ಕಥೆಗಳನ್ನು ಅನುಭವ ಕಥನಗಳನ್ನು ನಂಬದವನು ತನ್ನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುತ್ತಾನೆ

in ಜಾನಕಿ ಕಾಲಂ
  • ಜಾನಕಿ ಕಾಲಂ

ಇದೇ ಹೊತ್ತಿಗೆ ದೇವೇಂದ್ರ ಒಂದು ತಾವರೆಯ ದಂಟಿನೊಳಗೆ ಸೂಕ್ಷ್ಮ ರೂಪದಲ್ಲಿ ಅಡಗಿಕೊಂಡಿರುತ್ತಾನೆ. ಅವನನ್ನು ಶಚೀದೇವಿ ಕಂಡಾಗ ಆತ ಹೇಳುತ್ತಾನೆ; ಅವನ ಆಹ್ವಾನವನ್ನು ಒಪ್ಪಿಕೋ. ಆದರೆ ನಿನ್ನ ಮನೆಗೆ ಬರುವಾಗ ಸಪ್ತರ್ಷಿಗಳು ಹೊತ್ತ ಪಲ್ಲಕಿಯ ಮೇಲೆ ಬರಬೇಕೆಂದು ಆಜ್ಞಾಪಿಸು. ನಹುಷ ನಾಶವಾಗುತ್ತಾನೆ. ಒಂದು ಅಪವಿತ್ರ ಸಂಗಮಕ್ಕೆ ಋಷಿಗಳೇ ಸಾರಥಿಯಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಶಚೀದೇವಿ ಹೇಳುತ್ತಾಳೆ; ನೀನು ನನ್ನ ಪಾಲಿಗೆ ತ್ರಿಮೂರ್ತಿಗಳಿಗಿಂತ ದೊಡ್ಡವನು. ಸಪ್ತರ್ಷಿಗಳು ಹೊರುವ ಪಲ್ಲಕಿಯಲ್ಲಿ ಆಗಮಿಸಿದರೆ ಅದರ ಸಂಭ್ರಮವೇ ಬೇರೆ. ಹಾಗೇ ಬಾ?. ನಹುಷ ಸಪ್ತರ್ಷಿಗಳನ್ನು ಕರೆಸುತ್ತಾನೆ. ಋಷಿಗಳು ಅವನನ್ನು ಹೊತ್ತುಕೊಂಡು ಹೊರಡುತ್ತಾರೆ. ಈ ಅನಾಹುತವನ್ನು ಜಗತ್ತು ನಿಬ್ಬೆರಗಾಗಿ ನೋಡುತ್ತದೆ. ಆದರೆ ಇದಕ್ಕಿಂತಲೂ ಭೀಕರವಾದ  ಒಂದು ಘಟನೆ ನಡೆಯುತ್ತದೆ. ಅದೇ ನಿಜವಾದ ಉಲ್ಲಂಘನೆ! ಶಚೀದೇವಿಯನ್ನು ಆದಷ್ಟೂ ಬೇಗ ಸೇರುವ ಆತುರದಲ್ಲಿರುವ ನಹುಷ ಎಲ್ಲರಿಗಿಂತ ಮುಂದೆ ನಿಧಾನವಾಗಿ ನಡೆಯುತ್ತಿದ್ದ ಅಗಸ್ತ್ಯ ಮುನಿಯನ್ನು ಪಾದದಿಂದ ತಿವಿದು ‘ಸರ್ಪ… ಸರ್ಪ’ ಎನ್ನುತ್ತಾನೆ. ಸರ್ಪ ಅಂದರೆ ಬೇಗ ಸರಿ ಅನ್ನುವ ಅರ್ಥವೂ ಇದೆ. ಸಿಟ್ಟಿಗೆದ್ದ ಅಗಸ್ತ್ಯ ‘ನೀನು ಸರ್ಪವಾಗು’ ಎಂದು ಶಪಿಸುತ್ತಾನೆ. ಅಲ್ಲಿಗೆ ನಹುಷನ ಪತನವಾಗುತ್ತದೆ. ಆತ ಬೃಹದಾಕಾರದ ಹೆಬ್ಬಾವಾಗಿ ಕಾಡಿನತ್ತ ಹರಿದುಹೋಗುತ್ತಾನೆ. ಈ ಕತೆಯನ್ನು ಉಪಲವ್ಯನಗರದಲ್ಲಿ ಶಲ್ಯ ಧರ್ಮರಾಯನಿಗೆ ಹೇಳುತ್ತಾನೆ. ಧರ್ಮರಾಯನೂ ದ್ರೌಪದಿಯೂ ರಾಜ್ಯ ಕಳೆದುಕೊಂಡು ಕಷ್ಟದಲ್ಲಿದ್ದಾರೆೆ. ಇಂದ್ರನಂಥವರಿಗೇ ಹೀಗಾಗಿತ್ತು. ಆದರೆ ಎಲ್ಲವೂ ಸುಖಾಂತವಾಯಿತು. ನಿಮ್ಮ ವಿಚಾರದಲ್ಲೂ ಹಾಗೇ ಆಗುತ್ತದೆ ಅನ್ನುತ್ತಾನೆ ಶಲ್ಯ. ನಹುಷನ ಹಾಗೆ ಧುರ್ಯೋಧನ ಕೂಡ ನಾಶವಾಗಿ ಹೋಗುತ್ತಾನೆ ಅಂತ ಶಾಪ ಹಾಕಿ ಹೊರಡುತ್ತಾನೆ ಶಲ್ಯ. ಅಷ್ಟು ಹೇಳಿದ ನಂತರ ಆತ ಧುರ್ಯೋಧನನ ಪರವಾಗಿ ಯುದ್ಧ ಮಾಡುತ್ತಾನೆ! ಈ ಕತೆಗೂ ಮಹಾಭಾರತಕ್ಕೂ ಇನ್ನೊಂದು ಸಂಬಂಧವೂ ಇದೆ. ವನವಾಸದಲ್ಲಿದ್ದ ಭೀಮನನ್ನು ಇದೇ ಹೆಬ್ಬಾವಾಗಿ ಬಿದ್ದಿದ್ದ ನಹುಷ ಸುತ್ತುಹಾಕಿ ಕೊನೆಗೆ ಧರ್ಮರಾಯ ಅದರ ಪ್ರಶ್ನೆಗಳಿಗೆ ಉತ್ತರಿಸಿ ಭೀಮನನ್ನು ಬಿಡಿಸುತ್ತಾನೆ. ಅದು ಯಕ್ಷಪ್ರಶ್ನೆಯಂಥ ಮತ್ತೊಂದು ಕತೆ.

