ಕಲಿವೀರ ಉಪ್ಪಿ ಅಭಿಮಾನಿ!

in ಸಿನೆಮಾ ಪುಟ

ಕೊರೋನಾ ವೈರಸ್ ಬಾಧೆಯಿಂದ  ಕಣ್ಣ ಮುಂದೀಗ ಎಲ್ಲವೂ ಅಸ್ಪಷ್ಟವಾಗಿರುವಾಗ ಈಗಾಗಲೇ ರೆಡಿಯಾಗಿ ನಿಂತಿರೋ, ಚಿತ್ರೀಕರಣದ ಹಂತದಲ್ಲಿರೋ ಸಿನಿಮಾಗಳ ಕಥೆಯೂ ಡೋಲಾಯಮಾನವೇ. ಇದೆಲ್ಲ ಏನೇ ಇದ್ದರೂ ಎಲ್ಲವೂ ಸರಿಯಾಗುತ್ತದೆ ಎಂಬಂಥಾ ಆಶಾವಾದ ಚಿತ್ರರಂಗದಲ್ಲಿಯೂ ಚಾಲ್ತಿಯಲ್ಲಿದೆ. ಹೀಗೆ ಸಿನಿಮಾ ಮಾಡಿ ವ್ಯವಹಾರವೂ ಸೇರಿದಂತೆ ಎಲ್ಲ ಭಾರ ಹೊತ್ತುಕೊಂಡು ಕಾಯುತ್ತಿರೋ ಸಿನಿಮಾ ನಿರ್ಮಾತೃಗಳು ಒಂದೆಡೆಯಾದರೆ, ಬೇಗನೆ ಥೇಟರುಗಳಿಗೆ ತೆರಳಿ ನಿರಾಳವಾಗಿ ಸಿನಿಮಾ ನೋಡೋ ಸೌಭಾಗ್ಯ ಆದಷ್ಟು ಬೇಗನೆ ಸಿಗಲೆಂದು ಅದೆಷ್ಟೋ ಮಂದಿ ಆಶಿಸುತ್ತಿದ್ದಾರೆ. ಅದನ್ನು ಮತ್ತಷ್ಟು ತೀವ್ರಗೊಳಿಸುವಂಥಾ ಒಂದಷ್ಟು ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಆ ಯಾದಿಯಲ್ಲಿ ಅವಿ ನಿರ್ದೇಶನದ ಕಲಿವೀರ ಮುಂಚೂಣಿಯಲ್ಲಿದೆ.


ಈ ಹಿಂದೆ ತೆರೆ ಕಂಡು ಮೆಚ್ಚುಗೆ ಪಡೆದುಕೊಂಡಿದ್ದ ಕನ್ನಡ ದೇಶದೊಳ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಅವಿ. ಅದೊಂದು ಚಿತ್ರದಿಂದಲೇ ಗುರುತಾಗಿರೋ ಅವಿಯ ಎರಡನೇ ಪ್ರಯತ್ನ ಕಲಿವೀರ. ಶೀರ್ಷಿಕೆಯಲ್ಲಿಯೇ ಆವೇಗವೊಂದನ್ನು ಬಚ್ಚಿಟ್ಟುಕೊಂಡಂತಿರೋ ಈ ಚಿತ್ರ ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈ ಹೊತ್ತಿಗೆಲ್ಲ ಪ್ರೇಕ್ಷಕರ ಮುಂದೆ ಬರುತ್ತಿತ್ತೇನೋ… ಆದರೆ ಕೊರೋನಾ ಕಾರಣದಿಂದಾಗಿ ಕೆಲ ಕೆಲಸಗಳು ಬಾಕಿ ಉಳಿದುಕೊಂಡಿವೆ. ಆದರೂ ಕೂಡಾ ಲಾಕ್‌ಡೌನ್ ಕಾಲದಲ್ಲಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರ ನಡುವೆ ಕ್ಯೂರಿಯಾಸಿಟಿ ಗರಿಗೆದರಿಕೊಳ್ಳುತ್ತಿದೆ. ಅದುವೇ ಈ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿದೆ.

