ಹಾಯ್ ಬೆಂಗಳೂರ್

ದಿಲ್ ನೆ ಫಿರ್ ಯಾದ್ ಕಿಯಾ: ಕಣ್ಣ ಹನಿಯೊಂದಿಗೆ ಮನಸು ಮಾತಾಡಿದೆ…

  • ದಿಲ್ ನೆ ಫಿರ್ ಯಾದ್ ಕಿಯಾ: ಅಬ್ಬಾ…. ದುಡ್ಡೇ ನಿನ್ನ ಮಹಿಮೆ ಅಪಾರ!

ಕಣ್ಣ ಹನಿಯೊಂದಿಗೆ ಮನಸು ಮಾತಾಡಿದೆ…

ನನಗಾಗ ಹತ್ತು ವರ್ಷ. ನನ್ನ ತಂಗಿಗೆ ಏಳು ವರ್ಷ. ಅಮ್ಮ  ಖಾಸಗಿ ಅನುದಾನಿತ ಶಾಲೆಯಲ್ಲಿ ಶಿಕ್ಷಕಿ. ಆದರೆ ಕೆಲಸ ಖಾಯಂ ಆಗಿರಲಿಲ್ಲ. ಅಪ್ಪನ ಉದ್ಯೋಗ ಹೋಗಿತ್ತಾದ್ದರಿಂದ ಆ ನಂತರದ ಉದ್ಯೋಗವಾಗಲೀ, ಸಂಬಳವಾಗಲೀ ನೆಚ್ಚಿಗೆ ಇರಲಿಲ್ಲ. ಒಟ್ಟಾರೆ ಸಂಕಷ್ಟದ ದಿನಗಳವು. ಬಡತನದ ಬೇಗೆ ಬಾಧಿಸುತ್ತಿತ್ತು. ಹೀಗಿರುವಾಗ ಕುಟುಂಬದ ಆಪ್ತರೊಬ್ಬರು ಪುಣ್ಯಕ್ಷೇತ್ರಗಳಿಗೆ ಪ್ರವಾಸ ಆಯೋಜಿಸಿದರು. ನಮ್ಮ ಸಂಬಂಧಿಕರೆಲ್ಲ ಹೊರಟಿದ್ದರು. ನಮಗೂ ಹೊರಡುವಂತೆ ಕರೆ ಬಂದರೂ ಸಂಸಾರದ ರಥ ಎಳೆಯಲು ಒಂಟೆತ್ತಿನಂತೆ ಕಷ್ಟ ಪಡುತ್ತಿದ್ದ ಅಮ್ಮ ನಿರಾಕರಿಸಿದರು. ಆದರೂ ಬಿಡಲೊಲ್ಲದ ಅವರು ದುಡ್ಡು ನಿಧಾನಕ್ಕೆ ಕೊಡುವಿಯಂತೆ ಮಕ್ಕಳೊಂದಿಗೆ ಹೊರಡಮ್ಮ ಎಂದು ಬಲವಂತವಾಗಿ ಹೊರಡಿಸಿಬಿಟ್ಟರು. ವಿಧಿಯಿಲ್ಲದೆ ಯಾರಿಂದಲೋ ಅಲ್ಪ ಹಣ ಹೊಂದಿಸಿಕೊಂಡು ಬಂದ ಅಮ್ಮ, ನಮ್ಮಿಬ್ಬರ ಕೈ ಹಿಡಿದು ಬಸ್ ಹತ್ತಿದರು. ಮೊದಲೇ ಸುಖಾಸೀನರಾಗಿದ್ದ ಸಂಬಂಧಿಗಳು ಮುಖ ಬಿಗಿದುಕೊಂಡರೇ ವಿನಾ ಮಾತಾಡಿಸಲಿಲ್ಲ. ಅವರೊಟ್ಟಿಗೆ ನಮ್ಮನ್ನು ಹೊರಡಿಸಿದ್ದು ಅವರಿಗಿಷ್ಟವಾಗಿರಲಿಲ್ಲ. ಬಡವರು ಯಾರಿಗೆ ತಾನೇ ಇಷ್ಟವಾಗುತ್ತಾರೆ ಹೇಳಿ? ನಮಗಾಗಿ ಉಳಿದದ್ದು ಬಸ್ ಹಿಂಬದಿಯ ಕೊನೆಯ ಸೀಟು. ಅಡುಗೆ ಪಾತ್ರೆ, ದಿನಸಿ ಸಾಮಾನುಗಳು ನಮ್ಮ ಅಕ್ಕಪಕ್ಕದ ಜೊತೆಗಾರರಾಗಿದ್ದವು.

