ಕನ್ನಡದ ಕಟ್ಟಾಳು ಪಾಪು ಬದುಕಿದ್ದು ಮತ್ತು ತೆರಳಿದ್ದು

in ಇದು ಪ್ರತಿವಾರದ ಅಚ್ಚರಿ/ಹಲೋ ಎಡಿಟೋರಿಯಲ್

ಇದು ನಿರೀಕ್ಷಿಸಿದ ಸಂಗತಿಯೇ. ಈಗ ಕೆಲವು ದಿನಗಳ ಹಿಂದೆಯೇ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಖಾಯಂ ಅಧ್ಯಕ್ಷರಂತಿದ್ದ ಪಾಟೀಲ ಪುಟ್ಟಪ್ಪನವರು ‘ಹೋದರಂತೆ, ಹೋದರಂತೆ, ಹೋದರಂತೆ’ ಎಂದು ಅವಸರವಸರಿಸಿ ಹುಬ್ಬಳ್ಳಿಗೆ ಓಡಿದ ಸಂಘದ ಸದಸ್ಯರು ಹುಬ್ಬಳ್ಳಿಯಿಂದ ಖಿನ್ನ ವದನರಾಗಿ ‘ಇನ್ನೂ ಹೋಗಿಲ್ರೀ, ಹೋಗಿಲ್ಲ ಪಾಪ!’ ಎನ್ನುತ್ತಾ ಹಿಂತಿರುಗಿದ ಘಟನೆ ನಡೆದಿತ್ತು. ನೂರಾ ಒಂದು ವರ್ಷ ಪೂರೈಸಿದ ಆ ಹಿರಿಯ ಜೀವ ಕೊನೆಗೂ ಕಣ್ಮುಚ್ಚಿದೆ. ನಮ್ಮ ನಾಡಿನ ಎಲ್ಲ ಪತ್ರಿಕೆಗಳು ಪಾಪು ನಿಧನದ ಬಗ್ಗೆ ಸುದ್ದಿ ಬರೆದಿದೆ. ಅವರನ್ನು ಪತ್ರಿಕೋದ್ಯಮದ ‘ಭೀಷ್ಮ’ ಎಂದಿವೆ, ‘ನಾಡೋಜ’ ಎಂದಿವೆ, ‘ಕನ್ನಡದ ಕಟ್ಟಾಳು’ ಎಂದಿವೆ. ಎಲ್ಲವೂ ಸತ್ಯವೇ. ಪುಟ್ಟಪ್ಪನವರಿಂದ ಅವರ ವಿಶ್ವವನ್ನೂ ಮತ್ತು ವಾಣಿಯನ್ನೂ ಖರೀದಿಸಿದ ವಿಶ್ವಾಸಿಗ ಸಂಪಾದಕರಂತೂ ಪುಟಗಟ್ಟಲೆ ಪಾಪು ನಿಧನವನ್ನು ನೆನೆನೆನೆದು ಕಣ್ಣೀರು ಸುರಿಸಿದ್ದಾರೆ. ಗತಿಸಿ ಹೋದ ಜೀವದ ಬಗ್ಗೆ ಅಡ್ಡ ಮಾತು ಆಡಬಾರದೆಂಬುದು ನಿಜ. ಆದರೆ ತೀರ ನೂರಾ ಒಂದು ವರ್ಷ ಬದುಕಿ ಹಣ್ಣು ಹೈರಾಣಾಗಿದ್ದ ಅವರನ್ನು ‘ಮತ್ತೆ ಹುಟ್ಟಿ ಬನ್ನಿ’ ಅಂದದ್ದು ಅಪಹಾಸ್ಯದ ಸಂಗತಿ.

ಪಾಪು ಐದು ಚಿಲ್ಲರೆ ದಶಕಗಳ ಹಿಂದೆಯೇ ಕ್ಯಾಲಿಫೋರ್ನಿಯಾಕ್ಕೆ ಹೋಗಿ ಪತ್ರಿಕೋದ್ಯಮದಲ್ಲಿ ಮಾಸ್ಟರ್ಸ್‌ ಡಿಗ್ರಿ ಪಡೆದು ಬಂದಿದ್ದರು. ವಕೀಲಿಕೆ ಮಾಡಿದರೆಂಬುದು ಕೇವಲ ಮಾತಷ್ಟೇ. ಅವರ ಮನಸು ಪತ್ರಿಕೋದ್ಯಮಕ್ಕೆ ಮುಡಿಪಾಗಿತ್ತು. ತಮ್ಮ ‘ಪ್ರಪಂಚ’ ಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ‘ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ’ ಎಂಬಂತಹ ಅಂಕಣವನ್ನು ಪತ್ರಿಕೋದ್ಯಮದ ಆಸಕ್ತರ್ಯಾರೂ ಮರೆಯುವಂತಿಲ್ಲ. ‘‘ಈ ಪುಟ್ಟಪ್ಪ ತಮ್ಮ ಛೇರಿನ ಪಕ್ಕದಲ್ಲಿ ಒಂದು ದೊಡ್ಡ ಬಾಕ್ಸ್ ಇಟ್ಟುಕೊಂಡಿರುತ್ತಾರೆ. ಅದರಲ್ಲಿ ನೂರಾರು ಜನರ ಫೊಟೋಗಳ ಬ್ಲಾಕ್ಸ್ ಇಟ್ಟುಕೊಂಡಿರುತ್ತಾರೆ. ಸುಮ್ಮನೆ ಒಂದು ಬ್ಲಾಕ್ ಕೈಗೆತ್ತಿಕೊಂಡರೆ ಸಾಕು ಆ ವ್ಯಕ್ತಿ ಯಾರೇ ಆಗಿದ್ದರೂ ಅವನ ಬಗ್ಗೆ ಆಗಿಂದಾಗ್ಗೆ ಪುಂಖಾನುಪುಂಖವಾಗಿ ಎರಡು ಕಾಲಂ ಬರೆದೊಗೆಯುತ್ತಾರೆ” ಎಂಬಂತಹ ನಗೆಚಾಟಿಕೆಯ ಮಾತು ಬಹಳ ಹಿಂದೆಯೇ ಪ್ರಚಲಿತದಲ್ಲಿತ್ತು. ನಿಜಕ್ಕೂ ಪಾಪು ಬಹಳ ದೂರದರ್ಶಿತ್ವದ ಪತ್ರಕರ್ತರು. ಆ ಕಾಲಕ್ಕೆ ಬರವಣಿಗೆಯ ಶೈಲಿಗೆ ಸಂಬಂಧಿಸಿದಂತೆ ಅವರೊಬ್ಬ ಟ್ರೆಂಡ್ ಸೆಟ್ಟರ್. ಅವರನ್ನು ನಮ್ಮಂತಹ ಪತ್ರಕರ್ತರು ಯಾವ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ.

