ಕತೆಯೊಳಗೆ ಲೇಖಕ ಸರ್ವಾಂತರ್ಯಾಮಿಯಾಗಿಬಿಡುತ್ತಾನೆ

in ಜಾನಕಿ ಕಾಲಂ
  • ನಕಿ ಕಾಲಂ

ಕತೆಯೊಳಗೆ ಲೇಖಕ ಸರ್ವಾಂತರ್ಯಾಮಿಯಾಗಿಬಿಡುತ್ತಾನೆ

ಕಾದಂಬರಿಯನ್ನೋ ಕತೆಯನ್ನೋ ಓದಿದವರು, ಆ ಕತೆಯಲ್ಲಿ ಬರುವ ನಾಯಕ ನೀವೇನೋ ಎಂದು ಕೇಳುತ್ತಿರುತ್ತಾರೆ. ಹಾಗೆ ಕೇಳಿದಾಗ ಹೌದು ಅಂದರೂ ಕಷ್ಟ, ಅಲ್ಲ ಎಂದರೂ ನಷ್ಟ ಎಂಬುದು ಗೊತ್ತಿದ್ದೂ ಒಂದಲ್ಲ ಒಂದು ಉತ್ತರವನ್ನು ಕೊಡಲೇಬೇಕಾಗುತ್ತದೆ. ಕಥಾನಾಯಕ ನಾನಲ್ಲ ಅಂದಾಗ, ಹಾಗಿದ್ದರೆ ನೀವು ಬರೆಯುವುದೆಲ್ಲ ಬರೀ ಕಲ್ಪನೆಯೋ ಎಂದು ಪ್ರಶ್ನೆ ಮಾಡುತ್ತಾರೆ. ಕಾಲ್ಪನಿಕ ಕತೆಯಲ್ಲಿ ನಮ್ಮ ಕಡೆಯ ಮಂದಿಗೆ ಅಂಥ ಆಸಕ್ತಿಯೇನೂ ಇದ್ದಂತಿಲ್ಲ. ಮಹಾಭಾರತದಲ್ಲಿ ಬರುವ ಜರಾಸಂಧ, ಭೀಮ, ಹಿಡಿಂಬಿ ಮುಂತಾದ ಪಾತ್ರಗಳ ಕುರಿತು ಗಂಟೆಗಟ್ಟಲೆ ಮಾತಾಡಬಲ್ಲ, ಅವರನ್ನು ಆವಾಹಿಸಿಕೊಂಡು ರಾತ್ರಿಯಿಡೀ ತಾಳಮದ್ದಲೆ ಮಾಡಬಲ್ಲವರು ಕೂಡ ಇತ್ತೀಚಿನ ಕತೆ ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುವ ಚಿದಂಬರನೋ, ಶೇಖರನೋ, ಕೇಶವನೋ ಕಾಲ್ಪನಿಕ ಪಾತ್ರ ಎಂದೇ ಭಾವಿಸುವುದು ತಮಾಷೆಯಾಗಿದೆ. ಯಾವಾಗ ಜೀವಿಸಿದ್ದ ಎಂದು ಸ್ಪಷ್ಟವಾಗಿ ಗೊತ್ತಿಲ್ಲದ ಜೀಮೂತವಾಹನ ಜೀವಂತ ವ್ಯಕ್ತಿಯಾಗಿ, ಮೊನ್ನೆ ಮೊನ್ನೆ ಬದುಕಿದ್ದ ಕರಿಯ ಅಸ್ತಿತ್ವದ್ಲೇ ಇಲ್ಲದ ಪಾತ್ರವಾಗಿಬಿಡುವುದು ಹೇಗೆಂಬುದು ನನಗಂತೂ ಅರ್ಥವಾಗಿಲ್ಲ. ಇದರಿಂದ ಪಾರಾಗುವುದಕ್ಕೆ ಉಪಾಯ ಏನೆಂದು ನನಗೂ ಗೊತ್ತಿಲ್ಲ. ಕತೆಯಲ್ಲಿ ಬರುವ ನಾನೇ ಬೇರೆ, ನಿಮ್ಮೆದುರು ಕೂತಿರುವ ನಾನೇ ಬೇರೆ. ಕತೆಯೊಳಗೆ ಬರುವ ನಾನು ಎಂಬ ಪಾತ್ರಕ್ಕಿರುವ ಸ್ವಾತಂತ್ರ್ಯ ಮತ್ತು ಅನುಭವ ನನಗಿರುವುದಕ್ಕೆ ಸಾಧ್ಯವಿಲ್ಲ. ನಾನು ಹೋಗದ ಊರಿಗೆಲ್ಲ ಆ ನಾನು ಹೋಗಬಲ್ಲ. ನಾನು ಮಾಡ್ದೆಲ್ಲವನ್ನೂ ಆತ ಮಾಡಬಲ್ಲ. ಅದೊಂದು ಥರದಲ್ಲಿ ವರ್ಚುವಲ್ ಸ್ಥಿತಿ ಇದ್ದ ಹಾಗೆ. ಕತೆಯೊಳಗೆ ಲೇಖಕ ಸರ್ವಾಂತರ್ಯಾಮಿಯೂ ಸಾರ್ವಕಾಲಿಕನೂ ಹುಟ್ಟು ಸಾವುಗಳನ್ನು ಮೀರಿದವನೂ ಜಾತಿ ಧರ್ಮಗಳ ಹಂಗಿಲ್ಲದವನೂ ಆಗುತ್ತಾನೆ. ಅವನು ನಿಮ್ಮ ಎದುರಿದ್ದರೂ ನಿಮ್ಮವನಾಗಿರುವುದಿಲ್ಲ. ಲೇಖಕ ನಿಮ್ಮ ಚಿಕ್ಕಪ್ಪನಾಗಿದ್ದರೂ, ನಿರೂಪಕ ನಿಮ್ಮ ಚಿಕ್ಕಪ್ಪ ಅಲ್ಲ ಎಂದು ನಾನು ಯಾವ ಥರದಲ್ಲಿ ಹೇಳಿದರೂ ಅದನ್ನು ಅವರು ಅರ್ಥಮಾಡಿಕೊಳ್ಳಲು ತುಸು ಹಿಂಜರಿಯುತ್ತಾರೆ. ಬೇರೆ ಮಾಧ್ಯಮಗಳಲ್ಲಿ ಇಂಥ ಅಪಾಯಗಳು ಆಗುವುದಿಲ್ಲ. ಚೋಮನ ಪಾತ್ರ ಮಾಡಿದವನನ್ನು ಯಾರೂ ಚೋಮ ಎಂದು ಭಾವಿಸುವುದಿಲ್ಲ. ನಾಗಪ್ಪನ ಪಾತ್ರ ಮಾಡಿದವನ ಹತ್ತಿರ ನೀನು ನಾಗಪ್ಪನಾ ಅಂತ ಕೇಳುವುದಿಲ್ಲ. ಸ್ವತಃ ನಿರ್ದೇಶಕನೇ ಕತೆ ಬರೆದು, ಚಿತ್ರಕತೆ ಬರೆದು ಸಿನಿಮಾ ಮಾಡಿದರೂ ಆ ಪಾತ್ರ ಮತ್ತು ಕತೆಗಾರ ಒಂದೇ ಎಂದು ಯಾರೂ ಭಾವಿಸಲಿಕ್ಕೆ ಹೋಗುವುದಿಲ್ಲ. ಹಾಗಾಗಿ ಆಟೋಬಯಾಗ್ರಫಿಕಲ್ ಆಗುವ ಅಪಾಯ ಬೇರೆ ಮಾಧ್ಯಮಗಳಿಗೆ ತೀರಾ ಕಡಿಮೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದು ಸುಶ್ರಾವ್ಯವಾಗಿ ಹಾಡುವ ಗಾಯಕಿಯ ಬಳಿ, ಅದು ನಿಮ್ಮ ಅಭಿಪ್ರಾಯವೂ ಹೌದಾ, ನಿಮ್ಮ ಮನೋಲಹರಿಯೂ ಆಗಿದೆಯಾ ಎಂದು ಕೇಳುವುದಕ್ಕೆ ಬರುವುದಿಲ್ಲ. ಹೀಗಾಗಿ, ಬರಹ ಒಂದನ್ನು ಬಿಟ್ಟು ಬೇರೆಲ್ಲ ಪ್ರಕಾರಗಳಲ್ಲಿ ಕಲೆ ಮತ್ತು ಕಲಾವಿದನ ನಡುವೆ ಒಂದು ಕಂಫರ್ಟಬಲ್ ಆದ ಅಂತರ ಇರುತ್ತದೆ. ಕಾವ್ಯ, ಕತೆ, ಕಾದಂಬರಿ ಮುಂತಾದ ಬರವಣಿಗೆಗೆ ಸಂಬಂಧಿಸಿದ ಸಂಗತಿಗಳಲ್ಲಿ ಮಾತ್ರ ಹಾಗಾಗುವುದೇ ಇಲ್ಲ. ಲೇಖಕ ಏನೇ ಬರೆದರೂ ಅದು ಆತನ ಬದುಕಿನ ಕುರಿತಾದದ್ದೇ ಎಂದು ನಂಬುವ ಸಾಧ್ಯತೆಯೇ ಹೆಚ್ಚು. ಹೀಗಾಗಿಯೇ ಆತ ಸೃಷ್ಟಿಸುವ ಪಾತ್ರಗಳ ಕುರಿತೂ ಅಂಥದ್ದೇ ಆದ ನಂಬಿಕೆಗಳಿರುತ್ತವೆ. ಒಂದು ಪಾತ್ರವನ್ನು ಆತನೇ ಕರುಣಾಜನಕವೋ, ಕ್ರೂರವೋ, ಅಸಹಾಯಕವೋ, ಅನಾಥವೋ ಆಗುವಂತೆ ಮಾಡುತ್ತಾನೆ ಎಂಬ ಸಾತ್ವಿಕ ಸಿಟ್ಟು ಬಹುತೇಕ ಓದುಗರಲ್ಲಿ ಇರುತ್ತದೆ. ಹಿಂದೆಲ್ಲ, ಪತ್ರಿಕೆಗಳಲ್ಲಿ ಧಾರಾವಾಹಿಗಳು ಪ್ರಕಟ ಆಗುತ್ತಿದ್ದಾಗ ಲೇಖಕರು ಆ ಪಾತ್ರಕ್ಕೆ ಹೀಗೆ ಅನ್ಯಾಯ ಮಾಡಬಾರದಾಗಿತ್ತು. ಆತನಿಗೆ ಮದುವೆ ಮಾಡಿಸಿದರೆ ಅವರ ಗಂಟೇನು ಹೋಗುತ್ತಿತ್ತು. ಅವಳ ಗಂಡನ ಪಾತ್ರವನ್ನು ಇನ್ನಷ್ಟು ಕರುಣೆ ಇರುವಂತೆ ತೋರಿಸಿದರೆ ಚೆನ್ನಾಗಿತ್ತು. ಕೊನೆಯಲ್ಲಿ ಅವನಿಗೂ ಅವಳಿಗೂ ಮದುವೆ ಮಾಡಿಸಬೇಕಾಗಿತ್ತು ಎಂದು ರೋಷದಿಂದ ಆವೇಶದಿಂದ ಪತ್ರ ಬರೆಯುತ್ತಿದ್ದುದೂ ಉಂಟು.

