ಹಾಯ್ ಬೆಂಗಳೂರ್

ಕಾಡ ಹೂವಿನ ಮಡಿಲಿಗೆ ಗಂಧ ತುಂಬಿದವನ್ಯಾರೇ…

  • ಲವ್ ಲವಿಕೆ:

ಕಾಡ ಹೂವಿನ ಮಡಿಲಿಗೆ ಗಂಧ ತುಂಬಿದವನ್ಯಾರೇ…

ಪ್ರೇಮ ಹುಟ್ಟುವ ಜಾಗ ಯಾವುದು?

ಪಾರ್ಕು, ಕ್ಲಾಸ್‌ರೂಮು, ಕಾರಿಡಾರು, ಗದ್ದೆಯ ಬದುವು, ಮಾವಿನ ತೋಪು, ಮೆರ್ರಿಗೋ ರೌಂಡು, ಬ್ರಿಗೇಡ್ ರಸ್ತೆ, ಸಯ್ಯಾಜಿರಾವ್ ರೋಡು, ರಾಘವೇಂದ್ರ ಮಠ, ಬಸ್ಸಿನ ಕಿಟಕಿ, ರೈಲಿನ ಬೋಗಿ…

ಉಹುಂ..ಯಾವುದೂ ಅಲ್ಲ.

ಮನಸ್ಸು!

ನಾನು ನಿನ್ನನ್ನು ಅಲ್ಲೆಲ್ಲೂ ನೋಡಲಿಲ್ಲ. ನಿನ್ನ ದನಿ ಕೇಳಲಿಲ್ಲ. ಸ್ಪರ್ಶಿಸಿ ತನ್ಮಯಳಾಗಲಿಲ್ಲ. ನಿನ್ನ ಒಂದೇ ಒಂದು ಪತ್ರ! ನನ್ನೊಳಗೆ ಸಾವಿರ ಸಾವಿರ ವರ್ಷಗಳಿಂದ ಬೆಳೆದು ನಿಂತಿದ್ದ ಆತ್ಮಸಂಯಮದ ಪರ್ವತವನ್ನು ಸದ್ದಿಲ್ಲದೆ ಕೆಡವಿಬಿಟ್ಟಿತಲ್ಲ ವಿಶೂ? ಅದೆಲ್ಲಿದ್ದೆ ವಿಶೂ ನೀನು ಇಷ್ಟು ವರ್ಷ. ಹದಿನೆಂಟು ಸಾಲುಗಳ ಮುದ್ದಾದ ಅಕ್ಷರಗಳ ನಿನ್ನ ಒಂದೇ ಒಂದು ಪತ್ರ ನಮ್ಮ ಅಪೂರ್ವ ಮಿಲನಕ್ಕೆ ಆಹ್ವಾನ ಪತ್ರಿಕೆಯಾಗಿ ಹೋಯಿತಲ್ಲ?

ಸೋಚಾ ಥಾ ಪ್ಯಾರ್ ಹಮ್ ನಾ ಕರೇಂಗೆ

ಸೂರತ್ ಪೆ ಯಾರ್ ಹಮ್ ನಾ ಮರೇಂಗೆ…

ಅಂದುಕೊಂಡೇ ಇರಲಿಲ್ಲವಲ್ಲ ಗೆಳೆಯಾ ಹೀಗಾಗಬಹುದು ಅಂತ? ಫಿರ್ ಭೀ ಕಿಸೀಪೆ ದಿಲ್ ಆಗಯಾ!

ಅದಕ್ಕೇ ಹೇಳಿದ್ದು, ಪ್ರೇಮವೆಂಬುದು ಈ ಜಗತ್ತಿನಲ್ಲೇ ಹುಟ್ಟಬೇಕೆಂಬ ನಿಯಮವೇನಿಲ್ಲ ಅಂತ. ಮನಸ್ಸಿಗೆ ಮನೆ ಬೇಕಿಲ್ಲ. ಊರು, ರಸ್ತೆ, ಉದ್ಯೋಗ, ಬ್ಯಾಂಕ್ ಬ್ಯಾಲೆನ್ಸು, ಕಡೆಯ ಪಕ್ಷ ಪ್ರೈವೆಸಿಗಾಗಿ ಒಂದು ಸೊಳ್ಳೆ ಪರದೆಯೂ ಬೇಕಿಲ್ಲ. ಮನಸ್ಸಿಗೆ ಮತ್ತೊಂದು ಮನಸ್ಸಿದ್ದರೆ ಸಾಕು. ನಿನ್ನ ಪತ್ರ ಬಂದಾಗ ನಾನು ಅಡುಗೆ ಮನೆಯಲ್ಲಿದ್ದೆ. ಆತ ಹೊರಗೆ ವರಾಂಡದಲ್ಲಿದ್ದ. ಆತನ ಕಣ್ಣು ನನ್ನ ಮೇಲೆ. ನನ್ನೆದುರಿಗಿನ ಒಲೆಗಿಂತಲೂ ತೀಕ್ಷ್ಣವಾಗಿ ಅವು ಉರಿಯುತ್ತಿದ್ದವು. ನಡುಗುವ ಬೆರಳುಗಳಿಂದ ನಿನ್ನ ಪತ್ರ ಬಿಡಿಸಿದೆ. ಓದುತ್ತ ನಿಂತೆ. ನಿಂತೇ ಇದ್ದೆ. ಕಾಲವೆಂಬ ನಿಸ್ಸಹಾಯಕ ವಸ್ತು ನನ್ನ ಕಾಲ ಕೆಳಗೆ ನಿಶ್ಶಕ್ತ ಪ್ರವಾಹದಂತೆ ಹರಿದು ಹೋಗುತ್ತಲೇ ಇತ್ತು. ನಾನು ನಿನ್ನ ಪ್ರೇಮದ ಸೆಳವಿಗೆ ಸಿಕ್ಕು ಹೋಗಿದ್ದೆ.

