು ಎಲ್ಲಿಡಬೇಕು?

ಬ್ರಾಹ್ಮಣ ಸಂಘಕ್ಕೆ ಬಡಿದಾಡಿ ಪ್ರೆಸಿಡೆಂಟರೂ, ಪದಾಧಿಕಾರಿಗಳೂ ಆದವರ ಮನೆಗಳಲ್ಲೇ ಹೆಣದ ಬಂಡಿ ಇಡಬಹುದಲ್ಲ ಎಂಬ ಸಲಹೆ ಬಂತು. “ಹೇ, ಎಲ್ಲಾದ್ರೂ ಆಗೋ ಮಾತೇನ್ರಿ… ನಮ್ಮನ್ಯಾಗ ಮಡಿಮೈಲಿಗೆ ಭಾಳ. ಅದರಾಗೂ ನಮ್ದು ಹುಡುಗರು ಓಡ್ಯಾಡೋ ಮನಿ!” ಎಂಬ ನೆಪಗಳು ಮುಂದಾದವು. ಹುಡುಗರಲ್ಲದೆ, ಮನೆಗಳಲ್ಲಿ ಮತ್ತೇನು ದೆವ್ವ ಓಡಾಡುತ್ತವೆಯೆ? ಒಟ್ಟಿನಲ್ಲಿ ಹೆಣದ ಬಂಡಿ ಇಟ್ಟುಕೊಳ್ಳಲು ಬ್ರಾಹ್ಮಣ ಸಂಘದ ಪದಾಧಿಕಾರಿಗಳ್ಯಾರೂ ಸಿದ್ಧರಾಗಿರಲಿಲ್ಲ. ಸತ್ಯನಾರಾಯಣ ಪೇಟೆಯಲ್ಲಿದ್ದ ಸತ್ಯನಾರಾಯಣ ಗುಡಿಯ ಕಾಂಪೋಂಡಿನಲ್ಲೇ ಇಡಿ ಎಂಬ ಸಲಹೆ ಬಂತು. ಎಲ್ಲಾದರೂ ಉಂಟೆ? ಅದು ದೇವರು ವಾಸಿಸುವ ಸ್ಥಾನ! ಎಂಬ ಕಾರಣ ನೀಡಿ ಅಲ್ಲೂ ಹೆಣದ ಬಂಡಿಗೆ ಜಾಗವಿಲ್ಲದಂತೆ ಮಾಡಿದರು.

ಕಡೆಗೆ ಬಿದ್ದದ್ದು ನನ್ನ ಕೊರಳಿಗೇ!

ಲೇಖನ ಬರೆದ ತಪ್ಪಿಗೆ, ಹೆಣದ ಬಂಡಿಯನ್ನು ನನ್ನ ಮನೆಯ ಕಾಂಪೋಂಡಿನಲ್ಲೇ ಅದನ್ನು ತಂದಿರಿಸಿಕೊಳ್ಳಬೇಕಾಯಿತು. ಒಂದು ತಡಿಕೆಯ ಷೆಡ್ಡು ಕಟ್ಟಿಸಿ, ನಾಲ್ಕು ಚಕ್ರಗಳ ಸ್ಟ್ರೆಚರ್‌ನಂತಹ ಆ vehicle for the last journeyಯನ್ನು ತಂದು ಮನೆಯ ಮುಂದಿಟ್ಟುಕೊಂಡೆ.