ರುದ್ರಿ ಎಂಬ ಸಿನಿಮಾ ಮೂಲಕ ಸಾಕಷ್ಟು ಸುದ್ದಿಯಲ್ಲಿರುವ ಪಾವನಾ ಗೌಡ ಮತ್ತು ಹುಲಿರಾಯ ಖ್ಯಾತಿಯ ಚಿರಶ್ರೀ ಅಂಚನ್ ನಾಯಕಿಯರಾಗಿರೋ ಈ ಚಿತ್ರದಲ್ಲಿ ಏಕಲವ್ಯ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಇದರ ಪೋಸ್ಟರ್‌ಗಳು ಕೂಡಾ ಬಿಡುಗಡೆಯಾಗಿವೆ. ಅವುಗಳೇ ಇದೊಂದು ಭಿನ್ನ ಕಥಾನಕದ ಸಿನಿಮಾ ಎಂಬುದನ್ನು ಸಾರಿ ಹೇಳುವಂತಿವೆ. ಕಲಿವೀರನ ಬಗ್ಗೆ ಇಷ್ಟೊಂದು ಕ್ರೇಜ್ ಹುಟ್ಟಿಕೊಂಡಿರೋದರ ಹಿಂದೆ ಈ ಪೋಸ್ಟರ್‌ಗಳ ಪಾತ್ರವೂ ಸಾಕಷ್ಟಿದೆ. ಕನ್ನಡ ದೇಶದೊಳ್ ಚಿತ್ರದ ಮೂಲಕವೇ ತಾನೋರ್ವ ಭಿನ್ನ ಪಥದ ನಿರ್ದೇಶಕ ಅನ್ನೋದನ್ನು ಸಾಬೀತುಪಡಿಸಿದ್ದ ಅವಿ, ಅದರಲ್ಲಿನ ಒಂದಷ್ಟು ಕೊರತೆಗಳನ್ನು ನೀಗಿಕೊಂಡು ಪಕ್ಕಾ ಮನೋರಂಜನಾತ್ಮಕ ಅಂಶಗಳೊಂದಿಗೆ ಅಪರೂಪದ ಕಥೆಯೊಂದನ್ನು ಹೇಳಲಿರೋದು ಮಾತ್ರ ಖಚಿತ.

ಇದು ಹೊಸಾ ಅಲೆಯ ಚಿತ್ರಗಳ ಸೆಳೆತ ಜೋರಾಗಿರುವ ಕಾಲ. ಆ ಬಗೆಯ ಎಲ್ಲ ಸಿನಿಮಾಗಳನ್ನೂ ಕೂಡಾ ಪ್ರೇಕ್ಷಕರು ಆಸ್ಥೆಯಿಂದಲೇ ಆಧರಿಸುತ್ತಾ ಬಂದಿದ್ದಾರೆ. ಕಲಿವೀರ ಕೂಡಾ ಅದೇ ಹಾದಿಯಲ್ಲಿದೆ. ಯಾಕೆಂದರೆ, ಅದಕ್ಕೆ ಅವಿ ಆರಿಸಿಕೊಂಡಿರೋ ಕಥೆಯೇ ಡಿಫರೆಂಟಠಾಗಿದೆಯಂತೆ. ಕನ್ನಡ ದೇಶದೊಳ್ ಚಿತ್ರದ ಸಮಯದಲ್ಲಾದ ಒಂದಷ್ಟು ಅನುಭವ, ನಿರಾಸೆಗಳಾಚೆಗಿನ ಶುಷ್ಕ ವಾತಾವರಣದಲ್ಲಿ ಅವಿ ಈ ಕಥೆಗೆ ಜೀವ ತುಂಬಿದ್ದಾರೆ. ಸಾಕಷ್ಟು ತಯಾರಿ, ಫೀಲ್ಡ್ ವರ್ಕ್ ಮಾಡಿಯೇ ಬುಡಕಟ್ಟು ಜನಾಂಗದ ಸುತ್ತಲೊಂದು ಕಥೆಯನ್ನು ಸಿದ್ಧಪಡಿಸಿದ್ದಾರೆ. ಅದನ್ನು ಕಮರ್ಶಿಯಲ್ ಗುಣಲಕ್ಷಣಗಳನ್ನು ಎರಕ ಹೊಯ್ದಂತೆ ಚಿತ್ರೀಕರಿಸಿರೋ ಭರವಸೆ ಅವರಲ್ಲಿದೆ.


