ಕಟೀಲು ಕ್ಷೇತ್ರದಲ್ಲಿ ಇದೆಂಥಾ ಅನ್ಯಾಯ?

in ಜಿಲ್ಲಾ ಸುದ್ದಿಗಳು

ಕಣ್ಣು ಮುಚ್ಚಿ ಕುಳಿತ ಮುಜರಾಯಿ ಇಲಾಖೆ!

ನಿಮಗೆ ಕಟೀಲು ಗೊತ್ತ? ನಳಿನ್ ಕುಮಾರ್ ಕಟೀಲ್ ಅಲ್ಲ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ. ಪುರಾಣ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು ಯಾರಿಗೆ ಗೊತ್ತಿಲ್ಲ ಹೇಳಿ? ಅತ್ಯಂತ ಸುಂದರವಾದ ಪ್ರಕೃತಿಯ ಮಡಿಲಲ್ಲಿ ಸುಶೋಭಿತವಾಗಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೋಟ್ಯಂತರ ಭಕ್ತರಿದ್ದಾರೆ. ಜೊತೆಗೆ ಕೋಟ್ಯಂತರ ಆದಾಯವೂ ಇದೆ. ಮುಂಬೈ, ದುಬೈನ ಶ್ರೀಮಂತ ಧನಿಕರು ಲಕ್ಷಾಂತರ ರುಪಾಯಿ ಹುಂಡಿಗೆ ಸುರಿದು ಕೈ ಮುಗಿಯುತ್ತಾರೆ. ಸುತ್ತಲು ಹರಿಯುವ ನದಿಯ ನಡುವೆ ಇರುವ ಈ ಕ್ಷೇತ್ರಕ್ಕೆ ಅತ್ಯಂತ ಕಾರ್ಣಿಕತೆಯೂ ಇದೆ. ಇಂಥ ಕ್ಷೇತ್ರದ ಧರ್ಮದರ್ಶಿಗಳಲ್ಲಿ ಅಸ್ರಣ್ಣರು ಪ್ರಮುಖರು. ಮುಜರಾಯಿ ಇಲಾಖೆಯ ಅಧೀನದಲ್ಲೇ ಇರುವ ದೇವಸ್ಥಾನ ಹೌದಾದರೂ ಎಂಡೋಮೆಂಟಿಗೂ ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಇಂದಿಗೂ ಇಲ್ಲಿನ ವ್ಯವಹಾರಗಳು ನಡೆಯುತ್ತಲಿದೆ.


ದೇವಸ್ಥಾನದಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರವಿದೆ ಎನ್ನುವ ಮಾತೂ ಆಗಾಗ ಕೇಳಿಬಂದದ್ದು ಸುಳ್ಳಲ್ಲ. ದೇವಸ್ಥಾನದಲ್ಲಿನ ಹಲವು ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರ ಸದ್ದಡಗಿಸಲು ಈ ಅಸುರರ ಅಣ್ಣಂದಿರಂತಹ ಅಸ್ರಣ್ಣರು ಬಳಸುವುದು ದೇವರ ಹೆಸರನ್ನ, ಕಟೀಲಪ್ಪೆಯ ಹೆಸರನ್ನ ಬಳಸಿ ಭಾವನಾತ್ಮಕವಾಗಿ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುವ ಕಟೀಲು ಕ್ಷೇತ್ರದ ಆಡಳಿತ ಮಂಡಳಿಗೆ ಎಲ್ಲವೂ ಇದೆ. ಆದರೆ ಮಾನವೀಯತೆಯೇ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.