ಬೆಳಗಿನ ಹತ್ತು ಮೂವತ್ತರ ಸಮಯ: ಬಸ್ಸು ಹೊರನಾಡು ತಲುಪಲು ಒಂದು ಗಂಟೆ ಬಾಕಿಯಿತ್ತು. ಅಷ್ಟರಲ್ಲಿ ಇಂಜಿನ್ ತೊಂದರೆಯಿಂದ ಬಸ್ ನಿಂತಿತು. ಎಲ್ಲರನ್ನೂ ಕೆಳಗಿಳಿಸಿದ ಡ್ರೈವರ್, ತಾನೇ ಸಣ್ಣ ರಿಪೇರಿ ಮಾಡಿಕೊಂಡು `ಸಾಲ್ಡರಿಂಗ್ ಹೋಗಿದೆ. ಹತ್ತಿರದ ಪಟ್ಟಣದಲ್ಲಿ ಸರಿಪಡಿಸಿಕೊಂಡು ಬರುವುದಾಗಿ’ ಹೇಳಿ ಬಸ್‌ನೊಂದಿಗೆ ಹೊರಟು ಹೋದ. ಸರಿ ರಸ್ತೆ ಬದಿಯಲ್ಲಿದ್ದ ಹೊಟೇಲ್‌ಗೆ ತಿಂಡಿ ತಿನ್ನಲೆಂದು ಎಲ್ಲರೂ ಹೊರಟರು. ಇನ್ನೇನು ನಾವೂ ಹೊಟೇಲ್ ಒಳಗೆ ಕಾಲಿಡಬೇಕು ಅಷ್ಟರಲ್ಲಿ ನನ್ನ ತಂಗಿ ಹೊರಗಡೆ ಮಾರುತ್ತಿದ್ದ ಐಸ್‌ಕ್ರೀಂಗಾಗಿ ಹಟ ಹಿಡಿದಳು. ಅದಕ್ಕಾಗಿ ಅಮ್ಮ  ಹಣ ತೆಗೆಯಲು ನೋಡಿದರೆ ಪರ್ಸ್ ಬಸ್ಸಿನಲ್ಲಿದ್ದ ಬ್ಯಾಗಿನಲ್ಲಿಯೇ ಉಳಿದುಬಿಟ್ಟಿತ್ತು. ಮೊದಲು ಐಸ್‌ಕ್ರೀಂಗಾಗಿ ಹಟ ಹಿಡಿದವಳು ಕಡೆಗೆ `ಅಮ್ಮಾ ಹೊಟ್ಟೆ ಹಸೀತಿದೆ, ದೋಸೆ ಕೊಡಿಸಮ್ಮಾ’ ಎಂದು ಅಳಹತ್ತಿದಳು. ನನಗೂ ಹಸಿವಾಗಿತ್ತು. ಆದರೆ ಅಮ್ಮನ ಬಳಿ ಹಣವಿರಲಿಲ್ಲ. ಹೊಟೇಲ್ ಬಾಗಿಲಿನಲ್ಲೇ ಅಸಹಾಯಕರಾಗಿ ನಿಂತಿದ್ದ ನಮ್ಮನ್ನು ಗಮನಿಸಿದ ಸಂಬಂಧಿಕರು ನೋಡಿಯೂ ನೋಡದವರಂತೆ ತಮ್ಮ ಪಾಡಿಗೆ ತಾವು ತಿನ್ನುತ್ತಿದ್ದರು. ಏನೆಂದು ವಿಚಾರಿಸಲೂ ಇಲ್ಲ, ತಿಂಡಿಗೂ ಕರೆಯಲಿಲ್ಲ. ಒಂದು ಕಡೆ ಹಸಿವೆಂದು ಕೈ ಹಿಡಿದು ಜಗ್ಗುತ್ತಿದ್ದ ತಂಗಿ, ಮತ್ತೊಂದೆಡೆ ಸಪ್ಪಗೆ ನಿಂತಿದ್ದ ನಾನು. ಅಮ್ಮನಿಗೆ ಅಳು ತಡೆಯಲಾಗಲಿಲ್ಲ. ಆಕೆಯ ಕಣ್ಣಾಲಿಗಳು ತುಂಬಿ ಬಂದವು. ಸಂಬಂಧಿಕರತ್ತ ಒಮ್ಮೆ ವಿಷಾದದಿಂದ ದಿಟ್ಟಿಸಿದ ಅಮ್ಮನಿಗೆ ಅದೇನಾಯಿತೋ… ಬಾಚಿ ನಮ್ಮಿಬ್ಬರನ್ನೂ ತಬ್ಬಿ ಬಿಕ್ಕಿ-ಬಿಕ್ಕಿ ಅತ್ತಳು. ತುಸು ಸಮಾಧಾನಿಸಿಕೊಂಡು ಹಸಿವೆಂದು ಹಟ  ಹಿಡಿದಿದ್ದ ತಂಗಿಯನ್ನು ಸಮಾಧಾನಿಸಿ ಅವಳಿಗೆ ಪ್ರಿಯವಾದ ಕಥೆ ಹೇಳುತ್ತಾ ಹೊಟೇಲ್ ಮೆಟ್ಟಿಲಿನ ಮೇಲೆ ಕೂಡಿಸಿಕೊಂಡರು. ಕಥೆ ಕೇಳುತ್ತಾ ಕೇಳುತ್ತಾ ತಂಗಿ ನಿದ್ದೆ ಹೋದಳು. ಆದರೆ ಹೊಟ್ಟೆಯ ಸಂಕಟ ಅಮ್ಮ ಹೇಳಿದ ಕಥೆ ಕೇಳಲು ನನ್ನನ್ನು ಬಿಡಲಿಲ್ಲ. ಹಾಗೆಂದು ಹಸಿವೆಂದು ಹೇಳಿ ಅಮ್ಮನ ಮನ ನೋಯಿಸಲೂ ಇಷ್ಟವಾಗಲಿಲ್ಲ. ಅಷ್ಟರಲ್ಲಿ ಬಸ್ ಮರಳಿ ಬಂತು. ಲಗುಬಗೆಯಿಂದ ಬಸ್ ಹತ್ತಿದ ಅಮ್ಮ ಪರ್ಸ್ ತಂದು ಹೊಟೇಲ್‌ನಿಂದ ನಮ್ಮಿಬ್ಬರಿಗೂ ತಿಂಡಿ ಕಟ್ಟಿಸಿಕೊಂಡು ಬಂದರು. ಅಷ್ಟರೊಳಗೆ ಸಂಬಂಧಿಕರೆಲ್ಲಾ ಬಸ್ ಹತ್ತಿ ಮತ್ತೆ ಸುಖಾಸೀನರಾಗಿದ್ದರು. ಬಸ್ ಹೊರಟುಬಿಟ್ಟಿತು. ಅಮ್ಮನಿಗೆ ಉಪವಾಸ. ನಮಗಾಗಿ ತಂದಿದ್ದರಲ್ಲಿಯೇ ತಿನ್ನು ಎಂದರೂ ಅಮ್ಮ ತಿನ್ನಲಿಲ್ಲ. ಬಸ್‌ನಲ್ಲಿ ಎದ್ದು ಹೋಗುವ ಮಾತು ಬಿದ್ದು ಹೋಗಲಿ ಎಂಬಂತೆ ಈ ವಿಚಾರ ಕೇಳಿ ತಿಳಿದ ಸಂಬಂಧಿಗಳು `ಹೌದಾ… ನಮಗೆ ಗೊತ್ತೇ ಆಗಲಿಲ್ಲ ನೋಡು’ ಎಂದು ಮಾತು ಜಾರಿಸಿದರು. ತೊಡೆಯ ಮೇಲೆ ನಮ್ಮಿಬ್ಬರನ್ನೂ ಮಲಗಿಸಿಕೊಂಡು ಕಿಟಕಿಯಾಚೆ ದಿಗಂತವನ್ನು ದೃಷ್ಟಿಸುತ್ತಿದ್ದ ಅಮ್ಮನ ಕಂಗಳಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಹಣವಿದ್ದರೂ ಇಲ್ಲದಂತಾಗಿ ಹಸಿವಿನಿಂದ ನರಳುವಂತಾದಾಗ ಸಂಬಂಧಿಗಳು ತೋರಿದ ಆ ಕ್ಷಣದ ವರ್ತನೆ ಆಕೆಯ ಮನಸ್ಸನ್ನು ಘಾಸಿಗೊಳಿಸಿ ಅಂತರ್ಮುಖಿಯಾಗಿಸಿತ್ತು.

