ಹಾಯ್ ಬೆಂಗಳೂರ್

ಸೊರಗಿ ಹೋಗಿರುವ ಸ್ಯಾಂಡಲ್ ವುಡ್ ಗೆ ಶಕ್ತಿ ತುಂಬುತ್ತಾನಾ ರಾಬರ್ಟ್?

ಫೆಬ್ರವರಿ 16ನೇ ತಾರೀಖು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಸಂಭ್ರಮದ ದಿನ. ಯಾಕೆಂದರೆ ಅವತ್ತು ದರ್ಶನ್ ಅಭಿಯನದ ‘ರಾಬರ್ಟ್’ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಕನ್ನಡ ಮತ್ತು ತೆಲುಗು ವರ್ಷನ್ ನ ಟ್ರೇಲರ್ ಅಂದು ಬಿಡುಗಡೆಯಾಗಲಿದ್ದು ಅದನ್ನು ಕಣ್ತುಂಬಿಕೊಳ್ಳುವುದಕ್ಕೆ ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ಕೊರೊನಾ ಹೊಡೆತದಿಂದ ಸೊರಗಿ ಹೋಗಿರುವ ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಈ ಚಿತ್ರವು ಟಾನಿಕ್ ನಂತೆ ಕೆಲಸ ಮಾಡಿ ಒಂದಷ್ಟು ಚೈತನ್ಯ ತುಂಬಬಲ್ಲದು ಅಂತ ಗಾಂಧಿನಗರದ ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅದು ನಿಜವೂ ಹೌದು. ಯಾಕೆಂದರೆ ದರ್ಶನ್ ನ ಅಭಿಮಾನಿಗಳ ಸಂಖ್ಯೆ ಅಷ್ಟಿದೆ.

ಲಾಕ್ ಡೌನ್ ತೆರವಾದ ಮೇಲೆ ಒಂದಷ್ಟು ಸಣ್ಣಪುಟ್ಟ ಬಜೆಟ್ ನ ಚಿತ್ರಗಳು ರಿಲೀಸ್ ಆಗುತ್ತಿವೆ. ಆದರೆ ಅದನ್ನು ನೋಡಲು ಯಾರೂ ಬರುತ್ತಿಲ್ಲ. ಹೀಗಾಗಿ ಥಿಯೇಟರ್ ಮಾಲೀಕರಿಗೂ ಕೂಡ ತುಂಬಾನೇ ಕಷ್ಟವಾಗುತ್ತಿದೆ. ತಮಿಳಿನ ವಿಜಯ್ ಅಭಿನಯದ ‘ಮಾಸ್ಟರ್’ ಚಿತ್ರ ಸಂಕ್ರಾಂತಿಗೆ ಮೂರ್ನಾಲ್ಕು ದಿನಗಳ ಮುಂಚೆ ರಿಲೀಸ್ ಆಯಿತು. ಆದರೆ ಎರಡೇ ವಾರ ಥಿಯೇಟರ್ ನಲ್ಲಿ ಓಡಿದ್ದು. ಮೂರನೇ ವಾರಕ್ಕೆ ಅದಾಗಲೇ ಅಮೇಜಾನ್ ಪ್ರೈಮ್ ನಲ್ಲಿ ಬಂದು ಸ್ಥಾಪಿತವಾಗಿತ್ತು. ಎಲ್ಲ ಭಾಷೆಗಳ ವರ್ಷನ್ ಹೀಗೆ ಓಟಿಟಿ ಪ್ಲ್ಯಾಟ್ ಫಾರಂನಲ್ಲಿ ಸಿಕ್ಕರೆ ಥಿಯೇಟರ್ ನವರು ಬಾಯಿಗೆ ಮಣ್ಣು ಹಾಕಿಕೊಳ್ಳಬೇಕಾ ಎನ್ನುವುದೇ ಪ್ರಶ್ನೆ.