ಇಂಥ ಅಸಂಖ್ಯಾತ ವಾದಗಳನ್ನೂ ಪ್ರತಿವಾದಗಳನ್ನೂ ಕೇಳಿದ ನಂತರ ಮಹಾಭಾರತದ ಓದುತ್ತಾ ಕೂತಿದ್ದಾಗ ವೇದವ್ಯಾಸರು ನೆನಪಾದರು. ಮಹಾಭಾರತದ ಕತೆಯಲ್ಲಿ ವೇದವ್ಯಾಸರು ಕತೆಗಾರರೂ ಹೌದು, ಒಂದು ಪಾತ್ರವೂ ಹೌದು. ಸತ್ಯವತಿ -ಪರಾಶರರ ಮಗನಾದ ವೇದವ್ಯಾಸ ಮುಂದೆ ನಿಯೋಗ ಪದ್ಧತಿಯಲ್ಲಿ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಧೃತರಾಷ್ಟ್ರ ಮತ್ತು ಪಾಂಡು ಜನಿಸುವುದಕ್ಕೆ ಕಾರಣರಾಗುತ್ತಾರೆ. ಹಾಗೆ ನೋಡಿದರೆ ಕೌರವರೂ ಪಾಂಡವರೂ ವ್ಯಾಸರ ಮೊಮ್ಮಕ್ಕಳೇ ಅಲ್ಲವೇ? ತನ್ನ ಮೊಮ್ಮಕ್ಕಳ ಪೈಕಿ ಕೌರವರನ್ನು ಕೆಟ್ಟವರನ್ನಾಗಿಯೂ ಪಾಂಡವರನ್ನು ಒಳ್ಳೆಯವರನ್ನಾಗಿಯೂ ಚಿತ್ರಿಸಬೇಕಾಗಿ ಬಂದ ಪರಿಸ್ಥಿತಿಯನ್ನು ವ್ಯಾಸರು ಹೇಗೆ ಸ್ವೀಕರಿಸಿರಬಹುದು. ತನ್ನೆದುರಿಗಿರುವ ಇಬ್ಬರು ಮಕ್ಕಳನ್ನು ಹೇಗೆ ಕತೆಯೊಳಗೆ ಬೆಳೆಸಬೇಕು ಎಂದು ಅವರಿಗೆ ಮೊದಲೇ ಹೊಳೆದಿತ್ತೇ? ಆ ಮಕ್ಕಳಿಗೆ ಹುಟ್ಟುವ ಮಕ್ಕಳಿಗೆ ಇಂಥದ್ದೇ ಪಾತ್ರ ಕೊಡಬೇಕು ಅಂತ ಅವರು ಮೊದಲೇ ನಿರ್ಧರಿಸಿದ್ದರೆ? ಅವರು ಕೊಂಚ ಸ್ವಾರ್ಥಿಯಾಗಿದ್ದರೆ, ತನ್ನ ಮೊಮ್ಮಕ್ಕಳೆಲ್ಲರೂ ಒಳ್ಳೆಯವರೇ, ತನ್ನದು ತುಂಬ ಒಳ್ಳೆಯ ವಂಶ ಎಂದು ತೋರಿಸಬಹುದಾಗಿತ್ತಾ? ಆ ಸ್ವಾತಂತ್ರ್ಯ ಅವರಿಗೆ ಇತ್ತಾ? ನಿಜಕ್ಕೂ ಲೇಖಕನಿಗೆ ಅಂಥ ಮುಕ್ತತೆ ಇರುವುದಕ್ಕೆ ಸಾಧ್ಯವಾ? ಅಥವಾ ವೇದವ್ಯಾಸರು ಕತೆಯೊಳಗೆ ಹೋದದ್ದು ಕತೆಯ ಪ್ರಥಮಪುರುಷ ನಿರೂಪಕನಾಗಿಯೋ, ಒಂದು ಪಾತ್ರವಾಗಿಯೋ, ಕತೆಗಾರನಾಗಿಯೋ? ಕತೆಗಾರನೇ ಕತೆಯೊಳಗೆ ಸೇರಿಕೊಂಡರೆ ಆತ ಇಡೀ ಪರಿಸ್ಥಿತಿಯನ್ನು ಬೇರೆ ಥರ ಹೆಣೆಯಬಲ್ಲನೇ? ಆ ಶಕ್ತಿ ಅವನಿಗೆ ಇದೆಯಾ? ಆತ ಕಂಡದ್ದನ್ನು ಕಂಡ ಹಾಗೆ ಮಾತ್ರ ಬರೆಯಲು ಸಾಧ್ಯವಾ, ಬರೆದದ್ದು ಆತ ಕಂಡ ಸತ್ಯವಾಗಿರುತ್ತದಾ? ಹೀಗೆ ಮಹಾಭಾರತದ ಒಳಗೆ ಸೇರಿಕೊಂಡ ವ್ಯಾಸರ ಪಾತ್ರ, ಅವರ ದುಗುಡ, ಪಶ್ಚಾತ್ತಾಪ, ಸಂಕಟ ಮತ್ತು ಅಸಹಾಯಕತೆಯನ್ನು ಹೇಳುತ್ತಾ ಹೋಯಿತು. ಕತೆಗಾರ ಪಡುವ ಪಾಡು ಅರ್ಥವಾಯಿತು.