ಕಲಿ ಎಂಬುದು ಇಲ್ಲಿನ ಕಥೆಯ ಕೇಂದ್ರ ಪಾತ್ರದ ಹೆಸರು. ಆತ ತನ್ನ ಬುಡಕಟ್ಟು ಜನಾಂಗಕ್ಕಾಗ ಅನ್ಯಾಯವೊಂದರ ವಿರುದ್ಧ ಹೋರಾಡುತ್ತಾ ಹೇಗೆ ವೀರನಾಗುತ್ತಾನೆಂಬ ಕಥೆ ಈ ಚಿತ್ರದಲ್ಲಿರಲಿದೆಯಂತೆ. ಆದರೆ ಇದನ್ನು ಸಂಕೀರ್ಣವಾದ, ಕ್ಷಣ ಕ್ಷಣವೂ ಕೌತುಕದ ಕಾವೇರಿಕೊಳ್ಳುವಂತೆ ಅವಿ ಕಟ್ಟಿ ಕೊಟ್ಟಿದ್ದಾರಂತೆ. ಈ ಮೂಲಕ ರಂಗಭೂಮಿ ಕಲಾವಿದ ಏಕಲವ್ಯ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಸಾಹಸ ಸೇರಿದಂತೆ ಪ್ರತೀ ಶೇಡಿನಲ್ಲಿಯೂ ಏಕಲವ್ಯ ವಿಜೃಂಭಿಸಿದ್ದಾರಂತೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಮಾಸ್ ಹೀರೋನ ಆಗಮನವಾಗೋ ಲಕ್ಷಣಗಳೂ ಇವೆ.

ಇಲ್ಲಿ ಹೈ ವೋಲ್ಟೇಜ್ ಸಾಹಸ ಸನ್ನಿವೇಷಗಳಿವೆಯಂತೆ. ಹಾಗಂತ ಅದನ್ನು ಮಾಮೂಲು ಧಾಟಿಯಲ್ಲಿ ಸಂಭಾಳಿಸುವಂತಿರಲಿಲ್ಲ. ಕಥೆಯ ಸೆಳವಿಗೆ ತಕ್ಕುದಾಗಿ ಸಾಹಸ ಸನ್ನಿವೇಷಗಳನ್ನು ರೂಪಿಸುವ ಸವಾಲು ಈ ಸಿನಿಮಾದ್ದಾಗಿತ್ತು. ಅದನ್ನು ಸ್ವೀಕರಿಸಿರುವವರು ಡಿಫರೆಂಟ್ ಡ್ಯಾನಿ. ಅವರು ಇಷ್ಟೂ ವರ್ಷದ ಅನುಭವವನ್ನೆಲ್ಲ ಒಗ್ಗೂಡಿಸಿಕೊಂಡು ಸಾಹಸ ಸನ್ನಿವೇಷಗಳನ್ನು ನಿರ್ದೇಶನ ಮಾಡಿದ್ದಾರಂತೆ. ಆ ಎಲ್ಲ ದೃಷ್ಯಾವಳಿಗಳನ್ನೂ ನಾಯಕ ಏಕಲವ್ಯ ನುಂಗಿಕೊಂಡು ನಟಿಸಿದ್ದಾರೆಂಬ ನಂಬಿಕೆ ಅವಿಯವರಲ್ಲಿದೆ. ಇನ್ನುಳಿದಂತೆ ಹಾಡುಗಳು ಕೂಡಾ ಈ ಸಿನಿಮಾದ ಪ್ಲಸ್ ಪಾಯಿಂಟಾಗುತ್ತವೆಂಬ ಭರವಸೆಯೂ ಅವಿಗಿದೆ. ವಿ ಮನೋಹರ್ ಕಥೆಯನ್ನು ಮೆಚ್ಚಿಕೊಂಡೇ ಸಂಗೀತದ ಪಟ್ಟುಗಳನ್ನು ಹಾಕಿದ್ದಾರೆ.