“ನನಗೊಂದು ವ್ಯವಸ್ಥೆ ಮಾಡಿದ್ದಂಗಿದೀಯಲ್ಲ?” ಅಂದಳು ನನ್ನ ಅಮ್ಮ. ಆಕೆಯ ಮುಖವನ್ನು ಗಾಬರಿಯಿಂದ ನೋಡಿದೆ. ಕಣ್ಣುಗಳಲ್ಲಿ ತುಂಟ ನಗೆಯಿತ್ತು. ಸಮಾಧಾನಗೊಂಡೆ. ಮುಂದೆ ಎಷ್ಟೋ ದಿನ, ಮನೆಗೆ ಬಂದವರಿಗೆಲ್ಲ ಆ ವಾಹನವನ್ನು ತೋರಿಸಿ ‘ನನ್ನ ಮಗ ನನಗೋಸ್ಕರ ತಂದಿಟ್ಟಿದ್ದಾನೆ’ ಅಂತ ತಮಾಷೆ ಮಾಡುತ್ತಿದ್ದಳು. ಹಾಗೆ ಎರಡು ವರ್ಷ ಕಾಲ ಆ ಮಹಾನ್ ವಾಹನ ನಮ್ಮ ಬದುಕಿನ, ನಮ್ಮ ಮನೆಯ ಒಂದು ಭಾಗವಾಗಿ ನಮ್ಮೊಂದಿಗಿತ್ತು. ಸಾವಿನ ಮನೆಗಳಿಗೆ ಹೋಗಿ ಬರುತ್ತಿತ್ತು. ಬದುಕಿದವರ ಸಮಸ್ಯೆ ಬಗೆಹರಿಸುತ್ತಿತ್ತು.

‘ಇಂಥಾದ್ದನ್ನೆಲ್ಲ ಮನ್ಯಾಗೆ ತಂದಿಡಬಾರದಿತ್ತು’ ಅಂದರು ಜನ. ಆ ಶವದ ಬಂಡಿ ಬಂದ ಮೇಲೆ ಮನೆಯಲ್ಲಿ ಏನೇ ಅವಘಡಗಳಾದರೂ, ಅದಕ್ಕೆ ಬಂಡಿಯೇ ಕಾರಣ ಅಂದರು. ಅದು ಬಂದಿರುವುದೇ ನನ್ನ ತಾಯಿಯನ್ನು ಕೊಂಡೊಯ್ಯುವುದಕ್ಕೆ ಅಂತ ಹೆದರಿಸಿದರು. ಅಮ್ಮ ಮಾತ್ರ, ಎಲ್ಲ ಮೂಢನಂಬಿಕೆಗಳನ್ನು ನಗುನಗುತ್ತಲೇ ತಿರಸ್ಕರಿಸಿದಳು. ಕಡೆಗೊಂದು ದಿನ ಸಾವು ಬಂದು ಕದ ತಟ್ಟಿತು. ಬಾಗಿಲಲ್ಲಿ ನಿಂತು ಭಿಕ್ಷೆ ಕೇಳುವ ಭಿಕ್ಷುಕನಿಗೆ ‘ಇಲ್ಲ’ವೆನ್ನಲಾಗದೆ ಹಿಡಿ ಅಕ್ಕಿ ಹಾಕಿ ಕಳಿಸುವ ಗೃಹಿಣಿಯಂತೆ, ಆಕೆ ಬಾಗಿಲಿಗೆ ಬಂದು ಕರೆದ ಸಾವಿಗೆ ಓಗೊಟ್ಟು ಹೊರಟು ಹೋದಳು. ಅಮ್ಮ ಸತ್ತುಹೋದಳು.

ಎಂಥಾ ಕಾಕತಾಳೀಯವೆಂದರೆ, ಅವತ್ತು ಅಸಹಾಯಕಳೊಬ್ಬಳ ಮಗುವಿನ ಹೆಣ ಸಾಗಿಸಲು ತನ್ನ ಮೊಬೈಕ್ ನೀಡಿದ ಚಂದ್ರಶೇಖರ ಚೌಧುರಿಯೇ, ನನ್ನ ಅಮ್ಮನನ್ನು ಮನೆಯಿಂದ ಆಸ್ಪತ್ರೆಗೆ-ಆಸ್ಪತ್ರೆಯಿಂದ ರುದ್ರಭೂಮಿಗೆ ಸಾಗಿಸಲು ಕಾರು ಕೊಟ್ಟ. ಆಸ್ಪತ್ರೆಯಲ್ಲಿ ಬೆಳಿಗ್ಗೆ ಏಳೂ ನಲವತ್ತಕ್ಕೆ ಕೊನೆಯುಸಿರು ಚೆಲ್ಲಿ ಮಲಗಿದ ಆಕೆಯನ್ನು ಒಂಬತ್ತು ಗಂಟೆ ಹೊತ್ತಿಗೆ ಸ್ಮಶಾನಕ್ಕೆ ಸಾಗಿಸಿದೆ. ಯಾವುದೇ ಸಂಪ್ರದಾಯ, ಶಾಸ್ತ್ರ, ವಿಧಿ ವಿಧಾನಗಳಿಲ್ಲದೆ-ಒರಟು ಕಟ್ಟಿಗೆಗಳ ಮೇಲೆ ಆಕೆಯನ್ನು ಮಲಗಿಸಿ ಬೆಂಕಿ ಕೊಟ್ಟೆ. ಅವತ್ತು ಹೊತ್ತಿಕೊಂಡ ಅಮ್ಮನ ಚಿತೆ, ಇನ್ನೂ ಆರದೆ ನನ್ನ ಮನಸ್ಸಿನಲ್ಲಿ ಉರಿಯುತ್ತಲೇ ಇದೆ.