ಇಕ್ ಡೋರ್ ಖೀಂಚೇ

ದೂಜಾ ದೌಡಾ ಚಲಾ ಆಯೇ

ಕಚ್ಚೇ ಧಾಗೇ ಮೇ

ಬಂಧಾ ಚಲಾ ಆಯೇ…

ನಿಜ ಹೇಳಬೇಕಂದರೆ, ನನ್ನ ಬದುಕಿನಲ್ಲಿ ಇಂತಹುದೊಂದು ಅಧ್ಯಾಯ ತೆರೆದುಕೊಳ್ಳುತ್ತದೆಂದು ನಾನು ಖಂಡಿತ ಭಾವಿಸಿರಲಿಲ್ಲ. ಆಕಾಶದೆತ್ತರದ ಕೋಡುಗಲ್ಲಿನ ಮೇಲೆ ಅರಳಿ ನಿಂತ ಕಾಡು ಹೂವಿನ ಮಡಿಲಿಗೆ ಗಂಧ ತುಂಬಿದವನು ನೀನು. ಎಲ್ಲೋ ಇದ್ದ ಸಂಗೀತ ನನ್ನೆದೆಯ ಕನ್ನೆ ನೆಲ ಹೊಕ್ಕುಬಿಟ್ಟಿದೆ. ವಿಶೂ, ಐ ಲವ್ ಯೂ!

ನಿನ್ನೆ ಅರುಣ ರೇಗಿಸುತ್ತಿದ್ದಳು… ಅಕ್ಕನ ಕೆನ್ನೆ ಕೆಂಪಾಗ್ತಿದೆ ಅಂತ: ಮನೆ ಪಕ್ಕದ ಹುಡುಗಿ, ನನ್ನನ್ನು ತುಂಬ ಪ್ರೀತಿಸುತ್ತಾಳೆ: ನಿನ್ನಷ್ಟಲ್ಲ ಅಂತಿಟ್ಕೋ.

ಪ್ರಿಯಸಖೀ

ಪ್ರಿಯಂವದೇ..

ನೋಡೇ ವಸಂತ ಕಾಲ ಬಂದಿದೇ…

ಅವಳ ಬೆನ್ನಿಗೊಂದು ಥಟ್ಟನೆ ಗುದ್ದಿ ಮನೆಯೊಳಕ್ಕೆ ಓಡಿ ಬಂದೆ. ಆತ ಬಾಗಿಲಲ್ಲಿ ನಿಂತು ನನ್ನನ್ನೇ ದುರದುರನೆ ನೋಡುತ್ತಿದ್ದ. ಅದ್ಯಾಕೆ ವಿಶೂ, ಆತ ಪ್ರೇಮವನ್ನ ಅಷ್ಟೊಂದು ಹೇಟ್ ಮಾಡ್ತಾನೆ?

ನನ್ನ ಕಣ್ಣಿಗೆ ಆತ ಇಡೀ ಸಮಾಜದ ಒಟ್ಟು ಪ್ರತಿನಿಧಿಯಂತೆ ಕಾಣುತ್ತಾನೆ. ಬಾಗಿಲಲ್ಲಿ ನಿಂತವನನ್ನು ಹಠಾತ್ತನೆ ಹಿಂದಕ್ಕೆ ನೂಕಿ

ಪ್ಯಾರ್ ಕಿಯಾ ಕೋಯಿ

ಚೋರಿ ನಹಿ ಕೀ

ಛುಪ್ ಛುಪ್ಕೆ ಆಹೆ ಭರ್‌ನಾ ಕ್ಯಾ

ಜಬ್ ಪ್ಯಾರ್ ಕಿಯಾ ತೋ ಡರ್‌ನಾ ಕ್ಯಾ?