‘ಪ್ರಪಂಚ’ ಪತ್ರಿಕೆಯೊಂದಿಗೆ ‘ವಿಶ್ವವಾಣಿ’ಯೂ ಸೇರಿದಂತೆ ಅವರು ಐದಾರು ಪತ್ರಿಕೆಗಳ ಸಂಪಾದಕರಾಗಿದ್ದರು. ಅವರಿಗೆ ಅವರದೇ ಆದ loyal ಓದುಗರ ಬಳಗವಿತ್ತು. ಆದರೆ ‘ವಿಶ್ವವಾಣಿ’ಯಾಗಲಿ, ‘ಪ್ರಪಂಚ’ವಾಗಲಿ ಅವರ ಕಚೇರಿ ಇದ್ದ ಕಿತ್ತೂರು ಚೆನ್ನಮ್ಮ ಸರ್ಕಲ್‌ನಿಂದ ಹೊರಕ್ಕೆ ಹೋಗಲಿಲ್ಲವೆಂಬುದು ನಿಜದ ಸಂಗತಿ. ಪತ್ರಿಕೋದ್ಯಮದ ಕಾರಣದಿಂದಾಗಿ ಅವರಿಗೆ ರಾಜಕಾರಣಿಗಳ ಒಡನಾಟ ಲಭಿಸಿತು. ಆ ಸಹವಾಸದ ಪರಿಣಾಮವಾಗಿ ಅವರು ಎರಡು ಬಾರಿ ರಾಜ್ಯಸಭಾ ಸದಸ್ಯರಾದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅವರು 1967ರಿಂದ ಖಾಯಂ ಅಧ್ಯಕ್ಷರಾಗಿದ್ದರು. ಯಾವ ವಶೀಲಿಕೆಯೂ ಇಲ್ಲದೆ ಪುಟ್ಟಪ್ಪನವರಿಗೆ ರಾಶಿ ರಾಶಿ ಪ್ರಶಸ್ತಿಗಳು ಲಭಿಸಿದವು. ಅದಕ್ಕೆ ಅವರು ಅರ್ಹರೂ ಆಗಿದ್ದರು. ನಾಡಿಗೆ ಅವರು ಮಾಡಿದ ಮಹದುಪಕಾರವೆಂದರೆ ಗೋಕಾಕ್ ವರದಿ ಚಳವಳಿಗೆ ನಾಂದಿ ಹಾಡಿದ್ದು ಮತ್ತು ಅದಕ್ಕೆ ನಟ ರಾಜಕುಮಾರ್‌ರನ್ನು ಕರೆತಂದಿದ್ದು. ‘ತರಂಗ’ದಲ್ಲಿ ಅವರು ‘ದೊಡ್ಡವರ ಸಣ್ಣತನಗಳು’ ಎಂಬ ಅಂಕಣ ಬರೆಯುತ್ತಿದ್ದರು. ಅದರಲ್ಲಿ ಒಮ್ಮೆ ಅವರು ಮಾಜಿ ಲೋಕಸಭಾ ಸದಸ್ಯರಾದ ದ.ಫ. ಕರ್ಮರ್‌ಕರ್ ಅವರ ಬಗ್ಗೆ ಕೆಳಕಂಡಂತೆ ಬರೆದರು.

‘‘ದ.ಫ. ಕರ್ಮರ್‌ಕರ್ ಅವರು ಯಾರೇ ಊಟಕ್ಕೆ ಕರೆದರೂ ತಮ್ಮ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಕಡೆ ಕಡೆಗೆ ಅವರ ಹೆಂಡತಿ ನಡೆಯಲಿಕ್ಕೆ ಆಗದ ಸ್ಥಿತಿ ತಲುಪಿದಾಗ ಅವರನ್ನು ಯಾರಾದರೂ ಊಟಕ್ಕೆ ಕರೆದರೆ ಅಲ್ಲಿಗೆ ಹೋಗಿ ತಾವು ಊಟ ಮಾಡಿ ನನ್ನ ಮನೆಯಾಕೆಗೂ ಸ್ವಲ್ಪ ಕಟ್ಟಿ ಕೊಡ್ರಪ್ಪಾ ಎಂದು ಕೇಳುತ್ತಿದ್ದರು” ಎಂದು ಬರೆದರು.

ಎಂದೆಂದಿಗೂ ಮತ್ತೊಬ್ಬರ ದುಡ್ಡಿಗೆ ಕೈ ಚಾಚದ, ಭ್ರಷ್ಟಾಚಾರದ ಸನಿಹಕ್ಕೂ ಹೋಗದ ಕರ್ಮರ್‌ಕರ್ ಅವರು ಕೊನೆಗಾಲದಲ್ಲಿ ಇಂತಹ ನಿಸ್ಸಹಾಯಕ ಸ್ಥಿತಿ ತಲುಪಿದ್ದು ಅವರ ಸಣ್ಣತನವೇ? ಪಾಪು ಅವರ ಈ ಬರಹವನ್ನು ಓದಿದಾಗ ಪತ್ರಕರ್ತರಷ್ಟೇ ಏಕೆ? ಅವರ ಪ್ರಜ್ಞಾವಂತ ಓದುಗರು ಕೂಡ ಪಾಪು ಬಗ್ಗೆ ಬೇಸರಗೊಂಡಿದ್ದರು.