ಮುಂದೆ ಯಾವತ್ತೂ ನಾನು ಆಕೆಯ ಶ್ರಾದ್ಧ ಮಾಡಲಿಲ್ಲ. ಆಕೆ ಸತ್ತ ಡೇಟಿಗೆ ಸರಿಯಾಗಿ ಒಂದಿಬ್ಬರು ಭಿಕ್ಷುಕರನ್ನು ಸೆಲೆಕ್ಟ್ ಮಾಡಿಕೊಳ್ಳುತ್ತೇನೆ, ಹತ್ತಿರದ ಹೊಟೇಲಿಗೆ ಕರೆದೊಯ್ಯುತ್ತೇನೆ. ಕರುಳ ತುಂಬ ಊಟ ಮಾಡಿಸುತ್ತೇನೆ. ಬೀಡಿ, ತಂಬಾಕು, ಎಲೆ ಅಡಿಕೆ-ಅವರೇನು ಕೇಳಿದರೆ ಅದು ಕೊಡಿಸುತ್ತೇನೆ. ಕೈಯಲ್ಲಿದ್ದಷ್ಟು ಹಣ ಕೊಟ್ಟು ಕೈ ಮುಗಿಯುತ್ತೇನೆ. ದೂರದಲ್ಲೆಲ್ಲೋ ನನ್ನ ತಾಯಿ ತಣ್ಣಗೆ ನಕ್ಕಂತೆ ಭಾಸವಾಗುತ್ತದೆ. ನನ್ನ ಮನಸ್ಸಿನ ನೆಮ್ಮದಿಗೆ ಅಷ್ಟು ಸಾಕು.

ಇದನ್ನೆಲ್ಲ ಏಕೆ ಬರೆದೆನೋ ಗೊತ್ತಿಲ್ಲ. ಆದರೆ ಇದ್ಯಾವುದೂ ತೀರ ವೈಯುಕ್ತಿಕವಾದದ್ದು ಅಂತ ನನಗನ್ನಿಸುವುದಿಲ್ಲ. ಸಾವು, ಬ್ರಾಹ್ಮಣರ ಬೀದಿ, ಬ್ರಾಹ್ಮಣರ ಸಂಘ, ಹೆಣದ ಬಂಡಿ, ಅಮ್ಮನ ಸಾವು, ವಿಲಕ್ಷಣ ಶ್ರಾದ್ಧ-ಇದ್ಯಾವೂ ವೈಯುಕ್ತಿಕವಲ್ಲ. ಸಾವು ಉಳಿಸಿಹೋಗುವ ತಬ್ಬಲಿತನವೊಂದು ಬಿಟ್ಟರೆ ಉಳಿದ್ಯಾವುದೂ ವೈಯುಕ್ತಿಕವಲ್ಲ. ಆದರೆ,