ಹೀಗೆ ನಾನಾ ಥರದಲ್ಲಿ ಮುಖ್ಯವಾಗಿ ಗುರುತಿಸಿಕೊಂಡಿರೋ ಕಲಿವೀರ ಲಾಕ್‌ಡೌನ್ ಮುಗಿಯುತ್ತಲೇ ಕಂಪ್ಲೀಟಾಗಲಿದೆ. ಆ ನಂತದಲ್ಲಿ ಬೇಗನೆ ತೆರೆಗಾಣಿಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ. ಹೀಗೆ ಕಲಿವೀರನನ್ನು ಎಲ್ಲರ ಕಣ್ಮನ ಸೆಳೆಯುವಂತೆ ಕಟ್ಟಿ ನಿಲ್ಲಿಸಿರುವ ಅವಿ ಬಗ್ಗೆ ಮತ್ತೊಂದು ಇಂಟರೆಸ್ಟಿಂಗ್ ಸಂಗತಿಯೂ ಇದೆ. ಸಾಮಾನ್ಯಾವಾಗಿ ಸಿನಿಮಾ ನಿರ್ದೇಶಕರಾಗಬೇಕೆಂಬ ಕನಸು ಹೊತ್ತವರು ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಹುಚ್ಚು ಅಂಟಿಸಿಕೊಳ್ಳುತ್ತಾರೆ. ಆದರೆ ಅವಿ ಅದಕ್ಕೆ ತದ್ವಿರುದ್ಧ. ಯಾಕೆಂದರೆ ಕಾಲೇಜು ಕಲಿಕೆಯವರೆಗೂ ಅವರಿಗೆ ಸಿನಿಮಾ ಬಗ್ಗೆ ಹೇಳಿಕೊಳ್ಳುವಂಥಾ ಆಸಕ್ತಿ ಇರಲಿಲ್ಲ. ಆದರೆ ಗೆಳೆಯರನೇಕರು ಆ ಕಾಲದಲ್ಲಿ ರಿಯಲ್ ಸ್ಟಾರ್ ಉಪೇಂದ್ರರ ವೀರಾಭಿಮಾನಿಗಳಾಗಿದ್ದರು. ಆ ದೆಸೆಯಿಂದ ಉಪ್ಪಿಯ ಸಿನಿಮಾ ನೋಡಲಾರಂಭಿಸಿದ್ದ ಅವಿ ಅವರ ಹೊಸ ಆಲೋಚನೆಗೆ ಮಾರು ಹೋಗಿ ತಾವೂ ಉಪ್ಪಿ ಅಭಿಮಾನಿಯಾಗಿದ್ದರು. ಬಹುಶಃ ಅವರು ಇದೀಗ ನಿರ್ದೇಶಕರಾಗಿ ಹೊರಹೊಮ್ಮಿರೋದರ ಹಿಂದೆ ಉಪ್ಪಿ ಅಭಿಮಾನದ ಪಾತ್ರವೂ ಇದೆ.

Leave a Reply

Your email address will not be published.

*