ಒಂದಷ್ಟು ಸಿನಿ ಪಂಡಿತರ ಪ್ರಕಾರ ಸಿನೆಮಾ ಥಿಯೇಟರ್ ಅನ್ನೋ ಕಾನ್ಸೆಪ್ಟ್ ಮುಗಿದ ಹಾಗೆಯೇ ಅಂತೆ. ಒಂದು ಸಿನೆಮಾ ನೋಡಲು ಒಂದು ಕುಟುಂಬ (ನಾಲ್ಕು ಮಂದಿ ಅಂತ ಲೆಕ್ಕ ಇಟ್ಟುಕೊಂಡರೆ) ಬಂದರೆ ಏನಿಲ್ಲವೆಂದರೂ ಒಂದೂವರೆ ಸಾವಿರ ರುಪಾಯಿ ಖರ್ಚಾಗುತ್ತೆ.  ಅದರ ಬದಲು ತಿಂಗಳಿಗೆ 129 ರುಪಾಯಿ ಕೊಟ್ಟು ಅಮೇಜಾನ್ ಪ್ರೈಮ್ ಹಾಕಿಸಿಕೊಂಡರೆ ಅಥವಾ ತಿಂಗಳಿಗೋ, ವರ್ಷಕ್ಕೋ ಇಂತಿಷ್ಟು ಅಂತ ಕೊಟ್ಟು ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್ ಹಾಕಿಸಿಕೊಂಡರೆ ಬೇಕಾದ ಸಿನೆಮಾಗಳನ್ನೆಲ್ಲಾ ಮನೆ ಮಂದಿಯೆಲ್ಲಾ ಕುಳಿತು ಹಾಯಾಗಿ ಮನೆಯಲ್ಲೇ ನೋಡಬಹುದು. ಬೇಕಾದಾಗ ಪಾಸ್ ಕೂಡ ಮಾಡಿಕೊಳ್ಳಬಹುದು. ಈಗಿನ ದೊಡ್ಡ ದೊಡ್ಡ ಸ್ಮಾರ್ಟ್ ಟಿವಿಗಳಲ್ಲಿ ಡಿಟಿಎಸ್ ಎಫೆಕ್ಟ್ ಕೂಡ ಲಭ್ಯ. ಹೀಗಿರುವಾಗ ಸಾವಿರಾರು ರುಪಾಯಿ, ಸಮಯ ಖರ್ಚು ಮಾಡಿಕೊಂಡು ಥಿಯೇಟರ್ ಕಡೆಗೆ ಯಾವನು ಹೋಗ್ತಾನೆ.

ವಿದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಥಿಯೇಟರ್ ಬಂದಿದೆಯಂತೆ. ಸಿನೆಮಾದಲ್ಲಿ ಗಾರ್ಡನ್ ದೃಶ್ಯ ಬಂದರೆ ನಾವೇ ಗಾರ್ಡನ್ ನಲ್ಲಿ ಇದ್ದ ಹಾಗೆ ಭಾಸವಾಗುತ್ತಂತೆ. ಅದೇ ತರಹದ ಸುವಾಸನೆ ಬೀರುತ್ತಂತೆ. ಅಂಥದ್ದೇನಾದರೂ ಸ್ಪೆಷಲ್ ಬಂದರೆ ಮಾತ್ರ ಜನ ಥಿಯೇಟರ್ ಕಡೆ ಮುಖ ಮಾಡಬಹುದೇನೋ. ಆದರೂ ಡೌಟು.

ಹಂಗೂ ಹಿಂಗೂ ಉಳಿದುಕೊಂಡರೆ ಮಲ್ಟಿಪ್ಲೆಕ್ಸ್ ಗಳು ಉಳಿದುಕೊಳ್ಳಬಹುದು. ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳ ಆಯಸ್ಸು ಮುಗಿದಂತೆಯೇ ಅರ್ಥ. ನೋಡೋಣ, ಮುಂದೆ ಏನಾಗುತ್ತದೆ ಅಂತ. ಏನೇ ಆಗಲಿ ಮೊದಲು ಸಿಂಗಲ್ ಸ್ಕ್ರೀನ್ ನಲ್ಲಿ ಸಿನೆಮಾ ನೋಡುತ್ತಿದ್ದ ಮಜಾನೇ ಬೇರೆ. ಹಿಂದಿನ ದಿನವೇ ಹೋಗಿ ರಷ್ ನಲ್ಲಿ ಟಿಕೆಟ್ ತೆಗೆದುಕೊಂಡು, ಮೊದಲ ದಿನ ಮೊದಲ ಷೋ ನಲ್ಲಿ ಅಭಿಮಾನಿಗಳ, ಶಿಳ್ಳೆ, ಚಪ್ಪಾಳೆ ಮಧ್ಯೆ ಖುಷಿ ಅನುಭವಿಸಬಹುದಾಗಿತ್ತು. ಈಗಿನ ಬದಲಾವಣೆ ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ. ಅಲ್ಲವೆ.

Leave a Reply

Your email address will not be published. Required fields are marked *