02

ನೀನು ದೇವರನ್ನು ನಂಬುತ್ತೀಯಾ?

ಇಂಥ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ. ಉತ್ತರಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಯಾಕೆಂದರೆ ದೇವರನ್ನು ನಂಬುತ್ತೀಯೋ ಎಂಬ ಪ್ರಶ್ನೆಯ್ಲೇ ಅದಕ್ಕಿಂತ ಮೂಲಭೂತವಾದ ಪ್ರಶ್ನೆಯಾದ ದೇವರು ಇದ್ದಾನೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವಿದೆ.

ದೇವರು ಇದ್ದಾನೆ ಅನ್ನುವುದು ಪ್ರಶ್ನೆ ಕೇಳಿದವನಿಗೂ ಉತ್ತರ ಹೇಳುವವನಿಗೂ ಖಾತ್ರಿಯಾದರೆ ಮಾತ್ರ ನೀನು ದೇವರನ್ನು ನಂಬುತ್ತೀಯೋ ಎಂಬ ಪ್ರಶ್ನೆಗೆ ಅರ್ಥ ಬರುತ್ತದೆ. ನೀನು ದೇವರನ್ನು ನಂಬುತ್ತೀಯೋ ಎಂಬ ಪ್ರಶ್ನೆಯೇ ಗೊಂದಲ ಹುಟ್ಟಿಸುವಂಥದ್ದು. ದೇವರು ಇದ್ದಾನೆ ಎಂದು ನೀನು ನಂಬುತ್ತೀಯೋ, ಖಂಡಿತವಾಗಿಯೂ ಇರುವ ದೇವರನ್ನು ನೀನು ನಂಬುತ್ತೀಯೋ ಎಂಬ ಎರಡು ಪ್ರಶ್ನೆಗಳಲ್ಲಿ ದೇವರನ್ನು ನಂಬುತ್ತೀಯಾ ಎಂದು ಕೇಳುವವನು ಸೂಚಿಸುವ ಪ್ರಶ್ನೆ ಯಾವುದು ಎಂದು ಫಕ್ಕನೆ ಗೊತ್ತಾಗುವುದಿಲ್ಲ.