ಯೋಗರಾಜ ಭಟ್ಟರ ಸಿನಿಮಾ ‘ವಾಸ್ತುಪ್ರಕಾರ’ದಲ್ಲಿ ಒಂದು ಸನ್ನಿವೇಶವಿದೆ. ಅಲ್ಲಿ ಬರುವ ವಂದನಾ ಎಂಬ ಪಾತ್ರಕ್ಕೆ ದಿನವೂ ರಾತ್ರಿ ಒಂದು ಕನಸು ಬೀಳುತ್ತಿರುತ್ತದೆ. ಆ ಕನಸಲ್ಲಿ ಆಕೆಯ ಗಂಡ ಮತ್ತೊಂದು ಹೆಣ್ಣನ್ನು ತಬ್ಬಿಕೊಂಡು ಸಂತೈಸುತ್ತಿರುತ್ತಾನೆ. ಈಕೆ ಅದನ್ನು ನೋಡಿ ಸಿಟ್ಟಿನಿಂದ ಗಂಡನನ್ನು ಸಮೀಪಿಸುತ್ತಾಳೆ. ಗಂಡ ಆಕೆಯನ್ನು ರೋಷದಿಂದ ತಳ್ಳುತ್ತಾನೆ. ಆಕೆ ಪಾತಾಳಕ್ಕೆ ಬೀಳುತ್ತಾಳೆ. ಈ ಕನಸನ್ನು ನಂಬಿಕೊಂಡು ಅವಳು ಗಂಡನನ್ನು ದ್ವೇಷಿಸಲು ಆರಂಭಿಸುತ್ತಾಳೆ. ಗಂಡನ ಮುಖ ನೋಡಿದಾಕ್ಷಣ ಆಕೆಗೆ ಆತನನ್ನು ತಬ್ಬಿಕೊಂಡಿದ್ದ ಆ ಹೆಣ್ಣೇ ನೆನಪಾಗುತ್ತಾಳೆ. ಅವಳು ನೆನಪಾದ ತಕ್ಷಣ ಗಂಡನ ಮೇಲಿನ ಸಿಟ್ಟು ಹೆಚ್ಚಾಗುತ್ತದೆ. ಆಕೆ ನಿಜವಾಗಿಯೂ ತನ್ನ ಗಂಡ ಯಾರನ್ನೋ ತನಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾನೆ ಎಂದು ನಂಬಲು ಆರಂಭಿಸುತ್ತಾಳೆ. ಕ್ರಮೇಣ ಅವಳು ಅವನಿಂದ ದೂರ ಸರಿಯುತ್ತಾ ಹೋಗುತ್ತಾಳೆ. ಇಬ್ಬರೂ ಬೇರಾಗಲು ನಿರ್ಧರಿಸುತ್ತಾರೆ. ಹೀಗೆ ತಾನೇ ಒಂದು ದುಃಸ್ವಪ್ನವನ್ನು ಕಂಡು, ಅದನ್ನೇ ನಿಜವೆಂದು ನಂಬಿ, ದ್ವೇಷ ಬೆಳೆಸಿಕೊಳ್ಳುವುದನ್ನು ನಾವು ಕೂಡ ಮಾಡುತ್ತಿದ್ದೇವಾ ಎಂಬ ಅನುಮಾನ ಮೂಡುವಂಥ ಅನೇಕ ಘಟನೆಗಳು ಇತ್ತೀಚೆಗೆ ನಡೆದವು. ಇಂಥ ಸ್ವಪ್ನದೋಷಕ್ಕೆ ಇದೇ ಕಾರಣ ಅಂತ ಹೇಳುವಂತಿಲ್ಲ. ನಮ್ಮ ಎದುರಿಗಿರುವವರು ಯಾವ ತಪ್ಪನ್ನೂ ಮಾಡದೇ ಇದ್ದರೂ, ಆತ ತಪ್ಪು ಮಾಡಿದಂತೆ ನಮಗೆ ಕನಸೊಂದು ಬಿದ್ದರೆ ಸಾಕು, ಆತನನ್ನು ನಾವು ದ್ವೇಷಿಸಬಹುದು. ವಿರೋಧಿಯಂತೆ ನೋಡಬಹುದು, ಟೀಕಿಸಬಹುದು, ದೂರ ಇಡಬಹುದು, ಬೇಕಾದ್ದು ಮಾತಾಡಬಹುದು. ಅದನ್ನು ನಿಜವೆಂದು ಬಿಂಬಿಸಲಿಕ್ಕೆ ಬೇಕಾದಷ್ಟು ಮಾಧ್ಯಮಗಳು ನಮ್ಮ ಮುಂದಿವೆ. ಅಲ್ಲಿ ಆ ಕುರಿತು ಚರ್ಚೆ, ಸಂವಾದಗಳ ಹೆಸರಿನಲ್ಲಿ ಜಗಳಗಳು ನಡೆಯುತ್ತವೆ. ಕೊನೆಗೆ, ಇನ್ನೊಬ್ಬ ತಪ್ಪು ಮಾಡಿರುವುದು ಒಬ್ಬನ ಕನಸಿನಲ್ಲಿ ಅನ್ನೋದು ಮರೆತೇ ಹೋಗಿ, ಆ ಇನ್ನೊಬ್ಬ ಅಪರಾಧಿ ಸ್ಥಾನದಲ್ಲಿ ನಿಂತೇ ಬಿಡುತ್ತಾನೆ. ಅವನಿಗೆ ಸಮರ್ಥಿಸಿಕೊಳ್ಳಲು ಜಾಗವೇ ಇರುವುದಿಲ್ಲ. ಹಾಗೊಂದು ವೇಳೆ ಆತ ಸಮರ್ಥಿಸಿಕೊಳ್ಳಬೇಕಿದ್ದರೆ ಈತನ ಕನಸಿನೊಳಗೆ ಪ್ರವೇಶ ಪಡೆಯಬೇಕು. ಇಂಥ ತಮಾಷೆಗೆ ಕೊನೆಯಿಲ್ಲ. ನಿರುದ್ಯೋಗ, ನಿವೃತ್ತ ಜೀವನ ಮತ್ತು ಅರೆಮಂಪರು ಮನುಷ್ಯನನ್ನು ಏನು ಬೇಕಾದರೂ ಮಾತಾಡುವಂತೆ ಮಾಡಬಲ್ಲವು. ಭಗವದ್ಗೀತೆಯನ್ನು ಸುಟ್ಟು ಹಾಕಬೇಕು ಅನ್ನುವುದು ಅಂಥದ್ದೇ ಒಂದು ಹೇಳಿಕೆ. ಅದರ ಅರ್ಥ ಸುಡಬೇಕು ಅನ್ನುವುದಲ್ಲ. ಅದು ಕೇವಲ ಹಾಗೆ ಹೇಳಿದ ವ್ಯಕ್ತಿಯ ರೋಷವನ್ನು ಸೂಚಿಸುತ್ತದೆ ಅಂತಲೂ, ಸುಡಬೇಕಾದದ್ದು ಭಗವದ್ಗೀತೆಯಲ್ಲಿ ಹೇಳಲಾದ ಧೋರಣೆಯನ್ನು ಹೊಂದುವ ಮನೋಭಾವವನ್ನು