ನಿರ್ವಹಣಾಧಿಕಾರಿ ಇಲ್ಲ

ಕಟೀಲು ದೇವಸ್ಥಾನದ ಆಳುವ ವರ್ಗಕ್ಕೆ ಅಳುವ ವರ್ಗವೇ ಕಾಣಿಸುವುದಿಲ್ಲವಾ? ಕಲಾವಿದರ ನೋವು ಇವರಿಗೆ ಅರ್ಥವೇ ಆಗುವುದಿಲ್ಲವಾ? ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರಾ? ನಿಜಕ್ಕೂ ಕಟೀಲಿನಲ್ಲಿ ನಡೆಯುತ್ತಿರುವುದು ಏನು ಎಂದು ಹುಡುಕುತ್ತಾ ಹೊರಟರೆ ಹಲವು ಸತ್ಯಗಳು ಬಯಲಾಗುತ್ತವೆ. ಇನ್ನಷ್ಟು ಸತ್ಯಗಳು ಬೆತ್ತಲಾಗುವ ದಿನಗಳೂ ಸನಿಹದಲ್ಲಿವೆ. ಇಲ್ಲಿ ಸಾಕಷ್ಟು ರಹಸ್ಯಗಳಿವೆ. ಅದೆಲ್ಲವೂ ಬೆಳಕಿಗೆ ಬರಲೇಬೇಕಾದವು. ಜನತೆಯ ಪ್ರಶ್ನೆಗೆ `ಹಾಯ್ ಬೆಂಗಳೂರ್!’ ಖಂಡಿತ ಉತ್ತರ ನೀಡುತ್ತದೆ. ಮುಖ್ಯವಾಗಿ ಇದು ಮುಜಾರಾಯಿಗೆ ಒಳಪಡುವ ದೇವಸ್ಥಾನವಾದರೂ ನೀವು ನಂಬಲೇಬೇಕು ಈ ದೇವಸ್ಥಾನಕ್ಕೆ ಸರ್ಕಾರಿ ನಿಯೋಜಿತ ಒಬ್ಬ ಕಾರ್ಯನಿರ್ವಹಣಾಧಿಕಾರಿಯೇ ಇಲ್ಲ. ಕೋಟ್ಯಂತರ ಆಮದನಿ ಇರುವ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ದೇವಸ್ಥಾನಕ್ಕೊಬ್ಬ ಕಾರ್ಯನಿರ್ವಹಣಾಧಿಕಾರಿಯನ್ನೇ ನೇಮಕ ಮಾಡಿಲ್ಲ ಎಂದರೆ ಇದಕ್ಕೇನರ್ಥ? ಇದೀಗ ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿಯವರಿದ್ದಾರೆ. ಮಂತ್ರಿಗಳೇ ಉತ್ತರಿಸಬೇಕು.

ಯಕ್ಷಗಾನದ ಗಲಾಟೆ

ಕಟೀಲು ಕ್ಷೇತ್ರಕ್ಕೆ ಇನ್ನೊಂದು ದೊಡ್ಡ ಪ್ರಸಿದ್ಧಿ ಎಂದರೆ ಅಲ್ಲಿನ ಯಕ್ಷಗಾನ ಮೇಳಗಳು. ನಾವೀಗ ಮುಖ್ಯ ವಿಷಯದ ಕಡೆಗೆ ಹೊರಳೋಣ. ದೇವಸ್ಥಾನದಲ್ಲಿ ನಡೆಯುತ್ತಿರುವ ಅಪರಾತಪರಾಗಳ ಬಗ್ಗೆ ಮತ್ತೆ ಬರೆಯೋಣ. ಕಳೆದ ಎರಡು ವರ್ಷದಿಂದ ಇಲ್ಲಿ ಎಂಟು ಜನ ಬಡ ಯಕ್ಷಗಾನ ಕಲಾವಿದರು ಸರ್ಕಾರ, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಯಕ್ಷಗಾನ ಮೇಳದ ಯಜಮಾನರ ಸುತ್ತ ಅಲೆದಲೆದು ಹೈರಾಣಾಗಿ ಹೋಗಿದ್ದಾರೆ. ಇಂದಿಗೂ ಇವರಿಗೆ ನ್ಯಾಯ ಮರೀಚಿಕೆಯಾಗಿದೆ. ವಿಷಯವೇನು ಅಂತಹ ಗಹನವಾದದ್ದಲ್ಲ. ಆದರೆ ಸ್ವಪ್ರತಿಷ್ಠೆಯ ಕಾರಣಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಮೇಳದ ಯಜಮಾನರಾದ ದೇವಿಪ್ರಸಾದ್ ಶೆಟ್ಟಿಯವರು ಕಲಾವಿದರನ್ನು ತುಳಿಯುತ್ತಲೇ ಬಂದಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ಕಟೀಲು ದೇವಿಯ ಹೆಸರು ಹೇಳಿ ಸುಮ್ಮನಾಗಿಸುತ್ತಿದ್ದಾರೆ. ಈ ನೊಂದ ಕಲಾವಿದರ ಪರವಾಗಿ ಯಾವೊಬ್ಬ ನಾಯಕನೂ ಇದುವರೆಗೂ ಧ್ವನಿ ಎತ್ತಿಲ್ಲ. ಇವರ ನೋವಿಗೆ ಧ್ವನಿಯಾಗಿ ಯಾವ ಸುದ್ದಿ ಸಂಸ್ಥೆಗಳೂ  ಸಣ್ಣದೊಂದು ವರದಿಯನ್ನೂ ಮಾಡಿಲ್ಲ. ಅದಕ್ಕೆಲ್ಲ ಭಯವೇ ಕಾರಣ. ಆದರೆ `ಹಾಯ್’ ಈ ಬಗ್ಗೆ ವರದಿ ಮಾಡುತ್ತಿದೆ. ಅಸ್ರಣ್ಣರನ್ನು ಕರಾವಳಿಯಲ್ಲಿ ಪ್ರಶ್ನಿಸುವವರೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಇವರ ಅನ್ಯಾಯದ ಬಗ್ಗೆ ಯಾರೂ ಮಾತನಾಡಲಾಗದ ಪರಿಸ್ಥಿತಿ. ಇದಕ್ಕೆಲ್ಲ ಅಂತ್ಯ ಹಾಡಲೇಬೇಕಿದೆ. ಸತ್ಯ ಹೊರ ಬಂದಷ್ಟೂ ಭಗವತಿ ಸಂಪ್ರೀತಳು.