ಈ ಪ್ರಶ್ನೆಯನ್ನು ವಿವರವಾಗಿ ನೋಡೋಣ.

ನೀನು ದೇವರನ್ನು ನಂಬುತ್ತೀಯಾ? ಈ ಪ್ರಶ್ನೆಯ ಅರ್ಥ ನೀನು ದೇವರು ಇದ್ದಾನೆ ಎಂದು ನಂಬುತ್ತೀಯಾ ಎಂಬುದೇ ಆಗಿದ್ದರೆ, ಉತ್ತರಿಸಲು ಕೊಂಚ ಯೋಚಿಸಬೇಕಾಗುತ್ತದೆ. ದೇವರು ಇದ್ದಾನೆ ಅನ್ನುವುದು ನಂಬಿಕೆಯೇ ಯಾಕಾಗಬೇಕು. ದೇವರು ಇದ್ದಾನೆ ಅನ್ನುವುದು ನಂಬಿಕೆ ಹೌದಾದರೆ, ದೇವರು ಇಲ್ಲ ಅನ್ನುವುದು ಕೂಡ ನಂಬಿಕೆಯೇ ಅಲ್ಲವೇ? ಎರಡೂ ನಂಬಿಕೆಯೇ ಆದ ಮೇಲೆ ಒಂದು ನಂಬಿಕೆ ಶ್ರೇಷ್ಠ, ಇನ್ನೊಂದು ನಂಬಿಕೆ ಶ್ರೇಷ್ಠವಲ್ಲ ಎಂದು ಹೇಳುವುದು ಹೇಗೆ?

ಎರಡೂ ಕೂಡ ಸಮಾನವಾದ ನಂಬಿಕೆಯೇ ಅಗಿದ್ದರೆ ಅದನ್ನು ಪ್ರಶ್ನಿಸುವುದರಲ್ಲಿ ಅರ್ಥವಿದೆಯಾ? ನಂಬಿಕೆ ಅನ್ನುವುದು ತೀರಾ ವೈಯಕ್ತಿಕ ಅಲ್ಲವೇ?

ದೇವರಿದ್ದಾನೆ ಅನ್ನುವವರ ಹತ್ತಿರ ಸಾಮಾನ್ಯವಾಗಿ ದೇವರಿಲ್ಲ ಅನ್ನುವವರು ಕೇಳುವ ಪ್ರಶ್ನೆಯೊಂದಿದೆ. ದೇವರು ಇದ್ದರೆ ಎಲ್ಲಿದ್ದಾನೆ ತೋರಿಸಿ. ನಾನು ದೇವರನ್ನು ನೋಡಿದರೆ ನಂಬುತ್ತೇನೆ. ನೋಡದೇ ಇದ್ದದ್ದನ್ನು ನಾನು ನಂಬುವುದಿಲ್ಲ. ನಾನು ವೈಜ್ಞಾನಿಕ ಮನೋಭಾವದ ಮನುಷ್ಯ. ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ವಸ್ತು ಮೂರೇ ಮೂರು ರೂಪಗಳಲ್ಲಿ ಇರಬೇಕು. ಘನ, ದ್ರವ ಮತ್ತು ಆವಿ. ದೇವರು ಕೂಡ ಈ ಮೂರು ರೂಪಗಳ್ಲೇ ಇರಬೇಕಲ್ಲವೇ? ಇದ್ದರೆ ನಮಗೆ ಕಾಣಿಸಬೇಕು, ಗೊತ್ತಾಗಬೇಕು, ಅನುಭವಕ್ಕೆ ಬರಬೇಕು.