ಎಂದು ಕೇಳಬೇಕೆನಿಸಿತ್ತು. ಆತನ ಕಣ್ಣುಗಳಲ್ಲಿದ್ದ ತಣ್ಣಗಿನ ಕ್ರೌರ್ಯ ಕಂಡು ಧೈರ್ಯವಾಗಲಿಲ್ಲ. ಬಿಡು ವಿಶೂ… ಈ ಪ್ರಪಂಚದ ಯಾವ ಜಾಗದಲ್ಲೂ ಹುಟ್ಟದೆ, ನನ್ನ ಮನಸ್ಸಿನ ಅಂಗಳದಲ್ಲಿ ಹುಟ್ಟಿ ನಿಂತ ಈ ಪ್ರೇಮವನ್ನು ಯಾರು ಕೊಲ್ಲುತ್ತಾರೆ? ಯಾರು ನಾಶ ಮಾಡುತ್ತಾರೆ? ಯಾರಿಗಿದೆ ಕೃಷ್ಣನೆಡೆಗಿನ ರಾಧೆಗಿರುವ ಪ್ರೀತಿಯನ್ನು ತಡೆಯುವ ತಾಕತ್ತು? ಪ್ರೀತಿಯ ಸುತ್ತ ಬೇಲಿ ಹಾಕುವ ಮನುಷ್ಯರಿಗೆ ಗೊತ್ತಿರದ ಸತ್ಯವೊಂದಿದೆ ಹೇಳಲಾ ವಿಶೂ…. ತುಯ್ದಾಡುವ ದೀಪಕ್ಕೆ ಅದು ಗಾಜಿನ ಪಂಜರವಿಟ್ಟಂತಾಗುತ್ತದೆ. ಅನಿಶ್ಚಿತತೆಯಲ್ಲಿ ತುಯ್ದಾಡುವ ದೀಪ ಗಾಜಿನ ಪಂಜರದಲ್ಲಿ ಇನ್ನಷ್ಟು ನಿಖರವಾಗಿ ನೆಟ್ಟಗೆ ನಿಂತು ಉರಿಯುತ್ತದೆ. ನಿನ್ನೆಡೆಗಿನ ನನ್ನ ಪ್ರೀತಿಯೂ ಅಂತಹುದೇ.

ದಿಯೆ ಜಲ್ತೇ ಹೈ ಫೂಲ್ ಖಿಲ್ತೆ ಹೈ

ಬಡಿ ಮುಷ್ಕಿಲ್ ಸೇ ಮಗರ್

ದುನಿಯಾ ಮೆ ದೋಸ್ತ್ ಮಿಲ್ತೇ ಹೈ!

ರಾಧೆಯ ಸಂಗತಿ ನಿನಗೆ ಗೊತ್ತಲ್ಲ ವಿಶೂ? ಅವಳ್ಯಾವತ್ತೂ ಕೃಷ್ಣನ ಸಾವಿರಾರು ಹೆಂಡತಿಯರಲ್ಲಿ ಒಬ್ಬಳಾಗಲೇ ಇಲ್ಲ. ಅವನೊಂದಿಗೆ ಬಾಳಗೊಡಲಿಲ್ಲ ಸತ್ಯಭಾಮೆಯರ ಸಂತತಿ. ಆದರೆ ವಿಶೂ, ನನಗೇಕೋ ಹಾಗನ್ನಿಸುತ್ತದೆ… ಕೃಷ್ಣನ ಕೊಳಲು ಕಡೆತನಕ ಉಲಿಯುತ್ತಿದ್ದುದು ಅದೊಬ್ಬ ರಾಧೆಗಾಗಿಯೇ! ರಾಧೆಯನ್ನು ಬಿಟ್ಟು ಹೋದವನು ಮತ್ತೆ ಅವಳೆಡೆಗೆ ಹಿಂತಿರುಗಲೇ ಇಲ್ಲ. ಜೀವನಪೂರ್ತಿ ಕಾಯುತ್ತಲೇ ಉಳಿದಳು ಅಭಿಸಾರಿಕೆ.

ತುಮ್ ನಜಾನೇ

ಕಿಸ್ ಜಹಾ ಮೆ ಖೋ ಗಯೇ

ಇಸ್‌ಭರೀ ದುನಿಯಾಮೆ

ತನಹಾ ಹೋಗಯೇ…

ಆದರೆ ಇವತ್ತಿಗೂ ಕೃಷ್ಣನನ್ನು ಗುರುತಿಸೋರು ‘ರಾಧಾಕೃಷ್ಣ’ ಅಂತಾರೆಯೇ ಹೊರತು ‘ರುಕ್ಮಿಣೀ ಕೃಷ್ಣ’ ‘ಸತ್ಯಭಾಮಾ ಕೃಷ್ಣ’ ಅನ್ನುವುದಿಲ್ಲ.

ಕಾಯುವಿಕೆಗೂ ಒಂದು ತಾಕತ್ತು ಬೇಕಲ್ಲ ವಿಶೂ? ಆ ತಾಕತ್ತನ್ನು ನಿನ್ನ ಅಕ್ಷರಗಳಲ್ಲಿ, ನಿನ್ನ ಮೌನ ಸ್ಪಂದನದಲ್ಲಿ, ನಿನ್ನ ದೂರಾತಿದೂರದ ಬಾಹುಬಂಧನದಲ್ಲಿ ಪಡೆಯುತ್ತೇನೆ. ನನ್ನಲ್ಲಿ ನಾನುಳಿದೇ ನಿನ್ನವಳಾಗುತ್ತೇನೆ.

  ನಿನ್ನವಳು

 

Leave a Reply

Your email address will not be published. Required fields are marked *