ಭಾಗವತರ ಬದಲಾವಣೆ

೨೦೧೭ರಲ್ಲಿ ಮೇಳದ ಭಾಗವತರನ್ನು ಬದಲಾವಣೆ ಮಾಡುವ ಯೋಚನೆ ಮಾಡಿತು ಕಟೀಲು ಮೇಳ. ಆಗ ಕಲಾವಿದರಲ್ಲಿ ಒಂದಷ್ಟು ಗೊಂದಲಗಳಾದವು. ಇಷ್ಟು ವರ್ಷ ನಮ್ಮ ಜೊತೆಗಿದ್ದ ಭಾಗವತರನ್ನು ಇನ್ನೊಂದು ಮೇಳಕ್ಕೆ ಹಾಕುವುದು, ನಮ್ಮ ಜೊತೆಗಿನ ಸಂಬಂಧವನ್ನು ದೂರ ಮಾಡಿದಂತೆ, ಅವರು ನಮ್ಮನ್ನು ತಿದ್ದಿ ತೀಡಿದವರು, ಇದು ಸರಿಯಾದ ಕ್ರಮವಲ್ಲ, ಇದರಿಂದ ಮಹತ್ತರವಾದ ಯಾವ ಬದಲಾವಣೆಯೂ ಆಗುವುದಿಲ್ಲ ಎನ್ನುವ ಸಣ್ಣದೊಂದು ಕಾರಣವನ್ನಿಟ್ಟುಕೊಂಡು ಮೇಳದ ಯಜಮಾನರಾದ ಆ ಪರಿಸರದಲ್ಲಿ ಕೊರಗ ಶೆಟ್ಟಿ ಎಂದೇ ಕರೆಯಲ್ಪಡುವ ಕಡಿ ದೇವಿಪ್ರಸಾದ್ ಶೆಟ್ಟರಿಗೆ ಮನವಿಯನ್ನು ಸಲ್ಲಿಸಲಾಯಿತು. ಮುಖ್ಯವಾಗಿ ಮಾಧವ ಬಂಗೇರ, ಮೋಹನ್ ಕುಮಾರ್ ಅಮ್ಮುಂಜೆ, ಉಜಿರೆ ನಾರಾಯಣ, ದಿವಾಣ ಶಿವಶಂಕರ್ ಭಟ್, ರಾಕೇಶ್ ರೈ, ಅಡ್ಕ ಗುರುಪ್ರಸಾದ್ ಬೊಳಂಜಡ್ಕ, ಪ್ರಶಾಂತ್ ಶೆಟ್ಟಿ ಮುಂತಾದ ಹಲವು ಕಲಾವಿದರು ಅದರಲ್ಲಿದ್ದರು. ಆನಂತರ ಯಕ್ಷಧರ್ಮ ಭೋದಿನಿ ಚಾರಿಟಬಲ್ ಟ್ರಸ್ಟಿನ ರಾಘವೇಂದ್ರ ಆಚಾರ್ಯರಿಗೂ ಮನವಿಯನ್ನು ಮಾಡಲಾಯಿತಾದರೂ ಮನವಿ ಸ್ವೀಕರಿಸಿದವರು ಸಹಜ, ಸೌಹಾರ್ದಯುತವಾಗಿ ಮಾತಾಡಿ ಸಮಸ್ಯೆಯನ್ನು ಬಗೆಹರಿಸುವುದು ಬಿಟ್ಟು ಮೇಳದಿಂದಲೇ ತೆಗೆದು ಹಾಕುವ ನಿರ್ಧಾರ ಮಾಡುವುದು ಎಂದು ಬೆದರಿಸಿದರು. ಹಾಗಾಗಿ ನಿಯೋಗದಲ್ಲಿದ್ದ ಒಂದಷ್ಟು ಕಲಾವಿದರು ತಮ್ಮ ಬದುಕಿಗೆ ಅಂಜಿ ಸುಮ್ಮನಾದರು. ದೇವರ ಹೆಸರಲ್ಲಿ ಬೆದರಿಸುವ ಪ್ರಯತ್ನಗಳಾದವು. ಆದರೆ ಪ್ರಮುಖವಾಗಿ ನಿಂತಿದ್ದ ಎಂಟು ಕಲಾವಿದರನ್ನು ಮೇಳದಿಂದಲೇ ಹೊರಗಿಡುವ ನಿರ್ಣಯವನ್ನು ಮಾಡಿತು ಆಡಳಿತ ಮಂಡಳಿ ಎಂಬ ನಾಟಕ ಮಂಡಳಿ. ನಂತರ ಕ್ಷಮೆ ಕೋರಿದರೂ ಈ ಕಲಾವಿದರಿಗೆ ನ್ಯಾಯ ದೊರಕಲಿಲ್ಲ. ಹತ್ತಾರು ಜನರ ಬಳಿ ಹೋಗಿ ಹೇಳಿಸಿದರೂ ಇವರ ಮಾತಿಗೆ ಬೆಲೆ ಕೊಡಲಿಲ್ಲ.

ಅನಧಿಕೃತ ಟ್ರಸ್ಟ್

ಸಂಪೂರ್ಣ ಕಾನೂನ ಬಾಹೀರವಾಗಿ ಯಕ್ಷಧರ್ಮ ಭೋದಿನಿ ಚಾರಿಟಬಲ್ ಟ್ರಸ್ಟ್ ಹುಟ್ಟು ಹಾಕಿ ಅದರ ಮೂಲಕ ಕೋಟ್ಯಂತರ ರುಪಾಯಿ ವ್ಯವಹಾರವನ್ನು ಮಾಡಿಸುತ್ತಿದೆ ಆಡಳಿತ ಮಂಡಳಿ. ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳವನ್ನು ಹೇಗೆ ದೇವಸ್ಥಾನವೇ ನಡೆಸುತ್ತದೋ, ಹಾಗೆಯೇ ಕಟೀಲಿನಲ್ಲಿಯೂ ನಡೆಯಲಿ ಎನ್ನುವುದು ಕೆಲವು ಭಕ್ತರ ಸಲಹೆ. ಇಲ್ಲಿ ಖಾಸಾಗಿ ವ್ಯಕ್ತಿಗಳು ಮೇಳವನ್ನು ನಡೆಸುತ್ತಿದ್ದು ಅದು ಏಲಂ ಮೂಲಕವೇ ನಡೆಯಲಿ ಎನ್ನುವುದು ನ್ಯಾಯಪರವಾದ ಬೇಡಿಕೆ. ವರ್ಷಕ್ಕೆ ಅಂದಾಜು ನಾಲ್ಕು ಕೋಟಿ ರುಪಾಯಿ ವ್ಯವಹಾರ ಆರು ಮೇಳಗಳಿಂದ ನಡೆಯುತ್ತದೆ. ಒಂದು ಯಕ್ಷಗಾನಕ್ಕೆ ಎಪ್ಪತ್ತು ಸಾವಿರ ರುಪಾಯಿ ತನಕವೂ ವೀಳ್ಯ ಸ್ವೀಕರಿಸಲಾಗುತ್ತದೆ. ಯಕ್ಷಧರ್ಮ ಭೋದಿನಿ ಚಾರಿಟಬಲ್ ಟ್ರಸ್ಟ್ ಮೂಲಕ `ಯಕ್ಷಪ್ರಭ’ ಎಂಬ ಪತ್ರಿಕೆಯನ್ನೂ ಅಸ್ರಣ್ಣ ಸಹೋದರರ ಜೊತೆಗೆ ಕಡಿ ದೇವಿಪ್ರಸಾದ್ ಶೆಟ್ಟರು ಹೊರ ತರುತ್ತಿದ್ದಾರೆ. ಪ್ರತೀ ಯಕ್ಷಗಾನ ಸೇವೆಯಲ್ಲಿಯೂ ಟ್ರಸ್ಟಿನ ಹೆಸರಿಗೆ ಹದಿನಾರು ಸಾವಿರ ರುಪಾಯಿ ರಸೀದಿ ನೀಡಿ ಹಣ ಸಂಗ್ರಹ ಮಾಡುತ್ತಾರೆ. ಯಕ್ಷಗಾನದಿಂದಲೇ ಹಲವು ಕೋಟಿ ಆದಾಯವಿದ್ದರೂ ಇವರು ಕಲಾವಿದರಿಗೆ ಕೊಡುವ ಮೊತ್ತವೆಷ್ಟು ಗೊತ್ತಾ? ರಾತ್ರಿಯೆಲ್ಲ ನಿದ್ದೆಗೆಟ್ಟು ಕುಬೇರನಾಗಿಯೋ, ಮಹಾರಾಜನಾಗಿಯೋ, ಶಿವನಾಗಿಯೋ, ವಿಷ್ಣುವಾಗಿಯೋ ಮೆರೆಯುವ, ರಾಜನಾಗಿ ದಿಗ್ವಿಜಯ ಮಾಡುವ ಯಕ್ಷಗಾನ ಕಲಾವಿದರು ರಂಗಸ್ಥಳದ ಹಿಂದಿನ ಚೌಕಿಗೆ ಬಂದು `ಒಂದು ಸಿಂಗಲ್ ಬೀಡಿ ಇದ್ರೆ ಕೊಡು ಮಾರಾಯ’ ಎಂದು ಕೇಳುವ ದೈನೇಸಿ ಪರಿಸ್ಥಿತಿಯಲ್ಲಿದ್ದಾರೆ. ಯಕ್ಷಗಾನ ಕರ್ನಾಟಕದ ಒಂದು ಶ್ರೀಮಂತ ಕಲೆ. ಆದರೆ ಕಟೀಲು ಮೇಳದ ಸಂಬಳವನ್ನೇ ನಂಬಿಕೊಂಡರೆ ಆ ಕಲಾವಿದನಿಗೆ ದೇವರೇ ಗತಿ. ಇಲ್ಲಿ ಕಲಾವಿದನಿಗೆ ಕೊಡುವ ಸಂಬಳ ಮುನ್ನೂರು, ನಾನೂರು ರುಪಾಯಿ. ಅದೇ ಧರ್ಮಸ್ಥಳ ಮೇಳದಲ್ಲಿ ಕಾಲಮಿತಿ ಯಕ್ಷಗಾನ. ಅದು ಕಲಾವಿದರಿಗೂ ಕ್ಷೇಮ. ಸಂಬಳವೂ ಸಾವಿರಕ್ಕೂ ಹೆಚ್ಚು ಇದೆ. ಹನುಮಗಿರಿ ಮೇಳದ ಕಲಾವಿದರಿಗೆ ಒಂದೂವರೆ ಸಾವಿರದ ತನಕ ಸಂಬಳವಿದೆ. ಒಂದು ವೇಳೆ ಮೇಳದ ಕಲಾವಿದ ರಾತ್ರಿ ರಸ್ತೆ ಮೇಲೆ ಬಿದ್ದು ಸತ್ತರೆ ಅವನನ್ನು ನೋಡುವವರಿಲ್ಲ. ಅವನ ಕುಟುಂಬಕ್ಕೆ ಗತಿಯೂ ಯಾರಿಲ್ಲ. ಯಕ್ಷಗಾನ ಕಲಾವಿದನಿಗೆ ಪಿ.ಎಫ್, ಇ.ಎಸ್.ಐ., ಪಿಂಚಣಿ, ಯಾವ ಸೇವಾ ಸುಡುಗಾಡೂ ಇಲ್ಲ. ಆರೋಗ್ಯಕ್ಕೆ ಹಾನಿಯಾದರೆ ಕಂಡವರ ಮುಂದೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ. ಪ್ರಖ್ಯಾತ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಾಧರ ಶೆಟ್ಟಿ ಯಕ್ಷಗಾನದ ರಂಗಸ್ಥಳದಲ್ಲಿ ಅರುಣಾಸುರನಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಕುಸಿದು ಬಿದ್ದು ಮರಣ ಹೊಂದಿರುವ ಕರುಣಾಜನಕ ಕಥೆ ನೀವು ಕೇಳಿರಬಹುದು. ಆ ಬಡ ಕಲಾವಿದ ಗಂಗಾಧರ ಶೆಟ್ಟರ ಕುಟುಂಬಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಹಣವನ್ನು ನೀಡಿ ಶ್ಲಾಘನೆಗೆ ಪಾತ್ರವಾಗಿದ್ದು ಪಟ್ಲ ಸತೀಶ್ ಶೆಟ್ಟರ `ಯಕ್ಷಧ್ರುವ ಪಟ್ಲ ಫೌಂಡೇಶನ್’. ಆದರೆ ಕಟೀಲು ಮೇಳ ಆ ಕಲಾವಿದನ ಹತ್ತು ವರ್ಷದ ಸಂಬಳವನ್ನು ಇಂದಿಗೂ ಕೊಟ್ಟಿಲ್ಲ. ಆ ಕಲಾವಿದನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವವರು ಯಾರು?