ಈ ಅನುಭವಕ್ಕೆ ಬರಬೇಕು ಅನ್ನುವ ವಾದದಲ್ಲಿ ಕೊಂಚ ಜಾಣತನವೂ ಸೇರಿಕೊಂಡಿದೆ. ದೇವರಿದ್ದಾನೆ ಅಂತ ವಾದಿಸುವವರು ದೇವರು ಹಾಗೆಲ್ಲ ಕಾಣಿಸುವುದಿಲ್ಲ. ಆದರೆ ದೇವರಿರುವುದು ನನಗೆ ಅನುಭವಕ್ಕೆ ಬಂದಿದೆ ಅಂದುಬಿಡುತ್ತಾರೆ. ಆ ಅನುಭವವನ್ನು ಹೇಳಿ ಅಂದಾಗ ಅವರಿಗಾದ ಒಂದು ಅನುಭವವನ್ನು ಹೇಳುತ್ತಾರೆ.

ನಮಗೆಲ್ಲ ಗೊತ್ತಿರುವ ಒಬ್ಬರು ಹೀಗೊಂದು ಕತೆ ಹೇಳುತ್ತಿದ್ದರು:

‘ನಾನು ತಿರುಪತಿ ತಿಮ್ಮಪ್ಪನ ಭಕ್ತ. ತೀರಾ ಬಡತನದ್ಲೇ ಬೆಳೆದೆ. ನನಗೆ ತಿರುಪತಿಗೆ ಹೋಗುವ ಆಸೆಯಿದ್ದರೂ ಹೋಗಲು ಸಾಧ್ಯವಾಗಲೇ ಇಲ್ಲ. ಮನೆ, ಸಂಸಾರ, ಮಕ್ಕಳ ಮದುವೆಗಳ್ಲೇ ನನ್ನ ಜೀವನ ಕಳೆದುಹೋಯಿತು. ಕೊನೆಗೆ ಎಲ್ಲಾ ಜವಾಬ್ದಾರಿಗಳೂ ಮುಗಿದ ನಂತರ, ಕೈಯಲ್ಲಿ ಒಂದಷ್ಟು ಹಣ ಸೇರಿತು. ತಿರುಪತಿಗೆ ಹೋಗಿಯೇ ತೀರುತ್ತೇನೆ ಎಂದು ತೀರ್ಮಾನ ಮಾಡಿದೆ.

ನನಗೆ ಮೊದಲಿನಿಂದಲೂ ತಿರುಪತಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿಕೊಂಡು ಹೋಗಬೇಕೆಂಬ ಆಸೆಯಿತ್ತು. ಆದರೆ, ನನಗೆ ಮೊಣಕಾಲು ನೋವಿತ್ತು. ಮಹಡಿಯ ಮೆಟ್ಟಿಲು ಕೂಡ ಹತ್ತಬಾರದು ಅಂತ ವೈದ್ಯರು ಹೇಳಿದ್ದರು. ಆದರೆ ಏನೇ ಆದರೂ ಬೆಟ್ಟವನ್ನು ಹತ್ತಿಕೊಂಡೇ ಹೋಗಬೇಕು ಅಂತ ತೀರ್ಮಾನ ಮಾಡಿದ್ದೆ. ನಸುಕಿನಲ್ಲೇ ಬೆಟ್ಟದ ಬುಡಕ್ಕೆ ಹೋಗಿ, ತಂಪು ಹೊತ್ತಿನಲ್ಲೇ ನಿಧಾನವಾಗಿ ಹತ್ತತೊಡಗಿದೆ. ಸುಮಾರು ಹತ್ತು ಮೆಟ್ಟಲು ಹತ್ತುವಾಗ ಕಾಲು ಇನ್ನಿಲ್ಲದಂತೆ ನೋಯಲಿಕ್ಕೆ ಶುರುವಾಯಿತು. ಅ್ಲೇ ಕುಸಿದು ಬೀಳುತ್ತೇನೆ ಅನ್ನಿಸತೊಡಗಿತು. ಗೋವಿಂದಾ ಗೋವಿಂದಾ.. ವೆಂಕಟರಮಣಾ ಗೋವಿಂದ ಅಂತ ದೇವರ ಸ್ಮರಣೆ ಮಾಡುತ್ತಲೇ ಹತ್ತತೊಡಗಿದೆ.