ಇಂದು ತಂಗಿಯ ಬಾಳು ಹಸನಾಗಿದೆ. ಕೆಲಸ ಮಾಡಲು ಪತ್ರಕರ್ತನೆಂಬ ಉದ್ಯೋಗವಿದೆ. ಸ್ವ-ಸಾಮರ್ಥ್ಯದಿಂದ ಗಳಿಸಿದ ಹೆಸರಿದೆ. ಸ್ವಾಭಿಮಾನಿ ಅಮ್ಮ ಸುವ್ಯವಸ್ಥಿತವಾಗಿ ಬಾಳ್ವೆ ನಡೆಸುವಷ್ಟು ದುಡಿದಿದ್ದಾರೆ. ಇದೀಗ ಸಂಬಂಧಿಗಳಿಗೆ ನಮ್ಮನ್ನು ಮಾತಾಡಿಸಲು ಹೆಮ್ಮೆ. ಆದರೆ… ಹಣವಿಲ್ಲದೆ ಹಸಿವಿನಿಂದ ನರಳಿದ ಆ ಹೊತ್ತು ನೆನೆದಾಗ ಇಂದಿಗೂ ಮೂಕವಾಗುವ ಮನಸ್ಸು ಮಾತಾಡುವುದು ಕಣ್ಣ ಹನಿಯೊಂದಿಗೆ ಮಾತ್ರ.

-ಜೆ.ಎಸ್.ನಾಗೇಶ್ ಗುಬ್ಬಿ, ತುಮಕೂರು

Leave a Reply

Your email address will not be published. Required fields are marked *