ಪಟ್ಲ ಸತೀಶ್ ಶೆಟ್ಟಿ

ಕಟೀಲು ಮೇಳದ ಯಕ್ಷಗಾನಕ್ಕೆ ಉಡುಪಿ ಜಿಲ್ಲೆಯಾದ್ಯಂತ ಹೆಚ್ಚಿನ ಬೇಡಿಕೆ ಬಂದದ್ದು ಪಟ್ಲ ಸಟೀಶ್ ಶೆಟ್ಟರ ಕಾರಣಕ್ಕೆ. ಯಕ್ಷಗಾನ ಕ್ಷೇತ್ರಕ್ಕೆ ಯುವಕರನ್ನು ಸೆಳೆದು ತಂದು ಕಾಳಿಂಗ ನಾವುಡರಂತೆ ಯಕ್ಷಗಾನಕ್ಕೂ ಸ್ಟಾರ್ ವ್ಯಾಲ್ಯೂ ತಂದುಕೊಟ್ಟ ಕಲಾವಿದ ಪಟ್ಲ ಸತೀಶ್ ಶೆಟ್ಟಿ. ತೆಂಕಿನ ಸತೀಶ್ ಶೆಟ್ಟರಿಗೆ ಮತ್ತು ಬಡಗಿನ ಜನ್ಸಾಲೆ ರಾಘವೇಂದ್ರ ಆಚಾರ್ಯರಿಗೆ ಯಕ್ಷರಂಗದಲ್ಲಿ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಇವರಿಬ್ಬರ ದ್ವಂದ್ವ ಭಾಗವತಿಕೆಗೆ ಸಾವಿರಾರು ಜನ ದಂಡುಕಟ್ಟಿ ಬರುತ್ತಾರೆ. ಯಕ್ಷರಂಗದಲ್ಲಿ ಮಿಂಚುತ್ತಿರುವ ಪಟ್ಲ ಸತೀಶ್ ಶೆಟ್ಟರ ಯಕ್ಷಧ್ರುವ ಪಟ್ಲ ಫೌಂಡೇಶನ್ ಈಗಾಗಲೇ ಐದಾರು ಕೋಟಿ ಹಣವನ್ನು ಬಡ ಯಕ್ಷಗಾನ ಕಲಾವಿದರಿಗೆ ಹಂಚಿ ಮಾನವೀಯತೆ ಮೆರೆದಿದೆ. ನೂರು ಜನ ಕಲಾವಿದರಿಗೆ ಮನೆ ನಿರ್ಮಿಸಿಕೊಡುವ ಮಹತ್ತರವಾದ ಯೋಜನೆಗೆ ಪಟ್ಲ ಫೌಂಡೇಶನ್ ಕೈ ಹಚ್ಚಿದೆ. ಈ ಪಟ್ಲ ಸತೀಶ್ ಶೆಟ್ಟರಿಗೂ ದೇವಸ್ಥಾನದ ಅಸ್ರಣ್ಣರ ನಡುವೆಯೂ ಈಗ್ಗೆ ಕೆಲ ವರ್ಷದ ಹಿಂದೆ ಸ್ವಲ್ಪ ಜಟಾಪಟಿ ನಡೆದಿತ್ತು. ಆದರೆ ಮಾತುಕತೆಯ ಮೂಲಕ ಸರಿಪಡಿಸಿಕೊಂಡು ಈಗ ಅವರೆ ಸರಿಯಾಗಿದ್ದಾರೆ. ಇಲ್ಲಿ ಪಟ್ಲ ಸತೀಶ್ ಶೆಟ್ಟರನ್ನು ಯಾಕೆ ಉಲ್ಲೇಖಿಸುತ್ತೇವೆ ಎಂದರೆ ಸತೀಶ್ ಶೆಟ್ಟರಂತಹ ಒಬ್ಬ ಕಲಾವಿದ ತನ್ನ ಜೊತೆಗಿರುವ ಕಲಾವಿದರ ಕಷ್ಟ ಕಂಡು ತನ್ನ ಅಭಿಮಾನಿ ಮತ್ತು ಹಿತೈಷಿಗಳ ಮೂಲಕ ಕೋಟ್ಯಂತರ ಹಣವನ್ನು ಹೊಂಚಿ ತಂದು ಅದನ್ನು ತಾನು ಗಂಟು ಮಾಡಿಕೊಳ್ಳದೆ ಕಲಾವಿದರಿಗೆ ಹಂಚುವ ಉದಾತ್ತ ಮನೋಭಾವವನ್ನು ಜಗತ್ತೇ ಮೆಚ್ಚಿಕೊಂಡಿದೆ. ಪಟ್ಲ ಸತೀಶ್ ಶೆಟ್ಟರು ಭಾಗವತರಾಗಿ ಎಷ್ಟು ಎತ್ತರವನ್ನು ತಲುಪಿದ್ದಾರೋ, ಎಷ್ಟು ಹೃದಯವನ್ನು ಗೆದ್ದಿದ್ದಾರೋ ಅದಕ್ಕೂ ಹೆಚ್ಚು ಓರ್ವ ಮಾನವೀಯ ಅಂತಃಕರಣಿಯಾಗಿ ಎಲ್ಲರನ್ನೂ ತಲುಪಿದ್ದಾರೆ. ತನ್ನದೇ ಮೇಳದ ಓರ್ವ ಕಲಾವಿದ ಇಷ್ಟೊಂದು ಸಾಮಾಜಿಕ ಕಾರ್ಯ ಮಾಡುವುದನ್ನು ನೋಡಿಯೂ ತಾನು ಕನಿಷ್ಟ ಪಕ್ಷ ತನ್ನ ಮೇಳದ ಕಲಾವಿದರ ಯೋಗಕ್ಷೇಮವನ್ನಾದರೂ ನೋಡಿಕೊಳ್ಳಬೇಕು ಎನ್ನುವ ಔದಾರ್ಯ ಈ ಹರಿನಾರಾಯಣ ದಾಸ ಅಸ್ರಣ್ಣರಿಗೆ ಮತ್ತು ದೇವಿಪ್ರಸಾದ ಶೆಟ್ಟರಿಗೆ ಇಲ್ಲವಾಯಿತ ಎನ್ನುವುದೇ ವಿಷಾದ.