ಎಷ್ಟು ಮೆಟ್ಟಿಲು ಹತ್ತಿದ್ದೆನೋ ನೆನಪಿಲ್ಲ. ತುಂಬಾ ಸುಸ್ತಾಗಿತ್ತು. ಇದ್ದಕ್ಕಿದ್ದಂತೆ ತಲೆ ಸುತ್ತಿ ಬಂತು. ಏನೂ ಕಾಣಿಸುತ್ತಿರಲಿಲ್ಲ. ಹಾಗೇ ಕುಸಿದು ಬಿದ್ದೆ ಸುತ್ತಮುತ್ತ ಯಾರೂ ಇರಲಿಲ್ಲ. ಎಷ್ಟು ಹೊತ್ತು ಹಾಗೆ ಬಿದ್ದಿದ್ದೆನೋ ನನಗೆ ಗೊತ್ತಿಲ್ಲ. ನಾನು ಸತ್ತೇ ಹೋಗಿದ್ದೇನೆ ಅಂದುಕೊಂಡಿದ್ದೆ. ಸುಮಾರು ಹೊತ್ತಿನ ಮೇಲೆ ನನಗೆ ಎಚ್ಚರವಾಯಿತು. ಕಣ್ತೆರೆದು ನೋಡಿದರೆ ನಾನು ತಿರುಪತಿ ದೇವಸ್ಥಾನದ ಕೊನೆಯ ಮೆಟ್ಟಿಲ ಮೇಲೆ ಬಿದ್ದಿದ್ದೆ. ನಾನು ಮಲಗಿದಲ್ಲಿಂದಲೇ ದೇವಸ್ಥಾನದ ಕಲಶ ಕಾಣಿಸುತ್ತಿತ್ತು.

ಇಂಥ ಅಸಂಖ್ಯಾತ ಕತೆಗಳನ್ನು ಭಕ್ತರಾದವರು ಹೇಳುತ್ತಲೇ ಇದ್ದಾರೆ. ಇದನ್ನು ಕೇವಲ ಕಟ್ಟುಕತೆ ಎಂದು ತಳ್ಳಿಹಾಕಿದರೆ ನಾವು ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದಂತೆ. ದೇವರನ್ನು ನಂಬದೇ ಇದ್ದವರು ಮನುಷ್ಯರನ್ನು ಕೂಡ ನಂಬದ ಸ್ಥಿತಿಗೆ ತಲುಪಿಬಿಡುತ್ತಾರೆ ಅನ್ನುವುದಕ್ಕೆ ಇದೇ ಸಾಕ್ಷಿ. ನಾವು ದೇವರ ಕುರಿತು ಯಾರಾದರೂ ತಮ್ಮ ಅನುಭವವನ್ನು ಹೇಳಿದರೆ ನಂಬಲಿಕ್ಕೆ ಹೋಗುವುದಿಲ್ಲ.

ಅವರ ಅನುಭವವನ್ನು ಕೇಳಿದ ನಾನು ಕಾಲು ನೋವಿಟ್ಟುಕೊಂಡು ಬೆಟ್ಟ ಹತ್ತಲು ಹೊರಟರೆ, ಅವರಷ್ಟೇ ಸಲೀಸಾಗಿ ಬೆಟ್ಟದ ತುದಿ ತಲುಪುತ್ತೇನೆಯೇ? ಅವರನ್ನು ಅವರು ನಂಬಿದ ವೆಂಕಟರಮಣ ಮಗುವಿನಂತೆ ಎತ್ತಿಕೊಂಡು ಬಂದು ಕೊನೆಯ ಮೆಟ್ಟಿಲ ಮೇಲೆ ಮಲಗಿಸಿದಂತೆ ನನ್ನನ್ನು ಕೂಡ ಎತ್ತಿಕೊಂಡು ಹೋಗಿ ತುದಿಗೆ ಮುಟ್ಟಿಸುತ್ತಾನೆಯೇ? ಹಾಗಂತ ನಂಬಿದರೆ ನನಗಿಂತ ಮೂರ್ಖ ಮತ್ತೊಬ್ಬನಿಲ್ಲ. ಹಾಗೇನಾದರೂ ಅದರೆ ತಿರುಪತಿ ವೆಂಕಟರಮಣ ಎಲ್ಲರನ್ನೂ ಬೆಟ್ಟದ ಬುಡದಿಂದ ತುದಿಗೆ ತಲುಪಿಸುವ ಕೆಲಸ ಮಾಡಿಕೊಂಡೇ ಇರಬೇಕಾಗುತ್ತದೆ.