‘ನಮಗ್ಯಾರಿಗೂ ಆಗದ ಅನುಭವಗಳು ನಿಮಗೇ ಆಗುತ್ತವೆಯಾ?’ ಅಂತ ಓದುಗರೊಬ್ಬರು ಕೇಳಿದ್ದಾರೆ. ಗೊತ್ತಿಲ್ಲ. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಹತ್ತಿರದವರನ್ನು ಕಳೆದುಕೊಳ್ಳುತ್ತಾರೆ. ತಣ್ಣಗಿನ ಸಾವು ಹೆಗಲು ಮುಟ್ಟುತ್ತದೆ. ಕೆಲವರು ಹೇಳಿಕೊಳ್ಳುತ್ತಾರೆ. ಉಳಿದವರು ಸುಮ್ಮನಿರುತ್ತಾರೆ. ನಾನು ಹುಟ್ಟಾ ಬಾಯಿಬಡುಕನಿರಬೇಕು. ತೋಚಿದ್ದೆಲ್ಲ ಬರೆದುಕೊಳ್ಳುತ್ತೇನೆ. ತೋಚಿದಂತೆ ಬದುಕುತ್ತೇನೆ. ತೋಚಿದ ಕಡೆಗೆ ಹೋಗುತ್ತೇನೆ. ದೇವರನ್ನು ಹುಡುಕಿಕೊಂಡು ಹಿಮಾಲಯಕ್ಕೆ ಹೋದಂತೆಯೇ , ಅಗ್ನಿಗಾನ ಕೇಳಿಬರಲು ಆಂಧ್ರದ ಕಾಡಿಗೆ ಹೋಗಿದ್ದೇನೆ. ಹೊಟ್ಟೆಪಾಡು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದೇನೆ. ಅಚಾನಕ್ಕಾಗಿ ಸಿಕ್ಕ ನಿಮ್ಮೊಂದಿಗೆ ಹರಟೆಗೆ ಕೂತಿದ್ದೇನೆ. ಆಳವಾಗಿ ಆಲೋಚಿಸಿದರೆ ಇದರಲ್ಲಿ ‘ಖಾಸಾ’ ಅನ್ನುವಂಥದ್ದು ಏನೂ ಇಲ್ಲ. ನನ್ನ-ನಿಮ್ಮ ಗೆಳೆತನವೊಂದನ್ನು ಬಿಟ್ಟು. ಹೀಗೆ ನನ್ನದೆನ್ನುವುದನ್ನೆಲ್ಲ ನಿಮ್ಮದನ್ನಾಗಿಸಿ, ನಿಮ್ಮ ಅನಿಸಿಕೆಗಳನ್ನು ನನ್ನವನ್ನಾಗಿ ಮಾಡಿಕೊಂಡು ಬರೆಯುವುದೇ ಪತ್ರಿಕೋದ್ಯಮ. ನಾನು ತುಂಬ ಓದಿಕೊಂಡವನಲ್ಲವಾದ್ದರಿಂದ ಪುಸ್ತಕಗಳ ಬಗ್ಗೆ ಕವಿಗಳ ಬಗ್ಗೆ ತುಂಬ ಬರೆಯಲಾರೆ. ಆದರೆ ಬದುಕಿನ ಪ್ರತಿಕ್ಷಣವನ್ನೂ ತುಂಬ ಇಂಟೆನ್ಸ್ ಆಗಿ, ಪ್ಯಾಶನೇಟ್ ಆಗಿ ಬದುಕುತ್ತೇನಾದ್ದರಿಂದ ಅದನ್ನೆಲ್ಲ ಅಕ್ಷರ ಮಾಡಿ ತೋರಿಸಬಲ್ಲೆ. Nothing official about it! ಬರಹಗಾರ ಎಂಬುವವನು ಮತ್ತೇನಲ್ಲ: ಒಬ್ಬ ಕಸುಬುದಾರ ಮೇಸ್ತ್ರಿ, ಇಟ್ಟಿಗೆ, ಗಾರೆಗಳನ್ನೆಲ್ಲ ಬದುಕು ಒದಗಿಸುತ್ತದೆ. ಓದುಗರನ್ನು ಎದುರಿಗಿಟ್ಟುಕೊಂಡು ಬಂಗಲೆಯೆಬ್ಬಿಸಬೇಕು, ಅದೊಂದು ಜಾಣತನ ಅವನಿಗಿರಬೇಕು. ಇಟ್ಟಿಗೆ ಗಾರೆಗಳನ್ನು ಬದುಕಿನಿಂದ ಮಾತ್ರ ಆಯ್ದು ತರುತ್ತೇನೆಂಬ ಹಠವಿರಬೇಕು.

ಮೊನ್ನೆ ಮಂಗಳವಾರದ ಮಳೆಯ ಸಂಜೆಯಲ್ಲಿ ನಡೆದದ್ದನ್ನು ನಿಮಗೆ ಹೇಳಬೇಕು. ಗೆಳೆಯ ನಾಗತಿಹಳ್ಳಿ ಚಂದ್ರಶೇಖರ ಅದೆಷ್ಟೋ  ವರ್ಷಗಳ ನಂತರ ಭೇಟಿಯಾದ. ಅವನ ಕಡು ಹಸಿರು ಕಾರಿನಲ್ಲಿ ಕುಳಿತು ವೈಪರ್‌ನಿಂದಾಚೆಗೆ ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತ ಸಿಗರೇಟು ಸುಡುತ್ತಿದ್ದೆ. ನಾಗ್ತಿಯ ಮಗಳು ‘ಕನಸು’- ಅವಳಪ್ಪ ಮಾಡುತ್ತಿದ್ದ ‘ಅಮೆರಿಕಾ ಅಮೆರಿಕಾ’ ಸಿನೆಮಾದ ಹಾಡಿನ ಕ್ಯಾಸೆಟ್ಟನ್ನು ಸ್ಟೀರಿಯೋದೊಳಕ್ಕೆ ನೂಕಿ ಹಾಡು enjoy ಮಾಡುತ್ತಿದ್ದಳು. ನಾವು ಸಾಹಿತ್ಯ, ಸಿನೆಮಾ, ರಾಜಕಾರಣ ಮತ್ತು ಒಳ್ಳೆಯ ಕಾಫಿಯ ಬಗ್ಗೆ ಆಸೆಯಿಂದ ಮಾತಾಡುತ್ತಿದ್ದೆವು. ನಾಗ್ತಿಯ ಕಣ್ಣುಗಳಲ್ಲಿನ ಹೊಳಪು ಅವನ ಮಾತಿನಲ್ಲಿದ್ದ ಶಿಸ್ತು ಮತ್ತು ಗೆಳೆತನದಲ್ಲಿನ ಸೌಜನ್ಯಗಳನ್ನೇ ಖುಷಿಯಿಂದ ದಿಟ್ಟಿಸಿದೆ. ‘ಎಷ್ಟು ಕಷ್ಟಪಟ್ಟು ಮೇಲೆ ಬಂದವನು ನಾಗ್ತಿ’ ಅನ್ನಿಸಿತು. ನಾಗಮಂಗಲದಿಂದ ಹೊರಬಿದ್ದು ಹೊಟ್ಟೆಪಾಡಿಗಾಗಿ ಮೈಲಿಗಲ್ಲುಗಳಿಗೆ ಬಣ್ಣ ಬಳಿಯುವ ಕೆಲಸ ಕೂಡ ಮಾಡಿದ ಈ ನಾಗ್ತಿ, ಇವತ್ತು ಅಮೆರಿಕಾದಲ್ಲೊಂದು ಸಿನೆಮಾ ಮಾಡಲು ಸಜ್ಜಾಗುತ್ತಿದ್ದಾನೆ. ತನ್ನ ನಿಟ್ಟುಸಿರುಗಳನ್ನೆಲ್ಲಾ ಬೊಗಸೆ ಮಾಡಿ ಅವುಗಳಿಗೆ ಕಥೆಯ ರೂಪ ಕೊಟ್ಟು ಓದುಗರ ಕೈಗಿತ್ತಿದ್ದಾನೆ. ಬದುಕನ್ನ, ಪ್ರೇಮವನ್ನ, ಅದರ ಜರೂರತ್ತನ್ನ ಪ್ರಾಮಾಣಿಕವಾಗಿ ಪ್ರೀತಿಸಿದ್ದಾನೆ. ಅವನಿಗೆ ಇವತ್ತು ದಕ್ಕಿರುವ ಸಂತೋಷದಲ್ಲಿ  ನನ್ನಂಥ ಅನೇಕರ ಪಾಲುಗಳೂ ಇವೆ ಅನ್ನಿಸಿತು. ಕಷ್ಟಪಟ್ಟು ಉನ್ನತಿಗೆ ಬಂದ ಪ್ರತಿಯೊಬ್ಬರ ಪಾಲೂ ಇದೆ ಎನ್ನಿಸಿತು.