ಏಲಂ ಮಾಡಿ ಎಂದ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಈ ಹಿಂದೆಯೇ ಏಲಂ ಮಾಡುವಂತೆ ಆದೇಶ ಮಾಡಿದ್ದರು. ಅಷ್ಟರಲ್ಲಿ ಮೇಳದ ತಿರುಗಾಟ ಪ್ರಾರಂಭವಾಗುವ ಕಾಲ ಸನ್ನಿಹಿತವಾದ ಕಾರಣಕ್ಕೆ ಬರುವ ವರ್ಷ ಅದನ್ನು ಖಂಡಿತ ಏಲಂ ಮಾಡುವಂತೆ ಮಾಡುತ್ತೇನೆ ಎನ್ನುವ ಭರವಸೆಯನ್ನೂ ಹೋರಾಟಗಾರರಿಗೆ ನೀಡಿದ್ದರು. ಇದೀಗ ಜಿಲ್ಲಾಧಿಕಾರಿಯೂ ರಾಜೀನಾಮೆ ನೀಡಿ ಎದ್ದು ಹೊರಟಿದ್ದಾರೆ. ಇನ್ನು ಈ ವರ್ಷದ ಮೇಳದ ತಿರುಗಾಟಕ್ಕೆ ಕಾಯಬೇಕು. ಧಾರ್ಮಿಕ ಇಲಾಖೆಯ ಕಾರ್ಯದರ್ಶಿ ಶೈಲಜಾರಿಗೆ ಕೇಳಿದರೆ ನಮಗೆ ಮಂತ್ರಿಗಳಿಂದ ಆದೇಶ ಬರಬೇಕು ಎನ್ನುತ್ತಿದ್ದಾರೆ.