ಕೊನೆ ಕೊನೆಯಲ್ಲಿ ಪಾಪು ಅನೇಕ ಆಘಾತಗಳಿಗೆ ಒಳಗಾದರು. ತೀರ ಇಳಿಗಾಲದಲ್ಲಿ ಅವರ ಪತ್ನಿ ಇಂದುಮತಿಯವರು ತೀರಿಕೊಂಡರು. ಒಬ್ಬ ಮಗ ರಾಜು ಔಷಧಿ ಇಲ್ಲದ ಕೆಟ್ಟ ಖಾಯಿಲೆಗೆ ಬಲಿಯಾಗಿ ಸತ್ತ. ಇನ್ನೊಬ್ಬ ಮಗ ಅಶೋಕ ಒಂದು ಕಣ್ಣು ಕಳೆದುಕೊಂಡು ಅಸಹ್ಯಕರವಾದ ನಿಷೇಧಿತ ಪುಸ್ತಕಗಳನ್ನು ಪ್ರಿಂಟು ಮಾಡುತ್ತಾ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡರ ಕೈಗೆ ಸಿಕ್ಕಿ ಜೈಲು ಪಾಲಾದ. ಪುಟ್ಟಪ್ಪನವರ ಒಬ್ಬ ಮಗಳು ಆತ್ಮಹತ್ಯೆ ಮಾಡಿಕೊಂಡಳು. ಪಾಟೀಲ ಪುಟ್ಟಪ್ಪನವರು ಬಾಡಿಗೆಗಿದ್ದ ಆಫೀಸ್ ಒಂದು ಕ್ರೈಸ್ತ ಸಂಸ್ಥೆಗೆ ಸೇರಿದಂತಹುದಾಗಿತ್ತು. ಅಲ್ಲಿಂದ ಬಾಡಿಗೆದಾರ ಪಾಪು ಅವರನ್ನು ಬಿಡಿಸಿ ಹೊರಗೆ ಕಳಿಸುವ ಹೊತ್ತಿಗೆ ಕುರಿ-ಕ್ವಾಣ ಬಿದ್ದಿದ್ದವು. ದಿಟ್ಟತನದ ಪತ್ರಿಕೋದ್ಯಮವನ್ನು ಮಾಡುತ್ತಲೇ ಅವರು ನಿಜಲಿಂಗಪ್ಪನವರ, ರಾಮಕೃಷ್ಣ ಹೆಗಡೆಯವರ, ಇನ್ನೂ ಕೆಲವು ರಾಜಕಾರಣಿಗಳ ಮತ್ತು ಮಠಾಧೀಶರ ಕೈ ಕೈ ಹಿಡಿದು ನಡೆದದ್ದು ಸೋಜಿಗವೇ. ಆದರೆ ಇಂಧಿರಾ ಗಾಂಧಿಯವರು 1975ರಲ್ಲಿ ಭಾರತದ ಮೇಲೆ ಎಮರ್ಜೆನ್ಸಿ ಘೋಷಿಸಿದಾಗ ಅದನ್ನು ದೃಢವಾಗಿ ಧಿಕ್ಕರಿಸಿದ ಹೆಗ್ಗಳಿಕೆ ಪಾಪು ಅವರದು. ಹೀಗೆ ತಮ್ಮವೇ ಆದ ವೈರುಧ್ಯಗಳೊಂದಿಗೆ ಬದುಕು ಸವೆಸಿದ ಪಾಪು ಅದೇನು ಮಾಡಿದರೂ ಭ್ರಷ್ಟಾಚಾರವನ್ನಂತೂ ಮಾಡಲಿಲ್ಲ. ತೀರ ನೂರಾ ಒಂದು ವರ್ಷ ಬದುಕಿದವನು ತೀರಿಕೊಂಡಾಗ ‘ಇದು ತುಂಬಲಾಗದ ನಷ್ಟ’ ಎಂದು ಬರೆಯುವುದು ನಗೆಪಾಟಲಿನ ಸಂಗತಿಯಾದೀತು.

-ಆರ್.ಬಿ.

Leave a Reply

Your email address will not be published.

*

Latest from ಇದು ಪ್ರತಿವಾರದ ಅಚ್ಚರಿ

Go to Top