ಅಷ್ಟರಲ್ಲಿ ಬಂತು ಅಡಿಗರ ಹಾಡು!

‘ಅಮೆರಿಕಾ ಅಮೆರಿಕಾ’ ಸಿನೆಮಾಕ್ಕೆ ನಾಗ್ತಿ ಅಡಿಗರ ‘ಯಾವ ಮೋಹನ ಮುರಳಿ’ ಹಾಡು ಹಾಕಿಕೊಂಡಿದ್ದಾನೆ. ಅವನ ಮಗಳು ಸ್ಟೀರಿಯೋ ಬಾಯಿಗೆ ನೂಕಿದ ಕ್ಯಾಸೆಟ್ಟಿನಲ್ಲಿ ಆ ಹಾಡು ಮೊರೆಯತೊಡಗಿತು. ತಕ್ಷಣ ನನ್ನ ಮನಸ್ಸು ಶಿರಸಿಯ ಆಸುಪಾಸಿನ ಕಾಡುಗಳಿಗೆ ವಲಸೆ ಹೋಯಿತು. ಅಲ್ಲಿ, ಮಂಚಿಕೇರಿಯ ಬಳಿ ಹಾಸಣಗಿಯಲ್ಲಿ ನಿಜಕ್ಕೂ great ಅನ್ನಿಸುವಂಥ ಹಾಡುಗಾರ ಮಿತ್ರ ಹಾಸಣಗಿ ಗಣಪತಿಭಟ್ಟ ಇದ್ದಾನೆ. ಅವನೊಂದಿಗೆ ಕಾಡು ತೋಟಗಳಲ್ಲಿ ಅಲೆದು ಅಡಿಗರ ಭಾವಗೀತೆಗಳನ್ನು ಕೇಳಿದ ನೆನಪಾಯಿತು. ಹಾಗೆಯೇ ಶಿರಸಿ ಸಮೀಪದ ಮಳಗಿ ಎಂಬ ಊರಿನಲ್ಲಿ ನಡೆದ ಘಟನೆ ನೆನಪಾಯಿತು.

ಗೆಳೆಯ ಉಮೇಶ ಮತ್ತು ವಿದ್ಯಾ ಭರತನಹಳ್ಳಿ ಕೆಲ ಕಾಲ ಮಳಗಿಯಲ್ಲಿದ್ದರು. ಅಲ್ಲಿ ಸರಸ್ವತಿ ಎಂಬ ನಡು ವಯಸ್ಕ ಹೆಣ್ಣು ಮಗಳೊಬ್ಬಾಕೆಯಿದ್ದರು. ಆಕೆಗೊಬ್ಬ ತಾಯಿ ತೊಂಬತ್ತು ದಾಟಿದ ಮುದಿ ಮುದಿ ಹಣ್ಣಣ್ಣು ಅಜ್ಜಿ. ನಾನು ನೋಡುವ ಹೊತ್ತಿಗಾಗಲೇ ಆಕೆ ನೆಲ ಹಿಡಿದಿದ್ದರು. ದೇಹ ಗುಬ್ಬಿಯಂತಾಗಿ ಬಿಟ್ಟಿತ್ತು. ಆದರೂ ಕಣ್ಣು-ಕಿವಿ ಚುರುಕಾಗಿದ್ದವು.

‘ಈ ಅಜ್ಜಿ ತುಂಬ ಚೆನ್ನಾಗಿ ಹಾಡ್ತಾರೆ’ ಅಂದ ಉಮೇಶ. ಅಜ್ಜಿ ಕಣ್ಣರಳಿಸಿತು. ಗಂಟಲು ಸರಿ ಮಾಡಿಕೊಂಡಿತು. ತೊಂಬತ್ತರ ಅಜ್ಜಿ ಏನು ಹಾಡಿಯಾಳು? ದೇವರ ನಾಮಕ್ಕೆ ಅಣಿಯಾಗಿ ಕೂತುಕೊಂಡೆ. ಅಜ್ಜಿ ನಿಜಕ್ಕೂ shock ಕೊಟ್ಟಿತ್ತು. ಆಕೆ ಹಾಡಿದ್ದು ಗೋಪಾಲಕೃಷ್ಣ ಅಡಿಗರ ಭಾವಗೀತೆಯನ್ನ!