ಮಂತ್ರಿಗಳು ಏನಂತಾರೆ?

ಮೇಳದಿಂದ ಹೊರಬಿದ್ದ ಕಲಾವಿದರಲ್ಲಿ ಬಿಲ್ಲವ ಕಲಾವಿದರೂ ಇದ್ದರು, ದಲಿತರೂ ಇದ್ದರು. ಹಾಗಾಗಿ ಬಿರುವೆರ್ ಕುಡ್ಲ, ದಲಿತ ಸಂಘರ್ಷ ಸಮಿತಿ ಈ ಕಲಾವಿದರ ಪರ ನಿಂತಿತು. ಇದೀಗ ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿಯವರಾಗಿದ್ದಾರೆ. ಹಿಂದೆ ಮಂದಾರ್ತಿ ಮೇಳದಲ್ಲಿ ಬಿಲ್ಲವ ಕಲಾವಿದರಿಗೆ ಅವಕಾಶವಿಲ್ಲ ಎಂದಾಗ ದೊಡ್ಡ ಮಟ್ಟದಲ್ಲಿ ಹೋರಾಟ ಸಂಘಟಿಸಿದ ಶ್ರೀನಿವಾಸ ಪೂಜಾರಿ ಹೋರಾಟದ ಮೂಲಕ ಜಯಗಳಿಸಿ ಬಿಲ್ಲವ ಕಲಾವಿದರಿಗೆ ಅವಕಾಶ ಸಿಗುವಂತೆ ಮಾಡಿದವರಲ್ಲಿ ಮುಂಚೂಣಿಯಲ್ಲಿ ನಿಂತವರು. ಅದೇ ಶ್ರೀನಿವಾಸ ಪೂಜಾರಿಯವರು ಇದೀಗ ಸಂಬಂಧಪಟ್ಟ ಮಂತ್ರಿಯಾಗಿರುವುದರಿಂದ ಬಡ ಕಲಾವಿದರು ತಮ್ಮ ಅಳಲನ್ನು ಪೂಜಾರಿಯವರಲ್ಲಿ ಹೇಳಿಕೊಂಡಿದ್ದು, ಪೂಜಾರಿಯವರೂ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಮನಸು ಮಾಡಿದರೆ ಪೂಜಾರಿಯವರಿಗೆ ಇದು ಕೇವಲ ಐದು ನಿಮಿಷದ ಕೆಲಸ. ಆದರೆ ಯಾಕೆ ನ್ಯಾಯ ಕೊಡಿಸಲಿಲ್ಲ? ಎನ್ನುವುದೇ ಪ್ರಶ್ನೆ. ಇನ್ನು ಮುಂದಾದರೂ ಕಟೀಲು ಮೇಳದಿಂದ ಅನ್ಯಾಯಕ್ಕೊಳಗಾದ ಈ ಕಲಾವಿದರಿಗೆ ನ್ಯಾಯ ದೊರಕುತ್ತದಾ? ಕಾದು ನೋಡಬೇಕಿದೆ.ಕಾನೂನು ಪ್ರಕಾರ ಮೇಳವನ್ನು ಏಲಂ ಮಾಡಲೇಬೇಕು. ಕಾನೂನು ಬಾಹೀರವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಧರ್ಮ ಭೋದಿನಿ ಟ್ರಸ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ವಾರ್ಷಿಕ ಇಪ್ಪತ್ತು ಕೋಟಿಗೂ ಹೆಚ್ಚು ಆದಾಯವಿರುವ ದೇವಸ್ಥಾನಕ್ಕೆ ಓರ್ವ ಸರ್ಕಾರಿ ನಿಯೋಜಿತ ಕಾರ್ಯನಿರ್ವಹಣಾಧಿಕಾರಿಯೂ ಇಲ್ಲ ಎನ್ನುವುದು ನಿಜಕ್ಕೂ ಸರ್ಕಾರಕ್ಕೇ ನಾಚಿಕೆಗೇಡು ಸಂಗತಿ. ಈ ಕುರಿತು ಮುಜರಾಯಿ ಮಂತ್ರಿಗಳು ಗಮನಹರಿಸಲಿ ಎನ್ನುವುದಷ್ಟೇ `ಪತ್ರಿಕೆ’ಯ ಆಶಯ

-ವಸಂತ್ ಗಿಳಿಯಾರ್

 

Leave a Reply

Your email address will not be published.

*