ಹಾಗಂತ ಈ ಕತೆಯನ್ನು ಸುಳ್ಳೆಂದು ಹೇಳುವಷ್ಟು ಹೃದಯಹೀನನೂ ನಾನಲ್ಲ. ಈ ಕತೆಯನ್ನು ಹೇಳಿದವರನ್ನು ಅವರು ನಂಬಿದ ವೆಂಕಟರಮಣನೇ ಬೆಟ್ಟದ ತುದಿಗೆ ತಲುಪಿಸಿರಬಹುದು. ಅವರು ನಂಬದೇ ಹೋಗಿದ್ದರೆ ತಿರುಪತಿಗೆ ಯಾಕಾದರೂ ಹೋಗುತ್ತಿದ್ದರು? ಬಹುಶಃ ಅವರು ಮನೆಯಲ್ಲಿದ್ದಾಗ ಬೆಳಗ್ಗೆ ತರಕಾರಿ ತರಲಿಕ್ಕೂ ಹೋಗುತ್ತಿದ್ದರೋ ಇಲ್ಲವೋ? ಮೊಣಕಾಲು ನೋವಿನ ನೆಪ ಹೇಳಿ ಸಣ್ಣ ಪುಟ್ಟ ಓಡಾಟವನ್ನೂ ನಿಲ್ಲಿಸಿದ್ದಿರಬಹುದು. ನಡೆಯಲಿಕ್ಕೆ ಸಾಧ್ಯವೇ ಇಲ್ಲ ಅಂತ ಕೂತ್ಲೇ ಕೂತಿರಬಹುದು. ಅಂಥವರನ್ನು ಬೆಟ್ಟದ ತುದಿಗೆ ತಲುಪಿಸಿದ್ದು ಯಾರು ಹಾಗಿದ್ದರೆ? ತಿರುಪತಿ ವೆಂಕಟರಮಣನೇ ಅಲ್ಲವೇ? ತಿರುಪತಿ ವೆಂಕಟರಮಣ ಆ ಬೆಟ್ಟದ ಮೇಲೆ ಇಲ್ಲದೇ ಹೋಗಿದ್ದರೆ ಅವರು ಬೆಟ್ಟ ಹತ್ತುತ್ತಿದ್ದರೇ? ಇಲ್ಲವಲ್ಲ!

ಇಂಥ ಅನುಭವಗಳಲ್ಲಿಯೇ ದೇವರು ನನಗೆ ಕಾಣಿಸುತ್ತಾರೆ. ಹಾಗೆ ಕಾಣಿಸುವುದು ನನ್ನ ದೇವರಲ್ಲ, ಅವರ ದೇವರು. ಅಂಥವರು ದೇವರಿದ್ದಾರೆ ಎಂದು ಸಾಕ್ಷಿಯಾಗಿ ಅವರ ಅನುಭವದ ಕತೆಗಳನ್ನು ಹೇಳಿದಾಗ ನಾನು ಅವರ ಅನುಭವ ಅತ್ಯಂತ ಪ್ರಾಮಾಣಿಕವಾದದ್ದು ಎಂದು ನಂಬುತ್ತೇನೆ. ಕತೆಗಳನ್ನು ಅನುಭವ ಕಥನಗಳನ್ನು ನಂಬದವನು ತನ್ನ ಮೇಲಿನ ನಂಬಿಕೆ ಕಳಕೊಂಡವನು ಮಾತ್ರ.

Tags:

Leave a Reply

Your email address will not be published.

*

Latest from ಜಾನಕಿ ಕಾಲಂ

Placeholder

ಹುಲಿ ಬಂತು ಹುಲಿ!

ಜಾನಕಿ ಕಾಲಂ – ಎಂದೋ ಕೇಳಿದ ಒಂದು ಕತೆಯನು-2      ನೀವು ಎಂದಾದರೂ ಮಡಿಕೇರಿಯಿಂದ

ಆಕಾಶದ ಪಿಸುಮಾತು

ಜಾನಕಿ ಕಾಲಂ: ಕತೆ ಅಂದ್ರೇನು? ಹಾಗಂತ ಕೇಳಿದವರಿಗೆ ಉತ್ತರಿಸುವುದು ಕಷ್ಟ. ನಡೆದದ್ದನ್ನು ಹೇಳುವುದು ಅನ್ನಬಹುದಾ? ಅದು
Go to Top