ಒಡೆದು ಬಿದ್ದ ಕೊಳಲು ನಾನು

ನಾದ ಬರದು ನನ್ನಲೀ.. ವಿನೋದವಿರದು ನನ್ನಲೀ!

ತಟಕ್ಕನೆ ಎದ್ದುಹೋಗಿ ಮೂಳೆ ಚಕ್ಕಳವಾಗಿದ್ದ ಆಕೆಯ ಕೈ ಹಿಡಿದುಕೊಂಡೆ. ಕಣ್ಣು ತೇವಗೊಂಡವು. ಮಲಗಿದಲ್ಲೇ ಆಕೆ ನನ್ನ ತಲೆ ನೇವರಿಸಿದರು. ಹಾಡುತ್ತ ಹೋದರು.

ಹಾಡು ಬೇಸರಾಯಿತೇನೋ…

ಹೊಸ ಹಂಬಲು ಹಾಯಿತೇನೋ…

ಬಿಸುಟಿದ್ದಳು ಕೊಳಲು!

ಅಜ್ಜಿ ಹಾಡು ನಿಲ್ಲಿಸಿ ನನ್ನ ಮುಖ ನೋಡಿತು. ಅವಡುಗಚ್ಚಿ ಅಳು ತಡೆದುಕೊಂಡೆ.

‘ಒಡೆದು ಬಿದ್ದ ಕೊಳಲ ಕೊಳಲು

ಬರುವನೊಬ್ಬ ಧೀರನು

ಅಲ್ಲಿಯವರೆಗೆ ಮಣ್ಮಯ…

ಬಳಿಕ ನಾನು ಚಿನ್ಮಯ!”

ಅಂದುಬಿಟ್ಟಿತು ಅಜ್ಜಿ. ನಾನು ಕಣ್ಣೀರಿನಲ್ಲಿ ತೋಯ್ದು ಹೋಗಿದ್ದೆ. ತೊಂಬತ್ತು ದಾಟಿದ ಆ ಮುಪ್ಪಾನ ಮುದುಕಿಯಲ್ಲೂ ಅದೊಂದು ಆಸೆಯಿದೆ. ‘ಒಡೆದು ಬಿದ್ದ ಕೊಳಲ ಕೊಳಲು ಬರುವನೊಬ್ಬ ಧೀರನು!’

ಇದೊಂದು ಆಸೆಯೇ ಅಲ್ಲವೇ, ನನ್ನಂತಹ ನಿಮ್ಮಂತಹ ಲಕ್ಷಾಂತರ ಒಡೆದ ಕೊಳಲುಗಳನ್ನು ಇವತ್ತು ಜೀವಂತವಾಗಿಟ್ಟಿರುವುದು? ಕೊಳಲ ಕೇಳುವ ಧೀರ ಬರಲೆಂದೇ ಅಲ್ಲವೆ ಮಣ್ಣಿನಲ್ಲಿ ಹೊರಳುತ್ತಲೇ ಕಾಯುತ್ತಿರುವುದು?

ಮುಂದೆ ಕೆಲವೇ ದಿನಗಳಲ್ಲಿ ಮಳಗಿಯಿಂದ ಸರಸ್ವತಿ ಪತ್ರ ಬರೆದಿದ್ದರು. ಅಜ್ಜಿ ತೀರಿಕೊಂಡಿತ್ತು. ಕೊಳಲ ಕೇಳುವ ಧೀರ ಬಂದು ಕೊಂಡೊಯ್ದಿರಬೇಕು!

One thought on “ಒಡೆದು ಬಿದ್ದ ಕೊಳಲ ಕೊಳಲು ಬರುವನೊಬ್ಬ ಧೀರನೂ…

Leave a Reply

Your email address will not be published. Required fields are marked *