ಎಂದು ತಿದ್ದುಪಡಿ ಮಾಡಿಕೊಂಡರೂ, ಸುಡುವ ಸಂಗತಿ ಮಾತ್ರ ಧಗಧಗಿಸುತ್ತಲೇ ಇರುತ್ತದೆ. ನಮ್ಮ ಮನಸ್ಸನ್ನೇ ನಾವು ಸುಡುಗಾಡು ಮಾಡಿಕೊಂಡು ಎಷ್ಟೊಂದು ಶವಸಂಸ್ಕಾರಗಳನ್ನು ಆ ಮನೋಮಸಣದಲ್ಲಿ ಮಾಡುತ್ತಾ ಹೋಗುತ್ತೇವೆ ಎಂದರೆ ಕ್ರಮೇಣ ಮನವೇ ಒಂದು ಸ್ಮಶಾನದಂತೆ ಕಾಣತೊಡಗುತ್ತದೆ. ಇದಾದ ಮೇಲೆ ಇದೇ ನಾಸ್ತಿಕ ಮಹಾಶಯರು ಮತ್ತೊಂದು ವಾದಕ್ಕಿಳಿದರು. ಶ್ರೀರಾಮ ಮದ್ಯ ಸೇವನೆ ಮಾಡುತ್ತಿದ್ದ ಮತ್ತು ಅಂಥ ಅನೇಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ಎಂದು ವಾದಿಸಿದರು. ಅದು ಕೂಡ ಅವರ ಸ್ವಪ್ನಸ್ಖಲನವೇ ಇರಬಹುದು. ಈ ಬಾರಿ ಅವರ ಸ್ವಪ್ನದೋಷಕ್ಕೆ ಗುರಿಯಾದದ್ದು ವಾಲ್ಮೀಕಿಯ ಶ್ರೀರಾಮ. ಒಂದು ಪಾತ್ರವನ್ನು ಕೂಡ ತಿದ್ದಬಹುದೆಂದು ತೋರಿಸಿಕೊಡುವುದು ಅತಿ ದೊಡ್ಡ ಸಾಧನೆ.

       (ಮುಂದುವರಿಯುವುದು)

Leave a Reply

Your email address will not be published.

*

Latest from ಜಾನಕಿ ಕಾಲಂ

Placeholder

ಹುಲಿ ಬಂತು ಹುಲಿ!

ಜಾನಕಿ ಕಾಲಂ – ಎಂದೋ ಕೇಳಿದ ಒಂದು ಕತೆಯನು-2      ನೀವು ಎಂದಾದರೂ ಮಡಿಕೇರಿಯಿಂದ

ಆಕಾಶದ ಪಿಸುಮಾತು

ಜಾನಕಿ ಕಾಲಂ: ಕತೆ ಅಂದ್ರೇನು? ಹಾಗಂತ ಕೇಳಿದವರಿಗೆ ಉತ್ತರಿಸುವುದು ಕಷ್ಟ. ನಡೆದದ್ದನ್ನು ಹೇಳುವುದು ಅನ್ನಬಹುದಾ? ಅದು
Go to Top